ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive: ನಾಟಕ ಪಾಠಗಳ ಯಶಸ್ವಿ ಪಯಣ

Last Updated 10 ಮಾರ್ಚ್ 2021, 12:09 IST
ಅಕ್ಷರ ಗಾತ್ರ

ಮಕ್ಕಳಿಗೆ ಚಟುವಟಿಕೆಗಳ ಮೂಲಕ ಇಂಗ್ಲಿಷ್ ಬೇಸಿಕ್ ಹಾಗೂ ಸಾಹಿತ್ಯದ ಪಾಠ ಮಾಡುವ ಮೈಸೂರಿನ ‘ಚಿಲ್ರ್ಡನ್ಸ್ ಲಿಟರರಿ ಕ್ಲಬ್’ ಈಗಾಗಲೇ 3000ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ಮಕ್ಕಳಿಗಾಗಿ ನಡೆಸಿದೆ. ಇದರ ಪ್ರಮುಖ ರೂವಾರಿ ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ನಿವೃತ್ತ ಇಂಗ್ಲಿಷ್ ಪ್ರಾಧ್ಯಾಪಕರಾದ ಡಾ.ಆರ್. ಪೂರ್ಣಿಮಾ.

ಈ ಕ್ಲಬ್ ವತಿಯಿಂದ ಆಯೋಜಿಸುವ ಮಕ್ಕಳ ಇಂಗ್ಲಿಷ್ ನಾಟಕಗಳಿಂದ ಹಲವು ಮಕ್ಕಳು ಸರಳವಾಗಿ ಇಂಗ್ಲಿಷ್ ಮಾತನಾಡಲು ಸಾಧ್ಯವಾಗಿದೆ. ಹಲವು ಕುಗ್ರಾಮಗಳ ಮಕ್ಕಳಿಗೆ ಈ ಕ್ಲಬ್ ವತಿಯಿಂದ ನಡೆಸಲಾದ ನಾಟಕ ತರಬೇತಿಯಲ್ಲಿ ಪಾಲ್ಗೊಳ್ಳುವ ಅವಕಾಶವೂ ಲಭಿಸಿದೆ.

ಈ ಕ್ಲಬ್‌ನ ವಿಶೇಷವೆಂದರೆ ಇದಕ್ಕೆ ಸದಸ್ಯರಾಗಲು ಯಾವುದೇ ಶುಲ್ಕವಿಲ್ಲ. ಇಂಗ್ಲಿಷ್ ಕಲಿಯಬೇಕೆಂಬ ತುಡಿತವಿದ್ದರೆ ಸಾಕು. ನಾಟಕಗಳನ್ನು ಬರೆದು ಸ್ಕ್ರಿಪ್ಟ್ ಸಿದ್ಧಪಡಿಸಿ, ನಿರ್ದೇಶನವನ್ನೂ ಪೂರ್ಣಿಮಾ ಮಾಡುತ್ತಾರೆ. ನಿವೃತ್ತಿಯ ನಂತರ ತಮ್ಮ ವಿರಾಮದ ಸಮಯವನ್ನು ಮಕ್ಕಳಿಗೆ ಇಂಗ್ಲಿಷ್ ಹೇಳಿಕೊಡಲು ವ್ಯಯಿಸುತ್ತಿದ್ದಾರೆ. ಇಂಗ್ಲಿಷ್ ರಂಗಭೂಮಿಯ ಅಭಿವೃದ್ಧಿಗೂ ಕಾರಣರಾಗಿದ್ದಾರೆ. ಈ ಕ್ಷೇತ್ರಗಳಲ್ಲಿ ಅವರ ವಿಕ್ರಮಗಳು ಹಲವು.

ಈಚೆಗೆ ಕರ್ನಾಟಕ– ಆಂಧ್ರ ಗಡಿಯಲ್ಲಿರುವ ಕುಗ್ರಾಮದ ಸರ್ಕಾರಿ ಶಾಲೆಯ ಪುಟ್ಟ ಮಕ್ಕಳೂ ಇವರು ಬರೆದ ನಾಟಕದ ಪಾತ್ರಗಳಾದರು. ಚಿಕ್ಕಬಳ್ಳಾಪುರ ಜಿಲ್ಲೆಯ ಪೆಂಡ್ಲಿವಾರಹಳ್ಳಿಯ ಕಿರಿಯ ಪ್ರಾಥಮಿಕ ಕನ್ನಡ ಮಾಧ್ಯಮ ಶಾಲೆಯ ಮಕ್ಕಳು ಇಂಗ್ಲಿಷ್ ನಾಟಕವಾಡಿದರು. ಪೂರ್ಣಿಮಾ ಅವರು ಬರೆದು ನಿರ್ದೇಶಿಸಿದ ‘ಎ ಬಿಗ್ ‘ನೋ’ ಟು ಡ್ರಗ್ಸ್’ ಎಂಬ ನಾಟಕವನ್ನು ಮಕ್ಕಳಿಗೆ ತರಬೇತಿ ನೀಡಿದ್ದು ಅದೇ ಶಾಲೆಯ ಶಿಕ್ಷಕಿ ಉಷಾ. ಪೂರ್ಣಿಮಾ ಅವರ ಮಾರ್ಗದರ್ಶನದಲ್ಲಿ ಮೂಡಿಬಂದ ಈ ನಾಟಕದಲ್ಲಿ ಮಕ್ಕಳು ಇಂಗ್ಲಿಷ್ ಡೈಲಾಗ್‌ಗಳನ್ನು ಅರಳು ಹುರಿದಂತೆ ಹೇಳುವುದನ್ನು ಕೇಳಿದರೆ ಯಾರಾದರೂ ಅಬ್ಬಾ ಎನ್ನಬೇಕು. ಎಸ್.ಸಿ., ಎಸ್‌ಟಿ, ಕುರುಬರು ಹಾಗೂ ಪಿಚುಗುಂಟ್ಲ ಎಂಬ ಅಲೆಮಾರಿ ಸಮುದಾಯದ ಮಕ್ಕಳು ಈ ನಾಟಕದಲ್ಲಿ ಪಾತ್ರಧಾರಿಗಳಾಗಿ ಇಂಗ್ಲಿಷ್ ಮಾತುಗಳನ್ನು ಸುಲಲಿತವಾಗಿ ಒಪ್ಪಿಸಿ, ಸೈ ಎನಿಸಿಕೊಂಡಿದ್ದು ಗಮನಾರ್ಹ.

ಕುಗ್ರಾಮದ ಮಕ್ಕಳೊಂದಿಗೆ ಡಾ.ಆರ್‌.ಪೂರ್ಣಿಮಾ (ಚಿತ್ರ ಕೃಪೆ– ಚಿಲ್ಡ್ರನ್ಸ್‌ ಲಿಟರರಿ ಕ್ಲಬ್‌)
ಕುಗ್ರಾಮದ ಮಕ್ಕಳೊಂದಿಗೆ ಡಾ.ಆರ್‌.ಪೂರ್ಣಿಮಾ (ಚಿತ್ರ ಕೃಪೆ– ಚಿಲ್ಡ್ರನ್ಸ್‌ ಲಿಟರರಿ ಕ್ಲಬ್‌)

ಡಾ.ಆರ್. ಪೂರ್ಣಿಮಾ ಅವರು 1990ರಲ್ಲಿ ‘ಚಿಲ್ರ್ಡನ್ಸ್ ಲಿಟರರಿ ಕ್ಲಬ್’ ಅನ್ನು ಸ್ಥಾಪಿಸಿದರು. ಜಾತಿ, ಧರ್ಮಗಳ ಭೇದವಿಲ್ಲದೆಯೇ ಮಕ್ಕಳ ಮನೋವಿಕಾಸಕ್ಕಾಗಿ ಶ್ರಮಿಸುವುದೇ ಇದರ ಉದ್ದೇಶ. ಮಕ್ಕಳ ಪ್ರತಿಭೆ ಗುರುತಿಸುವುದು, ಅಗತ್ಯ ಜ್ಞಾನ ನೀಡುವುದು. ಇದಕ್ಕಾಗಿ ಪೂರ್ಣಿಮಾ ಅವರು ಸ್ವಂತ ಖರ್ಚಿನಿಂದ ರಾಜ್ಯದ 31 ಜಿಲ್ಲೆಗಳಲ್ಲಿ ಓಡಾಡಿ, ಸರ್ಕಾರಿ, ಅನುದಾನಿತ, ಅನುದಾನರಹಿತ ಶಾಲೆಗಳ ಮಕ್ಕಳಿಗೆ ಸ್ಪೋಕನ್ ಇಂಗ್ಲಿಷ್, ನಾಟಕಗಳನ್ನು ಹೇಳಿಕೊಟ್ಟಿದ್ದಾರೆ. ಶಿಕ್ಷಕರಿಗೆ, ಹಿರಿಯ ವಿದ್ಯಾರ್ಥಿಗಳಿಗೆ ಕಾರ್ಯಾಗಾರಗಳನ್ನೂ ನಡೆಸಿಕೊಟ್ಟಿದ್ದಾರೆ. ಕೋವಿಡ್ ಸಂದರ್ಭಗಳಲ್ಲೂ ಅವರು ಆನ್‌ಲೈನ್‌ ಮೂಲಕ ಪಾಠವನ್ನು ಜಾರಿಯಲ್ಲಿಟ್ಟಿದ್ದರು.

‘ನಾಟಕದ ಮೂಲಕ ಕಲಿಕೆ ತುಂಬಾ ಪರಿಣಾಮಕಾರಿ. ಕನ್ನಡ ಶಾಲೆಯ ಮಕ್ಕಳೂ ನಾನು ಹೇಳಿಕೊಟ್ಟ ಇಂಗ್ಲಿಷ್ ನಾಟಕವನ್ನು ಉತ್ಸಾಹದಿಂದ ಅಭಿನಯಿಸುವುದೇ ಇದಕ್ಕೆ ಒಂದು ಉತ್ತಮ ಉದಾಹರಣೆ. ಕಷ್ಟಕರ ವಿಷಯಗಳನ್ನೂ ಹೀಗೆಯೇ ಅಭಿನಯಗಳ ಮೂಲಕ ಹೇಳಿಕೊಟ್ಟಾಗ ಮಕ್ಕಳಿಗೆ ಸುಲಭವಾಗಿ ಅರ್ಥವಾಗುತ್ತದೆ’ ಎಂದು ಪೂರ್ಣಿಮಾ ವಿವರಿಸುತ್ತಾರೆ.

ಮೈಸೂರಿನ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದಾಗಲೇ ಪೂರ್ಣಿಮಾ ಅವರು ಸಂಜೆ ಹಾಗೂ ಊಟದ ವಿರಾಮದ ವೇಳೆಯಲ್ಲಿ ಇಂಗ್ಲಿಷ್‌ ಹಾಗೂ ನಾಟಕದ ತರಬೇತಿ ನೀಡುತ್ತಿದ್ದರು. 2016ರ ಮಾರ್ಚ್‌ನಲ್ಲಿ ನಿವೃತ್ತರಾದ ನಂತರ ಅವರ ಕಾರ್ಯ ಚಟುವಟಿಕೆ ವಿಸ್ತಾರವಾದವು. ಬಡವ-ಬಲ್ಲಿದ ಎನ್ನದೇ ಎಲ್ಲ ಮಕ್ಕಳಿಗೆ ಇಂಗ್ಲಿಷ್ ಬೇಸಿಕ್ಸ್‌ ಕಲಿಸುವ ಕಾರ್ಯದಲ್ಲಿ ಮಗ್ನರಾದರು. ಬಡ ಮಕ್ಕಳಿಗೆ ಕಬ್ಬಿಣದ ಕಡಲೆಯೆನಿಸಿದ ಇಂಗ್ಲಿಷ್ ಬಗ್ಗೆ ಉತ್ಸಾಹ ಸೃಷ್ಟಿಸುತ್ತಾರೆ. ಒಂದು ಚಿಕ್ಕ ಇಂಗ್ಲಿಷ್ ನಾಟಕದಲ್ಲಾದರೂ ಮಕ್ಕಳು ಡೈಲಾಗ್ ಹೇಳುವ ಮಟ್ಟಕ್ಕೆ ಆತ್ಮವಿಶ್ವಾಸ ಬೆಳೆಸುತ್ತಾರೆ.

ಕುಕ್ಕರಹಳ್ಳಿಯ ಸರ್ಕಾರಿ ಶಾಲೆ, ಅನಾಥ ಮಕ್ಕಳಿಗೆ ಆಶ್ರಯ ನೀಡುವ ಬಾಲಕಿಯರ ಬಾಲಮಂದಿರ, ಪಡುವಾರಹಳ್ಳಿ, ಒಂಟಿಕೊಪ್ಪಲು ಸರ್ಕಾರಿ ಶಾಲೆ ಸೇರಿ ಮೈಸೂರಿನ ಹಲವು ಶಾಲೆ–ಕಾಲೇಜುಗಳಲ್ಲಿ ಅವರು ಇಂಗ್ಲಿಷ್‌ ಪಾಠ ಮಾಡುತ್ತಿದ್ದಾರೆ.

‘ಸ್ಟೇಜ್ ಕೆಮಿಸ್ಟ್ರಿ: ನ್ಯೂರೋ ಸೈಕಿಯಾಟ್ರಿಕ್ ಡಿಸಾರ್ಡರ್ ಆನ್ ಸ್ಟೆಜ್’ ಎಂಬ ಇಂಗ್ಲಿಷ್ ನಾಟಕ ಕ್ಲಿಷ್ಟಕರ ವಿಷಯದ್ದು. ನರ ಸಂಬಂಧಿತ ಮಾನಸಿಕ ರೋಗಿಗಳ ಬಗ್ಗೆ ರಂಗಕಲೆಯ ಮೂಲಕ ಮಾತನಾಡುವ ಈ ಯತ್ನಕ್ಕೆ ಸದ್ದಿಲ್ಲದೇ ಯಶಸ್ಸು ದೊರಕಿದೆ. ರಾಜ್ಯದಾದ್ಯಂತ 286 ಪ್ರದರ್ಶನಗಳನ್ನು ಪೂರೈಸಿದೆ. 249 ಬಾರಿ ಏಕವ್ಯಕ್ತಿ ಪ್ರದರ್ಶನ ಮಾಡಿದ್ದಾರೆ. ಮೈಸೂರಿನ ಹಲವು ಶಾಲೆ-ಕಾಲೇಜು, ಸಂಘ-ಸಂಸ್ಥೆಗಳು, ಮಹಾರಾಷ್ಟ್ರದ ವಾರ್ಧಾದ ಮಹಾತ್ಮಾಗಾಂಧಿ ಅಂತರರಾಷ್ಟ್ರೀಯ ಹಿಂದಿ ವಿಶ್ವವಿದ್ಯಾಲಯ ಹಾಗೂ ಹಲವು ಜಿಲ್ಲೆಗಳಲ್ಲಿ ಈ ನಾಟಕಕ್ಕೆ ಅದ್ಭುತ ಸ್ಪಂದನ ವ್ಯಕ್ತವಾಗಿದೆ.

ಮಕ್ಕಳಿಗೆ ಕಲಿಸುವ ಕಾರ್ಯದೊಡನೆ ಪೂರ್ಣಿಮಾ ಅವರ ಸಂಶೋಧನಾ ಕಾರ್ಯ, ಎಂಫಿಲ್‌–ಪಿಎಚ್‌.ಡಿ. ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ್ದಾರೆ. ಈಗಲೂ ಪಿಎಚ್‌ಡಿ ಮಾರ್ಗದರ್ಶನ ಮುಂದುವರಿಸಿದ್ದಾರೆ. ಅವರ ಸಂಶೋಧನಾ ಪ್ರಬಂಧ ‘ಎಂಪವರಿಂಗ್ ಯಂಗ್ ಲೈವ್ಸ್ ಥ್ರೂ ಆರ್ಟ್ಸ್‌: ದಿ ರೋಲ್ ಆಫ್ ಎಜುಕೇಶನಲ್ ಥಿಯೇಟರ್ ಇನ್ ಅಮೆರಿಕ’ಕ್ಕೆ ‘ಫುಲ್‌ಬ್ರೈಟ್‌ -ನೆಹ್ರೂ ಸೀನಿಯರ್ ರೀಸರ್ಚ್‌ ಫೆಲೋಶಿಪ್’ ಲಭಿಸಿದೆ. ಕರ್ನಾಟಕ ರಾಜ್ಯ ನಾಟಕ ಅಕಾಡೆಮಿ ಅವಾರ್ಡ್‌ (ಮೈಸೂರು ಜಿಲ್ಲೆಯಲ್ಲಿ ನೆಲೆಸಿದ ಕಲಾವಿದರಿಗೆ ನೀಡುವ) ಇವರಿಗೆ ಸಂದಿವೆ.

ಡಾ. ಆರ್‌.ಪೂರ್ಣಿಮಾ ಅವರು ಬರೆದ ‘ಎ ಬಿಗ್ ‘ನೋ’ ಟು ಡ್ರಗ್ಸ್’ ಇಂಗ್ಲಿಷ್‌ ನಾಟಕದಲ್ಲಿ ಅಭಿನಿಯಿಸಿದ ಚಿಕ್ಕಬಳ್ಳಾಪುರ ಜಿಲ್ಲೆಯ ಪೆಂಡ್ಲಿವಾರಹಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳು.
ಡಾ. ಆರ್‌.ಪೂರ್ಣಿಮಾ ಅವರು ಬರೆದ ‘ಎ ಬಿಗ್ ‘ನೋ’ ಟು ಡ್ರಗ್ಸ್’ ಇಂಗ್ಲಿಷ್‌ ನಾಟಕದಲ್ಲಿ ಅಭಿನಿಯಿಸಿದ ಚಿಕ್ಕಬಳ್ಳಾಪುರ ಜಿಲ್ಲೆಯ ಪೆಂಡ್ಲಿವಾರಹಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳು.

ಇವರು ನಿರ್ದೇಶಿಸಿದ ‘ದಿ ಗ್ರ್ಯಾಂಡ್ ಫಾದರ್- ದಿ ಗ್ರ್ಯಾಂಡ್‌ ಸನ್’ ನಾಟಕವನ್ನು ಚಿಕ್ಕಮಗಳೂರಿನ ಗಂದಘಟ್ಟ ಶಾಲೆಯ ಮಕ್ಕಳು, ಉತ್ತರಕನ್ನಡದ ಡೇರಿಯಾ ಶಾಲೆಯ ಮಕ್ಕಳು ಅಭಿನಯಿಸಿದ್ದಾರೆ. ಗಂಧಘಟ್ಟ ಶಾಲೆಯ ಮಕ್ಕಳೇ ಗಣಪತಿ-ಕುಬೇರ ನಾಟಕಕ್ಕೆ ಬಣ್ಣ ಹಚ್ಚಿದ್ದಾರೆ. ‘ದಿ ಸನ್ ಆಂಡ್ ದಿ ವಿಂಡ್’ ಅಭಿನಯಿಸಿದವರು ಮೈಸೂರಿನ ಬಾಲಕಿಯರ ಬಾಲಮಂದಿರದ ಮಕ್ಕಳು ಹಾಗೂ ಮೂಗನಹುಂಡಿ ಶಾಲೆಯ ವಿದ್ಯಾರ್ಥಿಗಳು. ವಿ.ವಿ. ಮೊಹಲ್ಲಾದ ಎಸ್‌ಸಿ–ಎಸ್‌ಟಿ ಹಾಸ್ಟೆಲ್ ವಿದ್ಯಾರ್ಥಿಗಳು ‘ಲವ್ ಲೈಸ್ ಬ್ಲೀಡಿಂಗ್’ಗೆ ಜೀವ ತುಂಬಿದ್ದರೆ, ಯಾದವಗಿರಿಯ ಭಾರತಿ ಸ್ತ್ರೀ ಸಮಾಜ ಶಾಲೆಯ ಮಕ್ಕಳು ‘ಥಿಯೇಟರ್ ಡಸ್ ಎಜುಕೇಟ್’ ನಾಟಕವನ್ನು ಅಭಿನಯಿಸಿ ಭೇಷ್ ಎನಿಸಿಕೊಂಡಿದ್ದಾರೆ. ಮೈಸೂರು ವಿನಾಯಕನಗರದ ಸರ್ಕಾರಿ ಪ್ರೌಢಶಾಲೆಯ ಮಕ್ಕಳು ‘ಎ ಬಿಗ್ ‘ನೋ’ ಟು ಡ್ರಗ್ಸ್’ ಅಭಿನಯಿಸಿದ್ದಾರೆ. ಈ ಎಲ್ಲ ಇಂಗ್ಲಿಷ್ ನಾಟಕಗಳಲ್ಲಿ ಅಭಿನಯಿಸಿದವರು ಕನ್ನಡ ಮಾಧ್ಯಮದ ವಿದ್ಯಾರ್ಥಿಗಳು ಎಂಬುದು ವಿಶೇಷ.

ವಿಶ್ವವಿದ್ಯಾಲಯ ಮಟ್ಟದಲ್ಲಿಯೂ ಹಲವು ನಾಟಕಗಳನ್ನು ಅವರು ನಿರ್ದೇಶಿಸಿದ್ದಾರೆ. ಕರ್ನಾಟಕ ಮುಕ್ತ ವಿಶ್ವವಿದ್ಯಾಲಯ, ದೂರದರ್ಶನಗಳ ಸಹಯೋಗದಲ್ಲಿ ಅವರು ‘ದಿ ಓಪನಿಂಗ್ ಸೀನ್ ಆಫ್ ದಿ ಟೆಂಪೆಸ್ಟ್’ ತಯಾರಿಸಿ ಕೊಟ್ಟಿದ್ದಾರೆ. ಮ್ಯಾಕ್‌ಬೆಥ್‌, ಹ್ಯಾಮ್ಲೆಟ್, ಅಗಮೆಮ್ನೋನ್, ಅವೋನ್ ಟು ಕಾವೇರಿ, ಸ್ತ್ರೀ ಶಕ್ತಿ, ಇನ್ ಸರ್ಚ್‌ ಆಫ್ ಶೇಕ್ಸ್‌ಪಿಯರ್ ಆ್ಯಂಡ್ ಕುವೆಂಪು, ಡ್ರೀಮ್ಸ್ ಆಂಡ್ ಡ್ರೀಮರ್ಸ್‌, ಎಕ್ಸ್‌ಪ್ಲಾಯ್ಟೇಶನ್‌ ಆ್ಯಂಡ್ ಟುವರ್ಡ್ಸ್‌ ಎಂಪವರ್ಮೆಂಟ್‌ಗಳನ್ನೂ ನಿರ್ದೇಶಿಸಿದ್ದಾರೆ. ಕನ್ನಡದಲ್ಲಿ ಮುಕ್ತ ವಿದ್ಯೆ, ಕುರುಡು ನಾಯಿ ನಾಟಕಗಳನ್ನು ಯಶಸ್ವಿಯಾಗಿ ಸಿದ್ಧ ಪಡಿಸಿದ್ದಾರೆ.

ಬಹುಶಿಸ್ತೀಯ ಅಧ್ಯಯನದಲ್ಲಿ ತುಂಬಾ ಆಸಕ್ತಿ ಉಳ್ಳ ಪೂರ್ಣಿಮಾ ಅವರು ಬರೆದಿರುವ ಹೊಸ ನಾಟಕ ‘ಫ್ಯಾಸಿನೇಟಿಂಗ್‌ ಅಸ್ಟ್ರಾನಮಿ: ಯೂಥ್‌ ಥ್ರಿಲ್‌ ಅಸ್‌ ಆ್ಯಂಡ್‌ ವಿ ಅಡ್ಮೈರ್ ಯೂ’ ಈಗಾಗಲೇ 6 ಬಾರಿ ಓದುವಿಕೆ ಪೂರೈಸಿದೆ. ಶೀಘ್ರದಲ್ಲಿ ರಂಗಕ್ಕೆ ಬರಲಿದೆ. ಎಂ.ಜಿ. ಶ್ರೀನಿವಾಸ್ ಅವರ ನಿರ್ದೇಶನದ 'ಓಲ್ಡ್ ಮಾಂಕ್' ಕನ್ನಡ ಚಲನಚಿತ್ರದಲ್ಲೂನಟಿಸುತ್ತಿದ್ದಾರೆ.

ರಾಷ್ಟ್ರೀಯ– ಅಂತರರಾಷ್ಟ್ರೀಯ ಸಮ್ಮೇಳನಗಳಲ್ಲಿ ಪ್ರಬಂಧಗಳನ್ನು ಮಂಡಿಸುವುದನ್ನು ಈಗಲೂ ಮುಂದುವರಿಸಿರುವ ಪೂರ್ಣಿಮಾ ಚಿಕ್ಕಮಕ್ಕಳಿಗೆ ಇಂಗ್ಲಿಷ್‌ ಬೇಸಿಕ್ಸ್‌ ಹಾಗೂ ನಾಟಕ ತರಬೇತಿಯನ್ನು ಜೊತೆಜೊತೆಗೆ ತೆಗೆದುಕೊಂಡು ಹೋಗುತ್ತಿದ್ದಾರೆ. ಕೋಲಾರ, ತುಮಕೂರು, ಚಿಕ್ಕಬಳ್ಳಾಪುರ, ಮೈಸೂರು ಮೊದಲಾದ ಕಡೆಗಳಲ್ಲಿ ಆನ್‌ಲೈನ್‌ನಲ್ಲಿ ಇಂಗ್ಲಿಷ್‌ ಬೋಧನೆಯನ್ನೂ ಮಾಡುತ್ತಿದ್ದಾರೆ.

ಮಾಹಿತಿಗೆ www.childrensliteraryclub.org ನೋಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT