ಶನಿವಾರ, ನವೆಂಬರ್ 28, 2020
18 °C
ಕೋವಿಡ್‌ ಕಾಲಘಟ್ಟದಲ್ಲಿ ಮುಕ್ತ ವಿ.ವಿಯಲ್ಲಿ ನಡೆದ ನೂತನ ಪರೀಕ್ಷಾ ವಿಧಾನದ ಪ್ರಯೋಗ

PV Web Exclusive | ಕೆಎಸ್‌ಒಯು: ‘ತೆರೆದ ಪುಸ್ತಕ ಪರೀಕ್ಷೆ’ ಯಶಸ್ವಿ

ಎಸ್‌. ಸಂಪತ್‌ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕೋವಿಡ್‌–19ರ ಕಾಲಘಟ್ಟದಲ್ಲಿ ರಾಜ್ಯ ಮತ್ತು ದೇಶದ ಬಹುತೇಕ ವಿಶ್ವವಿದ್ಯಾಲಯಗಳು ಪ್ರಥಮ, ದ್ವಿತೀಯ ವರ್ಷದ ಪದವಿ ಮತ್ತು ಪ್ರಥಮ ವರ್ಷದ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಅಂತಿಮ ಪರೀಕ್ಷೆಗಳನ್ನು ನಡೆಸದೆ ಉತ್ತೀರ್ಣಗೊಳಿಸಿವೆ. ಆದರೆ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ (ಕೆಎಸ್‌ಒಯು) ಇದಕ್ಕೆ ಕಂಡುಕೊಂಡಿದ್ದು ಭಿನ್ನ ಮಾರ್ಗ. ಕೋವಿಡ್‌ ನಡುವೆಯೂ ಕೆಎಸ್‌ಒಯು ಪ್ರಥಮ, ದ್ವಿತೀಯ ವರ್ಷದ ಪದವಿ ಮತ್ತು ಪ್ರಥಮ ವರ್ಷದ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಯಶಸ್ವಿಯಾಗಿ ವಾರ್ಷಿಕ ಪರೀಕ್ಷೆಗಳನ್ನು ನಡೆಸಿ ‘ಸೈ’ ಎನಿಸಿಕೊಂಡಿದೆ.

ಪದವಿ ವಿದ್ಯಾರ್ಥಿಗಳ ಪರೀಕ್ಷೆಗಾಗಿ ಕೆಎಸ್‌ಒಯು ಅಳವಡಿಸಿಕೊಂಡಿದ್ದು ‘ತೆರೆದ ಪುಸ್ತಕ ಪರೀಕ್ಷೆ’ ವಿಧಾನವನ್ನು. ವಿಶ್ವವಿದ್ಯಾಲಯದ ಪ್ರಥಮ ಮತ್ತು ದ್ವಿತೀಯ ವರ್ಷದ ಬಿ.ಎ, ಬಿ.ಕಾಂ, ಪ್ರಥಮ ವರ್ಷದ ಎಂ.ಎ, ಎಂ.ಕಾಂ, ಪ್ರಥಮ ಮತ್ತು ತೃತೀಯ ಸೆಮಿಸ್ಟರ್‌ನ ಎಂ.ಎಸ್ಸಿ, ದ್ವಿತೀಯ ಸೆಮಿಸ್ಟರ್‌ನ ಎಂ.ಬಿ.ಎ ಕೋರ್ಸ್‌ನ ವಿದ್ಯಾರ್ಥಿಗಳು ‘ತೆರೆದ ಪುಸ್ತಕ ಪರೀಕ್ಷೆ’ ವಿಧಾನದ ಮೂಲಕ ಪರೀಕ್ಷೆಗಳನ್ನು ಇತ್ತೀಚೆಗಷ್ಟೇ ಬರೆದು ಮುಗಿಸಿದ್ದಾರೆ.

ಕೋವಿಡ್‌ ಕಾಲಘಟ್ಟದಲ್ಲಿ ಕೆಎಸ್‌ಒಯು ತೆಗೆದುಕೊಂಡ ಈ ಮಹತ್ವದ ನಿರ್ಧಾರ ಮತ್ತು ಅದನ್ನು ಯಶಸ್ವಿಗೊಳಿಸಿದ್ದು ಹೇಗೆ ಎಂಬುದರ ಕುರಿತು ವಿಶ್ವವಿದ್ಯಾಲಯದ ಕುಲಪತಿ ಡಾ. ಎಸ್‌. ವಿದ್ಯಾಶಂಕರ್‌ ಅವರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ್ದಾರೆ. ಅವರ ಸಂದರ್ಶನದ ವಿವರ ಇಲ್ಲಿದೆ.

* ಪ್ರಶ್ನೆ: ‘ತೆರೆದ ಪುಸ್ತಕ ಪರೀಕ್ಷೆ’ ವಿಧಾನ ಅಳವಡಿಸಿಕೊಂಡು ಪರೀಕ್ಷೆ ನಡೆಸಲು ಕಾರಣವೇನು?

ವಿದ್ಯಾಶಂಕರ್‌ : ಕೋವಿಡ್‌ ಸಂದರ್ಭದಲ್ಲಿ ಪರೀಕ್ಷೆ ನಡೆಸುವುದು ಯಾವುದೇ ವಿಶ್ವವಿದ್ಯಾಲಯ, ಶೈಕ್ಷಣಿಕ ಮಂಡಳಿಗಳಿಗೆ ಸವಾಲಿನ ಕೆಲಸ. ಪರೀಕ್ಷೆ ಇಲ್ಲದೆ ವಿದ್ಯಾರ್ಥಿಗಳನ್ನು ಮುಂದಿನ ವರ್ಷಕ್ಕೆ ತೇರ್ಗಡೆಗೊಳಿಸುವುದು ಮುಕ್ತ ಮತ್ತು ದೂರ ಶಿಕ್ಷಣ ನೀಡುವ ಸಂಸ್ಥೆಗಳಿಗೆ ಕಷ್ಟ. ಹಾಗಾಗಿ ವಿಶ್ವವಿದ್ಯಾಲಯ, ಇದಕ್ಕೆ ಪರಿಹಾರಗಳನ್ನು ಸೂಚಿಸಲು ಸಮಿತಿಯೊಂದನ್ನು ರಚಿಸಿತ್ತು. ಆ ಸಮಿತಿಯು ‘ತೆರೆದ ಪುಸ್ತಕ ಪರೀಕ್ಷೆ’ ನಡೆಸುವ ಕುರಿತು ಶಿಫಾರಸು ಮಾಡಿತ್ತು. ವಿ.ವಿ ಈ ನೂತನ ವಿಧಾನವನ್ನು ಅಳವಡಿಸಿಕೊಂಡಿತು.

* ಆಂತರಿಕ ಮೌಲ್ಯಮಾಪನದಲ್ಲಿ ವಿದ್ಯಾರ್ಥಿಗಳು ಪಡೆದ ಅಂಕಗಳನ್ನು ಪರಿಗಣಿಸಬಹುದಿತ್ತಲ್ಲ?

ಸಾಮಾನ್ಯವಾಗಿ ರೆಗ್ಯುಲರ್‌ ಪದವಿ, ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಪ್ರತಿ ವಿ.ವಿಗಳು ತನ್ನದೇ ಆದ ವಿಭಿನ್ನ ರೀತಿಯ ಆಂತರಿಕ ಮೌಲ್ಯಮಾಪನ ವಿಧಾನಗಳನ್ನು ಅಳವಡಿಸಿಕೊಂಡಿರುತ್ತವೆ. ಕೆಲವೆಡೆ ಘಟಕ ಪರೀಕ್ಷೆಗಳು ನಡೆಯುತ್ತವೆ, ಇನ್ನೂ ಕೆಲವೆಡೆ ಕ್ಷೇತ್ರಕಾರ್ಯ, ಸಂದರ್ಶನ, ಅಸೈನ್‌ಮೆಂಟ್‌, ಉಪನ್ಯಾಸಗಳ ಕಾರ್ಯಗಳ ಮೂಲಕ ಪ್ರತಿ ವಿದ್ಯಾರ್ಥಿಯ ಶೈಕ್ಷಣಿಕ ಪ್ರಗತಿಯನ್ನು ಗುರುತಿಸಲಾಗುತ್ತದೆ. ಆದರೆ ಮುಕ್ತ ಮತ್ತು ದೂರ ಶಿಕ್ಷಣ ನೀಡುವ ಸಂಸ್ಥೆಗಳಿಗೆ ಅದು ಆಗುವುದಿಲ್ಲ. ಇಲ್ಲಿ ಶೇ 80ರಷ್ಟು ಅಂಕಗಳು ಪರೀಕ್ಷೆಗೆ ಮತ್ತು ಶೇ 20ರಷ್ಟು ಅಂಕಗಳನ್ನು ಅಸೈನ್‌ಮೆಂಟ್‌ಗೆ ನಿಗದಿ ಮಾಡಲಾಗಿರುತ್ತದೆ. ಎಷ್ಟೋ ವಿದ್ಯಾರ್ಥಿಗಳು ಅಸೈನ್‌ಮೆಂಟ್‌ ಅನ್ನು ವಿ.ವಿಗಳಿಗೆ ಕಳುಹಿಸಿಯೇ ಇರುವುದಿಲ್ಲ. ಹೀಗಿರುವಾಗ ಅವರ ಆಂತರಿಕ ಮೌಲ್ಯಮಾಪನ ಸಾಧ್ಯವಾಗದು. ಹಾಗಾಗಿಯೇ ನಮ್ಮ ವಿದ್ಯಾರ್ಥಿಗಳಿಗೆ ತೆರೆದ ಪುಸ್ತಕ ಪರೀಕ್ಷಾ ವಿಧಾನವನ್ನು ಅಳವಡಿಸಿಕೊಳ್ಳುವುದು ಸೂಕ್ತವೆಂದು ಕಂಡು ಬಂದಿತು.

* ತೆರೆದ ಪುಸ್ತಕ ವಿಧಾನಕ್ಕೆ ಆಕ್ಷೇಪಣೆಗಳೇನು ಬರಲಿಲ್ಲವಾ?

ರಾಜ್ಯ ಮತ್ತು ದೇಶದಲ್ಲಿ ಪದವಿ ಹಂತದ ಕೋರ್ಸ್‌ಗಳಲ್ಲಿ ಈ ರೀತಿಯ ಪ್ರಯೋಗ ಆಗಿರಲಿಲ್ಲ. ಈ ಕುರಿತು ಈಗಲೂ ಅಲ್ಲಲ್ಲಿ ಚರ್ಚೆಗಳು ನಡೆಯುತ್ತಿವೆ. ಆದರೆ ಅದರ ಅಳವಡಿಕೆ ಬಗ್ಗೆ ಯಾವುದೇ ಘಟ್ಟಿ ನಿರ್ಧಾರಗಳು ಇಲ್ಲಿಯವರೆಗೂ ಆಗಿಲ್ಲ. ಆದರೆ ಕೆಎಸ್‌ಒಯುಗೆ ಈ ಕುರಿತು ನಿರ್ಧಾರ ತೆಗೆದುಕೊಳ್ಳಲು ಕೋವಿಡ್‌ ಕಾಲಘಟ್ಟ ಅವಕಾಶ ಮಾಡಿಕೊಟ್ಟಿತು. ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಮತ್ತು ಶಿಕ್ಷಣ ಸಚಿವಾಲಯವು ಯಾವುದಾದರೂ ಸಮರ್ಪಕವಾದ ವಿಧಾನ ಅಳವಡಿಸಿಕೊಂಡು ಪ್ರಥಮ ಮತ್ತು ದ್ವಿತೀಯ ವರ್ಷದ ಪದವಿ ಮತ್ತು ಪ್ರಥಮ ವರ್ಷದ ಸ್ನಾತಕೋತ್ತರ ವಿದ್ಯಾರ್ಥಿಗಳನ್ನು ಉತ್ತೀರ್ಣಗೊಳಿಸುವಂತೆ ನಿರ್ದೇಶಿದ್ದವು. ಕೆಎಸ್‌ಒಯು ಕೋವಿಡ್‌–19ರ ಸಾಂಕ್ರಾಮಿಕದ ಮಾರ್ಗಸೂಚಿ, ವಿದ್ಯಾರ್ಥಿಗಳ ಹಿತ ಮತ್ತು ಶೈಕ್ಷಣಿಕ ಗುಣಮಟ್ಟವನ್ನು ಗಮನದಲ್ಲಿಟ್ಟುಕೊಂಡು ತೆರೆದ ಪುಸ್ತಕ ಪರೀಕ್ಷೆ ನಡೆಸಲು ನಿರ್ಧರಿಸಿ, ತೀರ್ಮಾನ ತೆಗೆದುಕೊಂಡಿತು. ಇದಕ್ಕೆ ಯಾರಿಂದಲೂ ಆಕ್ಷೇಪಣೆಗಳು ಬರಲಿಲ್ಲ. ಜೀವನದಲ್ಲಿ ಮೊದಲ ಬಾರಿಗೆ ಈ ರೀತಿಯ ಅವಕಾಶ ದೊರೆತಿದ್ದರಿಂದ ವಿದ್ಯಾರ್ಥಿಗಳು ಮುಕ್ತ ಮನಸ್ಸಿನಿಂದಲೇ ಸ್ವೀಕರಿಸಿ ಪರೀಕ್ಷೆಗಳನ್ನು ಯಶಸ್ವಿಯಾಗಿ ಬರೆದಿದ್ದಾರೆ.

* ತೆರೆದ ಪುಸ್ತಕ ಪರೀಕ್ಷೆ ಯಶಸ್ವಿಯಾಯಿತಾ? ಭವಿಷ್ಯದಲ್ಲೂ ವಿ.ವಿ ಅದನ್ನು ಮುಂದುವರಿಸುತ್ತಾ?

ತೆರೆದ ಪುಸ್ತಕ ಪರೀಕ್ಷೆ ಬರೆಯುವುದಕ್ಕಾಗಿ ವಿದ್ಯಾರ್ಥಿಗಳು ಶುಲ್ಕ ಭರಿಸಿ ಸಜ್ಜಾದರು. ಕೆಎಸ್‌ಒಯು ವೆಬ್‌ಸೈಟ್‌ನಲ್ಲಿ ಎಲ್ಲ ವಿಷಯಗಳ ಪ್ರಶ್ನೆ ಪತ್ರಿಕೆಗಳನ್ನು ನಿಗದಿತ ದಿನದಂದು ಪ್ರಕಟಿಸಲಾಯಿತು. ಈ ಎಲ್ಲ ಪತ್ರಿಕೆಗಳಿಗೆ ಉತ್ತರ ಬರೆದು ಅದನ್ನು ಏಳು ದಿನದೊಳಗೆ ವಿ.ವಿಗೆ ಅಂಚೆಪೋಸ್ಟ್‌ ಅಥವಾ ರಿಜಿಸ್ಟರ್ಡ್‌ ಪೋಸ್ಟ್‌ ಕಳುಹಿಸಬೇಕು ಎಂದು ಸೂಚಿಸಲಾಗಿತ್ತು. ಬಹುತೇಕ ವಿದ್ಯಾರ್ಥಿಗಳು ಇದನ್ನು ಯಶಸ್ವಿಯಾಗಿ ಮಾಡಿದ್ದಾರೆ. ಎಂಥ ಸಾಂಕ್ರಾಮಿಕ ಸಂದರ್ಭದಲ್ಲೂ, ಹೊಸ ವಿಧಾನಗಳನ್ನು ಕಂಡುಕೊಂಡರೆ ಪರೀಕ್ಷೆ ನಡೆಸಲು ತೊಂದರೆ ಆಗುವುದಿಲ್ಲ ಎಂಬುದನ್ನು ವಿ.ವಿ ಈ ಮೂಲಕ ಮಾಡಿ ತೋರಿಸಿದೆ.

ಜಾಗತಿಕವಾಗಿ ಕೆಲ ದೇಶಗಳು ತೆರೆದ ಪುಸ್ತಕ ಪರೀಕ್ಷಾ ವಿಧಾನವನ್ನು ಅಳವಡಿಸಿಕೊಂಡಿವೆ. ಆದರೆ ಭಾರತದಲ್ಲಿ ಅದಿನ್ನು ಅಷ್ಟಾಗಿ ಬಳಕೆಗೆ ಬಂದಿಲ್ಲ. ಕೋವಿಡ್‌ ಕಾರಣದಿಂದ ಕೆಎಸ್‌ಒಯು ಒಂದು ಬಾರಿಗೆಂದು ವಿದ್ಯಾರ್ಥಿಗಳಿಗೆ ಈ ಅವಕಾಶ ಮಾಡಿಕೊಟ್ಟಿತು. ಒಂದು ವೇಳೆ ಯುಜಿಸಿ, ಶಿಕ್ಷಣ ಇಲಾಖೆ ಏನಾದರೂ ಭವಿಷ್ಯದಲ್ಲಿ ತೆರೆದ ಪುಸ್ತಕ ಪರೀಕ್ಷೆಗೆ ಮಾನ್ಯತೆ ನೀಡಿದರೆ, ಆಗ ಕೆಎಸ್‌ಒಯು ಈ ಕುರಿತು ಮುಕ್ತವಾಗಿ ನಿರ್ಧಾರ ತೆಗೆದುಕೊಳ್ಳುತ್ತದೆ.

* ಎಲ್ಲ ವಿದ್ಯಾರ್ಥಿಗಳು ಪುಸ್ತಕಗಳನ್ನು ನೋಡಿಕೊಂಡೇ ಉತ್ತರ ಬರೆದಿರುತ್ತಾರೆ. ಹೀಗಿರುವಾಗ ಈ ಪರೀಕ್ಷೆಯಲ್ಲಿ ಅಂಕಗಳನ್ನು ಹೇಗೆ ನೀಡಲಾಗುತ್ತದೆ?

ವರ್ಷವೆಲ್ಲ ಓದಿದ ವಿದ್ಯಾರ್ಥಿಗಳ ಭವಿಷ್ಯವನ್ನು ಮೂರು ಗಂಟೆಗಳ ಪರೀಕ್ಷೆಗಳು ನಿರ್ಧರಿಸುವುದನ್ನು ನಾವೆಲ್ಲ ನೋಡಿದ್ದೇವೆ. ಆ ಪರೀಕ್ಷೆಗಳ ವೇಳೆ ನಕಲು ಮಾಡುವಂತಿಲ್ಲ, ಮಾತನಾಡುವಂತಿಲ್ಲ. ನಕಲು ಮಾಡಿ ಸಿಕ್ಕಿಬಿದ್ದರಂತೂ ಅವರ ಶೈಕ್ಷಣಿಕ ಜೀವನದಲ್ಲಿ ಕಪ್ಪುಚುಕ್ಕೆ ಉಳಿದು ಬಿಡುತ್ತದೆ. ಆದರೆ ತೆರೆದ ಪುಸ್ತಕ ಪರೀಕ್ಷಾ ವಿಧಾನ ಹಾಗಲ್ಲ. ಪುಸ್ತಕಗಳನ್ನು ನೋಡಿ ಉತ್ತರ ಬರೆಯಬಹುದು. ಇದು ಸುಲಭ ಮತ್ತು ಸರಳ ಎನಿಸಬಹುದು. ಆದರೆ ಇದು ಅತ್ಯಂತ ಕಠಿಣ ಸ್ವರೂಪದ ಪರೀಕ್ಷೆ. ಕ್ಲಿಷ್ಟಕರವಾದ ಪ್ರಶ್ನೆಗಳನ್ನು ಹೊಂದಿರುತ್ತದೆ. ಈ ಪ್ರಶ್ನೆಗಳು ವಿಮರ್ಶಾತ್ಮಕ, ವಿಶ್ಲೇಷಣಾತ್ಮಕ, ಪರಿಹಾರಾತ್ಮಕ ಉತ್ತರಗಳನ್ನು ಬಯಸುತ್ತವೆ. 

ಪುಸ್ತಕಗಳನ್ನು ಪೂರ್ಣ ಪ್ರಮಾಣದಲ್ಲಿ ಓದಿ, ಅರ್ಥೈಸಿಕೊಂಡಿದ್ದರಷ್ಟೇ ಸಮರ್ಪಕವಾಗಿ ಉತ್ತರ ಬರೆಯಲು ಸಾಧ್ಯ. ಎಷ್ಟೇ ಪುಸ್ತಕಗಳನ್ನು ನೋಡಿದರೂ ವಿಮರ್ಶೆ ಮತ್ತು ವಿಶ್ಲೇಷಣೆಗಳನ್ನು ಅರ್ಥಪೂರ್ಣವಾಗಿ ಮಾಡಬೇಕಾಗಿರುತ್ತದೆ. ತಮ್ಮ ಅಭಿಪ್ರಾಯ, ವಾದ ಮತ್ತು ನಿಲುವನ್ನು ಸಮರ್ಥಿಸಿಕೊಳ್ಳುವ ರೀತಿಯಲ್ಲಿ ಉತ್ತರ ಬರೆಯಬೇಕು. ಪ್ರತಿ ವಿದ್ಯಾರ್ಥಿಯ ಗ್ರಹಿಕೆ ಮತ್ತು ವಿಮರ್ಶಾ ಸಾಮರ್ಥ್ಯ ವಿಭಿನ್ನವಾಗಿರುತ್ತದೆ. ಇದರ ಆಧಾರದ ಮೇಲೆ ವಿದ್ಯಾರ್ಥಿಗಳಿಗೆ ಅಂಕಗಳು ದೊರೆಯುತ್ತವೆ. ತೆರೆದ ಪುಸ್ತಕ ವಿಧಾನದಲ್ಲಿ ಪರೀಕ್ಷೆ ಬರೆಯುತ್ತಿದ್ದ ಕೆಲ ವಿದ್ಯಾರ್ಥಿಗಳು ವಿಶ್ವವಿದ್ಯಾಲಯಕ್ಕೆ ಕರೆ ಮಾಡಿ ನಮಗೆ ಉತ್ತರಗಳನ್ನು ಹುಡುಕಿ, ವಿಶ್ಲೇಷಿಸಿ ಬರೆಯಲು ಸಮಯ ಸಾಕಾಗುತ್ತಿಲ್ಲ..... ಇನ್ನೊಂದು ವಾರ ಕಾಲಾವಕಾಶಕೊಡಿ ಎಂದು ಮನವಿ ಕೂಡ ಮಾಡಿದ್ದಾರೆ. ಆದರೆ ಅದಕ್ಕೆ ವಿ.ವಿ ಅವಕಾಶ ನೀಡಿಲ್ಲ. ಮೌಲ್ಯಮಾಪನ ಪ್ರಕ್ರಿಯೆ ಚಾಲ್ತಿಯಲ್ಲಿದ್ದು, ಆದಷ್ಟು ಬೇಗ ಫಲಿತಾಂಶವನ್ನು ವಿ.ವಿ ನೀಡಲಿದೆ.

* ಪರೀಕ್ಷೆ ಬರೆಯುವ ಅವಕಾಶ ಕಳೆದುಕೊಂಡವರಿಗೆ ಇನ್ನೊಂದು ಅವಕಾಶ ಇದೆಯಾ?

ಸಪ್ಲಿಮೆಂಟರಿ ಪರೀಕ್ಷೆ ಇರುತ್ತದೆ. ಅದರಲ್ಲಿ ಪರೀಕ್ಷೆ ಬರೆದು ತೇರ್ಗಡೆ ಆಗಬಹುದು. ಆದರೆ ಅದಕ್ಕೆ ತೆರೆದ ಪುಸ್ತಕ ಪರೀಕ್ಷಾ ಮಾದರಿ ಇರುವುದಿಲ್ಲ. ಅದು ಹಳೆಯ ಪರೀಕ್ಷಾ ವಿಧಾನದಲ್ಲಿಯೇ ನಡೆಯುತ್ತದೆ.

* ಕೆಎಸ್‌ಒಯು ಮುಂದಿನ ಯೋಜನೆಗಳೇನು?

ಎಲ್ಲ ಬಗೆಯ ಬಿ.ಎಸ್ಸಿ ಕೋರ್ಸ್‌ಗಳನ್ನು ಆರಂಭಿಸುತ್ತೇವೆ. ಮುಕ್ತ ಮತ್ತು ದೂರ ಶಿಕ್ಷಣದ ಜತೆಗೆ ಆನ್‌ಲೈನ್‌ ಪದವಿ ಕೋರ್ಸ್‌ಗಳಿಗೂ ವಿ.ವಿ ಚಾಲನೆ ನೀಡಲಿದೆ. ಅದಕ್ಕಾಗಿ ಯುಜಿಸಿಗೆ ಮನವಿ ಸಲ್ಲಿಸಿದ್ದೇವೆ. 2021ರ ಫೆಬ್ರುವರಿಯಿಂದ ಅನುಮತಿ ಸಿಗಬಹುದು. ಯುಜಿಸಿಯ ಎಲ್ಲ ನಿಯಮಗಳನ್ನು ವಿ.ವಿ ಪಾಲಿಸುತ್ತಿರುವ ಕಾರಣ ಅನುಮತಿ ದೊರೆಯುತ್ತದೆ ಎಂಬ ನಿರೀಕ್ಷೆ ಇದೆ. ಪ್ರಮುಖವಾದ ಪದವಿ ಮತ್ತು ಸ್ನಾತಕೋತ್ತರ ಪದವಿ ಕೋರ್ಸ್‌ಗಳನ್ನು ಮಾತ್ರ ಆನ್‌ಲೈನ್‌ನಲ್ಲಿ ಆರಂಭಿಸುತ್ತೇವೆ. ಆನ್‌ಲೈನ್‌ ಕೋರ್ಸ್‌ಗಳಲ್ಲಿ ವಿದ್ಯಾರ್ಥಿಗಳು ತರಗತಿಗಳಿಗೆ ಬರುವಂತಿಲ್ಲ. ಅವರಿಗೆ ಅಧ್ಯಯನ ಸಾಮಗ್ರಿಗಳು ಆನ್‌ಲೈನ್ ಮೂಲಕವೇ ದೊರೆಯಲಿವೆ. ಬೋಧಕರ ವಿಡಿಯೊ ಉಪನ್ಯಾಸಗಳು ವಿದ್ಯಾರ್ಥಿಗಳಿಗೆ ಆನ್‌ಲೈನ್ ಮೂಲಕವೇ ಲಭ್ಯವಾಗಲಿವೆ. ಪರೀಕ್ಷೆಗಳೂ ಆನ್‌ಲೈನ್‌ ಮೂಲಕ ನಡೆಯಲಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು