ಗುರುವಾರ , ಜೂನ್ 24, 2021
21 °C

ವಿಧಾನಸಭೆಯಲ್ಲಿ ಶಿಕ್ಷಕರ ವರ್ಗಾವಣೆ ನಿಯಂತ್ರಣ ಮಸೂದೆ ಮಂಡನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಶಿಕ್ಷಣ ಸಚಿವ ಎಸ್.ಸುರೇಶ್‌ ಕುಮಾರ್ ಮಂಗಳವಾರ ವಿಧಾನಸಭೆಯಲ್ಲಿ ಶಿಕ್ಷಕರ ವರ್ಗಾವಣೆ ನಿಯಂತ್ರಣ ಮಸೂದೆ ಮಂಡಿಸಿದರು.

ಕೌನ್ಸೆಲಿಂಗ್ ಅವಧಿ ಮುಗಿದ ನಂತರವೂ ವರ್ಗಾವಣೆಗೆ ಮಸೂದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ. ‘ಏಪ್ರಿಲ್ ಮತ್ತು ಮೇ ತಿಂಗಳಿನ ತರುವಾಯವೂ ವಿಶೇಷ ಸನ್ನಿವೇಶಗಳಲ್ಲಿ ಲಿಖಿತದಲ್ಲಿ ದಾಖಲಿಸಬೇಕಾದ ಕಾರಣಗಳಿಗಾಗಿ ರಾಜ್ಯ ಸರ್ಕಾರದ ನಿರ್ದೇಶನದ ಮೇರೆಗೆ ವರ್ಗಾವಣೆ ಮಾಡಬಹುದು’ ಎಂದು ಮಸೂದೆ ಉಲ್ಲೇಖಿಸಿದೆ.

‘ಕೌನ್ಸೆಲಿಂಗ್ ಪ್ರಕ್ರಿಯೆಯಲ್ಲಿ ಯಾವೊಬ್ಬ ಶಿಕ್ಷಕನು ಒಂದು ಸ್ಥಳವನ್ನು ಆಯ್ಕೆ ಮಾಡದಿದ್ದರೆ ಮತ್ತು ಅದನ್ನು ಶಿಷ್ಯ–ಶಿಕ್ಷಕ ಅನುಪಾತದ ಆಧಾರದ ಮೇಲೆ ಸಾರ್ವಜನಿಕ ಹಿತಾಸಕ್ತಿಯಲ್ಲಿ ಭರ್ತಿ ಮಾಡುವುದು ಅಗತ್ಯವಾಗಿದ್ದರೆ ರಾಜ್ಯ ಸರ್ಕಾರವು ನಿಯಮಿಸಬಹುದಾದ ಅಂಥ ಷರತ್ತುಗಳಿಗೆ ಒಳಪಟ್ಟು ಕನಿಷ್ಠ ಸೇವಾವಧಿಯನ್ನು ಪೂರೈಸಿದ ಯಾವೊಬ್ಬ ಶಿಕ್ಷಕನನ್ನು ಅಂಥ ಸ್ಥಳಕ್ಕೆ ವರ್ಗಾವಣೆ ಮಾಡಬಹುದು’ ಎಂದು ಮಸೂದೆ ಹೇಳುತ್ತದೆ.

ವಲಯವಾರು ವರ್ಗಾವಣೆ ವಿಚಾರದಲ್ಲಿಯೂ ಮಸೂದೆ ಕೆಲ ಅಂಶಗಳನ್ನು ಪ್ರಸ್ತಾಪಿಸುತ್ತದೆ.

‘ಸಮರ್ಪಕ ಮರುಹಂಚಿಕೆ ಅಥವಾ ವಲಯವಾರು ವರ್ಗಾವಣೆಯ ಪರಿಣಾಮವಾಗಿ ಒಂದು ಶಾಲೆಯಿಂದ ಮತ್ತೊಂದಕ್ಕೆ ಶಿಕ್ಷಕನ ವರ್ಗಾವಣೆಯಾದ ಪ್ರಕರಣದಲ್ಲಿ ಒಂದು ಶಾಲೆಯಲ್ಲಿ ಕನಿಷ್ಠ ಸೇವೆಯನ್ನು ಲೆಕ್ಕ ಹಾಕುವ ಉದ್ದೇಶಕ್ಕಾಗಿ ಹಿಂದಿನ ಶಾಲೆಯಲ್ಲಿ ಸಲ್ಲಿಸಿದ ಸೇವೆಯನ್ನು ಪರಿಗಣಿಸತಕ್ಕದ್ದು’ ಎಂದು ಮಸೂದೆ ಹೇಳುತ್ತದೆ.

‘ಕಲ್ಯಾಣ ಕರ್ನಾಟಕ ಪ್ರದೇಶದ (ಹೈದರಾಬಾದ್ ಕರ್ನಾಟಕ) ಯಾವುದೇ ಆರು ಜಿಲ್ಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಕರು, ಕಲ್ಯಾಣ ಕರ್ನಾಟಕದ ಹೊರಗೆ ವರ್ಗಾವಣೆ ಕೋರುವುದಕ್ಕಾಗಿ, ಇತರ ಎಲ್ಲಾ ಅರ್ಹತಾ ಷರತ್ತುಗಳ ಜೊತೆಗೆ ಆ ಪ್ರದೇಶದಲ್ಲಿ ಕನಿಷ್ಠ 10 ವರ್ಷಗಳ ಸೇವೆಯನ್ನು ಸಹ ಪೂರೈಸಿರತಕ್ಕದ್ದು’ ಎಂಬ ಉಲ್ಲೇಖ ಮಸೂದೆಯಲ್ಲಿದೆ.

ಮಸೂದೆಯ ಮುಖ್ಯಾಂಶಗಳು ಇಂತಿವೆ...

* ವರ್ಗಾವಣೆ ಕೋರಲು ಒಂದು ಶಾಲೆಯಲ್ಲಿ ಕನಿಷ್ಠ ಮೂರು ವರ್ಷ ಸೇವಾವಧಿ ನಿಗದಿ

* ಸುತ್ತುಸರದಿಯನ್ನು (ರೊಟೇಶನ್) ಸಾಧಿಸಲು ವಲಯವಾರು ವರ್ಗಾವಣೆಗಳು

* ಅಂಗವಿಕಲ ಶಿಕ್ಷಕರಿಗೆ ಅಧಿನಿಯಮದಂತೆ ವಿನಾಯ್ತಿ

* 50 ವರ್ಷ ದಾಟಿದ ಶಿಕ್ಷಕಿಯರು ಮತ್ತು 55 ವರ್ಷ ದಾಟಿದ ಶಿಕ್ಷಕರಿಗೆ ವಲಯವಾರು ವರ್ಗಾವಣೆಗಳಿಂದ ವಿನಾಯ್ತಿ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು