ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಹಿಕೆ ಸಾಮರ್ಥ್ಯಕ್ಕೆ ಗೇಮ್ಸ್‌

Last Updated 16 ಜುಲೈ 2019, 19:30 IST
ಅಕ್ಷರ ಗಾತ್ರ

ಪ್ರತಿಯೊಂದು ಮಕ್ಕಳ ಬುದ್ಧಿವಂತಿಕೆಯ ಮಟ್ಟ ವಿಭಿನ್ನವಾಗಿರುತ್ತದೆ. ಕೆಲವರು ಯಾವುದೇ ವಿಷಯವನ್ನು, ತಮ್ಮ ಸುತ್ತಮುತ್ತಲಿನ ಆಗುಹೋಗುಗಳನ್ನು ತಕ್ಷಣವೇ ಅರ್ಥ ಮಾಡಿಕೊಳ್ಳುವಷ್ಟು ಬುದ್ಧಿವಂತರಿದ್ದರೆ, ಇನ್ನು ಕೆಲವು ಮಕ್ಕಳು ಮನಸ್ಸು ಹಾಗೂ ಬುದ್ಧಿಗೆ ಕಸರತ್ತು ನೀಡಿದರೆ ಅವುಗಳನ್ನು ಗ್ರಹಿಸುತ್ತಾರೆ. ಮತ್ತೆ ಕೆಲವು ಚಿಣ್ಣರು ಯಾವುದೇ ವಿಷಯವನ್ನು ನಿಧಾನವಾಗಿ ಗ್ರಹಿಸಬಹುದು. ಪೋಷಕರಿರಲಿ ಅಥವಾ ಶಿಕ್ಷಕರಿರಲಿ ಮಕ್ಕಳ ಜಾಣ್ಮೆಯ ಮಟ್ಟವನ್ನು ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ಎಲ್ಲ ಮಕ್ಕಳೂ ಅದ್ಭುತವಾದ ಗ್ರಹಣ ಶಕ್ತಿ ಹೊಂದಿದರೆ ಈ ಜಗತ್ತಿನಲ್ಲಿ ಪೈಪೋಟಿ ಎಂಬುದೇ ಇರುತ್ತಿರಲಿಲ್ಲವೇನೋ!

ಮಕ್ಕಳ ಗ್ರಹಿಕಾ ಸಾಮರ್ಥ್ಯ, ಏಕಾಗ್ರತೆಯನ್ನು ಹೆಚ್ಚಿಸಲು ಸದಾ ಚಟುವಟಿಕೆಯಲ್ಲಿ ತೊಡಗುವಂತೆ ಪ್ರೋತ್ಸಾಹಿಸಬೇಕು. ಉದಾಹರಣೆಗೆ: ಮಣ್ಣಿನ ಬೊಂಬೆ ತಯಾರಿಕೆ, ಕಾಗದದಲ್ಲಿ ವಿವಿಧ ಕಲಾಕೃತಿಗಳನ್ನು ಮಾಡುವುದು, ಚಿತ್ರಗಳನ್ನು ಬಿಡಿಸುವುದು, ಆಟದಲ್ಲಿ ತೊಡಗಿಸುವುದು ಇತ್ಯಾದಿ.

ಇನ್ನೊಂದು ಅಂಶವೆಂದರೆ ಗ್ರಹಿಸಿದ್ದು ಸ್ಮರಣೆಯಲ್ಲಿ ಸುಲಭವಾಗಿ ಉಳಿಯುತ್ತದೆ. ಸ್ಮರಣ ಶಕ್ತಿ ಹಾಗೂ ಗ್ರಹಿಕಾ ಸಾಮರ್ಥ್ಯಗಳು ಕಲಿಕೆಗೆ ಪೂರಕವಾದ ಅಂಶಗಳು. ಇವುಗಳನ್ನು ವೃದ್ಧಿಸುವ ಕೆಲವು ಸರಳ ಉಪಾಯಗಳು ಹೀಗಿವೆ..

ಮಕ್ಕಳು ವೃತ್ತಾಕಾರದಲ್ಲಿ ಕುಳಿತುಕೊಳ್ಳಬೇಕು. ಮೊದಲನೆಯ ವಿದ್ಯಾರ್ಥಿ ‘ಅ ಇಂದ ಅರಸ’ ಎಂದರೆ, ಎರಡನೇ ವಿದ್ಯಾರ್ಥಿ ‘ಅ ಇಂದ ಅರಸ, ಆ ಇಂದ ಆಮೆ’ ಅಥವಾ ಇನ್ನೇನಾದರೂ ಒಂದು ಶಬ್ದ ಆ ಇಂದ ಹೇಳಬೇಕು. ಮೂರನೆಯ ವಿದ್ಯಾರ್ಥಿ ಮೊದಲೆರಡು ವಿದ್ಯಾರ್ಥಿಗಳು ಹೇಳಿದ್ದನ್ನು ಹೇಳಿ ನಂತರ ‘ಇ ಇಂದ..’ ಎಂದು ಒಂದು ಹೊಸ ಶಬ್ದವನ್ನು ಹೇಳಬೇಕು. ನಾಲ್ಕನೆಯ ವಿದ್ಯಾರ್ಥಿ ಮೊದಲ ಮೂರು ಶಬ್ದಗಳೊಂದಿಗೆ ನಾಲ್ಕನೆಯ ಶಬ್ದವನ್ನು ಹೇಳಬೇಕು. ಹೀಗೆ ಆಟ ಮುಂದುವರಿಯುತ್ತದೆ. ಯಾರು ಮೊದಲಿನ ವಿದ್ಯಾರ್ಥಿಗಳು ಹೇಳಿದ್ದನ್ನು ಸರಿಯಾಗಿ ಹೇಳಲು ಅಶಕ್ತರಾಗುತ್ತಾರೋ ಅವರು ಆಟದಿಂದ ಹೊರಗುಳಿಯುತ್ತಾರೆ. ಇದು ಮೊದಲನೆಯ ತರಗತಿಯ ಮಕ್ಕಳಿಗಾದರೆ, ದಿನಗಳೆದಂತೆ ವರ್ಣಮಾಲೆಯ ಅಕ್ಷರಗಳನ್ನು ಬಿಟ್ಟು ಯಾವುದಾದರೂ ಥೀಮ್ ಅಂದರೆ ಹಣ್ಣಿನ ಹೆಸರು, ಹೂವಿನ ಹೆಸರು ಹೀಗೆ ಏನನ್ನಾದರೂ ಆಯ್ಕೆ ಮಾಡಿಕೊಳ್ಳಬಹುದು.

ವಿದ್ಯಾರ್ಥಿಗಳು ಮೊದಲ ಬಾರಿ ಶಾಲೆಗೆ ಬಂದಾಗ ಮಕ್ಕಳು ಒಬ್ಬರಿಗೊಬ್ಬರು ಪರಿಚಿತರಾಗಲಿ ಎನ್ನುವ ಉದ್ದೇಶದಿಂದ ಹಮ್ಮಿಕೊಳ್ಳುವ ‘ಬ್ರೇಕಿಂಗ್‌ ದಿ ಐಸ್‌’ ಆಟವಿದು. ವಿದ್ಯಾರ್ಥಿಗಳನ್ನು ವೃತ್ತಾಕಾರದಲ್ಲಿ ಕೂರಿಸಿ ಒಬ್ಬೊಬ್ಬರಾಗಿ ತಮ್ಮ ಹೆಸರನ್ನು ಹೇಳಲು ಸೂಚಿಸಬೇಕು. ಎರಡನೆಯ ವಿದ್ಯಾರ್ಥಿಯು ಮೊದಲನೆಯವನ ಹೆಸರು ಹೇಳಿ, ತನ್ನ ಹೆಸರನ್ನು ಹೇಳಬೇಕು. ಮೂರನೆಯ ವಿದ್ಯಾರ್ಥಿಯು ಮೊದಲಿಬ್ಬರ ಹೆಸರುಗಳನ್ನು ಹೇಳಿ ನಂತರ ತನ್ನ ಹೆಸರನ್ನು ಸೇರಿಸಬೇಕು. ಇದರಿಂದ ಆ ವಿದ್ಯಾರ್ಥಿಗಳ ಮುಖವನ್ನು ನೋಡಿಕೊಂಡು, ನೆನಪಿಸಿಕೊಂಡು, ಅವರ ಹೆಸರುಗಳನ್ನು ಮತ್ತೆ ಮತ್ತೆ ಹೇಳುವುದರಿಂದ ಆಟಕ್ಕೆ ರಂಗೇರುವುದರ ಜೊತೆಗೆ ಮನಸ್ಸಿನ ಹಿಂಜರಿಕೆ, ಅಳುಕು ದೂರವಾಗುತ್ತದೆ. ಸ್ನೇಹ ಬೆಸೆಯುತ್ತದೆ.

ಗಣಿತವನ್ನು ಸಾಮಾನ್ಯವಾಗಿ ಭಾವಿಸುವುದು ಕಬ್ಬಿಣದ ಕಡಲೆ ಎಂದು. ಅದರ ಸ್ವಾದ ಹತ್ತಲು ಹಾಗೂ ಅದನ್ನು ಜೀರ್ಣಿಸಿಕೊಳ್ಳಲು ಈ ಕೆಳಗಿನ ಚಟುವಟಿಕೆಗಳು ಸಹಕಾರಿ.

ಮಗ್ಗಿಯನ್ನು ನೆನಪಿಟ್ಟುಕೊಳ್ಳುವ ಸುಲಭ ಕ್ರಮ. ಉದಾಹರಣೆಗೆ ಐದರ ಮಗ್ಗಿ ತೆಗೆದುಕೊಳ್ಳೋಣ. ಐದೊಂದಲ ಐದು, ಐದೆರಡಲ ಹತ್ತು, ಐದ ಮೂರಲ ಹದಿನೈದು.. ಹೀಗೆ ಮಗ್ಗಿಯನ್ನು ಪೂರ್ಣವಾಗಿ ಹೇಳಿಸಿದ ನಂತರ ಆಟ ಪ್ರಾರಂಭವಾಗುತ್ತದೆ. ವಿದ್ಯಾರ್ಥಿಗಳು ಐದನೇ ಮಗ್ಗಿಯಲ್ಲಿ ಬರುವ ಯಾವುದೇ ಗುಣಲಬ್ಧವನ್ನು ಹೇಳುವಂತಿಲ್ಲ. ಅದನ್ನು ಬಿಟ್ಟು ಮುಂದಿನ ಸಂಖ್ಯೆಯನ್ನು ಹೇಳಬೇಕು. 1,2,3,4ರ ನಂತರ ಐದನೇ ವಿದ್ಯಾರ್ಥಿಯು 6 ಎಂದು ಹೇಳಬೇಕು. ಯಾವ ಸಂಖ್ಯೆಯನ್ನು ಬಿಡಬೇಕು ಎಂದು ಮಕ್ಕಳು ಮತ್ತೆ ಮತ್ತೆ ಮೆಲುಕು ಹಾಕುವುದರಿಂದ ಮಗ್ಗಿ ಶಾಶ್ವತವಾಗಿ ನೆನಪಿನಲ್ಲಿ ಉಳಿಯುತ್ತದೆ. ಅಥವಾ ಇದೇ ಆಟದ ಇನೊಂದು ಪರ್ಯಾಯ ರೂಪವಾಗಿ ಮಗ್ಗಿಯ ಗುಣಲಬ್ಧ ಬಂದಾಗ ಚ-ಚ-ಚ ಎಂದೋ ಅಥವಾ ಇನ್ನೇನಾದರೂ ಶಬ್ದವನ್ನೋ ಬಳಸಬಹುದು. ಬೆಸ, ಸಮ ಸಂಖ್ಯೆಗಳನ್ನು ನೆನಪಿನಲ್ಲಿಟ್ಟುಕೊಳ್ಳಲು ಸಹ ಉತ್ತಮ ವಿಧಾನ ಇದು. ಮಗ್ಗಿಯನ್ನು ಸ್ಮರಣೆಯಲ್ಲಿಟ್ಟುಕೊಳ್ಳಲು ಮಗ್ಗಿಯನ್ನು ವಿರುದ್ಧ ಕ್ರಮದಲ್ಲಿ ಅಂದರೆ ಐದ್ ಹತ್ತಲಾ ಐವತ್ತು ಇಂದ ಪ್ರಾರಂಭ ಮಾಡಿದರೆ, ದಿನವೂ ಒಮ್ಮೆ ಮೊದಲಿಗೆ ಕೋಷ್ಟಕ ನೋಡಿಕೊಂಡು ನಂತರ ಇಲ್ಲದೆಯೇ ಹೇಳಿಕೊಂಡರೆ ಮುಂದಿನ ತರಗತಿಗಳಲ್ಲಿ ನಿಖರವಾಗಿ, ವೇಗವಾಗಿ ಲೆಕ್ಕಗಳನ್ನು ಬಿಡಿಸಲು ಸಾಧ್ಯವಾಗುತ್ತದೆ.

ಮಕ್ಕಿಕಾಮಕ್ಕಿ ಮಾಡುವುದನ್ನು ಬಿಟ್ಟು, ಅದರ ಅಂತರಾಳಕ್ಕಿಳಿದು, ಅದು ಏಕೆ, ಹೇಗೆ ಎನ್ನುವ ಅರಿವಿನೊಂದಿಗೆ ಮಾಡಿದರೆ ಮಾತ್ರ ಅದು ಮೆದುಳಿನ ಪದರಗಳಲ್ಲಿ ಚಿರಕಾಲ ಉಳಿಯಲು ಸಾಧ್ಯ. ನಲಿ-ಕಲಿ ಎಂಬ ಚಟುವಟಿಕೆಯುಕ್ತ ಪಠ್ಯಕ್ರಮ ಮುಖ್ಯವಾಗಿ ಪ್ರಾಥಮಿಕ ಸ್ತರದಲ್ಲಿ ಚಾಲನೆಗೆ ಬಂದ ನಂತರ ಚಟುವಟಿಕೆಗಳಿಗೆ ಆದ್ಯತೆ ನೀಡುವ ಹುಮ್ಮಸ್ಸಿನಲ್ಲಿ ಕಲಿಕೆಗೇ ಕುತ್ತು ಬರುತ್ತದೋ ಎಂಬ ಆತಂಕ ಇಲ್ಲದಿಲ್ಲ. ಉದಾಹರಣೆಗೆ: ಒಂದು ಏಣಿಯ ಚಿತ್ರವನ್ನು ಬಿಡಿಸಿ 1, 4, 7.. ಹೀಗೆ ಆ ಮೆಟ್ಟಿಲುಗಳಿಗೆ ಬಣ್ಣ ಹಚ್ಚಿ ಎಂದು ನಿರ್ದೇಶಿಸಿದ್ದರೆ ಮಕ್ಕಳ ಗಮನ ಮಧ್ಯೆ ಎರಡೆರಡನ್ನು ಬಿಟ್ಟು ಹಚ್ಚುವ ಬಣ್ಣದಲ್ಲಿರುತ್ತದೆಯೇ ಹೊರತು, ಅದು ‘ಸ್ಕಿಪ್ ಕೌಂಟಿಂಗ್‌’ ಎಂದು ಅರಿಯುವ ಗೋಜಿಗೇ ಹೋಗುವುದಿಲ್ಲ. ಶಿಕ್ಷಕರು ಈ ನಿಟ್ಟಿನಲ್ಲಿ ಬಹಳ ಎಚ್ಚರ ವಹಿಸಬೇಕು. ಹಾಗಿಲ್ಲದಿದ್ದರೆ ಅಭ್ಯಾಸ ಮುಗಿಯುತ್ತದೆಯೇ ಹೊರತು ನೆನಪಿನಲ್ಲಿ ಉಳಿಯುವುದಿಲ್ಲ. ನಿನ್ನೆ ಕಲಿತದ್ದು ನಿನ್ನೆಗೆ, ಇಂದಿನದು ಇಂದಿಗೆ, ನಾಳೆಯದನ್ನು ಮುಂದೆ ನೋಡಿಕೊಳ್ಳೋಣ ಎನ್ನುವಂತಾದರೆ ಕಲಿಕೆ ನಿಷ್ಫಲವಾಗುತ್ತದೆ.

ಮತ್ತೆ ಮತ್ತೆ ಮೆಲುಕು ಹಾಕುತ್ತಿದ್ದರೆ ನೆನಪಿಟ್ಟುಕೊಳ್ಳುವುದು ಸುಲಭ. ಅದಕ್ಕಾಗಿ ಸ್ನೇಹಿತರಲ್ಲಿ ಆ ವಿಷಯವಾಗಿ ಚರ್ಚಿಸುವುದು, ವಿಚಾರ ವಿನಿಮಯ, ಅನಿಸಿಕೆಗಳನ್ನು ಹಂಚಿಕೊಳ್ಳುವುದು, ಅನುಮಾನ ಪರಿಹಾರ ಮಾಡಿಕೊಳ್ಳುವುದು ಮಾಡುತ್ತಿದ್ದರೆ, ಕಲಿಕೆ ಗಾಢವಾಗುತ್ತದೆ. ಬರೆದು ಅಭ್ಯಾಸ ಮಾಡುವುದರಿಂದಲೂ ಅದರ ಚಿತ್ರ ಮನದಾಳದಲ್ಲಿ ಸೆರೆಯಾಗಿ ಮನಸ್ಸಿನಲ್ಲಿ ಅಚ್ಚೊತ್ತುತ್ತದೆ.

ಉತ್ಸಾಹ ಪ್ರಚೋದಿಸಬೇಕು

ಪ್ರಕೃತಿ ನಡಿಗೆ (ನೇಚರ್ ವಾಕ್) ನಂತರ ಮಕ್ಕಳಿಗೆ ಒಂದು ಸ್ಮರಣ ಶಕ್ತಿ ಪರೀಕ್ಷೆ ಇರುತ್ತದೆ ಎಂದು ಮೊದಲೇ ತಿಳಿಯಪಡಿಸಿ, ಎಲ್ಲವನ್ನೂ ಗಮನವಿಟ್ಟು ನೋಡಿ ಎಂದು ತಿಳಿಸಿ, ನೋಡಬೇಕಾಗಿದ್ದ ವಸ್ತುಗಳ ಬಗ್ಗೆ ಮಕ್ಕಳಿಗೆ ಪರಿಚಯಿಸುತ್ತಾ, ಮಕ್ಕಳ ಸಂದೇಹಗಳನ್ನು, ಕುತೂಹಲವನ್ನು ತಣಿಸುತ್ತಾ, ಅವರ ಉತ್ಸಾಹವನ್ನು ಪ್ರಚೋದಿಸಬೇಕು.

ತರಗತಿಯಲ್ಲಿ ಕುಳಿತ ನಂತರ 1. ನಾವು ನೋಡಿದ ಮರಗಳಲ್ಲಿ ಅತಿ ಎತ್ತರವಾದ ಮರ ಯಾವುದು? 2. ಯಾವ ಗಿಡದಲ್ಲಿ ಮುಳ್ಳುಗಳಿದ್ದವು? 3. ಯಾವುದರ ಹೂವು ಕೆಂಪು ಬಣ್ಣದ್ದಾಗಿತ್ತು? ಹೀಗೆ ಸಂಬಂಧ ಪಟ್ಟ ಯಾವುದಾದರೂ 10 ಪ್ರಶ್ನೆಗಳನ್ನು ಅವರ ತರಗತಿ ಅಥವಾ ಪಠ್ಯಕ್ರಮಕ್ಕೆ ಅನುಗುಣವಾಗಿ ನೀಡಿದರೆ ವಿದ್ಯಾರ್ಥಿಯು ಕೇವಲ ನೋಡುವುದಿಲ್ಲ ದೃಷ್ಟಿಸುತ್ತಾನೆ ಅರ್ಥಾತ್ ನೋಡಿದ್ದನ್ನು ಮನನ ಮಾಡಿಕೊಳ್ಳುತ್ತಾನೆ. ಕಲಿಕೆ ರೋಚಕವೂ, ಶಾಶ್ವತವೂ ಆಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT