ಶುಕ್ರವಾರ, ಸೆಪ್ಟೆಂಬರ್ 24, 2021
24 °C
ಶಬ್ದ ಭಂಡಾರಕ್ಕೆ ತುಡಿಯುವವರನ್ನು ಕೈಹಿಡಿಯುವ ಪತ್ರಿಕೋದ್ಯಮ l

ಬೇಕಿರುವುದು ಓದಿಸುವ, ನೋಡಿಸುವ ಕೌಶಲ

ಎಂ.ಜಿ.ಬಾಲಕೃಷ್ಣ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕಲಾ ವಿಭಾಗ ಬಹುತೇಕ ಎಲ್ಲರ ಕೊನೆಯ ಆಯ್ಕೆ. ಎಸ್ಸೆಸ್ಸೆಲ್ಸಿಯಲ್ಲಿ ಕಡಿಮೆ ಅಂಕ ಗಳಿಸಿದವರು ಈ ವಿಭಾಗಕ್ಕೆ ಸೇರುವುದು ಹಿಂದಿನಿಂದಲೂ ಇದೆ. ಕಲಾ ವಿಷಯ ಆಯ್ಕೆ ಮಾಡಿಕೊಳ್ಳುವವರ ಸಂಖ್ಯೆ ಕಡಿಮೆಯಾಗುತ್ತಿದ್ದಂತೆಯೇ ಕಾಲೇಜುಗಳಲ್ಲಿ ಕಲಾ ವಿಭಾಗಗಳು ಬಂದ್‌ ಆಗುತ್ತಿವೆ.

ಕಲಾ ವಿಭಾಗದ ಹಲವು ಆಯ್ಕೆಗಳ ಪೈಕಿ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ಕಲಿಕೆಗೆ ಒಂದಿಷ್ಟು ಉದ್ಯೋಗ ಅವಕಾಶ ಇರುವುದು ನಿಸ್ಸಂಶಯ. ಮುದ್ರಣ– ಆನ್‌ಲೈನ್‌, ಡಿಜಿಟಲ್‌ ಮಾಧ್ಯಮ ಮತ್ತು ವಿದ್ಯುನ್ಮಾನ ಎಂಬ ಎರಡು ವಿಶಾಲ ವಿಭಾಗದಡಿಯಲ್ಲಿ ಈ ಕ್ಷೇತ್ರ ಹರಡಿಕೊಂಡಿದೆ. ಸಂವಹನದ ವ್ಯಾಪ್ತಿಯೂ ದೊಡ್ಡದಾಗಿದ್ದು, ಅವಕಾಶಗಳೂ ಅಧಿಕವಾಗಿವೆ.

ಶಬ್ದವನ್ನು ದುಡಿಸಿಕೊಳ್ಳುವವರು, ಉತ್ತಮವಾಗಿ ಮಾತನಾಡಲು ಬರುವವರು ಪತ್ರಿಕೋದ್ಯಮವನ್ನು ವ್ಯಾಸಂಗ ಮಾಡದೆಯೂ ಉತ್ತಮ ಪತ್ರಕರ್ತರಾಗಬಹುದು. ಈ ಕೌಶಲವನ್ನು ಕಲಿಸುವ ಶಿಕ್ಷಣವೇ ಪತ್ರಿಕೋದ್ಯಮ. ಮುದ್ರಣ, ವಿದ್ಯುನ್ಮಾನ ಮಾಧ್ಯಮಗಳಲ್ಲಿ ಕೆಲಸದ ಅವಕಾಶದ ಜತೆಗೆ ಇಂದು ನೂರಾರು ಸುದ್ದಿ ವೆಬ್‌ಸೈಟ್‌ಗಳು, ಬಹುಮಾಧ್ಯಮ ವೇದಿಕೆಗಳು ಕೆಲಸ ಒದಗಿಸುತ್ತಿವೆ. ಜಾಹೀರಾತು, ಸಾರ್ವಜನಿಕ ಸಂಪರ್ಕ, ಮಾಧ್ಯಮ ಸಲಹೆಗಾರ, ಕಂಟೆಂಟ್‌ ಬರಹಗಾರ, ಭಾಷಾಂತರಕಾರ... ಹೀಗೆ ಅವಕಾಶ ಇದ್ದೇ ಇದೆ.

‘ಪತ್ರಿಕೆ ಓದುವ ಮಂದಿ ಕಡಿಮೆಯಾಗುತ್ತಿದ್ದಾರೆ. ಮೊಬೈಲ್‌ನಲ್ಲೇ ಎಲ್ಲವೂ ಸಿಗುತ್ತಿದೆ. ಹೀಗಿದ್ದರೂ ಕೈಯಲ್ಲೇ ಇರುವ ಸಾಧನದಲ್ಲಿ ಬರುವ ಮಾಹಿತಿಯನ್ನು ಓದಿಸುವ, ಕೇಳಿಸುವ, ನೋಡಿಸುವ ತಾಕತ್ತು ಯಾರಿಗಿದೆಯೋ ಆತನೇ ಇಂದು ಸಮರ್ಥ ಪತ್ರಕರ್ತ ಎನಿಸುತ್ತಾನೆ. ವ್ಯವಧಾನವೇ ಇಲ್ಲದ ಇಂದಿನ ಜಗತ್ತಿನಲ್ಲಿ, ಜನರನ್ನು ಒಂದಿಷ್ಟು ಸೆಳೆಯುವಂತೆ ಮಾಡುವ ಕಲೆಯಲ್ಲೇ ಪತ್ರಕರ್ತನ ಯಶಸ್ಸೂ ಅಡಗಿದೆ’ ಎನ್ನುತ್ತಾರೆ ಹಿರಿಯ ಪತ್ರಕರ್ತ ಹಾಗೂ ಬೆಂಗಳೂರಿನ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಜರ್ನಲಿಸಂ ಆಂಡ್‌ ನ್ಯೂ ಮೀಡಿಯಾದ (ಐಐಜೆಎನ್‌ಎಂ) ಪ್ರಾಧ್ಯಾಪಕ ನಾಗೇಶ್‌ ಹೆಗಡೆ.

‘ಅವಕಾಶ ಕಡಿಮೆಯಾಗಿಲ್ಲ, ಆದರೆ ಸ್ಪರ್ಧೆ ತೀವ್ರವಾಗಿದೆ. ಸ್ವಂತ ಪರಿಶ್ರಮದಿಂದ ಮಾತ್ರ ಇಲ್ಲಿ ಬೆಳವಣಿಗೆ ಸಾಧ್ಯ’ ಎಂಬುದು ಇನ್ನೊಬ್ಬ ಹಿರಿಯ ಪತ್ರಕರ್ತ ಎಸ್‌.ಗಣೇಶನ್‌ ಅವರ ಅನಿಸಿಕೆ.

ಹೊಸ ಪೀಳಿಗೆಯಲ್ಲಿ ಕಲಿಕಾ ಉತ್ಸಾಹ ಇದೆ. ಆಧುನಿಕ ತಂತ್ರಜ್ಞಾನಕ್ಕೆ ಬೇಗ ಒಗ್ಗಿಕೊಳ್ಳುತ್ತಿದ್ದಾರೆ. ಆದರೂ ಪರಿಶ್ರಮ ಮತ್ತು ಶ್ರದ್ಧೆಗೇ ಈ ಕ್ಷೇತ್ರ ಒಲಿಯುತ್ತಿರುವುದು ಕಾಣಿಸುತ್ತಿದೆ ಎನ್ನುತ್ತಾರೆ ಮೈಸೂರು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಪ್ರೊ.ಪುಟ್ಟಸ್ವಾಮಿ.

ರಾಜ್ಯದಲ್ಲಿ ಬಹುತೇಕ ಎಲ್ಲ ವಿಶ್ವವಿದ್ಯಾಲಯಗಳಲ್ಲಿ, ಅವುಗಳಿಗೆ ಒಳಪಟ್ಟ ಹಲವಾರು ಕಾಲೇಜುಗಳಲ್ಲಿ ಪತ್ರಿಕೋದ್ಯಮ ವ್ಯಾಸಂಗ ನಡೆಯುತ್ತಿದೆ. ಜತೆಗೆ ಇಂಡಿಯನ್ ಇನ್‌ಸ್ಟಿಟ್ಯೂಟ್‌ ಆಫ್‌ ಜರ್ನಲಿಸಂ ಅಂಡ್‌ ನ್ಯೂ ಮೀಡಿಯಾ (ಐಐಜೆಎನ್‌ಎಂ), ಏಷ್ಯನ್‌ ಕಾಲೇಜ್‌ ಆಫ್‌ ಜರ್ನಲಿಸಂನಂತಹ ಸಂಸ್ಥೆಗಳು ಗುಣಮಟ್ಟದ ಶಿಕ್ಷಣ ಒದಗಿಸುತ್ತಿವೆ.

ಶಬ್ದ ದುಡಿಸುವ ಕಲೆ ಗೊತ್ತಿರುವವರಿಗೆ ಯಾವ ವಿಶೇಷ ತರಬೇತಿಯ ಅಗತ್ಯವೂ ಇಲ್ಲ. ಆದರೆ ಪತ್ರಿಕೋದ್ಯಮ ವ್ಯಾಸಂಗ ಮಾಡಿದ್ದೇ ಆದರೆ ವಿಮರ್ಶಾತ್ಮಕವಾಗಿ ವಿಶ್ಲೇಷಣೆ ಮಾಡುವುದು, ಯಾವುದೇ ವಿಷಯದ ಮೇಲೆ ನಿರರ್ಗಳವಾಗಿ ಮಾತನಾಡುವುದು ಅಥವಾ ಬರೆಯುವುದು, ಸ್ವಂತ ನಿರ್ವಹಣೆ ಮಾಡಿಕೊಳ್ಳುವುದು, ನಮ್ಮೊಳಗಿನ ಆಂತರಿಕ ಕೌಶಲ ಹೊರಗೆಳೆಯುವುದು, ನಾಯಕತ್ವ ಗುಣ ಬೆಳೆಸಿಕೊಳ್ಳುವುದು, ಸವಾಲುಗಳಿಗೆ ರಚನಾತ್ಮಕ ಮತ್ತು ಸ್ವತಂತ್ರ ನಿಲುವು ತಳೆಯುವುದು, ಸಮಯ ಪರಿಪಾಲನೆ, ಇನ್ನೊಬ್ಬರ ಮಾತು ಕೇಳಿಸಿಕೊಳ್ಳುವ ಮತ್ತು ತಂಡವಾಗಿ ರಚನಾತ್ಮಕವಾಗಿ ದುಡಿಯುವ ಕೌಶಲ ನಮ್ಮದಾಗುತ್ತದೆ.

ದೇಶದ ಪ್ರಮುಖ ಪತ್ರಿಕೋದ್ಯಮ ಕಾಲೇಜುಗಳು
* ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಜರ್ನಲಿಸಂ ಅಂಡ್‌ ನ್ಯೂ ಮೀಡಿಯಾ, ಬೆಂಗಳೂರು
* ಏಷ್ಯನ್‌ ಕಾಲೇಜ್‌ ಆಫ್‌ ಜರ್ನಲಿಸಂ, ಚೆನ್ನೈ
* ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಮಾಸ್‌ ಕಮ್ಯುನಿಕೇಷನ್, ನವದೆಹಲಿ
* ಕ್ಸೇವಿಯರ್‌ ಇನ್‌ಸ್ಟಿಟ್ಯೂಟ್‌ ಆಫ್‌ ಕಮ್ಯುನಿಕೇಷನ್‌, ಮುಂಬೈ
* ಸಿಂಬಯಾಸಿಸ್‌ ಇನ್‌ಸ್ಟಿಟ್ಯೂಟ್‌ ಆಫ್‌ ಮಾಸ್‌ ಕಮ್ಯುನಿಕೇಷನ್‌, ಪುಣೆ
* ಎ.ಜೆ.ಕಿದ್ವಾಯಿ ಮಾಸ್‌ ಕಮ್ಯುನಿಕೇಷನ್‌ ರಿಸರ್ಚ್‌ ಸೆಂಟರ್‌, ನವದೆಹಲಿ
* ಮುದ್ರಾ ಇನ್‌ಸ್ಟಿಟ್ಯೂಟ್‌ ಆಫ್‌ ಕಮ್ಯುನಿಕೇಷನ್‌, ಅಹಮದಾಬಾದ್‌
* ಮನೋರಮಾ ಸ್ಕೂಲ್‌ ಆಫ್‌ ಕಮ್ಯನಿಕೇಷನ್‌, ಕೊಟ್ಟಾಯಂ
* ಮುಂಬೈ ಎಜುಕೇಷನ್‌ ಟ್ರಸ್ಟ್‌, ಮಂಬೈ
* ದಿ ಟೈಮ್‌ ಸ್ಕೂಲ್‌ ಆಫ್‌ ಜರ್ನಲಿಸಂ, ನವದೆಹಲಿ.

ಪತ್ರಕರ್ತರಿಗೆ ಹೊಸ ಅವಕಾಶಗಳು
* ಜಾಹೀರಾತು ಬರಹಗಾರ
* ಡಿಜಿಟಲ್‌ ಬರಹಗಾರ
* ಮಾರುಕಟ್ಟೆ ಸಂಶೋಧಕ
* ಬಹುಮಾಧ್ಯಮ ಪರಿಣತ
* ವಿಜ್ಞಾನ ಬರಹಗಾರ
* ಕಾರ್ಪೊರೇಟ್‌ ಸಂವಹನ ಪರಿಣತ
* ಸಾಮಾಜಿಕ ಜಾಲತಾಣ ಪರಿಣತ
* ಕ್ರೀಡಾ ಮಾಹಿತಿ ನಿರ್ದೇಶಕ
* ತಾಂತ್ರಿಕ ಬರಹಗಾರ
* ಕಂಟೆಂಟ್‌ ಮಾರ್ಕೆಟರ್

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು