ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಣಾಮಕಾರಿ ಕಲಿಕೆಗೆ‘ರಂಗಕಲೆ’ ಸಶಕ್ತ ಮಾಧ್ಯಮ

Last Updated 15 ಮೇ 2022, 19:30 IST
ಅಕ್ಷರ ಗಾತ್ರ

ಘಟನೆ 1

ಒಂಬತ್ತು ವರ್ಷದ ಜೈನಾಬ್ ಶಾಲೆಗೆ ಆಗಾಗ ಗೈರು ಹಾಜರಾಗುತ್ತಿದ್ದಳು. ಕಾರಣ ಕೇಳಿದರೆ ಸಬೂಬು ಹೇಳುತ್ತಿದ್ದಳು. ಪೋಷಕರಿಗೆ ಈ ಕುರಿತು ಹೇಳೋಣವೆಂದರೆ, ಆಕೆಗೆ ತಾಯಿಯಲ್ಲ. ತಂದೆ ಇದ್ದರೂ ಆತ ಮದ್ಯವ್ಯಸನಿ, ಬೇಜವಾಬ್ದಾರಿ ವ್ಯಕ್ತಿ. ಹಾಗಾಗಿ, ಆಕೆಯದ್ದು ದುರ್ಬರ ಬದುಕು.

ಹೀಗಿರುವಾಗ ಒಮ್ಮೆ ಶಿಕ್ಷಕರು ಶಾಲೆಯಲ್ಲಿ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಆಯೋಜನೆಗೆ ಸಿದ್ಧತೆ ನಡೆಸುತ್ತಿದ್ದರು. ಹಾಡು, ನೃತ್ಯ, ಪುಟ್ಟ ನಾಟಕ ಆಡಿಸಲು ನಿಶ್ಚಯಿಸಿ,‌ ಮಕ್ಕಳ ತಂಡ ರಚಿಸಲು ಯೋಚಿಸುತ್ತಿದ್ದರು. ಆಗ ನೆನಪಿಗೆ ಬಂದಿದ್ದು ಅರಳು ಹುರಿದಂತೆ ಮಾತನಾಡುತ್ತಿದ್ದ ಜೈನಾಬ್‌. ಈಕೆ, ಶಾಲೆ ತಪ್ಪಿಸಿದರೂ ಮಾತಿನಲ್ಲಿ ಚುರುಕು. ಶಾಲೆಯಲ್ಲಿನ ಅನೇಕ ಸಂಗತಿಗಳನ್ನು ನೆನಪಿಸುವ ಕೌಶಲವಿತ್ತು. ಹಾಗಾಗಿ ತಂಡಕ್ಕೆ ಸೇರಿಸಲು ನಿಶ್ಚಯಿಸಲಾಯಿತು. ಹೀಗಾದರೂ ಆಕೆ ಶಾಲೆಗೆ ನಿರಂತರವಾಗಿ ಬರಬಹುದೆಂಬ ಆಶಾಭಾವ.

ಓದಿನಲ್ಲಿ ಕೊಂಚ ಹಿಂದುಳಿದಿದ್ದ ಜೈನಾಬ್‌ಗೆ ಕನ್ನಡದ ಭಾಷೋಚ್ಚಾರ ಸ್ವಲ್ಪ ಕಷ್ಟವೇ ಆಗಿತ್ತು. ಉರ್ದು ಮಾತೃಭಾಷೆಯಾದ ಆಕೆಯ ಕನ್ನಡೋಚ್ಚಾರ, ನಾಟಕದ ತಾಲೀಮು ಶುರುವಾದಂತೆ ಅದ್ಯಾವ ಪರಿ ಬದಲಾಯಿತೆಂದರೆ ಆಕೆ ತಾನಿರುವ ಕಡೆಯಲ್ಲೆಲ್ಲಾ ನಾಟಕದ ಸಂಭಾಷಣೆಯನ್ನು ತನ್ನಷ್ಟಕ್ಕೆಂಬಂತೆ ಹೇಳಿಕೊಳ್ಳತೊಡಗಿದ್ದಳು. ನಾಟಕದಲ್ಲೂ ಉತ್ತಮ ಅಭಿನಯ ನೀಡಿದಳು. ಆ ಶಾಲೆಯಲ್ಲಿದ್ದ ಎರಡು ವರ್ಷ ಮತ್ತೂ ಕೆಲವು ನಾಟಕಗಳಲ್ಲಿ ಅಭಿನಯಿಸಿದಳು. ಶಾಲೆ ತಪ್ಪಿಸುವುದು ಕಡಿಮೆಯಾಗಿತ್ತು. ಓದಿನಲ್ಲೂ ಸುಧಾರಿಸಿದಳು. ಅಂಥ ಬಾಲಕಿ ಮುಂದೆ ಸರ್ಕಾರಿ ಶಾಲೆಯೊಂದರಲ್ಲಿ ಶಿಕ್ಷಕಿಯಾದರು. ನಾಟಕಗಳ ಮಹತ್ವ ಅರಿತಿರುವ ಅವಳೀಗ ತಪ್ಪದೆ ನಾಟಕಗಳನ್ನು ನಿರ್ಮಿಸಿ ಪ್ರದರ್ಶಿಸುತ್ತಾಳೆ.

ಘಟನೆ 2

ಪೂರ್ಣಿಮಾಳಿಗೆ ವಿಜ್ಞಾನ ಕಠಿಣ ವಿಷಯ. ವೈಜ್ಞಾನಿಕ ಪಠ್ಯಗಳು ಅರ್ಥವಾಗುತ್ತಿರಲಿಲ್ಲ. ಮನೆಪಾಠಕ್ಕೆ ಹೋದರೂ ಆಕೆಗೆ ರುಚಿಸದ ವಿಷಯವಾಯಿತು. ಒಮ್ಮೆ ಅವರ ತಾಯಿ ಅಭಿನಯವೊಂದರ ಮೂಲಕ ಆಕೆಗೆ ವಿಷಯವನ್ನು ಸುಲಭಗೊಳಿಸಲು ಪ್ರಯತ್ನಿಸಿದರು. ಯಶಸ್ವಿಯಾಯಿತು. ಶಾಲೆಯಲ್ಲಿಯೂ ಈ ಪ್ರಯೋಗ ಮಾಡಲು ಕೇಳಿಕೊಂಡರು. ಶಿಕ್ಷಕರು ಒಪ್ಪಿದರು. ವಿಡಿಯೊ, ಪಾಠೋಪಕರಣಗಳೊಂದಿಗೆ ಮಕ್ಕಳನ್ನೇ ವಿಜ್ಞಾನದ ಪಾತ್ರಗಳನ್ನಾಗಿಸಿ, ವಿಷಯವನ್ನು ತಲುಪಿಸಲು ಪ್ರಯತ್ನಿಸಿದರು. ಇದರಿಂದ ತೀರಾ ಮಹತ್ವದ ಬದಲಾವಣೆ ಆಗದಿದ್ದರೂ ವಿಜ್ಞಾನದ ಬಗೆಗಿದ್ದ ಅವಜ್ಞೆ ಕಡಿಮೆಯಾಗಿ, ಕಾಲಸರಿದಂತೆ ಸ್ವಲ್ಪ ಸುಧಾರಿಸತೊಡಗಿತು. ಭವಿಷ್ಯದಲ್ಲಿ ಮತ್ತಷ್ಟು ಸುಧಾರಣೆಯಾದೀತೆಂಬ ಭರವಸೆ ಈಗ ಬಂದಿದೆ.

*****

ಇಂಥ ಹಲವು ‘ಯಶೋಗಾಥೆ’ಗಳ ಮೂಲಕ ಶಿಕ್ಷಣ ಕಲಿಕೆಗೆ ರಂಗಭೂಮಿ ಒಂದು ಸಶಕ್ತ ಮಾಧ್ಯಮ ಎಂದು ಪದೇ ಪದೇ ಸಾಬೀತಾಗುತ್ತಿದೆ. ಮಾತ್ರವಲ್ಲ, ಮಕ್ಕಳ ವ್ಯಕ್ತಿತ್ವ ರೂಪಿಸುವಲ್ಲೂ ರಂಗ ಶಿಕ್ಷಣ ಪ್ರಮುಖ ಪಾತ್ರವಹಿಸುತ್ತಿದೆ. ಎಳೆಯರಿಂದ ಹಿಡಿದು ಹಿರಿಯರವರೆಗೆ ಸಾಕಷ್ಟು ಬದಲಾವಣೆಗಳನ್ನು ತರುವ ಶಕ್ತಿರಂಗಭೂಮಿಗಿದೆ.

ಮುಜುಗರವೆನ್ನಿಸುವ, ಬೋಧಿಸಲು ಕ್ಲಿಷ್ಟವಾಗುವ, ಪೌರಾಣಿಕದಂತಹ ವಿಷಯಗಳು, ಪಠ್ಯಗಳನ್ನು ತರಗತಿಯ ಪರಿಸರದಲ್ಲೇ ಸುಲಭ ರೂಪಕ್ಕಿಳಿಸಿ ನಾಟಕವಾಗಿಸಿದರೆ ಅದೊಂದು ಆಕರ್ಷಕ ಬೋಧನಾ ವಿಧಾನ. ಈ ರೀತಿ ಲವಲವಿಕೆಯಿಂದಿರುವ, ಹುರುಪಿನ ಶಿಕ್ಷಕರತ್ತಸಹಜವಾಗಿಯೆ ಮಕ್ಕಳು ಆಕರ್ಷಿತರಾಗುತ್ತಾರೆ. ಅನಂತರ ಗಣಿತದಂತಹ ಕ್ಲಿಷ್ಟ ವಿಷಯವೂ ನಟನೆಯ ರೂಪದಲ್ಲಿ ಅಭಿವ್ಯಕ್ತವಾದರೆ ಅದು ಬಹುಬೇಗ ವಿದ್ಯಾರ್ಥಿಗಳ ಮನಸ್ಸಿನಾಳಕ್ಕೆ ಇಳಿಯುತ್ತದೆ.‘ಹತ್ತಾರು ಬಾರಿ ಓದುವುದಕ್ಕಿಂತ ನಾಟಕ ರೂಪವಾಗಿ ಒಮ್ಮೆ ಪಠ್ಯವನ್ನು ಪ್ರದರ್ಶನ ರೂಪದಲ್ಲಿ ಕಾಣುವುದು ಗ್ರಹಿಕೆಗೆ ಅತ್ಯಂತ ಪರಿಣಾಮಕಾರಿ’ ಎನ್ನುತ್ತಾರೆ ಸಿನಿಮಾ ನಿರ್ದೇಶಕ ಬಿ. ಸುರೇಶ.ಹಾಗಂತ ಎಲ್ಲಾ ವಿಷಯಗಳನ್ನೂ ವೇದಿಕೆಯ ಮೇಲೆ ತರಲಾಗುವುದಿಲ್ಲ. ಕಲಿಕಾ ಪ್ರಕ್ರಿಯೆಯನ್ನು ಸಾಧ್ಯವಾದಷ್ಟೂ ಸರಳಗೊಳಿಸಲು ರಂಗಭೂಮಿ ಘನವಾದ ಮಾಧ್ಯಮ.

ಪ್ರೌಢಾವಸ್ಥೆ ತಲುಪುವ ಹೆಣ್ಣುಮಕ್ಕಳಿಗೆ ಹಾಗೂ ಗಂಡುಮಕ್ಕಳಿಗೆ ಅವರ ಶರೀರದಲ್ಲಾಗುವ ಬದಲಾವಣೆಗಳನ್ನು ಕೆಲವು ಶಿಕ್ಷಕರು ತಿಳಿಹೇಳಲು, ಮಕ್ಕಳು ಒಟ್ಟಿಗೆ ಕುಳಿತು ಆಲಿಸಲು ಮುಜುಗರ ಪಡುವುದಿದೆ. ವೇದಿಕೆ ಮೇಲಿನ ನಾಟಕ ರೂಪದ ಅಭಿವ್ಯಕ್ತಿ ಸಂಕೋಚಕ್ಕೆ ಎಣೆಯಾಗದಂತೆ ಸೂಕ್ತವಾಗಿ ನಿರ್ವಹಿಸಬಲ್ಲದು. ಸಾಮಾಜಿಕ ಪರಿಣಾಮ ಬೀರುವ ಸಂದೇಶಗಳನ್ನೂ ರಂಗವೇದಿಕೆ ಗಟ್ಟಿಯಾಗಿ ಪ್ರಸ್ತುತಪಡಿಸುತ್ತದೆ. ಸ್ಪಷ್ಟವಾದ ಅಭಿಪ್ರಾಯ ರೂಪಿಸಲೂ ಸಹ ಈ ಮಾಧ್ಯಮ ಉಪಯೋಗಕಾರಿ.

ಮಾತನಾಡಲು ಸಂಕೋಚಪಡುವ, ಸಾರ್ವಜನಿಕವಾಗಿ ಬೆರೆಯಲು ಸಾಧ್ಯವಾಗದ, ಮಾತು ತೊದಲುವ, ಕೀಳರಿಮೆಯಿಂದ ಬಳಲುವ ಮಕ್ಕಳು ರಂಗಭೂಮಿಯಿಂದ ಬದಲಾದ ಉದಾಹರಣೆಗಳು ಬಹಳಷ್ಟಿವೆ. ಸ್ಪಷ್ಟತೆ, ದಿಟ್ಟತೆ, ಮುನ್ನುಗ್ಗುವ ಮನೋಭಾವವನ್ನು ಗಟ್ಟಿಗೊಳಿಸಿ ಗೊಂದಲ, ಅಶಿಸ್ತು, ಅಸಡ್ಡೆಗಳನ್ನು ಸಾಧ್ಯವಾದಷ್ಟೂ ಬಗೆಹರಿಸುವ ರಂಗಪ್ರಕಾರ ಎಲ್ಲಾ ಸಾಂಸ್ಕೃತಿಕ ಕಲಾಭಿವ್ಯಕ್ತಿಯ ಮೂಲಬೇರು. ಹಾಗಾಗಿ ಶಿಕ್ಷಣದಲ್ಲಿ ರಂಗಕಲೆಯನ್ನು ಪ್ರಬಲವಾಗಿ ದುಡಿಸಿಕೊಳ್ಳಬೇಕಾದ್ದು ಅಗತ್ಯ.ಆಯಾ ಕಾಲಕ್ಕೆ ತಕ್ಕಂತೆ ಅಂದಿನ ಸ್ಥಿತಿಗತಿಗೆ ಅನುಗುಣವಾಗಿ ಪ್ರಯೋಗಗಳನ್ನು ಸಹ ನಾಟಕಗಳಲ್ಲಿ ಮಾಡಬಹುದು.

ರಂಗಭೂಮಿಯ ಈ ಶಕ್ತಿಯನ್ನು ಉಲ್ಲೇಖಿಸಿಯೇ ಸಾಣೆಹಳ್ಳಿಮಠದ ಪಂಡಿತರಾಧ್ಯ ಶಿವಾಚಾರ್ಯ ಸ್ವಾಮೀಜಿಯವರು ಶಾಲೆಗಳಲ್ಲಿ ರಂಗ ಶಿಕ್ಷಕರನ್ನು ನೇಮಿಸಿಕೊಳ್ಳುವಂತೆ ಒತ್ತಾಯಿಸಿದ್ದರು. ಅನೇಕ ರಂಗಕರ್ಮಿಗಳ ಒತ್ತಾಸೆಯೂ ಇದೇ ಆಗಿದೆ.

ಉತ್ತೇಜನ ನೀಡಿದ ರಂಗಕಲೆ

ಈ ಹಿಂದೆ ರಾಷ್ಟ್ರೀಯ ನಾಟಕ ಶಾಲೆಯ(ಎನ್‌ಎಸ್‌ಡಿ) ಬೆಂಗಳೂರು ಚಾಪ್ಟರ್‌ನಲ್ಲಿ ‘ಶಿಕ್ಷಣದಲ್ಲಿ ರಂಗಕಲೆ’ ಎಂಬ ಆಶಯದ 3 ತಿಂಗಳ ಅವಧಿಯ ತರಬೇತಿ ನಡೆಯಿತು. ಖ್ಯಾತ ರಂಗಕರ್ಮಿ ಚಿದಂಬರರಾವ್ ಜಂಬೆ ನಿರ್ದೇಶಕರಾಗಿದ್ದ ಈ ಶಿಬಿರದಲ್ಲಿ ನಾನೂ ಶಿಬಿರಾರ್ಥಿ. ಕೊಠಡಿಯೊಳಗಿನ ತರಗತಿಗಳು ಮುಗಿದ ನಂತರ, ಚಲನಶೀಲವಾದ ಈ ಅನುಭವವನ್ನು ರಾಜ್ಯದಾದ್ಯಂತ ಪ್ರಯೋಗಿಸಲು ಅನೇಕ ಶಾಲೆಗಳಿಗೆ, ಹಾಸ್ಟೆಲ್‌ಗಳಿಗೆ ತೆರಳಿ ಅಲ್ಲಿ ಪಠ್ಯವನ್ನು ಬೋಧಿಸಲು ಮಕ್ಕಳೊಂದಿಗೆ ವೈವಿಧ್ಯ ಚಟುವಟಿಕೆಗಳನ್ನು ಕಾರ್ಯಗತಗೊಳಿಸಲಾಗಿತ್ತು. ಈ ವಿಧಾನ ಉತ್ತೇಜನಕಾರಿಯೂ ಆಗಿ ಯಶಸ್ವಿಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT