ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜ್ಞಾನ ವಿಭಾಗಕ್ಕೆ ಸೇರಲಿ ಭೂಗೋಳ: ಭೂವಿಜ್ಞಾನ ಮಾಹಿತಿ ತಂತ್ರಜ್ಞರ ಶಿಫಾರಸು

ಭೂವಿಜ್ಞಾನ ಮಾಹಿತಿ ತಂತ್ರಜ್ಞರ ಶಿಫಾರಸು * ಬೇರೆ ರಾಜ್ಯಗಳಲ್ಲಿರುವ ವ್ಯವಸ್ಥೆ ರೂಪಿಸಲು ಒತ್ತಾಯ
Last Updated 16 ಆಗಸ್ಟ್ 2021, 2:19 IST
ಅಕ್ಷರ ಗಾತ್ರ

ಬೆಂಗಳೂರು:ನೀರು, ಮಣ್ಣು, ಸಸ್ಯ, ಪ್ರಾಣಿವರ್ಗ ಹಾಗೂ ಜನರ ನಡುವೆ ಸಂಪರ್ಕ ಕೊಂಡಿಯಂತಿರುವ ಭೂಗೋಳವನ್ನು ರಾಜ್ಯದಲ್ಲಿ ಕಲಾ ವಿಭಾಗದ ವಿದ್ಯಾರ್ಥಿಗಳಿಗೆ ಮಾತ್ರ ಬೋಧಿಸಲಾಗುತ್ತಿದೆ. ಪರಿಸರದ ಅಂಶವನ್ನೇ ಹೆಚ್ಚಾಗಿ ಒಳಗೊಂಡಿರುವ ಈ ವಿಷಯವನ್ನು ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೂ ಕಲಿಸಬೇಕು ಮತ್ತುನೂತನ ಶಿಕ್ಷಣ ನೀತಿ ಜಾರಿಯ ವೇಳೆಯೇ ಈ ಬೇಡಿಕೆಯೂ ಕಾರ್ಯರೂಪಕ್ಕೆ ಬರಬೇಕು ಎಂಬ ಒತ್ತಾಯ ಕೇಳಿಬಂದಿದೆ.

ಭೌಗೋಳಿಕ ಮಾಹಿತಿ ತಂತ್ರಜ್ಞರ ಒಕ್ಕೂಟವು (ಯುಜಿಐಟಿ) ರಾಜ್ಯಸರ್ಕಾರದ ಮುಂದೆ ಇಂಥದ್ದೊಂದು ಬೇಡಿಕೆಯನ್ನು ಇಟ್ಟಿದೆ. ತಮಿಳುನಾಡು, ಕೇರಳ, ಗೋವಾ ಮತ್ತು ಮಹಾರಾಷ್ಟ್ರದಲ್ಲಿ ವಿಜ್ಞಾನ ನಿಕಾಯದ ಅಡಿಯಲ್ಲಿಯೇ ಈ ವಿಷಯವನ್ನು ಬೋಧಿಸಲಾಗುತ್ತಿದೆ. ರಾಜ್ಯದಲ್ಲಿಯೂ ಇದೇ ವ್ಯವಸ್ಥೆಯನ್ನು ತರಬೇಕು ಎಂಬುದು ಒಕ್ಕೂಟದ ಒತ್ತಾಯ.

ವಿಶ್ವಸಂಸ್ಥೆ ರೂ‍‍ಪಿಸಿರುವ ಅಭಿವೃದ್ಧಿ ಗುರಿಗಳಲ್ಲಿ ಬಹುಪಾಲು ನೇರವಾಗಿ ಭೂಗೋಳಕ್ಕೆ ಸಂಬಂಧಿಸಿದವುಗಳೇ ಆಗಿವೆ.ಕೃಷಿ ಅಭಿವೃದ್ಧಿ, ನೀರು–ಮಣ್ಣಿನ ಸಂರಕ್ಷಣೆ, ಹಸಿವು ಮುಕ್ತ ದೇಶ, ಗುಣಮಟ್ಟದ ಶಿಕ್ಷಣದಂತಹ ಗುರಿಗಳು ಭೂಗೋಳ ಕಲಿಕೆಗೆ ಪೂರಕವಾಗಿವೆ.

‘ಗಾಳಿ, ಮೋಡ, ಮಣ್ಣು, ನೀರು, ಸೂರ್ಯನ ಬಗ್ಗೆ ತಿಳಿಸುವ ಭೂಗೋಳ ಅಥವಾ ಭೂವಿಜ್ಞಾನವನ್ನು ಕಲಾ ವಿಭಾಗದವರು ಮಾತ್ರವಲ್ಲದೆ, ವಿಜ್ಞಾನ, ವಾಣಿಜ್ಯ ನಿಕಾಯದ ವಿದ್ಯಾರ್ಥಿಗಳು ಕಲಿಯುವ ಅವಶ್ಯಕತೆ ಇದೆ. ಭೌಗೋಳಿಕ ತಿಳಿವಳಿಕೆ ಇಲ್ಲದೆ ಸುಸ್ಥಿರ ಅಭಿವೃದ್ಧಿ ಸಾಧ್ಯವಾಗುವುದೇ ಇಲ್ಲ’ ಎಂದು ಯುಜಿಐಟಿ ಮುಖ್ಯಕಾರ್ಯದರ್ಶಿ ಮತ್ತು ನೂತನ ಶಿಕ್ಷಣ ನೀತಿ ಪಠ್ಯಕ್ರಮ ಸಮಿತಿಯ ಅಧ್ಯಕ್ಷ ಡಾ.ಅಶೋಕ ಹಂಜಗಿ ‘ಪ್ರಜಾವಾಣಿ’ಗೆ ತಿಳಿಸಿದರು.

’ವಿಜ್ಞಾನ ಮತ್ತು ವಾಣಿಜ್ಯ ವಿಭಾಗದಲ್ಲಿ ಓದಿದರೆ ಮಾತ್ರ ಹೆಚ್ಚು ಉದ್ಯೋಗಾವಕಾಶ ಇರುತ್ತವೆ ಎಂಬ ಭಾವನೆ ಪೋಷಕರಲ್ಲಿ ಇದೆ. ಆದರೆ, ಭೂಗೋಳ ಪದವೀಧರರಿಗೂ ಈಗ ಹೆಚ್ಚು ಅವಕಾಶಗಳು ಅರಸಿಕೊಂಡು ಬರುತ್ತಿವೆ. ದೂರಸಂವೇದಿ ಅಂಶಗಳನ್ನು ಅಧ್ಯಯನ ಮಾಡುವುದು, ಉಪಗ್ರಹ ಆಧಾರಿತ ಚಿತ್ರಗಳನ್ನು ವಿಶ್ಲೇಷಿಸುವುದು ಮತ್ತು ಬೆಳೆ ಸ್ವರೂಪ, ಅರಣ್ಯಗಳ ಬಗ್ಗೆ ಅಧ್ಯಯನ, ಮ್ಯಾಪಿಂಗ್ ಕ್ಷೇತ್ರದಲ್ಲಿ ಭೂಗೋಳ ಪದವೀಧರರಿಗೆ ಅವಕಾಶಗಳು ಇವೆ. ಬೇಡಿಕೆ ಪೂರೈಸುವಷ್ಟು ವಿದ್ಯಾರ್ಥಿಗಳೇ ನಮಗೆ ಸಿಗುತ್ತಿಲ್ಲ. ಬೇರೆ ರಾಜ್ಯಗಳ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯುತ್ತಿದ್ದಾರೆ’ ಎಂದು ಅವರು ಹೇಳಿದರು.

‘ವಿದ್ಯಾರ್ಥಿಗಳು ತೆರೆದ ವಾತಾವರಣದಲ್ಲಿ ಅಥವಾ ಪ್ರಾಯೋಗಿಕವಾಗಿ ಕಲಿಯಲೂ ಈ ವಿಷಯವು ಅವಕಾಶ ಮಾಡಿಕೊಡುತ್ತದೆ. ಮಣ್ಣಿನ ರಚನೆ ಹೇಗೆ, ಮಣ್ಣಿನ ಸವಕಳಿಯಿಂದಾಗುವ ಅನಾಹುತಗಳೇನು, ಇದಕ್ಕೆ ಪರಿಹಾರಗಳೇನು ಎಂಬುದನ್ನು ಕಲಿಯಬೇಕು ಎಂದರೆ ಭೂಗೋಳ ಅಭ್ಯಸಿಸಬೇಕು’ ಎಂದು ಅವರು ಸಲಹೆ ನೀಡಿದರು.

‘ವಿಜ್ಞಾನ ವಿಭಾಗದವರಿಗೂ ಭೂಗೋಳವನ್ನು ಕಲಿಸಬೇಕು ಎಂಬ ವಿಚಾರವಾಗಿ ಯುಜಿಐಟಿ ವತಿಯಿಂದ ವರದಿಯನ್ನು ಸಿದ್ಧಪಡಿಸಲಾಗಿದೆ. ಅದನ್ನು ಸರ್ಕಾರಕ್ಕೆ ಸಲ್ಲಿಸಿ, ಮನವಿ ಮಾಡಲಾಗುವುದು’ ಎಂದೂ ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT