ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

UPSC, KPSC Guide | ಬಿಲದ ಕಪ್ಪೆ: ಬೆಂಗಳೂರಿನ ಹೊಸ ಪ್ರಭೇದ

Published 7 ಫೆಬ್ರುವರಿ 2024, 23:30 IST
Last Updated 7 ಫೆಬ್ರುವರಿ 2024, 23:30 IST
ಅಕ್ಷರ ಗಾತ್ರ

UPSC-ಪ್ರಿಲಿಮ್ಸ್ ಮತ್ತು ಸಾಮಾನ್ಯ ಅಧ್ಯಯನ ಪತ್ರಿಕೆ-3, KPSC-ಪ್ರಿಲಿಮ್ಸ್ ಮತ್ತು ಸಾಮಾನ್ಯ ಅಧ್ಯಯನ ಪತ್ರಿಕೆ-3, ಎಲ್ಲಾ ಇತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪೂರಕವಾಗಿ...

ಇತ್ತೀಚಿನ ದಶಕಗಳಲ್ಲಿ ವಿಶ್ವದಾದ್ಯಂತ ಉಭಯವಾಸಿಗಳ ಸಂಖ್ಯೆಯು ಗಣನೀಯವಾಗಿ ಕ್ಷೀಣಗೊಳ್ಳುತ್ತಿರುವ ನಡುವೆಯೇ ಬೆಂಗಳೂರು ನಗರ ಪ್ರದೇಶದಲ್ಲಿ ಹೊಸಹೊಸ ಪ್ರಭೇದಗಳ ಕಪ್ಪೆಗಳು ಕುಪ್ಪಳಿಸುತ್ತಿರುವುದು ಖುಷಿಯವಿಚಾರ.

ಹೌದು, ವಿವಿಧ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸಂಸ್ಥೆಗಳ ಸಂಶೋಧಕರ ತಂಡವು ಬೆಂಗಳೂರಿನ ನಗರ ಪರಿಸರದಲ್ಲಿ ಅಭಿವೃದ್ಧಿ ಹೊಂದುತ್ತಿರುವ ಹೊಸ ಕಪ್ಪೆ ಪ್ರಭೇದವನ್ನು ಪತ್ತೆಹಚ್ಚಿದೆ.

• ಹೊಸದಾಗಿ ಪತ್ತೆಯಾದ ಈ ಉಭಯಚರಗಳಿಗೆ ಸ್ಫೇರೋಥೆಕಾ ವರ್ಷಭು ಎಂದು ಹೆಸರಿಸಲಾಗಿದೆ. ಆರಂಭಿಕ ಮಳೆಯ ಸಮಯದಲ್ಲಿ ಬಿಲಗಳಿಂದ ಹೊರಬರುವ ಅವುಗಳ ನಡವಳಿಕೆಯಿಂದಾಗಿ ಈ ಕಲಾತ್ಮಕ ಹೆಸರನ್ನು ಪಡೆದುಕೊಂಡಿವೆ. ಈ ವಿಶಿಷ್ಟ ಗುಣಲಕ್ಷಣಗಳು ಹಿಂದೆ ಗುರುತಿಸಲಾದ ಕಪ್ಪೆ ಪ್ರಭೇದಗಳಿಂದ ಇವನ್ನು ಸ್ಪಷ್ಟವಾಗಿ ಪ್ರತ್ಯೇಕಿಸುತ್ತವೆ.

• 2020 ರಲ್ಲಿ, ಬೆಂಗಳೂರು ನಗರದಲ್ಲಿಯೇ Sphaerotheca Bengaluru ಎಂಬ ಹೆಸರಿನ ಬಿಲದ ಕಪ್ಪೆ ಪ್ರಭೇದವನ್ನು ಪತ್ತೆಹಚ್ಚಲಾಗಿತ್ತು. ಈ ಕಪ್ಪೆಗಳನ್ನು ಕೂಡಾ ಅದೇ ಪ್ರದೇಶದಲ್ಲಿ ಗುರುತಿಸಲಾಗಿರುವುದು ವಿಶೇಷ.

• ಹೊಸದಾಗಿ ಪತ್ತೆಯಾದ ಉಭಯಚರಗಳು ನಗರ ಪರಿಸರಕ್ಕೆ ಒಗ್ಗಿಕೊಂಡಿದ್ದು ನಗರೀಕರಣವು ಎದುರಿಸುತ್ತಿರುವ ಸವಾಲುಗಳನ್ನು ಶಕ್ತವಾಗಿ ಎದುರಿಸಬಲ್ಲಂತಹಾ ನಡವಳಿಕೆಗಳು ಮತ್ತು ದೈಹಿಕ ಗುಣಲಕ್ಷಣಗಳನ್ನು ಪ್ರದರ್ಶಿಸುತ್ತಿವೆ ಎಂದು ಸಂಶೋಧಕರು ಸ್ಪಷ್ಟಪಡಿಸಿದ್ದಾರೆ. ಈ ಉಭಯಚರಗಳ ವಿಶಿಷ್ಟ ಲಕ್ಷಣಗಳನ್ನು ಮೌಲ್ಯೀಕರಿಸಲು ಸಂಶೋಧನಾ ತಂಡವು ಅತ್ಯಾಧುನಿಕ ಮಾದರಿಯ ಆನುವಂಶಿಕ ವಿಶ್ಲೇಷಣೆ ಮತ್ತು ರೂಪಾಂತರ ವಿಜ್ಞಾನದ ಅಧ್ಯಯನಗಳನ್ನು ಬಳಸಿಕೊಂಡಿದೆ.

• ಉಭಯವಾಸಿಗಳು ಎಂದರೆ ಭೂಮಿಯಲ್ಲೂ ನೀರಿನಲ್ಲೂ ಬದುಕುವ ಪ್ರಾಣಿಗಳು ಎಂದರ್ಥ. ಆದರೆ ಬಹಳಷ್ಟು ಉಭಯವಾಸಿಗಳು ಭೂವಾಸಿಗಳಾಗಿದ್ದು ಕೆಲವು ಮರವಾಸಿಗಳಾಗಿರುತ್ತವೆ ಅಥವಾ ಸಿಹಿ ನೀರಿನ ಮೂಲದ ಜಲ ಪರಿಸರವ್ಯವಸ್ಥೆಯಲ್ಲಿ ಕಂಡು ಬರುತ್ತವೆ. ಉಭಯವಾಸಿಗಳು ಸಾಮಾನ್ಯವಾಗಿ ನೀರಿನಲ್ಲಿ ಲರ‍್ವಾ ರೂಪದಲ್ಲಿ ತಮ್ಮ ಜೀವನವನ್ನು ಆರಂಬಿಸುತ್ತವೆ. ಆದರೆ ಕೆಲವು ಜಾತಿಯ ಉಭಯವಾಸಿಗಳು ವರ‍್ತನಾ ಬದಲಾವಣೆಗಳ ಹೊಂದಾಣಿಕೆಯಿಂದಾಗಿ ಈ ಹಂತವನ್ನು ಹೊರತಾಗಿ ಕೂಡಾ ಬೆಳೆಯುತ್ತವೆ.

• ಉಭಯವಾಸಿಗಳು ತಮ್ಮ ಚರ‍್ಮವನ್ನು ದ್ವಿತೀಯಕ ಉಸಿರಾಟದ ಅಂಗವಾಗಿ ಬಳಸಿಕೊಳ್ಳುತ್ತವೆ. ಹಾಗೂ ಕೆಲವು ಚಿಕ್ಕ ಭೂವಾಸಿ ಸಾಲ್‌ ಮೆಂಡರ್‍ಗಳು ಮತ್ತು ಕಪ್ಪೆಗಳು ಉಸಿರಾಟಕ್ಕಾಗಿ ಸಂಪೂರ್ಣವಾಗಿ ತಮ್ಮ ಚರ‍್ಮವನ್ನೆ ಅವಲಂಬಿಸಿವೆ. ಉಭಯವಾಸಿಗಳು ಸಂಕೀರ್ಣಮಯವಾದ ಸಂತಾನೋತ್ಪತ್ತಿಯ ಅವಶ್ಯಕತೆಗಳು ಹಾಗೂ ಸೂಕ್ಷ್ಮವಾದ ಚರ‍್ಮ ಹೊಂದಿರುತ್ತವೆ.

ಪರಿಸರ ರಕ್ಷಣೆಯಲ್ಲಿ ಉಭಯಚರಗಳ ಪಾತ್ರ
ಉಭಯಚರಗಳು ಎಂದರೆ ಕಪ್ಪೆಗಳು, ನೆಲಗಪ್ಪೆಗಳು, ಕಾಡುಗಪ್ಪೆಗಳು, ಸಾಲ್‌ ಮಾಂಡರ್‌ಗಳು ಮತ್ತು ನ್ಯೂಟ್‌ಗಳನ್ನು(ಸಣ್ಣ ಉಭಯಚರ ಪ್ರಾಣಿಗಳು) ಒಳಗೊಳ್ಳುತ್ತವೆ. ಅವು ವಿವಿಧ ಪರಿಸರ ವ್ಯವಸ್ಥೆಗಳಲ್ಲಿ ನಿರ್ಣಾಯಕ ಪರಿಸರ ಪಾತ್ರವನ್ನು ವಹಿಸುತ್ತವೆ. ಈ ಉಭಯವಾಸಿಗಳು ಜೀವವೈವಿಧ್ಯ, ಪೋಷಕಾಂಶಗಳ ಹರಿವಿನ ಚಕ್ರ ಮತ್ತು ಪರಿಸರ ವ್ಯವಸ್ಥೆಯ ಸ್ಥಿರತೆಗೆ ಕೊಡುಗೆ ನೀಡುತ್ತವೆ.

1. ಜೀವವೈವಿಧ್ಯ ನಿರ್ವಹಣೆ
ಉಭಯಚರಗಳು ಪರಿಸರ ವ್ಯವಸ್ಥೆಯ ವಿವಿಧ ವಲಯಗಳಲ್ಲಿ ಜೀವವೈವಿಧ್ಯಕ್ಕೆ ಗಣನೀಯವಾಗಿ ಕೊಡುಗೆ ನೀಡುತ್ತವೆ. ಇವುಗಳ ವೈವಿಧ್ಯಮಯ ರೂಪಾಂತರಗಳು ಮತ್ತು ವಿಶಿಷ್ಟ ನಡವಳಿಕೆಗಳು ಜಲವಾಸಿ ಸಂತಾನೋತ್ಪತ್ತಿ ಸ್ಥಳಗಳಿಂದ ಭೂ ಪರಿಸರದವರೆಗೆ ಹಲವಾರು ಆವಾಸಸ್ಥಾನಗಳನ್ನು ಬಳಸಿಕೊಳ್ಳಲು ಅನುವು ಮಾಡಿಕೊಡುತ್ತದೆ.

ಯಾವುದೇ ಪರಿಸರದಲ್ಲಿ ವಿವಿಧ ಉಭಯಚರ ಪ್ರಭೇದಗಳ ಉಪಸ್ಥಿತಿಯು ಆಯಾ ಪರಿಸರ ವ್ಯವಸ್ಥೆಯ ಆರೋಗ್ಯ ಮತ್ತು ಶ್ರೀಮಂತಿಕೆಯನ್ನು ಪ್ರತಿಬಿಂಬಿಸುತ್ತದೆ.

2. ಸೂಚಕ ಜಾತಿಗಳು
ಉಭಯಚರಗಳು ಪರಿಸರದ ಪರಿಸ್ಥಿತಿಗಳಲ್ಲಿನ ಬದಲಾವಣೆಗಳಿಗೆ ಸೂಕ್ಷ್ಮವಾಗಿ ಪ್ರತಿಕ್ರಿಯಿಸುವುದರಿಂದ ಪರಿಸರ ಸೂಚಕಗಳಾಗಿ ಪರಿಗಣಿಸಲಾಗುತ್ತದೆ. ಅವುಗಳ ಚರ‍್ಮವು ಹೊರಗಿನ ವಾತಾವರಣಕ್ಕೆ ತೆರೆದುಕೊಂಡಂತಿರುವುದರಿಂದ ಅವುಗಳನ್ನು ಮಾಲಿನ್ಯಕಾರಕಗಳಿಗೆ ಮತ್ತು ನೀರಿನ ಗುಣಮಟ್ಟದಲ್ಲಿನ ಬದಲಾವಣೆಗಳಿಗೆ ಬೇಗನೇ ಒಳಗಾಗುವಂತೆ ಮಾಡುತ್ತದೆ. ಇದು ಪರಿಸರದ ಆರೋಗ್ಯದ ಮೌಲ್ಯಮಾಪನ ಸೂಚಕಗಳಂತೆ ತೋರುತ್ತದೆ.  

3. ಸೊಳ್ಳೆ ಮತ್ತು ಕೀಟ ನಿಯಂತ್ರಣ
ಅನೇಕ ಉಭಯಚರಗಳು, ವಿಶೇಷವಾಗಿ ಕಪ್ಪೆಗಳು ಮತ್ತು ನೆಲಗಪ್ಪೆಗಳು, ಸೊಳ್ಳೆಗಳು ಮತ್ತು ಕೃಷಿ ಕೀಟಗಳನ್ನು ಒಳಗೊಂಡಂತೆ ಕೀಟ ಭಕ್ಷಕಗಳಾಗಿವೆ. ಇವುಗಳು ಕೀಟಗಳ ಸಂಖ್ಯೆಯನ್ನು ನಿಯಂತ್ರಿಸುವ ಮೂಲಕ, ಪರಿಸರ ವ್ಯವಸ್ಥೆಯ ಸಮತೋಲನಕ್ಕೆ ಕೊಡುಗೆ ನೀಡುತ್ತವೆ ಮತ್ತು ರೋಗ ವಾಹಕಗಳ ಹರಡುವಿಕೆಯನ್ನು ಕಡಿಮೆ ಮಾಡುತ್ತವೆ. ಬೆಳೆಗಳನ್ನು ರಕ್ಷಿಸಿ  ಮೂಲಕ ಮಾನವರಿಗೆ ಸಹಾಯ ಮಾಡುತ್ತವೆ.

4. ಪೋಷಕಾಂಶಗಳ ಹರಿವು
ಉಭಯಚರಗಳು ಪರಭಕ್ಷಕ ಜೀವಿಗಳೂ ಹೌದು ಜತೆಗೆ ಇತರ ಪ್ರಾಣಿಗಳ ಆಹಾರವೂ ಹೌದು. ಹೀಗೆ ಪೋಷಕಾಂಶಗಳ ಹರಿವಿನ ಚಕ್ರದಲ್ಲಿ ಪಾತ್ರವಹಿಸುತ್ತವೆ. ಅಕಶೇರುಕಗಳನ್ನು ಈ ಉಭಯವಾಸಿಗಳು ತಮ್ಮ ಪ್ರಧಾನ ಆಹಾರವಾಗಿ ಬಳಸುವುದರಿಂದ ಈ ಜೀವಿಗಳ ಸಂಖ್ಯೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಜತೆಗೆ ಉಭಯಚರಗಳು ತಮ್ಮ ದೇಹಗಳು ಕೊಳೆಯುವಾಗ ಭೂಮಿಯ ಪರಿಸರ ವ್ಯವಸ್ಥೆಗಳಿಗೆ ಪೋಷಕಾಂಶಗಳನ್ನು ಕೊಡುಗೆಯಾಗಿ ನೀಡುತ್ತವೆ. ಇದು ಪೋಷಕಾಂಶಗಳ ಲಭ್ಯತೆಯ ಮೇಲೆ ಮತ್ತಷ್ಟು ಪ್ರಭಾವ ಬೀರುತ್ತದೆ.

5. ಬೀಜ ಪ್ರಸರಣ
ಕೆಲವು ಉಭಯಚರಗಳು, ನಿರ್ದಿಷ್ಟವಾಗಿ ಕೆಲವು ಜಾತಿಯ ಕಪ್ಪೆಗಳು, ಬೀಜ ಪ್ರಸರಣದಲ್ಲಿ ತೊಡಗುತ್ತವೆ. ಇವು ಭೂಮಿಯ ತಮ್ಮ ಆವಾಸಸ್ಥಾನಗಳ ಮೂಲಕ ಚಲಿಸುವಾಗಲೆಲ್ಲಾ ತಮ್ಮ ದೇಹದ ಮೇಲೆ ಹೊತ್ತು ಸಾಗುವ ಬೀಜಗಳನ್ನು ಚೆಲ್ಲುತ್ತಾ ಸಸ್ಯಗಳ ಬೀಜಪ್ರಸರಣಕ್ಕೆ ಸಹಾಯ ಮಾಡುತ್ತವೆ. ಈ ಪ್ರಕ್ರಿಯೆಯು ಸಸ್ಯಗಳ ಬೆಳವಣಿಗೆಗೆ ಕೊಡುಗೆ ನೀಡುತ್ತದೆ ಮತ್ತು ಪ್ರಕೃತಿಯ ಒಟ್ಟು ರಚನೆಯನ್ನು ಬೆಂಬಲಿಸುತ್ತದೆ.

6. ಜಲವಾಸಿ ಆವಾಸಸ್ಥಾನ ನಿರ್ವಹಣೆ

ಉಭಯಚರಗಳು ಅದರಲ್ಲೂ ವಿಶೇಷವಾಗಿ ಗೊದಮೊಟ್ಟೆಗಳು, ಜಲವಾಸಿ ಆವಾಸಸ್ಥಾನಗಳ ಆರೋಗ್ಯವನ್ನು ಕಾಪಾಡುವಲ್ಲಿ ಪಾತ್ರವಹಿಸುತ್ತವೆ. 

ಗೊದಮೊಟ್ಟೆಗಳು ಪಾಚಿ ಮತ್ತು ಡೆಟ್ರಿಟಸ್ ಅನ್ನು ಆಹಾರವಾಗಿ ಬಳಸುತ್ತಾ ಅವುಗಳ ಅತಿಯಾದ ಬೆಳವಣಿಗೆಯನ್ನು ತಡೆಯುತ್ತದೆ ಮತ್ತು ನೀರಿನ ಗುಣಮಟ್ಟವನ್ನು ಕಾಪಾಡುತ್ತದೆ. ಇಂತಹಾ ಆರೋಗ್ಯಕರ ಜಲವಾಸಿ ಆವಾಸಸ್ಥಾನಗಳು ಇತರ ಅಸಂಖ್ಯಾತ ಜೀವಿಗಳಿಗೆ ಪ್ರಯೋಜನವನ್ನು ನೀಡುತ್ತವೆ.

7. ಇತರ ಪ್ರಾಣಿಗಳಿಗೆ ಬೇಟೆ
ಪಕ್ಷಿಗಳು, ಸಸ್ತನಿಗಳು, ಸರೀಸೃಪಗಳು ಮತ್ತು ಅಕಶೇರುಕಗಳು ಸೇರಿದಂತೆ ವಿವಿಧ ಪರಭಕ್ಷಕಗಳಿಗೆ ಉಭಯಚರಗಳು ನಿರ್ಣಾಯಕ ಆಹಾರ ಮೂಲವಾಗಿ ಕಾರ್ಯನಿರ್ವಹಿಸುತ್ತವೆ.
ಅವುಗಳ ಸಮೃದ್ಧಿ ಮತ್ತು ವೈವಿಧ್ಯತೆಯು ಆಹಾರ ಜಾಲಗಳ ಅವಿಭಾಜ್ಯ ಘಟಕಗಳನ್ನಾಗಿ ಮಾಡುವ ಕಾರಣ ಇವು ಅನೇಕ ಪರಿಸರ ವ್ಯವಸ್ಥೆಗಳ ಬದಲಾವಣೆಗಳ ಮೇಲೆ ಪ್ರಭಾವ ಬೀರುತ್ತದೆ.

8. ಸಾಂಸ್ಕೃತಿಕ ಮಹತ್ವ

ಉಭಯಚರಗಳು ಅನೇಕ ಸಮಾಜಗಳಲ್ಲಿ ಸಾಂಸ್ಕೃತಿಕ ಪ್ರಾಮುಖ್ಯತೆಯನ್ನು ಹೊಂದಿವೆ. ಇವುಗಳು ಜಾನಪದ, ಪುರಾಣಗಳು, ಕತೆಗಳು ಮತ್ತು ಸಾಂಪ್ರದಾಯಿಕ ಜ್ಞಾನದಲ್ಲಿ ಪ್ರಮುಖವಾಗಿ ಕಾಣಿಸಿಕೊಂಡಿರುವ ಪ್ರಾಣಿಗಳಾಗಿವೆ.

ಪರಿಸರ ವ್ಯವಸ್ಥೆಗಳಲ್ಲಿ ಅವುಗಳ ಉಪಸ್ಥಿತಿಯು ನೈಸರ್ಗಿಕ ಭೂದೃಶ್ಯಗಳ ಒಟ್ಟು ಸೌಂದರ‍್ಯ ಮತ್ತು ಸಾಂಸ್ಕೃತಿಕ ಮೌಲ್ಯಕ್ಕೆ ಕೊಡುಗೆ ನೀಡುತ್ತದೆ.

ಅವುಗಳ ಪರಿಸರ ಪ್ರಾಮುಖ್ಯತೆಯ ಹೊರತಾಗಿಯೂ, ಆವಾಸಸ್ಥಾನದ ನಷ್ಟ, ಹವಾಮಾನ ಬದಲಾವಣೆ, ಮಾಲಿನ್ಯ ಮತ್ತು ರೋಗದಂತಹ ಅಂಶಗಳಿಂದಾಗಿ ವಿಶ್ವಾದ್ಯಂತ ಉಭಯಚರಗಳ ಸಂಖ್ಯೆಯು ತೀವ್ರಕುಸಿತವನ್ನು ಎದುರಿಸುತ್ತಿದೆ. ಪರಿಸರ ವ್ಯವಸ್ಥೆಗಳಲ್ಲಿ ಉಭಯಚರಗಳ ನಿರಂತರ ಪರಿಸರ ಪಾತ್ರಗಳನ್ನು ಖಚಿತಪಡಿಸಿಕೊಳ್ಳಲು ಅವುಗಳ ಆವಾಸಸ್ಥಾನಗಳನ್ನು ಸಂರಕ್ಷಿಸುವ, ಪಾರಿಸರಿಕ ಬೆದರಿಕೆಗಳನ್ನು ತಗ್ಗಿಸುವ ಮತ್ತು ರೋಗ-ಸಂಬಂಧಿತ ಸವಾಲುಗಳನ್ನು ಎದುರಿಸುವ ಸಂರಕ್ಷಣಾ ಪ್ರಯತ್ನಗಳು ಅತ್ಯವಶ್ಯಕವಾಗಿವೆ.

ಮುಖ್ಯಾಂಶಗಳು
• ಇತ್ತೀಚೆಗೆ ಬೆಂಗಳೂರಿನಲ್ಲಿ ಹೊಸ ಕಪ್ಪೆಯ ಪ್ರಭೇದಗಳು ಪತ್ತೆಯಾಗಿವೆ.
• ಹೊಸದಾಗಿ ಪತ್ತೆಯಾದ ಈ ಉಭಯಚರಗಳಿಗೆ ಸ್ಫೇರೋಥೆಕಾ ವರ್ಷಭು ಎಂದು ಹೆಸರಿಸಲಾಗಿದೆ.
• ಆರಂಭಿಕ ಮಳೆಯ ಸಮಯದಲ್ಲಿ ಬಿಲಗಳಿಂದ ಹೊರಬರುವ ಅವುಗಳ ನಡವಳಿಕೆಯಿಂದಾಗಿ ಕಪ್ಪೆಗಳು ಈ ಹೆಸರನ್ನು ಪಡೆದುಕೊಂಡಿದೆ..
• 2020 ರಲ್ಲಿ, ಬೆಂಗಳೂರು ನಗರದಲ್ಲಿಯೇ Sphaerotheca Bengaluru ಎಂಬ ಹೆಸರಿನ ಬಿಲದ ಕಪ್ಪೆ ಪ್ರಭೇದವನ್ನು ಪತ್ತೆಹಚ್ಚಲಾಗಿತ್ತು.
• ಈ ಕಪ್ಪೆಗಳನ್ನು ಕೂಡಾ ಅದೇ ಪ್ರದೇಶದಲ್ಲಿ ಗುರುತಿಸಲಾಗಿದೆ.

ಬಹು ಆಯ್ಕೆಯ ಪ್ರಶ್ನೆಗಳು :

1) ಬೆಂಗಳೂರು ನಗರ ಪ್ರದೇಶದಲ್ಲಿ ಹೊಸದಾಗಿ ಪತ್ತೆಯಾದ ಕಪ್ಪೆ ಜಾತಿಯ ಹೆಸರೇನು ?
1) ಸ್ಪೈರೋಥೆಕಾ ಬೆಂಗಾಲೆನ್ಸಿಸ್
2) ಸ್ಪೈರೋಥೆಕಾ  ವರ್ಷಭು
3) ಬೆಂಗಳೂರು ಯೆನ್ಸಿಸ್ ಆಂಫಿಬಿಯಸ್
4) ರ‍್ಬನಸ್ ಫ್ರಾಗ್ಲಿಸ್
ಉತ್ತರ: (2)

2) Sphaerotheca Bengaluru ಎಂಬ ಬಿಲದ ಕಪ್ಪೆ ಜಾತಿಯನ್ನು ಯಾವ  ವರ್ಷದಲ್ಲಿ ಕಂಡುಹಿಡಿಯಲಾಯಿತು ?
1) 2018
2) 2019
3) 2020
4) 2021
ಉತ್ತರ: (3)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT