ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೌಶಲ ವೃದ್ಧಿಗೆ ಡಿಜಿಟಲ್ ಕಲಿಕೆ

Last Updated 8 ಜನವರಿ 2020, 8:39 IST
ಅಕ್ಷರ ಗಾತ್ರ
ADVERTISEMENT
""

ಎಂಜಿನಿಯರಿಂಗ್ ಪದವೀಧರರಲ್ಲಿ ಕೇವಲ ಶೇ 25ರಷ್ಟು ಮಾತ್ರ ಉದ್ಯೋಗಕ್ಕೆ ಸಿದ್ಧರಾಗಿದ್ದಾರೆ ಮತ್ತು ಉಳಿದವರು ಉದ್ಯೋಗ ಸಂಬಂಧಿತ ಕೌಶಲಗಳಿಲ್ಲದೆ, ಕ್ಯಾಂಪಸ್ ನೇರ ನೇಮಕಾತಿಗೆ ಯೋಗ್ಯರಲ್ಲವೆಂದು ಉದ್ಯಮ ಭಾವಿಸಿದೆ. ಇಂತಹ ಪರಿಸ್ಥಿತಿಯಲ್ಲಿ ಜ್ಞಾನ ಮತ್ತು ಕೌಶಲಗಳ ಅಂತರವನ್ನು ಸರಿಪಡಿಸಲು ಡಿಜಿಟಲ್ ಕಲಿಕೆ ಅದ್ಭುತ ಅವಕಾಶಗಳನ್ನು ಒದಗಿಸಿದೆ; ನಿಮ್ಮ ದೌರ್ಬಲ್ಯಗಳನ್ನು ಶಕ್ತಿಯನ್ನಾಗಿಸಿ ಪರಿವರ್ತಿಸಿ, ಶೈಕ್ಷಣಿಕ ಮತ್ತು ವೃತ್ತಿಪರ ಜಗತ್ತಿನಲ್ಲಿ ನಿಮ್ಮ ಯಶಸ್ಸಿಗೆ ಕಾರಣವಾಗಬಲ್ಲದು.

ನಿರಂತರವಾಗಿ ಬದಲಾಗುತ್ತಿರುವ ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಉದ್ಯೋಗಿಗಳು ಮತ್ತು ವಿದ್ಯಾರ್ಥಿಗಳು ತಮ್ಮ ಕೌಶಲಗಳನ್ನು ಹೆಚ್ಚಿಸಿಕೊಳ್ಳುವುದು ಕಡ್ಡಾಯವಾಗಿದೆ. ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ವೃತ್ತಿಪರ ಕೌಶಲಗಳ ಬಗ್ಗೆ ಸಾಕಷ್ಟು ಪ್ರಾಮುಖ್ಯತೆಯಿಲ್ಲದೆ ಹೆಣಗಾಡುತ್ತಿರುವ ಉದ್ಯೋಗಾರ್ಥಿಗಳು ಒಂದೆಡೆಯಾದರೆ, ಈಗಾಗಲೇ ಉದ್ಯೋಗದಲ್ಲಿದ್ದು ಕೌಶಲಗಳನ್ನು ನವೀಕರಿಸದೆ, ಅಸಮರ್ಪಕವಾದ ಕಾರ್ಯಕ್ಷಮತೆಯ ಪರಿಣಾಮವಾಗಿ ಉದ್ಯೋಗವನ್ನು ಕಳೆದುಕೊಳ್ಳುತ್ತಿರುವವರೂ ಇದ್ದಾರೆ. ತೀವ್ರವಾಗಿ ಅಳವಡಿಸಿ ಕೊಳ್ಳುತ್ತಿರುವ ರೋಬೊಟಿಕ್ ತಂತ್ರಜ್ಞಾನ ಮತ್ತು ಆಟೊಮೇಷನ್ ಪರಿಣಾಮವಾಗಿ ಸಾಂಪ್ರದಾಯಕ ಕ್ಷೇತ್ರದಲ್ಲಿನ ಕೆಲಸಗಳು ಕುಂಠಿತವಾಗುತ್ತಿವೆ. ಆದರೆ ಸದ್ಯಕ್ಕಂತೂ ನವೀಕರಿಸಿದ ತಂತ್ರಜ್ಞಾನದ ಕೌಶಲಗಳು ಅತ್ಯಗತ್ಯ. ಇಂತಹ ಸಂದರ್ಭದಲ್ಲಿ ಡಿಜಿಟಲ್ ಕಲಿಕೆ ಅಥವಾ ಇ-ಕಲಿಕೆಯ ಸಹಾಯದಿಂದ ಕೌಶಲಗಳನ್ನು ಪ್ರಸ್ತುತವಾಗಿಸಿಕೊಂಡು ವೃತ್ತಿಪರ ಜೀವನವನ್ನು ರೂಪಿಸಿಕೊಳ್ಳಬಹುದು.

ಡಿಜಿಟಲ್ ಕಲಿಕೆಯು ಬೋಧನೆ ಮತ್ತು ಕಲಿಕೆ ಎರಡಕ್ಕೂ ಸುಭದ್ರವಾದ ಅಡಿಪಾಯವನ್ನೊದಗಿಸಿದೆ. ಪ್ರಮುಖವಾಗಿ ಪಠ್ಯ, ಆಡಿಯೊ ಮತ್ತು ವಿಡಿಯೊ, ಚಿತ್ರಗಳು, ಅನಿಮೇಷನ್ ಇತ್ಯಾದಿ ಮಾಧ್ಯಮಗಳ ಮೂಲಕ ಜ್ಞಾನ ಮತ್ತು ಕೌಶಲಗಳನ್ನು ಡಿಜಿಟಲ್ ಕಲಿಕೆ ಮೂಲಕ ವರ್ಧಿಸಿಕೊಳ್ಳಬಹುದು. ಹೀಗಾಗಿ, ಆನ್‌ಲೈನ್ ಕೋರ್ಸ್‌ಗಳು ಜನಪ್ರಿಯವಾಗಲು ಅನೇಕ ಕಾರಣಗಳಿವೆ:

* ಯಾವುದೇ ಸ್ಥಳದಿಂದ 24X7 ಮಾಹಿತಿ ಲಭ್ಯ.

* ಉದ್ಯೋಗಿಗಳು ಉದ್ಯೋಗದಿಂದ ಅಥವಾ ವಿದ್ಯಾರ್ಥಿಗಳು ವಿದ್ಯಾಭ್ಯಾಸದಿಂದ ದೀರ್ಘ ವಿರಾಮ ತೆಗೆದುಕೊಳ್ಳದೆ ತಮ್ಮ ಸಮಯಾನುಕೂಲಕ್ಕೆ ತಕ್ಕಂತೆ ಡಿಜಿಟಲ್ ಲರ್ನಿಗ್‌ನಿಂದ ಕಲಿಕೆಯನ್ನು ಮುಂದುವರಿಸಬಹುದು.

* ನೂತನ ಉದ್ಯೋಗವನ್ನು ಅರಸುವ ಉದ್ಯೋಗಿಗಳಿಗೆ ತಮ್ಮ ಕೌಶಲವನ್ನು ನವೀಕರಿಸುವ ಸಾಧ್ಯತೆಗಳು.

* ಆಫ್‌ಲೈನ್ ಮತ್ತು ಆನ್‌ಲೈನ್ ಶಿಕ್ಷಣದ ಏಕೀಕರಣದೊಂದಿಗೆ ಸಮಗ್ರ ಕಲಿಕೆ.

* ಡಿಜಿಟಲ್ ಕಲಿಕೆಯಿಂದ ಕೌಶಲಗಳನ್ನು ವೃದ್ಧಿಸಿ ವೃತ್ತಿಜೀವನವನ್ನು ರೂಪಿಸಿಕೊಳ್ಳಬಹುದು.

ಮಹಾತ್ಮ ಗಾಂಧಿಯವರು ಒಮ್ಮೆ ಹೇಳಿದ್ದರು, ‘ನಾಳೆಯೇ ಸಾಯುತ್ತೀರಿ ಎನ್ನುವಂತೆ ಬದುಕಿರಿ ಮತ್ತು ಶಾಶ್ವತವಾಗಿ ಬದುಕಿರುತ್ತೀರಿ ಎಂದು ಭಾವಿಸಿಕೊಂಡು ಕಲಿಯಿರಿ’ ಎಂದು. ಈ ಅತ್ಯಮೂಲ್ಯವಾದ ನುಡಿಮುತ್ತನ್ನು ವಯಸ್ಸು, ಸ್ಥಾನ ಮತ್ತು ಪರಿಸ್ಥಿತಿಯನ್ನು ಮೀರಿ ಬದುಕಿನಲ್ಲಿ ಅನುಸರಿಸಲು ಡಿಜಿಟಲ್ ಕಲಿಕೆ ನಮ್ಮನ್ನು ಸಶಕ್ತಗೊಳಿಸುತ್ತದೆ.

ವೈವಿಧ್ಯಮಯ ಶಿಕ್ಷಣ
ಭಾರತವು ಸರ್ಕಾರಿ, ಖಾಸಗಿ ಮತ್ತು ಡೀಮ್ಡ್ ಸೇರಿದಂತೆ 800 ಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳನ್ನು ಹೊಂದಿದೆ. ಹೆಚ್ಚಿನ ಸಂಸ್ಥೆಗಳಲ್ಲಿ ಡಿಜಿಟಲ್ ಕಲಿಕೆಗೆ ವಿವಿಧ ವಿಭಾಗಗಳಲ್ಲಿ ವೈವಿಧ್ಯಮಯ ಕೋರ್ಸ್‌ಗಳ ಆಯ್ಕೆಗಳಿವೆ. ಇದಲ್ಲದೆ, ತಂತ್ರಜ್ಞಾನ ಸಂಬಂಧಿತ ಕೋರ್ಸ್‌ಗಳನ್ನು ನಡೆಸುವ ಅನ್ಯ ಸಂಸ್ಥೆಗಳೂ ಇವೆ. ಒಟ್ಟಾರೆ, ಕೆಲವು ಜನಪ್ರಿಯ ಕೋರ್ಸ್‌ಗಳೆಂದರೆ ವಿದೇಶಿ ಭಾಷೆಗಳು, ಬ್ಯುಸಿನೆಸ್ ಮ್ಯಾನೇಜ್‌ಮೆಂಟ್, ಡಿಜಿಟಲ್ ಮಾರ್ಕೆಟಿಂಗ್, ಪ್ರಾಜೆಕ್ಟ್ ಮ್ಯಾನೇಜ್‌ಮೆಂಟ್, ಆಟೊಕ್ಯಾಡ್, ಡೇಟಾ ಬೇಸ್ ಮ್ಯಾನೇಜ್‌ಮೆಂಟ್ (ದತ್ತಾಂಶ ನಿರ್ವಹಣೆ), ಸರ್ವರ್ ಡೇಟಾಬೇಸ್ ನಿರ್ವಹಣೆ, ಡೇಟಾ ಅನಾಲಿಟಿಕ್ಸ್, ಆರ್ಟಿಫಿಷಿಯಲ್ ಇಂಟೆಲಿಜೆನ್ಸ್, ಕ್ಲೌಡ್ ಕಂಪ್ಯೂಟಿಂಗ್, ಐಟಿ ಸರ್ವೀಸಸ್ ಮತ್ತು ಕ್ವಾಲಿಟಿ ಮ್ಯಾನೇಜ್‌ಮೆಂಟ್.

ಡಿಜಿಟಲ್ ಕಲಿಕೆ ಕೇವಲ ಶೈಕ್ಷಣಿಕ/ ಉದ್ಯೋಗ ಸಂಬಂಧಿತ ಕೋರ್ಸ್‌ಗಳಿಗಷ್ಟೇ ಸೀಮಿತವಾಗಿಲ್ಲ. ಕಾಲೇಜು ಅಥವಾ ಉದ್ಯೋಗವನ್ನು ಪ್ರಾರಂಭಿಸಿದಾಗ ನೀವು ತ್ಯಜಿಸಿರಬಹುದಾದ ನೃತ್ಯ ಅಥವಾ ಸಂಗೀತದಂತಹ ಕಲಾತ್ಮಕ ಚಟುವಟಿಕೆಗಳ ಬಗ್ಗೆ ನೀವು ಇನ್ನೂ ಉತ್ಸುಕರಾಗಿದ್ದರೆ, ಡಿಜಿಟಲ್ ಕಲಿಕೆ ಈ ನಿಟ್ಟಿನಲ್ಲಿ ಮುಂದುವರಿಯಲು ಸಾಕಷ್ಟು ಅವಕಾಶಗಳನ್ನು ಒದಗಿಸುತ್ತದೆ. ಇದು ಬಹುಶಃ ಪರ್ಯಾಯ ವೃತ್ತಿಜೀವನವನ್ನು ಅಭಿವೃದ್ಧಿಪಡಿಸಲೂ ಸಹ ಕಾರಣವಾಗಬಹುದು.

ಉದಾಹರಣೆಗೆ, ಅನಿವಾಸಿ ಭಾರತೀಯರು ಫೇಸ್‌ಬುಕ್, ಫೇಸ್‌ಟೈಮ್, ಸ್ನ್ಯಾಪ್ ಚಾಟ್, ಸ್ಕೈಪ್, ವಾಟ್ಸಾಪ್ ಇತ್ಯಾದಿ ಮಾಧ್ಯಮಗಳ ಮೂಲಕ ಭಾರತೀಯ ಸಂಗೀತ, ನಾಟ್ಯ ತಜ್ಞರೊಡನೆ ಬೆರೆತು ತಮ್ಮಲ್ಲಿರುವ ಕಲೆಯನ್ನು ಇನ್ನೂ ಉನ್ನತ ಹಂತಕ್ಕೆ ವರ್ಧಿಸಿಕೊಳ್ಳಬಹುದು. ಇಂತಹ ಶೈಕ್ಷಣಿಕ ಮತ್ತು ಕಲಾತ್ಮಕ ಅಗತ್ಯಗಳನ್ನು ಪೂರೈಸುವ ಪ್ರಸಿದ್ಧ ಅಕಾಡೆಮಿಗಳಿವೆ, ಸಂಸ್ಥೆಗಳಿವೆ, ಸ್ವತಂತ್ರವಾಗಿ ವ್ಯವಹರಿಸುವ ತಜ್ಞರಿದ್ದಾರೆ. ಆದ್ದರಿಂದ ಡಿಜಿಟಲ್ ಕಲಿಕೆ ಸಮಯ, ದೂರ ಮತ್ತು ಗಡಿಗಳ ಅಡೆತಡೆಗಳನ್ನು ಮೀರಿ ತಜ್ಞ ವೃತ್ತಿಪರರೊಂದಿಗೆ ಕಲಿಕೆಯ ಅನಿಯಮಿತ ಆಯ್ಕೆಯನ್ನು ಒದಗಿಸುತ್ತದೆ.

ಡಿಜಿಟಲ್ ಕಲಿಕೆಯ ಕೋರ್ಸ್ ನಿರ್ಧರಿಸುವ ಮೊದಲು, ಈ ಕೆಳಗಿನ ಸಲಹೆಗಳನ್ನು ಪರಿಗಣಿಸಿ.

ಸ್ಪಷ್ಟ ಗುರಿಗಳಿರಲಿ

ಕೋರ್ಸ್ ಬಗ್ಗೆ ಅಪೇಕ್ಷೆ, ನಿರೀಕ್ಷೆಗಳು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುವುದು ಸಹಜ. ಆದ್ದರಿಂದ, ಶೈಕ್ಷಣಿಕ / ವೃತ್ತಿಪರ ಗುರಿಗಳ ಬಗ್ಗೆ ನಿಮಗೆ ಸ್ಪಷ್ಟವಾದ ಕಲ್ಪನೆಯಿರಬೇಕು. ನೀವು ನಿರ್ಧರಿಸುವ ಕೋರ್ಸ್‌ಗಳಿಂದ ನಿರ್ದಷ್ಟ ಸಮಯದಲ್ಲಿ ಗುರಿಗಳನ್ನು ಸಾಧಿಸಲು ಸಾಧ್ಯವಾಗಬೇಕು.

ಮಾನ್ಯತೆ ಪಡೆದ ಸಂಸ್ಥೆಯನ್ನೇ ಆರಿಸಿ

ನೀವು ಗಳಿಸುವ ಜ್ಞಾನ ಮತ್ತು ಕೌಶಲಗಳು ಉಪಯುಕ್ತವಾಗಿದ್ದರೂ ಸಹ ಶೈಕ್ಷಣಿಕ ಮತ್ತು ಉದ್ಯಮ ವಲಯಗಳಲ್ಲಿ ಅಂತಹ ಕೋರ್ಸ್‌ಗಳನ್ನು ಎಷ್ಟರ ಮಟ್ಟಿಗೆ ಗುರುತಿಸಲಾಗುತ್ತದೆ ಎಂಬುದನ್ನು ಪರಿಶೀಲಿಸುವುದು ಅಗತ್ಯ. ಆದ್ದರಿಂದ ಕೋರ್ಸ್ ಆಯ್ಕೆಯ ಮುನ್ನ ಸಂಪೂರ್ಣವಾದ ಸಂಶೋಧನೆ ಮಾಡಿ ಮಾನ್ಯತೆ ಪಡೆದ ವಿಶ್ವವಿದ್ಯಾಲಯಗಳು ಮತ್ತು ಸಂಸ್ಥೆಗಳಿಗೆ ಮಾತ್ರ ಸೇರಿ.

ಕೋರ್ಸ್ ಮತ್ತು ಬೋಧನಾ ಕ್ರಮ

ಆನ್‌ಲೈನ್ ಚರ್ಚೆಗಳು, ಸಂವಾದಾತ್ಮಕ ಇ-ಪಾಠಗಳು, ಬೋಧಕ ನೇತೃತ್ವದ ಅಥವಾ ಸ್ವಯಂಗತಿಯ ಪಾಠಗಳು, ಕೇಸ್ ಸ್ಟಡೀಸ್, ಮೊಬೈಲ್ ಕಲಿಕೆಗಳು, ಎಲೆಕ್ಟ್ರಾನಿಕ್ ಸಿಮ್ಯುಲೇಶನ್‌ಗಳು, ವಿಡಿಯೊ ತರಗತಿಗಳು, ವರ್ಚುವಲ್ ತರಗತಿಗಳು ಮುಂತಾದ ಹಲವಾರು ಬೋಧನಾ ವಿಧಾನಗಳಿವೆ/ವೇದಿಕೆಗಳಿವೆ. ಕೋರ್ಸ್‌ನ ವಿಷಯ ಮತ್ತು ಬೋಧನಾ ಕ್ರಮ ನಿಮ್ಮ ಅಗತ್ಯದಂತೆ ಇದೆಯೇ ಎನ್ನುವುದರ ಮೌಲ್ಯಮಾಪನ ಮಾಡಿ, ಉಪಯುಕ್ತತೆಯ ಕುರಿತು ಖಚಿತಪಡಿಸಿಕೊಳ್ಳಿ. ಜೊತೆಗೆ ರೇಡಿಯೊ ಮತ್ತು ಟಿ.ವಿ. ಮಾಧ್ಯಮದ ಮುಖಾಂತರ ಅನೇಕ ಶಿಕ್ಷಣ ಮತ್ತು ಕೌಶಲ ಸಂಬಂಧಿತ ಕಾರ್ಯಕ್ರಮಗಳು ಪ್ರಸಾರವಾಗುತ್ತಲಿದ್ದು ಅವುಗಳ ಪ್ರಯೋಜನವನ್ನೂ ಪಡೆಯಿರಿ.

ಈ ರೀತಿ ಕೋರ್ಸ್‌ ಅನ್ನು ಎಚ್ಚರಿಕೆಯಿಂದ ಆರಿಸುವುದರಿಂದ ನೀವು ಕೋರ್ಸ್‌ ಅನ್ನು ಪೂರ್ಣಗೊಳಿಸುವುದು ಸುಲಭ ಮತ್ತು ಕೋರ್ಸ್ ನಂತರದ ನಿರಾಶೆ, ಆತಂಕಗಳಿಂದ ಪಾರಾಗಬಹುದು.

ಸಕ್ರಿಯ ಭಾಗವಹಿಸುವಿಕೆ

ಡಿಜಿಟಲ್ ಕಲಿಕೆ ಮುಖಾಮುಖಿ ಸಂವಹನವಿಲ್ಲದ ಕಲಿಕೆಯ ಮಾರ್ಗ. ಹೀಗಾಗಿ ಮಾಧ್ಯಮ, ಗ್ರಹಿಸುವ ಶಕ್ತಿ, ವಿಷಯದ ಪರಿಚಯ, ಬೋಧಕರೊಡನೆ ಹೊಂದಿಕೊಳ್ಳುವ ಸಾಮರ್ಥ್ಯ ಇವೆಲ್ಲವೂ ಕಲಿಕೆಯ ಪರಿಪೂರ್ಣತೆಗೆ ಅತ್ಯಗತ್ಯ. ಬೋಧಕರು ಮತ್ತು ವರ್ಚುವಲ್ ಸಹಪಾಠಿಗಳೊಂದಿಗೆ ಸಕ್ರಿಯವಾಗಿ ತೊಡಗಿಸಿಕೊಳ್ಳುವುದು, ಆನ್‌ಲೈನ್ ಚರ್ಚೆಗಳು ಮತ್ತು ಸಂಬಂಧಿತ ವೇದಿಕೆಗಳಲ್ಲಿ ಭಾಗವಹಿಸುವುದು ಕಲಿಕೆಯ ಮಟ್ಟವನ್ನು ನಿರ್ಧರಿಸುತ್ತದೆ.

ಸ್ವಯಂ ಶಿಸ್ತು

ಇಂದಿನ ಒತ್ತಡದ ಬದುಕಿನಲ್ಲಿ ವೃತ್ತಿಪರ ಮತ್ತು ವೈಯಕ್ತಿಕ ಜೀವನದ ನಡುವೆ ಸಮತೋಲನವನ್ನು ಸಾಧಿಸುವುದು ಮತ್ತು ಸಮಯದ ನಿರ್ವಹಣೆ ಒಂದು ಸವಾಲಾಗಿದೆ. ಪೂರ್ಣ ಸಮಯದ ವೃತ್ತಿಜೀವನದಲ್ಲಿ ತೊಡಗಿರುವ ಎಲ್ಲರಿಗೂ ಡಿಜಿಟಲ್ ಕಲಿಕೆ ಒದಗಿಸುವ ಸಾಧ್ಯತೆಗಳು ಅಪಾರ. ಆನ್‌ಲೈನ್ ಕೋರ್ಸ್‌ನ ಸಾಧ್ಯತೆಗಳು ಉತ್ಸಾಹದಿಂದ ಕಲಿಯುವವರನ್ನು ಆಕರ್ಷಿಸುತ್ತದೆಯಾದರೂ, ಕೋರ್ಸ್‌ ಅನ್ನು ಪೂರ್ಣಗೊಳಿಸಲು ಸ್ವಯಂಶಿಸ್ತು ಮತ್ತು ಬಲವಾದ ಸ್ವಯಂಪ್ರೇರಣೆ ನಿರ್ಣಾಯಕವಾಗುತ್ತದೆ.

ಸಾಂಪ್ರದಾಯಕ ಶಿಕ್ಷಣಕ್ಕೆ ಬೇಡಿಕೆ ಹೆಚ್ಚಾಗಿದ್ದರೂ, ಗುಣಮಟ್ಟದ ಸಂಸ್ಥೆಗಳು ಮತ್ತು ಅಧ್ಯಾಪಕರ ತೀವ್ರ ಕೊರತೆಯಿಂದಾಗಿ ಪ್ರಗತಿಗೆ ಅಡ್ಡಿಯಾಗಿದೆ. ಇದಲ್ಲದೆ, ಸಾಂಪ್ರದಾಯಕ ಕಲಿಕೆಯಲ್ಲಿ ಪಠ್ಯಕ್ರಮ ಮತ್ತು ಶಿಕ್ಷಣ ಶಾಸ್ತ್ರದಲ್ಲಿನ ಬದಲಾವಣೆಗಳು ನಿಧಾನ ಮತ್ತು ಉದ್ಯಮದ ಅವಶ್ಯಕತೆಗಳಿಗೆ ಅಷ್ಟಾಗಿ ಸಂಬಂಧಿಸಿಲ್ಲ.

ಸಲಹೆಗಳು

* ಕೋರ್ಸ್ ಮತ್ತು ಸಂಸ್ಥೆಯನ್ನು ಆಯ್ಕೆ ಮಾಡುವಾಗ ಜಾಗರೂಕರಾಗಿರಿ.

* ಪಠ್ಯಕ್ರಮ ಮತ್ತು ಬೋಧನಾ ಕ್ರಮವನ್ನು ಅರ್ಥಮಾಡಿಕೊಳ್ಳಿ.

* ಶಿಸ್ತುಬದ್ಧರಾಗಿರಿ; ಸಂಘಟಿತರಾಗಿರಿ.

* ಕಲಿಕೆಯಲ್ಲಿ ನಿಮ್ಮ ಅಭಿಪ್ರಾಯಗಳು ಮತ್ತು ಸಮಸ್ಯೆಗಳನ್ನು ಸಮಾಲೋಚಿಸಿ.

* ಸಮಯಕ್ಕೆ ಸರಿಯಾಗಿ ಕಾರ್ಯಯೋಜನೆಗಳನ್ನು ಯೋಜಿಸಿ ಮತ್ತು ಪೂರ್ಣಗೊಳಿಸಿ.

* ಪರೀಕ್ಷೆಗಳನ್ನು ಬರೆಯುವಾಗ ಪ್ರಾಮಾಣಿಕರಾಗಿರಿ.

*ವೈಯಕ್ತಿಕ ಸಂವಹನ ಅಗತ್ಯವಿರುವ (ತಂಡ ನಿರ್ಮಾಣ, ನಾಯಕತ್ವ, ಸಾರ್ವಜನಿಕ ಸಂವಹನ, ಅಂತರ್‌ ವೈಯಕ್ತಿಕ ನೈಪುಣ್ಯತೆ) ಕೋರ್ಸ್‌ಗಳಿಗೆ ಸೇರುವುದರಿಂದ ಹೆಚ್ಚಿನ ಅನುಕೂಲವಾಗಲಾರದು.

(ಲೇಖಕರು ಮ್ಯಾನೇಜ್‌ಮೆಂಟ್ ಮತ್ತು ಶಿಕ್ಷಣ ತಜ್ಞರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT