ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಯಂ ಅಧ್ಯಯನ ಎಂಬ ರಹದಾರಿ

Last Updated 7 ಏಪ್ರಿಲ್ 2021, 19:30 IST
ಅಕ್ಷರ ಗಾತ್ರ

ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿ ವಿಷಯಕ್ಕೆ ಬಂದರೆ ಒಂದು ಸ್ವಯಂ ಅಧ್ಯಯನ ಮತ್ತೊಂದು ತರಬೇತಿಯೊಂದಿಗೆ ಅಧ್ಯಯನ. ಈ ಲೇಖನದಲ್ಲಿ ಸ್ವಯಂ ಅಧ್ಯಯನದ ಮಹತ್ವ ಹಾಗೂ ಅನುಕೂಲತೆಗಳ ಬಗ್ಗೆ ತಿಳಿಯೋಣ.

ತರಬೇತಿ ಆಯ್ಕೆ ಅಷ್ಟೇ, ಅನಿವಾರ್ಯಯವಲ್ಲ

ಮೊಟ್ಟ ಮೊದಲು ನೀವು ಪ್ರಥಮ ಬಾರಿ ಯಾವುದೇ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಬೇಕಾದರೂ ತರಬೇತಿ ಅತ್ಯವಶ್ಯ ಎಂಬಮನೋಭಾವನೆಯಿಂದ ಹೊರ ಬನ್ನಿ. ನೀವು ಎದುರಿಸುತ್ತಿರುವ ಪರೀಕ್ಷೆ ಪ್ರಥಮ ಬಾರಿಯದ್ದಾಗಿರಲಿ ಅಥವಾ ಪುನರಾವರ್ತನೆಯದ್ದಾಗಿರಲಿ, ನಿಮ್ಮ ಪ್ರಯತ್ನ ಸಮರ್ಪಕವಾಗಿ ಇದ್ದಾಗ ಮಾತ್ರ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಸಾಧ್ಯ. ಪರೀಕ್ಷೆಯ ಸಫಲತೆಯಲ್ಲಿ ತರಬೇತಿಯ ಮಾರ್ಗ ಸೂಕ್ತವೋ ಅಥವಾ ಸ್ವಯಂ ಅಧ್ಯಯನ ಸೂಕ್ತವೋ ಎಂಬ ಚರ್ಚೆ ಅಪ್ರಸ್ತುತ. ಅಷ್ಟಕ್ಕೂ ತರಬೇತಿಯಿಂದ ದೊರೆಯುವುದು ಮೂಲಭೂತ ಜ್ಞಾನ, ಪೂರ್ತಿ ಪಠ್ಯಕ್ರಮವನ್ನು ಒಳಗೊಂಡ ಕೆಲವು ಪ್ರಶ್ನೆಗಳಿಗೆ ಉತ್ತರಿಸುವ ಮಾರ್ಗದರ್ಶನ ಹಾಗೂ ಅಧ್ಯಯನ ಸಾಮಗ್ರಿಗಳು ಮಾತ್ರವೇ ಹೊರತು ಅದರ ಜೊತೆಗೆ ನಿಮ್ಮ ನಿರಂತರ ಅಭ್ಯಾಸ, ಸತತ ಪರಿಶ್ರಮ ಸೇರಿದಾಗ ಮಾತ್ರ ಪರೀಕ್ಷೆಯಲ್ಲಿ ಯಶಸ್ಸು ಗಳಿಸಲು ಸಾಧ್ಯ.

ಆನ್‌ಲೈನ್‌ ಕೋರ್ಸ್‌ಗಳ ಜಾಣ್ಮೆಯ ಆಯ್ಕೆ

ಇಂದಿನ ಆನ್‌ಲೈನ್‌ ಯುಗದಲ್ಲಿ ತರಬೇತಿಯ ಸಹಾಯವಿಲ್ಲದೆ ಕೇವಲ ಉಚಿತ ಅಥವಾ ಶುಲ್ಕ ಸಹಿತ ಕೋರ್ಸ್‌ಗಳ ಸಹಾಯದಿಂದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಾಧಿಸಬಹುದು. ಹಾಗೆಂದ ಮಾತ್ರಕ್ಕೆ ಕೇವಲ ಶಾರ್ಟ್‌ ಟ್ರಿಕ್ ಮೊರೆ ಹೋದರೆ ಸಾಲದು. ವಿದ್ಯಾರ್ಥಿಗಳು ಆನ್‌ಲೈನ್‌ ಶುಲ್ಕ ಸಹಿತ ಕೋರ್ಸ್‌ಗಳನ್ನು ಖರೀದಿಸುವಾಗ ಕೇವಲ ತಾವು ಎದುರಿಸಬೇಕಾದ ಪರೀಕ್ಷಾ ಕೋರ್ಸ್‌ಗಳನ್ನು ಮಾತ್ರ ಆಯ್ಕೆ ಮಾಡಿಕೊಳ್ಳಬೇಕೇ ಹೊರತು ಕಾಂಬೋ ಅಥವಾ ಡಿಸ್ಕೌಂಟ್ ಎಂಬ ನೆಪದಲ್ಲಿ ನೀವು ತಯಾರಿ ನಡೆಸದ ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಳ್ಳುವುದು ಸೂಕ್ತವಲ್ಲ. ಉದಾಹರಣೆಗೆ ಬ್ಯಾಂಕಿಂಗ್ + ರೈಲ್ವೆ + ಎಸ್ಎಸ್‌ಸಿ. ಇದರಿಂದ ನಿಮ್ಮ ಹಣವು ವ್ಯರ್ಥ ಹಾಗೂ ನೀವು ಬ್ಯಾಂಕಿಂಗ್ ಪರೀಕ್ಷೆಗೆ ತಯಾರಿ ನಡೆಸಿದ್ದಲ್ಲಿ ಒಂದು ವೇಳೆ ನಿಮ್ಮ ಪ್ರಥಮ ಪ್ರಯತ್ನ ವಿಫಲವಾದಲ್ಲಿ ಇತರೆ ಪರೀಕ್ಷೆಗಳು ಎದುರಾದಾಗ ನಿಮ್ಮ ಹತ್ತಿರ ಇರುವ ಅಧ್ಯಯನ ಸಾಮಗ್ರಿಗಳ ಕಾರಣದಿಂದ ನೀವು ಇತರೆ ಪರೀಕ್ಷೆಗಳತ್ತ ಒಲವು ತೋರಿಸಬಹುದು. ಆಗ ನಿಮ್ಮ ಗುರಿ ಕೇಂದ್ರೀಕೃತವಾಗಿರದ ಕಾರಣ ಯಾವುದೇ ಒಂದು ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಅಸಾಧ್ಯ. ಆದ್ದರಿಂದ ನಿಮಗೆ ಸೂಕ್ತವೆನಿಸುವ ಕೇವಲ ಒಂದು ಗುರಿಯನ್ನು ಆಯ್ಕೆ ಮಾಡಿಕೊಂಡು ಅದರತ್ತ ನಿಮ್ಮ ಅಭ್ಯಾಸವನ್ನು ಕೇಂದ್ರೀಕೃತಗೊಳಿಸಿ.

ಆನ್‌ಲೈನ್ ಅಧ್ಯಯನದ ಬಹು ಮುಖ್ಯ ಪ್ರಯೋಜನವೆಂದರೆ ಇದರಲ್ಲಿ ಪ್ರತಿದಿನದ ಹಾಗೂ ವಾರದ ಮತ್ತು ತಿಂಗಳಿನ ವಿಷಯದ ಗುರಿಗಳನ್ನು ಪಠ್ಯಕ್ರಮ ಅನುಸಾರವಾಗಿ ನಿಗದಿಪಡಿಸಿರುತ್ತಾರೆ. ಇವುಗಳನ್ನು ನೀವು ನಿಗದಿಯಂತೆ ಪೂರ್ಣಗೊಳಿಸುತ್ತಾ ಬಂದರೆ ಸಾಕು, ನಿಮ್ಮ ಸಂಪೂರ್ಣ ಅಧ್ಯಯನ ಪಠ್ಯಕ್ರಮ ಅನುಸಾರವಾಗಿ ಪೂರ್ಣಗೊಳ್ಳುತ್ತದೆ. ಇದಲ್ಲದೆ ಯಾವುದೇ ಕಾನ್ಸೆಪ್ಟ್‌ಗೆ ಸಂಬಂಧಿಸಿದಂತೆ ಅಥವಾ ಯಾವುದೇ ಪ್ರಶ್ನೆಗಳಿಗೆ ಉತ್ತರ ದೊರೆಯದೇ ಇದ್ದರೆ ಆನ್‌ಲೈನ್ ಸಂಶಯ ನಿವಾರಣೆ ಸೆಷನ್‌ಗಳ ಮೂಲಕ ಉತ್ತರ ಪಡೆಯಬಹುದು ಅಥವಾ ವಾಟ್ಸ್‌ಆ್ಯಪ್‌ ಮುಂತಾದ 24x7 ಅಧ್ಯಯನ ಗ್ರೂಪ್‌ಗಳಲ್ಲಿ ತಮ್ಮ ಪ್ರಶ್ನೆಗಳನ್ನು ಪೋಸ್ಟ್ ಮಾಡುವುದರ ಮುಖಾಂತರ ತಕ್ಷಣ ವಿವರವಾದ ಉತ್ತರಗಳನ್ನು ಪಡೆಯಬಹುದು.

ಆನ್‌ಲೈನ್ v/s ಆಫ್‌ಲೈನ್ ತರಬೇತಿಯ ವೆಚ್ಚ

ಈಗಿರುವ ಕೋವಿಡ್‌-19 ಸಂದರ್ಭದಲ್ಲಿ ತರಬೇತಿಗಾಗಿ ಬೇರೊಂದು ಸ್ಥಳಕ್ಕೆ ಬಂದು ನೆಲೆಸಿ ಪಿಜಿ ಅಥವಾ ಕೊಠಡಿ ಬಾಡಿಗೆಗಾಗಿ ಹಣ, ತರಬೇತಿಯ ವೆಚ್ಚ, ಪ್ರಯಾಣದ ಖರ್ಚು ಹಾಗೂ ಇನ್ನಿತರ ವೆಚ್ಚಗಳನ್ನೆಲ್ಲ ಗಮನಿಸಿದರೆ ಈ ವೆಚ್ಚ ಗುಣಮಟ್ಟದ ಆನ್‌ಲೈನ್ ಶುಲ್ಕ ಸಹಿತ ಕೋರ್ಸ್‌ಗಿಂತಲೂ ಅಧಿಕ. ಅಲ್ಲದೆ ಸದ್ಯದ ಪರಿಸ್ಥಿತಿಯಲ್ಲಿ ಸುರಕ್ಷಿತ ಕೂಡ ಅಲ್ಲ.

ಮೋಟಿವೇಟ್‌– ಮಾಕ್‌ಟೆಸ್ಟ್‌– ಮಿಸ್ಟೇಕ್‌ (ಎಂಎಂಎಂ)

ಮೋಟಿವೇಟ್‌: ಆನ್‌ಲೈನ್ ಅಧ್ಯಯನಕ್ಕೆ ಅತ್ಯವಶ್ಯವಾಗಿ ಇರುವುದು ಸ್ವಯಂ ಪ್ರೇರಣೆ. ಇಲ್ಲಿ ಯಾರೂ ಸಹ ನಿಮ್ಮ ಗುರಿ ಪೂರ್ಣಗೊಳಿಸಲು ಪ್ರೇರೇಪಿಸುವುದಿಲ್ಲ. ಬದಲಾಗಿ ನೀವೇ ನಿಮ್ಮ ದಿನದ, ವಾರದ ಹಾಗೂ ತಿಂಗಳಿನ ಅಧ್ಯಯನವನ್ನು ಹಂತಹಂತವಾಗಿ ಪೂರ್ತಿಗೊಳಿಸಬೇಕು.

ಮಾಕ್‌ಟೆಸ್ಟ್‌: ಪಠ್ಯಕ್ರಮ ಅನುಸಾರ ಅಧ್ಯಯನ ಮುಗಿದ ನಂತರ ಮಾದರಿ ಪ್ರಶ್ನೆ ಪತ್ರಿಕೆಗಳು ಹಾಗೂ ಹಿಂದಿನ ವರ್ಷಗಳ ಪ್ರಶ್ನೆಪತ್ರಿಕೆಗಳಿಗೆ ಸಮಯ ಮಿತಿಯೊಂದಿಗೆ ಉತ್ತರಿಸಬೇಕು. ನಂತರ ನೀವು ಉತ್ತರಿಸಿದ ಮಾದರಿ ಪ್ರಶ್ನೆಪತ್ರಿಕೆಯನ್ನು ಅವಲೋಕಿಸಬೇಕು. ಫಲಿತಾಂಶ ನಿಮ್ಮ ದೌರ್ಬಲ್ಯ ಹಾಗೂ ಪ್ರಾಬಲ್ಯವನ್ನು ತೋರಿಸುವುದರ ಮುಖಾಂತರ ನೀವು ಯಾವ ವಿಷಯದಲ್ಲಿ ಇನ್ನಷ್ಟು ಅಭ್ಯಾಸ ನಡೆಸಬೇಕು ಎಂಬುದನ್ನು ಸ್ಕೋರ್ ಮುಖಾಂತರ ತಿಳಿಸುತ್ತದೆ. ಇದಲ್ಲದೇ ಪ್ರಶ್ನೆಪತ್ರಿಕೆಯ ಕ್ಲಿಷ್ಟತೆಯ ಮಟ್ಟ (ಸುಲಭ, ಮಧ್ಯಮ ಅಥವಾ ಕ್ಲಿಷ್ಟ) ಯಾವುದು? ಹಾಗೂ ಫಲಿತಾಂಶದಲ್ಲಿ ನಿಮ್ಮ ಸ್ಥಾನ ಎಷ್ಟು.. ಹೀಗೆ ಬಹುತೇಕ ಎಲ್ಲಾ ಆಯಾಮಗಳಲ್ಲಿ ನಿಮ್ಮ ಫಲಿತಾಂಶದ ವಿಶ್ಲೇಷಣೆ ದೊರಕುತ್ತದೆ. ಹೀಗಾಗಿ ದಿನಕ್ಕೆ ಕನಿಷ್ಠ ಎರಡು ಮಾದರಿ ಪ್ರಶ್ನೆ ಪತ್ರಿಕೆಗಳನ್ನು ತೆಗೆದುಕೊಂಡು ಅವಲೋಕಿಸುವುದು ಬಹಳ ಮುಖ್ಯ.

ಮಿಸ್ಟೇಕ್‌: ತಪ್ಪುಗಳಿಂದ ಕಲಿಯಿರಿ. ಇದು ಸ್ವಯಂ ಅಧ್ಯಯನದಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತದೆ. ಅಧ್ಯಯನದಲ್ಲಿ ಅಥವಾ ಮಾದರಿ ಪ್ರಶ್ನೆಪತ್ರಿಕೆ ಬಿಡಿಸುವಾಗ ಸಣ್ಣ ಅಥವಾ ದೊಡ್ಡ ತಪ್ಪು ಮಾಡಿದಾಗ ಅದರಿಂದ ಎದೆಗುಂದದೆ ಸ್ವಯಂ ಅಧ್ಯಯನ ಅಸಾಧ್ಯ ಎಂದು ಕೈ ಚೆಲ್ಲದಿರಿ. ಬದಲಾಗಿ ಫಲಿತಾಂಶದಲ್ಲಿ ದೊರಕುವ ಉತ್ತರದ ವಿವರಣೆಯನ್ನು ನೋಡಿ ಇನ್ನೂ ಅರ್ಥವಾಗದಿದ್ದಲ್ಲಿ ಡೌಟ್ ಸೆಷನ್ ಅಥವಾ 24x7 ಅಧ್ಯಯನ ಗ್ರೂಪ್‌ನಲ್ಲಿ ನಿಮ್ಮ ಪ್ರಶ್ನೆಗಳನ್ನು ಪೋಸ್ಟ್ ಮಾಡಿ ವಿವರವಾದ ಉತ್ತರವನ್ನು ಪಡೆದುಕೊಳ್ಳಿ. ಇದರಿಂದ ಈ ತಪ್ಪುಗಳು ಮತ್ತೊಮ್ಮೆ ನಿಮ್ಮಿಂದ ಜರುಗಲು ಸಾಧ್ಯವಿಲ್ಲ. ಕಾರಣ ಅದಕ್ಕೆ ವ್ಯಯಿಸಿದ ಸಮಯ ಹಾಗೂ ಗ್ರೂಪ್‌ನಿಂದ ಹೆಚ್ಚು ಜನ ನೀಡಿದ ಸವಿವರವಾದ ಉತ್ತರಗಳು ನೀವು ಇನ್ನೊಮ್ಮೆ ಅಂತಹ ತಪ್ಪು ಮಾಡದಂತೆ ತಡೆಯುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT