ಗುರುವಾರ , ಆಗಸ್ಟ್ 11, 2022
23 °C
ವಿದ್ಯಾಗಮ ಸ್ಥಗಿತಗೊಂಡ ನಂತರ ಪ್ರಾಥಮಿಕ ಹಂತದ ಶಾಲಾ ಮಕ್ಕಳಿಗೆ ಇಲ್ಲ ಪಾಠ

PV Web Exclusive| ಆನ್‌ಲೈನೂ ಇಲ್ಲ, ಆಫ್‌ಲೈನೂ ಇಲ್ಲ

ಪ್ರಕಾಶ ಕುಗ್ವೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಸರ್ಕಾರದ ವಿದ್ಯಾಗಮ ಯೋಜನೆ ಸ್ಥಗಿತಗೊಂಡ ಮೇಲೆ ಪ್ರಾಥಮಿಕ ಹಂತದ ಶಾಲಾ ಮಕ್ಕಳಿಗೆ ಆನ್‌ಲೈನ್‌ ಬೋಧನೆಯೂ ಇಲ್ಲ, ಆಫ್‌ಲೈನ್ ಶಿಕ್ಷಣವೂ ಇಲ್ಲ.

ವಿದ್ಯಾಗಮ ಯಶಸ್ವಿಯಾಗಿ ನಡೆಯುತ್ತಿದೆ ಎನ್ನುವಾಗಲೇ ಹಲವು ಶಿಕ್ಷಕರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿತು. ಕೆಲವರು ಪ್ರಾಣ ಕಳೆದುಕೊಂಡರು. ಹಾಗಾಗಿ ಸರ್ಕಾರದ ಈ ಮಹತ್ವಾಕಾಂಕ್ಷಿ ಯೋಜನೆಗೆ ತಡೆಬಿತ್ತು. ಬೇರೆ ದಾರಿ ಕಾಣದೆ ಸರ್ಕಾರ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ಮಕ್ಕಳಿಗೆ ದೂರದರ್ಶನದ  ಚಂದನ ವಾಹಿನಿ ಮೂಲಕ ಪಾಠ–ಪ್ರವಚನಗಳನ್ನು ಬಿತ್ತರಿಸಲು ಆರಂಭಿಸಿದೆ. ಆದರೆ, 1ರಿಂದ 4 ತರಗತಿ ಮಕ್ಕಳಿಗೆ ಮಾತ್ರ ಈ ಶಿಕ್ಷಣ ಇಲ್ಲ.

‘ವಿದ್ಯಾಗಮ ಎಂದು ಸ್ಥಗಿತಗೊಂಡಿತೊ ಅಂದಿನಿಂದ ನಮ್ಮ ಮಗಳಿಗೆ ಪಾಠ–ಪ್ರವಚನಗಳು ನಿಂತು ಹೋಗಿವೆ. ಮೊದಲು ಶಿಕ್ಷಕರು ಮನೆಗೇ ಬಂದು ಪಾಠ ಹೇಳಿ ಕೊಟ್ಟು ಹೋಗುತ್ತಿದ್ದರು. ನಂತರ ನಾವೂ ಮಕ್ಕಳನ್ನು ಕೂರಿಸಿ ಓದಿಸುತ್ತಿದ್ದೆವು. ಈಗ ಮಕ್ಕಳನ್ನು ಮನೆಯಲ್ಲಿ ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿಯ ಸಂದೇಶ ಶೆಟ್ಟಿ.

‘ವಿದ್ಯಾಗಮ ಇರುವಾಗಲೇ ಶಿಕ್ಷಕರು ಆಗಾಗ್ಗೆ ವಾಟ್ಸ್ಆ್ಯಪ್‌ನಲ್ಲಿ ಪಾಠಗಳನ್ನು ರೆಕಾರ್ಡ್‌ ಮಾಡಿಯೋ ಅಥವಾ ಪಾಠದ ಲಿಂಕ್‌ಗಳನ್ನೊ ಹಾಕುತ್ತಿದ್ದರು. ಈಗ ಅದನ್ನೂ ಬಂದ್ ಮಾಡಿದ್ದಾರೆ. ಮಕ್ಕಳಿಗೆ ಈಗ ಏನನ್ನು ಕಲಿಸಬೇಕೆಂಬುದೇ ತಲೆಬಿಸಿಯಾಗಿದೆ’ ಎನ್ನುತ್ತಾರೆ ದಾವಣಗೆರೆಯ ನಿಜಲಿಂಗಪ್ಪ ಬಡಾವಣೆಯ ಗೃಹಿಣಿ ಜಯಮ್ಮ.

‘5ರಿಂದ 10 ತರಗತಿ ಮಕ್ಕಳಿಗೆ ಡಿಡಿ ಚಂದನದಲ್ಲಿ ಪಾಠ–ಪ್ರವಚನಗಳು ನಡೆಯುತ್ತಿವೆ. ಪ್ರಾಥಮಿಕ ಹಂತದ ಶಾಲಾ ಮಕ್ಕಳಿಗೆ ವಾಟ್ಸ್‌ ಆ್ಯಪ್‌ ಮೂಲಕ ಪಾಠಗಳನ್ನು ಕಲಿಸುತ್ತಿದ್ದೇವೆ. ಆದರೆ, ನಮಗೂ ಶಿಕ್ಷಣ ಇಲಾಖೆಯಿಂದ ಆನೇಕ ರೀತಿಯ ತರಬೇತಿಗಳನ್ನು ಆನ್‌ಲೈನ್‌ನಲ್ಲೇ ಹಮ್ಮಿಕೊಳ್ಳುವುದರಿಂದ ಸಮಯ ಸಾಲುತ್ತಿಲ್ಲ’ ಎಂದು ಅಸಹಾಯಕತೆ ವ್ಯಕ್ತಪಡಿಸುತ್ತಾರೆ ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಶಾಲೆಯೊಂದರ ಶಿಕ್ಷಕಿ.

‘ತರಬೇತಿ ಹೆಸರಿನಲ್ಲಿ ಒತ್ತಡ’

‘ಇಡೀ ಶಾಲೆಗೆ ನಾವಿಬ್ಬರೇ ಶಿಕ್ಷಕರು. 1ರಿಂದ 7 ತರಗತಿವರೆಗೆ ಸುಮಾರು 300 ವಿದ್ಯಾರ್ಥಿಗಳಿದ್ದಾರೆ. ವಿದ್ಯಾಗಮ ಮಾಡಿ ಸುಸ್ತು ಹೊಡೆದು ಹೋಗಿದ್ದೆವು. ವಿದ್ಯಾರ್ಥಿಗಳಿಗೆ ಕೊರೊನಾ ಕುರಿತಂತೆ ನಾವು ಧೈರ್ಯದ ಮಾತುಗಳನ್ನು ಹೇಳುತ್ತಿದ್ದರೂ ಮನಸ್ಸಿನ ಒಳಗ ನಮಗೇ ಭಯ ಇತ್ತು. ಆದರೆ, ಮಕ್ಕಳು ಅಥವಾ ಪೋಷಕರ ಎದುರು ಅದನ್ನು ತೋರಿಸಿಕೊಳ್ಳುತ್ತಿರಲಿಲ್ಲ. ಹೇಗೊ ವಿದ್ಯಾಗಮ ಸ್ಥಗಿತಗೊಂಡಿತು ಅಂದುಕೊಳ್ಳುತ್ತಿರುವಾಗಲೇ ಈಗ ತರಬೇತಿ ಹೆಸರಲ್ಲಿ ಪ್ರತಿನಿತ್ಯ ನಮಗೆ ಒತ್ತಡ ಹೇರಲಾಗುತ್ತಿದೆ. ಇದರಿಂದ ಮುಕ್ತಿ ಕಾಣದಾಗಿದೆ’ ಎನ್ನುತ್ತಾರೆ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕಿನ ಶಾಲೆಯೊಂದರ ಮುಖ್ಯಶಿಕ್ಷಕ.

‘ಕೊರೊನಾ ಸಮಯದಲ್ಲಿ ನಮ್ಮ ಶಾಲೆಯ ಕೆಲ ಮಕ್ಕಳಿಗೆ ಬಾಲ್ಯವಿವಾಹ ಆಗಿದೆ. ಹಲವು ಮಕ್ಕಳು ಗುಳೆ ಹೋಗಿವೆ. ಇದನ್ನೆಲ್ಲ ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ಸ್ಕೂಲ್‌ ಓಪನ್‌ ಮಾಡಿದರೆ ಸಾಕು ಎನ್ನಿಸಿಬಿಟ್ಟಿದೆ. ನೂರೆಂಟು ತರಬೇತಿ, ಮೇಲಧಿಕಾರಿಗಳಿಗೆ ಲೆಕ್ಕ ಒಪ್ಪಿಸುವುದು ಮುಗಿಯುತ್ತಿಲ್ಲ’ ಎಂಬ ಬೇಸರ ಮೊಳಕಾಲ್ಮುರಿನ  ಶಿಕ್ಷಕರೊಬ್ಬರದು.

ಎಷ್ಟನೇ ಕ್ಲಾಸ್‌? ವಿದ್ಯಾರ್ಥಿಗೆ ಗೊತ್ತಿಲ್ಲ

‘ಮೊನ್ನೆ ಒಬ್ಬ ಹುಡುಗ ಬಟ್ಟೆ ಬೇಕು ಎಂದು ಸ್ಕೂಲ್‌ಗೆ ಬಂದಿದ್ದ. ಎಷ್ಟನೇ ಕ್ಲಾಸ್ ಎಂದರೆ ಅವನಿಗೆ ಹೇಳಲು ಗೊತ್ತಾಗುತ್ತಿಲ್ಲ. 200–250 ಮಕ್ಕಳಲ್ಲಿ ಅವನು ಯಾವ ಕ್ಲಾಸ್‌ ಅಂತ ನಮಗೂ ತಕ್ಷಣ ತಿಳಿಯಲಿಲ್ಲ. ಮಕ್ಕಳು ಓದಿದ್ದನ್ನು ಮರೆಯುತ್ತಿದ್ದಾರೆ. ಆದಷ್ಟು ಬೇಗ ಶಾಲೆ ಆರಂಭಿಸಿದರೆ ಒಳಿತು’ ಎನ್ನುತ್ತಾರೆ ಅವರು.

ವಾಟ್ಸ್‌ಆ್ಯಪ್‌ ಗ್ರೂಪನ್‌ಲ್ಲಿ ವಿಡಿಯೊ

‘ನವೆಂಬರ್‌ 20ರಿಂದ 5ರಿಂದ 10 ತರಗತಿ ಮಕ್ಕಳಿಗೆ ಡಿಡಿ ಚಂದನದಲ್ಲಿ ವಿಡಿಯೊ ಆಧಾರಿತ ಪಾಠ–ಪ್ರವಚನಗಳು ನಡೆಯುತ್ತಿವೆ. ಪ್ರಾಥಮಿಕ ಹಂತದ ಶಾಲಾ ಮಕ್ಕಳಿಗೆ ವಾಟ್ಸ್‌ಆ್ಯಪ್‌ ಗ್ರೂಪ್‌ನಲ್ಲಿ ವಿಡಿಯೊ ಹಾಕಲಾಗುತ್ತದೆ. ಸರ್ಕಾರದ ಮುಂದಿನ ಆದೇಶದವರೆಗೂ ಇದು ನಡೆಯುತ್ತದೆ’ ಎಂದು ಹೇಳುತ್ತಾರೆ ದಕ್ಷಿಣ ಕನ್ನಡ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಮಲ್ಲೇಶಪ್ಪ ಅವರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು