ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯೂಟ್ರಿಷನ್‌ ಕೋರ್ಸ್‌: ವಿದೇಶಗಳಲ್ಲೂ ಬೇಡಿಕೆ

ನಿಮ್ಮ ಪ್ರಶ್ನೆ ನಮ್ಮ ಉತ್ತರ
Last Updated 6 ಆಗಸ್ಟ್ 2019, 19:30 IST
ಅಕ್ಷರ ಗಾತ್ರ

ನಾನು ಪಿಸಿಎಂಬಿ ತೆಗೆದುಕೊಂಡು ದ್ವಿತೀಯ ಪಿಯುಸಿಯಲ್ಲಿ ಓದುತ್ತಿದ್ದೇನೆ. ಮುಂದೆ ಫಾರೆಸ್ಟ್ರಿ ಅಥವಾ ನ್ಯೂಟ್ರಿಷನ್‌ ಕೋರ್ಸ್‌ ಮಾಡಿದರೆ ಅದಕ್ಕೆ ಬೇಡಿಕೆ ಇದೆಯೇ?

ದರ್ಶನ್‌ ಎಸ್‌.ಎನ್‌., ಸರಗೂರು

ಫಾರೆಸ್ಟ್ರಿ ಮತ್ತು ನ್ಯೂಟ್ರಿಷನ್‌ ಎರಡು ಬೇರೆ ಬೇರೆಯಾದ ಕ್ಷೇತ್ರವಾಗಿದ್ದು ಆ ಬಗ್ಗೆ ಪ್ರತ್ಯೇಕವಾಗಿ ನೋಡೋಣ. ಆದರೆ ಅದಕ್ಕಿಂತಲೂ ಮುಂಚೆ ಕೆಲವು ವಿಷಯಗಳನ್ನು ಪರಿಗಣಿಸಬೇಕಾಗುತ್ತದೆ. ಫಾರೆಸ್ಟ್ರಿ ಮತ್ತು ನ್ಯೂಟ್ರಿಷನ್‌ಗಳಂತಹ ಕ್ಷೇತ್ರಗಳನ್ನು ಅವಕಾಶಗಳ ಹಿನ್ನಲೆಗಿಂತ ಆಸಕ್ತಿಯ ಹಿನ್ನೆಲೆಯಲ್ಲಿ ನೋಡಬೇಕಾಗುತ್ತದೆ. ಬೇರೆ ಕ್ಷೇತ್ರಗಳಿಗೆ ಹೋಲಿಸಿದಾಗ ಈ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶಗಳು ಸ್ವಲ್ಪ ಕಡಿಮೆ ಇದ್ದು ಆಸಕ್ತಿ, ಬದ್ಧತೆ ಮತ್ತು ಸ್ವಂತ ಪ್ರಯತ್ನಗಳು ಮುಖ್ಯವಾಗುತ್ತವೆ. ಆದರೆ ಇತ್ತೀಚೆಗೆ ನ್ಯೂಟ್ರಿಷನ್ ಕ್ಷೇತ್ರದಲ್ಲಿ ಹೆಚ್ಚು ಉದ್ಯೋಗಾವಕಾಶಗಳು ಕಂಡುಬರುತ್ತಿವೆ.

ನ್ಯೂಟ್ರಿಷನ್ ಕ್ಷೇತ್ರದಲ್ಲಿ ಕೆಲಸ ಮಾಡಲು ನೀವು ಪಿ.ಯು.ಸಿ. ನಂತರ ಬಿ.ಎಸ್‌ಸಿ. ಇನ್ ಫುಡ್ ಅಂಡ್ ನ್ಯೂಟ್ರಿಷನ್ ಓದಬೇಕಾಗುತ್ತದೆ. ಅದರಲ್ಲೆ ಉನ್ನತ ಶಿಕ್ಷಣಕ್ಕಾಗಿ ಎಂ.ಎಸ್‌ಸಿ. ಇನ್ ನ್ಯೂಟ್ರಿಷನ್ ಮಾಡಬಹುದು. ಓದಿದ ನಂತರ ಉದ್ಯೋಗಾವಕಾಶಗಳು ಬೇರೆ ಬೇರೆ ಕ್ಷೇತ್ರಗಳಲ್ಲಿ ಲಭ್ಯವಿದ್ದು ಸಾಮಾನ್ಯವಾಗಿ ನ್ಯೂಟ್ರಿಷನ್ ಕ್ಲಿನಿಕ್, ಆಸ್ಪತ್ರೆ, ನ್ಯೂಟ್ರಿಷನ್ ಕ್ಷೇತ್ರದಲ್ಲಿ ಕೆಲಸ ಮಾಡುವ ಸರ್ಕಾರೇತರ ಸಂಸ್ಥೆಗಳು, ಕಂಪನಿಗಳು, ಜಿಮ್, ಸಂಶೋಧನ ಸಂಸ್ಥೆಗಳು ಮತ್ತು ಆಹಾರ ಉದ್ಯಮಗಳು ಇತ್ಯಾದಿ. ಈ ಕ್ಷೇತ್ರಗಳಲ್ಲಿ ನ್ಯೂಟ್ರಿಷನ್ ತಜ್ಞರಾಗಿ, ಕೋಚ್ ಆಗಿ, ಸಂಶೋಧಕರಾಗಿ, ಟ್ರೈನರ್ ಮತ್ತು ಕಂಟೆಂಟ್‌ ಡೆವಲಪರ್ ಆಗಿ ಕಾರ್ಯನಿರ್ವಹಿಸಬಹುದು. ಅದಲ್ಲದೆ ನ್ಯೂಟ್ರಿಷನ್ ಕನ್ಸಲ್ಟೆಂಟ್ ಆಗಿ ಸ್ವಂತ ಉದ್ಯಮಿ ಆಗಿಯೂ ಕೆಲಸ ನಿರ್ವಹಿಸಬಹುದು. ವಿದೇಶಗಳಲ್ಲೂ ಕೂಡ ನ್ಯೂಟ್ರಿಷನ್ ಕ್ಷೇತ್ರಕ್ಕೆ ಹೆಚ್ಚು ಬೇಡಿಕೆಯಿದ್ದು, ಅವಕಾಶಗಳನ್ನು ಹುಡುಕಿಕೊಳ್ಳಬಹುದು.

ಫಾರೆಸ್ಟ್ರಿ ಕ್ಷೇತ್ರದಲ್ಲಿ ಕೆಲಸ ಮಾಡಲು ಬಿ.ಎಸ್‌ಸಿ. ಇನ್ ಫಾರೆಸ್ಟ್ರಿ, ಸಸ್ಯಶಾಸ್ತ್ರ ಅಥವಾ ಪ್ರಾಣಿಶಾಸ್ತ್ರದಲ್ಲಿ ಪದವಿ ಓದಬೇಕಾಗುತ್ತದೆ.

ಶಿಕ್ಷಣದ ನಂತರ ಉದ್ಯಾನಗಳು, ಪ್ರಾಣಿ ಸಂಗ್ರಾಲಯ, ವನ್ಯಜೀವಿ ಸಂರಕ್ಷಣ ಸಂಸ್ಥೆ ಮತ್ತು ಇಲಾಖೆಗಳು, ತಮ್ಮದೇ ಆದ ತೋಟಗಳನ್ನು ಹೊಂದಿರುವ ಕಾರ್ಪೊರೇಟ್ ಸಂಸ್ಥೆಗಳು, ವನ್ಯಜೀವಿ ಸಂಶೋಧನಾ ಸಂಸ್ಥೆಗಳು, ಇಂಡಿಯನ್ ಕೌನ್ಸಿಲ್ ಆಫ್ ಫಾರೆಸ್ಟ್ರಿ ರಿಸರ್ಚ್ ಆ್ಯಂಡ್ ಎಜುಕೇಶನ್ (ಐಸಿಎಫ್‌ಆರ್‌ಇ) ಮತ್ತು ಅದರ ಅಂಗಸಂಸ್ಥೆಗಳು, ವನ್ಯಜೀವಿ ಇಲಾಖೆ, ಅರಣ್ಯ ಇಲಾಖೆ, ರಾಷ್ಟ್ರೀಯ ಉದ್ಯಾನಗಳು ಮತ್ತು ಅಭಯಾರಣ್ಯಗಳು, ಅರಣ್ಯ ನರ್ಸರಿಗಳು ಹೀಗೆ ಅನೇಕ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶಗಳು ಇರುತ್ತವೆ. ಈ ಕ್ಷೇತ್ರದಲ್ಲಿ ಫಾರೆಸ್ಟರ್, ಫಾರೆಸ್ಟ್‌ ರೇಂಜ್ ಅಧಿಕಾರಿ, ಉಪನ್ಯಾಸಕರು, ಅರಣ್ಯ ತಂತ್ರಜ್ಞರು, ಅರಣ್ಯ ಅಧಿಕಾರಿ, ಅರಣ್ಯ ಸಿಬ್ಬಂದಿ, ಅರಣ್ಯ ಕನ್ಸಲ್ಟೆಂಟ್ಸ್, ನೈಸರ್ಗಿಕ ಸಂಪನ್ಮೂಲ ತಂತ್ರಜ್ಞರು, ಸಿಲ್ವಿಕಲ್ಚರಿಸ್ಟ್ ಇತ್ಯಾದಿ ಹುದ್ದೆಗಳಲ್ಲಿ ಕೆಲಸ ನಿರ್ವಹಿಸಬಹುದು.

ಈ ಎರಡು ಕ್ಷೇತ್ರಗಳಲ್ಲಿ ಅಧ್ಯಾಪನ ಅಥವಾ ಸಂಶೋಧನ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸಬೇಕೆಂಬ ಆಸೆಯಿದ್ದರೆ ನಿಮ್ಮ ಸ್ನಾತಕೋತ್ತರ ಪದವಿಯ ನಂತರ ಪಿಎಚ್‌.ಡಿ. ಶಿಕ್ಷಣ ಮಾಡಬಹುದು. ಅದಕ್ಕಾಗಿ ಯು.ಜಿ.ಸಿ, ಜೆ.ಆರ್.ಎಫ್. ಪರೀಕ್ಷೆ ಬರೆದು ಶಿಷ್ಯವೇತನವನ್ನು ಪಡೆಯಬಹುದು. ಶುಭಾಶಯ.

* ನಾನು ಪ್ರಥಮ ಪಿಯುಸಿ ಓದುತ್ತಿದ್ದೇನೆ. ದ್ವಿತೀಯ ಪಿಯುಸಿ ಮುಗಿದ ನಂತರ ಏನು ಮಾಡಲಿ? ಎಂಜಿನಿಯರಿಂಗ್‌ ಅಥವಾ ವೈದ್ಯಕೀಯದಲ್ಲಿ ಆಸಕ್ತಿ ಇಲ್ಲ. ಭವಿಷ್ಯದಲ್ಲಿ ಒಳ್ಳೆಯ ಉದ್ಯೋಗ ಸಿಗುವಂತಹ ಒಳ್ಳೆಯ ಕೋರ್ಸ್‌ ಬಗ್ಗೆ ಹೇಳಿ.

ಹೆಸರು, ಊರು ಬೇಡ

ಯಾವ ಕ್ಷೇತ್ರದಲ್ಲಿ ನಿಮಗೆ ಆಸಕ್ತಿ ಇಲ್ಲ ಎಂದು ಕಂಡುಕೊಂಡಿದ್ದೀರಿ. ಅದರ ಜೊತೆಗೆ ಯಾಕಾಗಿ ಆಸಕ್ತಿ ಇಲ್ಲ ಮತ್ತು ಯಾವ ಕ್ಷೇತ್ರದಲ್ಲಿ ಆಸಕ್ತಿ ಇದೆ ಎಂದು ಕಂಡುಕೊಳ್ಳಿ. ಇನ್ನು ಸ್ಕೋಪ್‌ ಬಗ್ಗೆ ಹೇಳುವುದಾದರೆ, ಕೋರ್ಸ್‌ಗಳಲ್ಲಿ ಒಳ್ಳೆಯ ಅಥವಾ ಕೆಟ್ಟ ಕೋರ್ಸ್ ಅಂತ ವರ್ಗೀಕರಣ ಇಲ್ಲ. ಎಲ್ಲವೂ ಉತ್ತಮವಾದ ಕೋರ್ಸ್‌ಗಳೇ. ಹಾಗೆ ಈವತ್ತಿನ ಸ್ಪರ್ಧಾತ್ಮಕ ಉದ್ಯೋಗ ಮಾರುಕಟ್ಟೆಯಲ್ಲಿ ಎಲ್ಲ ಕೋರ್ಸ್‌ಗಳಲ್ಲೂ ಕೆಲಸ ಸಿಗುವುದು ಅಷ್ಟು ಸುಲಭವಾಗಿರುವುದಿಲ್ಲ. ಹಾಗಾಗಿ ಒಳ್ಳೆಯ ಅಥವಾ ಕೆಟ್ಟ ಕೋರ್ಸ್‌ಗಳ ಮಾಪನದಿಂದ ನೋಡುವ ಬದಲಿಗೆ ನಿಮ್ಮ ಆಸಕ್ತಿ ಮತ್ತು ಸಾಮರ್ಥ್ಯದ ಆಧಾರದ ಮೇಲೆ ಆಯ್ಕೆ ಮಾಡಿಕೊಂಡು ಓದಿ. ಅದರಲ್ಲಿ ಕೆಲಸ ಸಿಗಲು ಬೇಕಾದ ಕೌಶಲ ಮತ್ತು ಜ್ಞಾನ ಗಿಟ್ಟಿಸಿಕೊಳ್ಳಿ. ಎಂಜಿನಿಯರಿಂಗ್ ಅಥವಾ ಮೆಡಿಕಲ್ ಇಷ್ಟವಿಲ್ಲದಿದ್ದರೆ ಬೇರೆ ಯಾವುದು ಇಷ್ಟ ಎಂದು ನಿಮ್ಮನ್ನೇ ನೀವು ಪ್ರಶ್ನಿಸಿಕೊಳ್ಳಿ. ನೀವು ಈಗ ಪಿ.ಯು.ಸಿ.ಯಲ್ಲಿ ಓದುತ್ತಿರುವ ಯಾವ ವಿಷಯ ನಿಮಗೆ ಹೆಚ್ಚು ಆಸಕ್ತಿ ನೀಡುತ್ತದೆ ಎಂದು ನೋಡಿ. ಆ ವಿಷಯದಲ್ಲಿ ಮುಂದೆ ಏನೇನು ಉದ್ಯೋಗಾವಕಾಶಗಳಿವೆ, ಆ ಉದ್ಯೋಗ ಅವಕಾಶಗಳನ್ನು ಪಡೆಯಲು ನೀವು ಏನನ್ನು ಓದಬೇಕು ಎಂದು ತಿಳಿಯಿರಿ. ಅದಕ್ಕಾಗಿ ಎಂಜಿನಿಯರಿಂಗ್ ಓದಬೇಕಾದ ಸಂದರ್ಭ ಬಂದಲ್ಲಿ ಓದುವುದರಲ್ಲಿ ಯಾವ ತಪ್ಪೂ ಇಲ್ಲ.

ಎಂಜಿನಿಯರಿಂಗ್ ಮತ್ತು ಮೆಡಿಕಲ್ ಹೊರತುಪಡಿಸಿದರೆ ಬೇರೆ ಕ್ಷೇತ್ರಗಳೆಂದರೆ ಮನಃಶಾಸ್ತ್ರ, ನ್ಯೂಟ್ರಿಷನ್, ಹೋಮ್ ಸೈನ್ಸ್, ಫಿಸಿಯೋಥೆರಪಿ, ಸ್ಪೀಚ್ ಆ್ಯಂಡ್ ಹೀಯರಿಂಗ್, ಪ್ಯಾರಾ ಮೆಡಿಕಲ್, ಕೆಮಿಕಲ್ ಎಂಜಿನಿಯರಿಂಗ್, ಫಾರ್ಮಸಿ, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ಅನಿಮೇಶನ್, ಬ್ಯುಸಿನೆಸ್ ಡೆವಲೆಪ್‌ಮೆಂಟ್ ಹೀಗೆ ಹತ್ತು ಹಲವು ಕ್ಷೇತ್ರಗಳಿವೆ.

* ನಾನು ಬಿಎಎಂಎಸ್‌ ಮುಗಿಸಿದ್ದೇನೆ. ಈಗ ಫುಡ್‌ ಸೈನ್ಸ್‌ ಹಾಗೂ ನ್ಯೂಟ್ರಿಷನ್‌ನಲ್ಲಿ ಎಂ.ಎಸ್‌ಸಿ. ಮಾಡಬೇಕು ಎಂಬ ಆಸೆಯಿದೆ. ಈ ವಿಭಾಗಕ್ಕೆ ಬಿಎಎಂಎಸ್‌ (ಬ್ಯಾಚುಲರ್‌ ಇನ್‌ ಆಯುರ್ವೇದ ಆ್ಯಂಡ್‌ ಸರ್ಜರಿ) ಓದಿದ ನಾನು ಅರ್ಜಿ ಸಲ್ಲಿಸಬಹುದೇ?

ಡಾ.ಸುಜಾತಾ, ಊರು ಬೇಡ

ಶ್ರೀಮತಿ ವಿ. ಎಚ್.ಡಿ. ಕೇಂದ್ರಿಯ ಗೃಹ ವಿಜ್ಞಾನ ಕಾಲೇಜು ಬೆಂಗಳೂರಿನ ಪ್ರವೇಶಾತಿ ಅಧಿಸೂಚನೆಯಂತೆ ಎಂ.ಎಸ್‌ಸಿ. ಇನ್ ಫುಡ್ ಸೈನ್ಸ್ ಮತ್ತು ನ್ಯೂಟ್ರಿಷನ್ ಮಾಡಲು ಆಯುರ್ವೇದ, ನ್ಯಾಚುರೋಪಥಿ ಹಾಗೂ ಹೋಮಿಯೋಪಥಿ ಪದವೀಧರರು ಅರ್ಹರಾಗಿರುತ್ತಾರೆ. ಹಾಗಾಗಿ ನೀವು ಕೂಡ ಎಂ.ಎಸ್‌ಸಿ. ಇನ್ ಫುಡ್ ಸೈನ್ಸ್ ಮತ್ತು ನ್ಯೂಟ್ರಿಷನ್ ಮಾಡಲು ಅರ್ಹರು. ಆದರೆ ಪ್ರವೇಶಾತಿಯಲ್ಲಿ ಮೊದಲ ಪ್ರಾಧಾನ್ಯತೆಯನ್ನು ಹೋಮ್ ಸೈನ್ಸ್ ಮತ್ತು ಫುಡ್ ಸೈನ್ಸ್ ಓದಿದವರಿಗೆ ನೀಡಲಾಗುತ್ತದೆ. ಶ್ರೀಮತಿ ವಿ. ಎಚ್.ಡಿ. ಕೇಂದ್ರಿಯ ಗೃಹ ವಿಜ್ಞಾನ ಕಾಲೇಜು ಬೆಂಗಳೂರಿನ ಪ್ರವೇಶಾತಿ ಅಧಿಸೂಚನೆಯನ್ನು ಪಡೆಯಲು www. gfgc.kar.nic.in/vhdhomescience/ ವೆಬ್‌ಸೈಟ್‌ನಲ್ಲಿ ಪರಿಶೀಲಿಸಿ. ಹಾಗೆ ಇತರ ಕಾಲೇಜುಗಳು ಪ್ರವೇಶಾತಿ ಅಧಿಸೂಚನೆಗಳನ್ನು ಕೂಡ ನೋಡಿ.

(ಅಂಕಣಕಾರರು ವೃತ್ತಿ ಮಾರ್ಗದರ್ಶಕರು, ಕೇಂದ್ರ ಉದ್ಯೋಗ ಮತ್ತು ಕಾರ್ಮಿಕ ಇಲಾಖೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT