ಬುಧವಾರ, 4 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Soft Skills: ಸಂದರ್ಶನಗಳಲ್ಲಿ ಮೃದು ಕೌಶಲ ಈಗ ಬಲು ಮುಖ್ಯ– ಸ್ಪರ್ಧಾ ವಾಣಿ ಲೇಖನ

ಕ್ತಿಯಲ್ಲಿ ಅಮೂರ್ತವಾಗಿರುವ ಮೃದು ಕೌಶಲಗಳು ಯಾವುವು ? ಅವುಗಳನ್ನು ಅಳವಡಿಸಿಕೊಳ್ಳುವುದು ಹೇಗೆ?
Published 19 ಜುಲೈ 2023, 23:05 IST
Last Updated 19 ಜುಲೈ 2023, 23:05 IST
ಅಕ್ಷರ ಗಾತ್ರ

ನೇಮಕಾತಿ ಪ್ರಕ್ರಿಯೆಯ ಭಾಗವಾಗಿರುವ‌ ಸಂದರ್ಶನದಲ್ಲಿ ಅಭ್ಯರ್ಥಿಯ ವ್ಯಕ್ತಿತ್ವ ಅರಿಯಲು ಮೃದು ಕೌಶಲಗಳನ್ನು ಪರೀಕ್ಷಿಸಲಾಗುತ್ತದೆ. ವ್ಯಕ್ತಿಯಲ್ಲಿ ಅಮೂರ್ತವಾಗಿರುವ ಮೃದು ಕೌಶಲಗಳು ಯಾವುವು ? ಅವುಗಳನ್ನು ಅಳವಡಿಸಿಕೊಳ್ಳುವುದು ಹೇಗೆ? ಈಗಾಗಲೇ ವ್ಯಕ್ತಿಯಲ್ಲಿರುವ ಕೌಶಲಗಳನ್ನು ಗುರುತಿಸಿ, ಸುಧಾರಿಸಿಕೊಳ್ಳುವುದು ಹೇಗೆ ?– ಈ ಎಲ್ಲ ಅಂಶಗಳ ಕುರಿತ ಮಾಹಿತಿ ಇಲ್ಲಿದೆ. 

––––––––

ಹೆಚ್ಚಿನ ನೇಮಕಾತಿಗಳು ಸ್ಪರ್ಧಾತ್ಮಕ ಪರೀಕ್ಷೆಗಳ ನಂತರ ಸಂದರ್ಶನವನ್ನೂ ಒಳಗೊಂಡಿರುತ್ತವೆ. ಸಂಭಾವ್ಯ ಉದ್ಯೋಗಿಯನ್ನು ನೇಮಿಸಿಕೊಳ್ಳುವಾಗ, ಅವರ ಮೃದು ಕೌಶಲ(ಸಾಫ್ಟ್ ಸ್ಕಿಲ್)ವನ್ನು ಮೌಲ್ಯಮಾಪನ ಮಾಡಲು ಉದ್ಯೋಗದಾತರಿಗೆ ಸಹಕಾರಿಯಾಗುವುದು ಸಂದರ್ಶನ. ಇದನ್ನು ಎದುರಿಸಲು ’ಮೃದು ಕೌಶಲ’ ಅಗತ್ಯ. ಈ ಕೌಶಲದ ಕೊರತೆಯ ಕಾರಣದಿಂದಾಗಿ ಶೈಕ್ಷಣಿಕವಾಗಿ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಗರಿಷ್ಠ ಅಂಕಗಳಿಸಿದವರೂ ಆಯ್ಕೆ ಪ್ರಕ್ರಿಯೆಯಲ್ಲಿ ಸೋಲನ್ನು ಅನುಭವಿಸುವ ಸಾಧ್ಯತೆ ಇರುತ್ತದೆ.

ಏನಿದು ಮೃದು ಕೌಶಲ?

ಮೃದು ಕೌಶಲಗಳು ಪ್ರಮಾಣೀಕರಿಸಲಾಗದ ವೈಯಕ್ತಿಕ ಗುಣಲಕ್ಷಣಗಳು. ಸೃಜನಶೀಲತೆ, ಸಂವಹನ, ವಿಮರ್ಶಾತ್ಮಕ ಚಿಂತನೆ, ಪ್ರೇರಣೆ, ಸಮಸ್ಯೆಗಳ ಪರಿಹಾರ, ಸ್ಥಿತಿಸ್ಥಾಪಕತ್ವ, ವಿಶ್ವಾಸಾರ್ಹತೆ, ಹೊಂದಿಕೊಳ್ಳುವಿಕೆ ಹಾಗೂ ನಾಯಕತ್ವ – ಇವನ್ನೆಲ್ಲ ’ಮೃದು ಕೌಶಲ’ಗಳೆಂದು ಗುರುತಿಸಲಾಗಿದೆ.

ಬಾಲ್ಯದಲ್ಲಿ ಪೋಷಕರು ಮತ್ತು ಶಿಕ್ಷಕರಿಂದ ವ್ಯಕ್ತಿತ್ವ, ಸಾಮಾಜಿಕ ನಡವಳಿಕೆಯಂತಹ ಮೃದು ಕೌಶಲಗಳು ರೂಪುಗೊಳ್ಳುತ್ತವೆ. ನಂತರದಲ್ಲಿ ಬೆಳವಣಿಗೆಯ ಪರಿಸರವನ್ನು ಅವಲಂಬಿಸಿ ಇವು ವಿಸ್ತರಿಸುತ್ತವೆ. ಕಠಿಣ ಕೌಶಲಗಳು ಸಾಂಪ್ರದಾಯಿಕವಾಗಿರುತ್ತವೆ ಹಾಗೂ ವ್ಯಕ್ತಿಯ ಪರಿಣತಿಯನ್ನು ಅಳೆಯಬಹುದಾದಂತಹವು.

ಪದವಿಗಳು, ಪ್ರಮಾಣಪತ್ರಗಳು ವ್ಯಕ್ತಿಯೊಬ್ಬ ಕೌಶಲಗಳನ್ನು ಹೊಂದಿರುವುದಕ್ಕೆ ಪುರಾವೆಗಳು. ಆದರೆ, ಮೃದು ಕೌಶಲಗಳು ಅಮೂರ್ತವಾದವು. ಮಾತ್ರವಲ್ಲ, ವೈಯಕ್ತಿಕ ಸ್ವಭಾವವನ್ನು ಅವಲಂಬಿಸಿದವು. ಇವುಗಳನ್ನು ತೂಗಿ ನೋಡಲು ನಿರ್ದಿಷ್ಟ ಮಾಪಕಗಳಿಲ್ಲ. ಆದರೆ, ಮೃದು ಕೌಶಲಗಳನ್ನು ಹೊಂದಿರುವ ಅಭ್ಯರ್ಥಿಗಳಿಗೆ ಉದ್ಯೋಗ ಮಾರುಕಟ್ಟೆಯಲ್ಲಿ ನಿರಂತರ ಬೇಡಿಕೆಯಿದೆ. ಇವು ವೃತ್ತಿಜೀವನದ ಯಶಸ್ಸಿಗೆ ಮಾತ್ರವಲ್ಲ, ನಿಮ್ಮ ದೈನಂದಿನ ಜೀವನದಲ್ಲಿಯೂ ಸಹ ನಿರ್ಣಾಯಕವಾಗಿವೆ.

ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ..

ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳ ಸಂದರ್ಶನದ ಸಮಯದಲ್ಲಿ ಆಯಾ ಸಂಸ್ಥೆಗಳು ಹತ್ತು, ಹದಿನೈದು ನಿಮಿಷಗಳಲ್ಲಿ ಸಾಂದರ್ಭಿಕ ಮತ್ತು ನಡವಳಿಕೆಯ ಪ್ರಶ್ನೆಗಳ ಮೂಲಕ ಅವರ ಮೃದು ಕೌಶಲಗಳನ್ನು ತೂಗಿ ಅಳೆದುಬಿಡುತ್ತಾರೆ. ನಾಳೆ ತಮ್ಮ ಸಂಸ್ಥೆಯ ಆಸ್ತಿಯಾಗುವ ಅಭ್ಯರ್ಥಿಯು ವಿವಿಧ ಸಂದರ್ಭಗಳಲ್ಲಿ ಹೇಗೆ ಕಾರ್ಯನಿರ್ವಹಿಸುತ್ತಾನೆ ಎಂಬುದನ್ನು ತಿಳಿದುಕೊಳ್ಳುತ್ತವೆ.

ಮೃದು ಕೌಶಲದ ಮಹತ್ವ ಅರಿತ  ಅನೇಕ ವಿಶ್ವವಿದ್ಯಾಲಯಗಳು ಇದನ್ನು ತಮ್ಮ ಪಠ್ಯಕ್ರಮದಲ್ಲಿ ಈ ವಿಷಯವನ್ನು ಸೇರಿಸಿವೆ. ಕೆಲವು ಕಾಲೇಜುಗಳಲ್ಲಿ ಮೃದು ಕೌಶಲದ ಡಿಪ್ಲೊಮಾ, ಸರ್ಟಿಫಿಕೇಟ್ ಕೋರ್ಸ್‌ಗಳಿವೆ. ಖಾಸಗಿ ಸಂಸ್ಥೆಗಳೂ ತರಬೇತಿಯನ್ನು ನೀಡುತ್ತಿವೆ. ಮಾರುಕಟ್ಟೆಯಲ್ಲಿ ಮಾರ್ಗದರ್ಶಕರು ಲಭ್ಯವಿದ್ದಾರೆ. ಇದು ಅಭ್ಯರ್ಥಿಗಳು ಕೆಲಸಕ್ಕೆ ಸೇರುವ ಮುಂಚೆ ವೃತ್ತಿಪರರಾಗಲು ಹಾಗೂ ಕೆಲಸವನ್ನು ಮೊದಲ ದಿನದಿಂದಲೇ ಪರಿಣಾಮಕಾರಿಯಾಗಿ ನಿರ್ವಹಿಸಲು ಸಾಧ್ಯವಾಗಿಸುತ್ತದೆ. ಅಭ್ಯರ್ಥಿಯ ಹಾಗೂ ಸಂಸ್ಥೆಗಳ ಯಶಸ್ಸಿಗೂ ಮೃದು ಕೌಶಲ ಅತ್ಯಗತ್ಯ ಎಂಬುದು ಈಗ ರುಜುವಾತಾಗಿದೆ.

ಇವುಗಳ ಮೇಲೆ ಲಕ್ಷ್ಯವಿರಲಿ

ಕೃತಕ ಬುದ್ಧಿಮತ್ತೆಯು ಉದ್ಯೋಗದ ಸ್ವರೂಪವನ್ನೇ ಬದಲಾಯಿಸುತ್ತಿರುವುದರಿಂದ, ಯಂತ್ರಗಳು ಕರಗತ ಮಾಡಿಕೊಳ್ಳಲು ಸಾಧ್ಯವಾಗದ ಸಾಮಾಜಿಕ ಮತ್ತು ಭಾವನಾತ್ಮಕ ಸಾಮರ್ಥ್ಯಗಳನ್ನು ವ್ಯಕ್ತಿಗಳು ಹೊಂದುವುದು ಅನಿವಾರ್ಯವಾಗಿದೆ. ಹೆಚ್ಚುತ್ತಿರುವ ಸ್ಪರ್ಧಾತ್ಮಕ ಉದ್ಯೋಗಿಗಳ ಮಾರುಕಟ್ಟೆಯಲ್ಲಿ, ಸಂಸ್ಥೆಗಳೂ ಉತ್ತಮ ಮೃದು ಕೌಶಲಗಳನ್ನು ಹೊಂದಿರುವ ಅಭ್ಯರ್ಥಿಗಳನ್ನೇ ನೇಮಿಸಿಕೊಳ್ಳುತ್ತಿವೆ. ಹಾಗಾಗಿ, ಸ್ಪರ್ಧಾತ್ಮಕ ಪರೀಕ್ಷೆಯ ನಂತರ ಎದುರಿಸುವ ಅಭ್ಯರ್ಥಿಯು ಈ ಕೆಳಂಡ ವಿಷಯಗಳ ಬಗ್ಗೆ ಲಕ್ಷ್ಯವಿಡುವುದು ಉತ್ತಮ.

ಚಿಂತನೆ, ಧನಾತ್ಮಕತೆ : ಅಭ್ಯರ್ಥಿಯು ಪರೀಕ್ಷೆ ಪಾಸಾಗಿರುವುದರಿಂದ ಅವರ ವಿಷಯ ಜ್ಞಾನದ ಬಗ್ಗೆ ಆಯ್ಕೆ ಸಮಿತಿಗೆ ಅರಿವಾಗಿರುತ್ತದೆ. ಹಾಗಾಗಿ, ಸಂದರ್ಶನದಲ್ಲಿ, ನಿಮ್ಮ ಮೃದು ಕೌಶಲಗಳನ್ನು ಪ್ರದರ್ಶಿಸಲು ಅವಕಾಶ ನೀಡುತ್ತಾರೆ. ನಿಮ್ಮಲ್ಲಿ ಗೊಂದಲ ಮೂಡಿಸಬಲ್ಲ ಪ್ರಶ್ನೆಗಳನ್ನು ಕೇಳುವ ಮೂಲಕ ನಿಮ್ಮ ತಾರ್ಕಿಕ ಚಿಂತನೆ, ತಾಳ್ಮೆ, ಉತ್ಸಾಹ ಮತ್ತು ವಿಶ್ವಾಸಾರ್ಹತೆಯನ್ನು ಒರೆಗೆ ಹಚ್ಚುತ್ತಾರೆ.

ಸಂವಹನ: ನೀವು ಉತ್ತರ ನೀಡುತ್ತಿದ್ದರೆ, ಆಯ್ಕೆ ಸಮಿತಿಯು ನಿಮ್ಮ ಹಾವಭಾವವನ್ನು ಗಮನಿಸುತ್ತಿರುತ್ತದೆ. ನಿಮ್ಮ ಭಂಗಿ, ನೀವು ಬಳಸುವ ಶಬ್ದಗಳು, ಸ್ಪಷ್ಟತೆ, ಉತ್ತರಿಸುವ ರೀತಿ ಕೂಡ ಅವರ ಮೇಲೆ ಪ್ರಭಾವ ಬೀರುತ್ತವೆ. ಸಮರ್ಪಣಾ ಭಾವ, ಆತ್ಮವಿಶ್ವಾಸ, ಸಮಯಪ್ರಜ್ಞೆಯನ್ನು ಸೂಕ್ಷ್ಮವಾಗಿ ನೋಡುತ್ತಾರೆ.

ತಂಡ ಪ್ರವೃತ್ತಿ, ನಾಯಕತ್ವ:  ಅಭ್ಯರ್ಥಿಗಳು ನಾಯಕರಾಗಿ ಹೊರಹೊಮ್ಮುವುದನ್ನು ಆಯ್ಕೆ ಸಮಿತಿ ಇಷ್ಟಪಡುತ್ತದೆ. ಗುಂಪು ಚರ್ಚೆಯಲ್ಲಿ ಇದನ್ನೇ ಗಮನಿಸಲಾಗುತ್ತದೆ. ಚರ್ಚೆಯ ವೇಳೆ ನೀಡಲಾದ ವಿಷಯವನ್ನು ಮೌಲ್ಯಯುತವಾಗಿ ವಿಮರ್ಶಿಸುವುದು, ಉಳಿದವರನ್ನೂ ಮಾತನಾಡಲು ಪ್ರೋತ್ಸಾಹಿಸುವುದು, ಇತರರ ಅಭಿಪ್ರಾಯಗಳನ್ನು ಸೌಜನ್ಯದಿಂದ ಸ್ವೀಕರಿಸುವುದು, ಗುಂಪಿನಲ್ಲಿ ಎಲ್ಲರೊಂದಿಗೆ ಹೊಂದಿ ಕೊಳ್ಳುವುದು, ಸ್ನೇಹಪರತೆ, ವಿನಯಶೀಲತೆ, ಚರ್ಚೆಯಲ್ಲಿ ನಮ್ರತೆ, ನಾವೀನ್ಯತೆ, ಪರಾನುಭೂತಿ, ಸಮಯ ನಿರ್ವಹಣೆ, ಸಮಸ್ಯೆಯನ್ನು ಪರಿಹರಿಸುವ ಕೌಶಲ, ಒತ್ತಡದಲ್ಲಿ ನಿಮ್ಮ ವರ್ತನೆ ಹಾಗೂ ನಾಯಕತ್ವದ ಗುಣಗಳನ್ನು ಅರಿಯಲು ಉಪಯೋಗಿಸಲಾಗುತ್ತದೆ.

ಇವಿಷ್ಟರಲ್ಲಿ ನೀವು ಆಯ್ಕೆ ಸಮಿತಿಯ ಮನ ಗೆದ್ದುಬಿಟ್ಟರೆ, ಉಳಿದ ಕೌಶಲಗಳನ್ನು ತರಬೇತಿಯ ಮೂಲಕ ಕಲಿಸಿಕೊಡಬಹುದೆಂಬ ಆಶಯ ಅವರದ್ದು.

ಸುಧಾರಣೆ ಸಾಧ್ಯ

ನಿಮ್ಮಲ್ಲಿರುವ ಮೃದು ಕೌಶಲಗಳ ಬಗ್ಗೆ ಎಂದಾದರೂ ಯೋಚಿಸಿದ್ದೀರಾ? ಗುರು, ಹಿರಿಯರಿಂದ ಕೊಡುಗೆಯಾಗಿ ಬಂದಿರುವ ಇವುಗಳು ಪರಿಪೂರ್ಣವಲ್ಲ ಅನ್ನಿಸಿದೆಯೆ? ಚಿಂತೆ ಬೇಡ. ಎಷ್ಟೋ ಸಲ ಇವೆಲ್ಲ ಇದ್ದರೂ, ಇವೇ ಮೃದು ಕೌಶಲಗಳೆಂದು ಗೊತ್ತೇ ಇರುವುದಿಲ್ಲ.

ಬೇಕಾದರೆ ಗಮನಿಸಿ; ಅನೇಕರಿಗೆ ಮುಕ್ತವಾಗಿ ಮಾತನಾಡಲು ಸಂಕೋಚ ಕಾಡಬಹುದು. ಕೆಲವರಿಗೆ ಒಟ್ಟಾಗಿ ತಂಡವಾಗಿ ಕೆಲಸ ಮಾಡುವುದು ಇಷ್ಟವಾಗದೇ ಇರಬಹುದು. ತನ್ನ ಕೆಲಸ ಮಾಡಿದರೆ ಸಾಕು, ಇತರರೊಂದಿಗೆ ಹಂಚಿಕೊಳ್ಳುವುದರ ಔಚಿತ್ಯವಿಲ್ಲ ಎಂದೂ ಇನ್ನು ಕೆಲವರು ಯೋಚಿಸಬಹುದು. ಇನ್ನೊಬ್ಬರ ಪ್ರತಿಕ್ರಿಯೆಯು ಕೆಲವರಿಗೆ ಕಿರಿಕಿರಿ ಎನ್ನಿಸಬಹುದು, ಮುಂಗೋಪಕ್ಕೆ  ಕಾರಣವಾಗಬಹುದು.

ಈ ಮೇಲಿನ ಎಲ್ಲ‌ ಅಂಶಗಳು ಎಲ್ಲರಲ್ಲೂ ಇರಬಹುದಾದ ದುರ್ಬಲ ಅಂಶಗಳೇ. ಅಂತಹವುಗಳನ್ನು ಗುರುತಿಸಿ, ಸುಧಾರಿಸಿಕೊಳ್ಳಲು ದಾರಿಯಿದೆ. ಸುಧಾರಣೆಗೆ ಹೀಗೆ ಮಾಡಬಹುದು;

* ಗೆಳೆಯರೊಂದಿಗೆ ಹೆಚ್ಚು ಹೆಚ್ಚಾಗಿ ಚರ್ಚೆಯಲ್ಲಿ ತೊಡಗುವುದು, ಓದುವುದು ಸುಲಭ ವಿಧಾನಗಳು.

* ಯಾರಾದರೂ ಮಾರ್ಗದರ್ಶಕರ ಸಂಪರ್ಕದಲ್ಲಿರಬಹುದು ಜೊತೆಗೆ ತರಬೇತಿಗೂ ಸೇರಿಕೊಳ್ಳಬಹುದು. ‌

*  ಯೂಟ್ಯೂಬ್‌ ವಿಡಿಯೊಗಳ ವೀಕ್ಷಣೆಯೂ ಸಹಕಾರಿಯಾಗಬಲ್ಲದು.

ಒಮ್ಮೆ ಮೃದು ಕೌಶಲವನ್ನು ಮೈಗೂಡಿಕೊಂಡ ಮೇಲೆ, ಉದ್ಯೋಗಕ್ಕೆ ಸಲ್ಲಿಸುವ ಅರ್ಜಿಯಲ್ಲಿ ನಿಮ್ಮ ಮೃದು ಕೌಶಲಗಳನ್ನು ತಪ್ಪದೇ ನಮೂದಿಸಿ ಲಾಭ ಪಡೆಯಬಹುದು.

––––

ಲೇಖನ: ನಾಗೇಶ ಜಿ. ವೈದ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT