ಗುರುವಾರ , ಜೂನ್ 24, 2021
22 °C

ಮಕ್ಕಳಲ್ಲಿ ಓದಿನ ಅಭ್ಯಾಸ ಬೆಳೆಸುವುದು ಹೇಗೆ?

ಸಿದ್ಧಾಂತ್‌ ಎಂ.ಜೆ. Updated:

ಅಕ್ಷರ ಗಾತ್ರ : | |

Prajavani

ಕಲಿಕೆಯೊಂದಿಗೆ ಓದು ಕೂಡ ಜೊತೆಯಲ್ಲೇ ಸಾಗಬೇಕು. ನಿಮ್ಮ ಮಗು ಕಲಿಕೆಯನ್ನು ಬದುಕಿನ ಅವಿಭಾಜ್ಯ ಅಂಗ ಎಂಬ ರೀತಿಯಲ್ಲಿ ತೊಡಗಿಸಿಕೊಳ್ಳಲು ಚಿಕ್ಕಂದಿನಿಂದಲೇ ಓದುವ ಅಭ್ಯಾಸ ಬೆಳೆಸಿ.

ಪ್ರಸಕ್ತ ಚಿಕ್ಕ ಮಕ್ಕಳೂ ಕೂಡ ಸ್ಮಾರ್ಟ್‌ ಫೋನ್‌ ಬಳಸುತ್ತ, ಇಂಟರ್‌ನೆಟ್‌ನಲ್ಲಿ ಗೇಮ್ಸ್‌ ಮತ್ತಿತರ ಮನರಂಜನೆಯಲ್ಲಿ ಮುಳುಗುವ ಅಭ್ಯಾಸ ಬೆಳೆಸಿಕೊಂಡಿರುವಾಗ ಈ ಓದು ಎನ್ನುವುದು ಮರೆತೇಹೋಗಿದೆ ಎನ್ನಬಹುದು. ಆದರೆ ಮಕ್ಕಳು ಯಾವುದೇ ತಪ್ಪಿಲ್ಲದೇ ಚೆನ್ನಾಗಿ ಹಾಗೂ ವೇಗವಾಗಿ ಓದುವುದನ್ನು ಆರಂಭದಲ್ಲೇ ರೂಢಿಸಿಕೊಂಡರೆ ಮುಂದೆ ಅವರ ವಿದ್ಯಾಭ್ಯಾಸ ಯಾವುದೇ ಅಡೆತಡೆಯಿಲ್ಲದೇ ಸಾಗುವುದರಲ್ಲಿ ಸಂಶಯವಿಲ್ಲ. ತರಗತಿಗಳಲ್ಲಿ, ಪರೀಕ್ಷೆಯಲ್ಲಿ ಕೂಡ ಅಂತಹ ಮಕ್ಕಳು ಹೆಚ್ಚಿನ ಸಾಮರ್ಥ್ಯ ತೋರಿಸಿ, ಸಾಧನೆ ಮಾಡಬಹುದು.

ಮಕ್ಕಳಲ್ಲಿ ಓದುವ ಹವ್ಯಾಸ ಬೆಳೆಸಬೇಕಾದರೆ ಅದರಲ್ಲಿ ಪೋಷಕರ ಪಾತ್ರ ಅತ್ಯಂತ ಮಹತ್ವದ್ದು. ಪೋಷಕರೂ ಕೂಡ ಮಕ್ಕಳ ಪುಸ್ತಕ ಪ್ರೇಮ ಬೆಳೆಸಲು ಪೂರಕವಾಗಿ ಸ್ಪಂದಿಸಬೇಕು. ಅಂದರೆ ಉತ್ತಮವಾದ ಓದಿಗೆ ಎಲ್ಲಾ ರೀತಿಯ ಅನುಕೂಲಕರ ವಾತಾವರಣ ಕಲ್ಪಿಸಿಕೊಡಬೇಕು. ನಿಮ್ಮ ಮಕ್ಕಳಿಗೆ ಏನಾದರೂ ಉಡುಗೊರೆ ಕೊಡುವ ಅಭ್ಯಾಸ ಇಟ್ಟುಕೊಂಡಿದ್ದರೆ, ಪುಸ್ತಕವನ್ನೇ ಕೊಡಿ. ಮಕ್ಕಳೂ ಕೂಡ ಓದಿನ ಮೂಲಕವೇ ಸಂಪೂರ್ಣವಾದ ಓದು– ಬರಹದ ಕೌಶಲ ಮಾತ್ರವಲ್ಲ, ಕ್ರಿಯಾಶೀಲ ಯೋಚನಾ ವಿಧಾನವನ್ನು ಬೆಳೆಸಿಕೊಳ್ಳುತ್ತಾರೆ ಎನ್ನುತ್ತವೆ ಈ ನಿಟ್ಟಿನಲ್ಲಿ ನಡೆದ ಹಲವು ಅಧ್ಯಯನಗಳು.

ಹಾಗಾದರೆ ಇಂತಹ ಓದಿನ ರೀತಿಯನ್ನು ಯಾವ ರೀತಿ ರೂಢಿಸಿಕೊಳ್ಳಬಹುದು ಎಂಬುದಕ್ಕೆ ಇಲ್ಲಿವೆ ಕೆಲವು ಸಲಹೆಗಳು.

ಓದಿಗೆ ಸಮಯ ಮೀಸಲಿಡಿ: ಮಕ್ಕಳಲ್ಲಿ ಓದಿನ ಹವ್ಯಾಸ ಬೆಳೆಸಬೇಕಾದರೆ ಪ್ರತಿ ದಿನವೂ ಒಂದಿಷ್ಟು ಸಮಯವನ್ನು ಇದಕ್ಕಾಗಿ ಮೀಸಲಿಡುವುದು ಮುಖ್ಯ. ಉದಾಹರಣೆಗೆ ಪ್ರತಿ ರಾತ್ರಿ ಮಲಗುವುದಕ್ಕಿಂತ ಮುನ್ನ ನೀವು ಮಕ್ಕಳಿಗೆ ಕತೆ ಓದಿ ಹೇಳುವ ಅಭ್ಯಾಸ ಇಟ್ಟುಕೊಳ್ಳಬೇಕು ಅಥವಾ ಮಕ್ಕಳೇ ಓದುವಂತೆ ಉತ್ತೇಜಿಸಿ. ಇಂತಹ ಚಟುವಟಿಕೆಗಳು ನಿಯಮಿತವಾಗಿ ಓದಲು ಮಕ್ಕಳಿಗೆ ಉತ್ಸಾಹ ಮೂಡಿಸುತ್ತವೆ. ಜೊತೆಗೆ ಇದೊಂದು ಮಾಡಿ ಮುಗಿಸಬೇಕಾದ ಕರ್ತವ್ಯವೆಂದು ತಿಳಿಯದೇ ಮನಸ್ಸಿಗೆ ಮುದ ನೀಡುವ ಕ್ರಿಯೆ ಎಂಬ ಭಾವನೆ ಮಕ್ಕಳಲ್ಲಿ ಮೂಡುತ್ತದೆ. ಓದಿ ಹೇಳುವಾಗ ಶಬ್ದಗಳ ಮೇಲೆ ಬೆರಳಿಟ್ಟು ಓದಿದರೆ ಮಕ್ಕಳಿಗೆ ಶಬ್ದಗಳ ಹಾಗೂ ಉಚ್ಚಾರದ ಪರಿಚಯವಾಗಿ, ನೆನಪಿನಲ್ಲಿ ಉಳಿಯುತ್ತದೆ.

ಸಂದರ್ಭೋಚಿತ ಓದಿನ ಕೌಶಲ ಬೆಳೆಸಿ: ಕಠಿಣ ಶಬ್ದಗಳಿಂದಾಗಿ ನಿಮ್ಮ ಮಗು ಧೈರ್ಯವಿಲ್ಲದೇ ಓದುವುದನ್ನೇ ನಿಲ್ಲಿಸಬಹುದು. ಹೆಚ್ಚು ನಿರೀಕ್ಷೆ ಇಟ್ಟುಕೊಳ್ಳದೇ ಮಗುವಿಗೆ ಯಾವ ಶಬ್ದ ಕಷ್ಟವಾಗುತ್ತದೆ ಎಂದು ಕೇಳಿ. ಅದರ ಅರ್ಥ ಬಿಡಿಸಿ ಹೇಳುವುದರ ಜೊತೆ ವಾಕ್ಯವನ್ನು ಸಂದರ್ಭ ಸಹಿತ ವಿವರಿಸಿ.

ಸ್ಕ್ರೀನ್‌ ಸಮಯ ಮಿತಿಗೊಳಿಸಿ: ಇಂದಿನ ದಿನಮಾನ ಹಾಗೂ ಮಕ್ಕಳ ವಯಸ್ಸನ್ನು ತೆಗೆದುಕೊಂಡರೆ ಪುಸ್ತಕದ ಮೇಲೆ ಮನಸ್ಸಿನ ಏಕಾಗ್ರತೆ ಕಷ್ಟವೇ. ಟಿವಿ ಹಾಗೂ ಸ್ಮಾರ್ಟ್‌ಫೋನ್‌ ಮಕ್ಕಳ ಮನಸ್ಸನ್ನು ಸೆಳೆಯುವುದು ಸಹಜ. ನಿಮ್ಮ ಮಗು ಓದಿನ ಹವ್ಯಾಸ ಬೆಳೆಸಿಕೊಳ್ಳಬೇಕು ಎಂಬ ಬಯಕೆ ನಿಮಗಿದ್ದರೆ ಅಂತರ್ಜಾಲ ಮತ್ತು ಟಿವಿ ವೀಕ್ಷಣೆಯಲ್ಲಿ ತೊಡಗುವ ಸಮಯಕ್ಕೆ ಮಿತಿ ಹೇರಿ. ಆಗ ಮನರಂಜನೆಗೋಸ್ಕರ ಮಕ್ಕಳು ಪುಸ್ತಕವನ್ನು ಅವಲಂಬಿಸುತ್ತವೆ.

ಗ್ರಂಥಾಲಯದ ಸದಸ್ಯತ್ವ ಕೊಡಿಸಿ: ವಿವಿಧ ಬಗೆಯ ಸಾಹಿತ್ಯವನ್ನು ಓದಿದರೆ ಅವರಿಗೆ ಓದಿನಲ್ಲಿ ಅಭಿರುಚಿ ಬೆಳೆಯುವುದರಲ್ಲಿ ಸಂಶಯವಿಲ್ಲ. ಇದಕ್ಕಾಗಿ ಮಕ್ಕಳಿಗೆ ಸ್ಥಳೀಯ ಗ್ರಂಥಾಲಯಕ್ಕೆ ಹೋಗಲು ಅನುವು ಮಾಡಿಕೊಡಿ. ಆದರೆ ಅಲ್ಲಿ ಮಕ್ಕಳ ಪುಸ್ತಕಗಳು ಹೆಚ್ಚಿನ ಸಂಖ್ಯೆಯಲ್ಲಿ ಇರುವುದರ ಬಗ್ಗೆ ಖಚಿತಪಡಿಸಿಕೊಳ್ಳಿ. ಇದಲ್ಲದೇ ಕೆಲವೊಂದು ಗ್ರಂಥಾಲಯಗಳು ಮಕ್ಕಳಿಗೆ ಡ್ರಾಯಿಂಗ್‌ ಸ್ಪರ್ಧೆ, ಕ್ವಿಜ್‌, ವಿವಿಧ ಕಾರ್ಯಾಗಾರಗಳನ್ನು ನಡೆಸುತ್ತವೆ.

ಮಗುವಿನ ವಯಸ್ಸಿಗೆ ಅನುಗುಣವಾಗಿ ಪುಸ್ತಕದ ಆಯ್ಕೆ ಇರಲಿ: ಮಗುವಿನ ವಯಸ್ಸು ಮತ್ತು ಓದಿನ ಮಟ್ಟಕ್ಕೆ ಸರಿಯಾಗಿ ಪುಸ್ತಕಗಳ ಆಯ್ಕೆ ಮಾಡಿ. ಕೆಲವು ಮಕ್ಕಳು ತಮ್ಮ ಓದಿನ ಮಟ್ಟಕ್ಕಿಂತ ಕಡಿಮೆಯಿರುವ ಪುಸ್ತಕಗಳನ್ನು ಓದಿ ಬಹು ಬೇಗ ಬೇಸರವಾಗಿ ಅರ್ಧಕ್ಕೇ ನಿಲ್ಲಿಸಿಬಿಡುತ್ತವೆ ಅಥವಾ ಹೆಚ್ಚಿನ ಮಟ್ಟದ ಪುಸ್ತಕ ಓದಲು ಹೋಗಿ ಕಠಿಣ ಶಬ್ದ, ವಾಕ್ಯ ರಚನೆಗೆ ಅಂಜಿ ಅದರಿಂದ ದೂರ ಸರಿಯಬಹುದು.

ಅನ್ವೇಷಣೆಗೆ ಹುರಿದುಂಬಿಸಿ: ಈಗಂತೂ ವಿವಿಧ ಬಗೆಯ ಮಕ್ಕಳ ಪುಸ್ತಕಗಳು ಲಭ್ಯ. ಕಥೆ, ಕವನ, ಕಾದಂಬರಿ, ಚಿತ್ರಗಳಿರುವ ಪುಸ್ತಕಗಳು ಮಕ್ಕಳನ್ನು ಆಕರ್ಷಿಸುತ್ತವೆ. ಅವರ ವಯಸ್ಸಿಗೆ ಅನುಗುಣವಾಗಿ ಅಂತಹ ಪುಸ್ತಕಗಳನ್ನು ಆಯ್ಕೆ ಮಾಡಲು ಅವಕಾಶ ಕೊಡಿ.

ನೀವೇ ಮಾದರಿಯಾಗಿ: ಬಿಡುವಿನ ಸಮಯದಲ್ಲಿ ಅಂತರ್ಜಾಲದಲ್ಲಿ ಹುಡುಕಾಟ ನಡೆಸುವ ಬದಲು ಪುಸ್ತಕ ಕೈಗೆತ್ತಿಕೊಂಡು ನಿಮ್ಮ ಮಗುವಿಗೆ ಮಾದರಿಯಾಗಿ. ಮಗು ಕೂಡ ನಿಮ್ಮನ್ನು ಅನುಸರಿಸುತ್ತದೆ ಎಂಬುದನ್ನು ನೆನಪಿಡಿ.

ಒತ್ತಾಯ ಬೇಡ: ಓದುವಂತೆ ಬಲವಂತ ಮಾಡಬೇಡಿ. ಬದಲಾಗಿ ವಿರಾಮದಲ್ಲಿ ಪುಸ್ತಕವನ್ನು ಓದಿ ಖುಷಿಪಡುವ ಅಭ್ಯಾಸ ಬೆಳೆಸಿ. ಅದೊಂದು ತಮಾಷೆ ಎಂಬಂತೆ ಬಿಂಬಿಸಿ.

ಸೃಜನಶೀಲತೆ ಇರಲಿ
ಓದುವುದರ ಜೊತೆಗೆ ನಿಮ್ಮ ಮಗುವಿನ ಓದಿನ ವೇಗ ಹಾಗೂ ಗ್ರಹಿಕೆಯನ್ನು ಸುಧಾರಿಸುವುದೂ ಅಷ್ಟೇ ಮುಖ್ಯ. ವರ್ಡ್‌ ಗೇಮ್‌ ಆಡಿ. ಇದರಿಂದ ಶಬ್ದ ಭಂಡಾರ ಜಾಸ್ತಿಯಾಗುತ್ತದೆ. ಓದಿದ ಪುಸ್ತಕದ ಬಗ್ಗೆ ಚರ್ಚೆ ಮಾಡಿ. ಮಗು ತನ್ನದೇ ಆದ ಕತೆ ಹೆಣೆಯಲು ಉತ್ತೇಜನ ನೀಡಿ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು