ಗುರುವಾರ , ಜೂನ್ 17, 2021
29 °C

ಅವರಿಗಿದ್ದ ಸಂತೋಷ ನಮಗಿರದೆ?!

ಡಾ.ಕೆ.ಎಸ್. ಪವಿತ್ರ Updated:

ಅಕ್ಷರ ಗಾತ್ರ : | |

Prajavani

ಮಕ್ಕಳಿಗೆ ಆನ್‍ಲೈನ್ ತರಗತಿಗಳು ಜೋರಾಗಿ ನಡೆಯುತ್ತಿವೆ. ನೋಟ್‍ಬುಕ್ ಖರೀದಿಸಿದ ಹಾಗೆ ಟ್ಯಾಬ್, ಮೊಬೈಲ್, ಲ್ಯಾಪ್‍ಟಾಪ್‍ಗಳನ್ನು ಜನ ಖರೀದಿಸುವ ಕಾಲ ಬಂದಿದೆ. ಇಂಥ ಸಮಯದಲ್ಲಿ ನನಗೆ ನೆನಪಾದದ್ದು ನಾನು ಕೆಲ ವರುಷಗಳ ಹಿಂದೆ ಓದಿದ ಎರಡು ಕಥೆಗಳು. ಅವು ಕಥೆಗಳಾಗಿ ಆಗ ಕುತೂಹಲ, ಅಚ್ಚರಿ, ನಗೆ ಮೂಡಿಸಿದ್ದವು. ಈಗ ಕಥೆಯೇ ವಾಸ್ತವವಾಗಿ ಬದಲಾಗಿದೆ, ಬೆರಗು ಮೂಡಿಸುತ್ತಿದೆ.

ಮೊದಲನೆಯದು ಹತ್ತಿಪ್ಪತ್ತು ವರ್ಷಗಳ ಹಿಂದೆ ನಾನು ಓದಿದ, ಅದಕ್ಕೂ ಬಹು ಮೊದಲೇ 1951ರಲ್ಲಿ ಅಂದರೆ ಬರೋಬ್ಬರಿ 70 ವರ್ಷಗಳ ಹಿಂದೆಯೇ ಬರೆಯಲಾದ ಐಸಾಕ್ ಅಸಿಮೋವ್‍ನ ‘The Fun they had’ ಎಂಬ ಕಥೆ. ಅತ್ಯಂತ ಜನಪ್ರಿಯ ಮಕ್ಕಳ ಕಥೆಗಳಲ್ಲಿ ಒಂದು ಎಂದು ಗುರುತಿಸಲಾದ ಈ ಕಥೆ ನಮ್ಮ ಮಕ್ಕಳ ಕೆಲವು ಇಂಗ್ಲಿಷ್‌ ಪಠ್ಯಗಳಲ್ಲಿಯೂ ಇದೆ.

ಅಂಥಾದ್ದೇನಿದೆ ಸ್ವಾರಸ್ಯ ಈ ಕಥೆಯಲ್ಲಿ? ಕಥೆಯ ಕಲ್ಪನೆಯಿರುವ ಕಾಲಘಟ್ಟ 2157! ಅಂದರೆ ಅಸಿಮೋವ್ ಕಾಲಕ್ಕೆ ಸುಮಾರು 200 ವರ್ಷ ಮುಂದೆ. ಈಗಿನ ಕಾಲಕ್ಕಿಂತ 130 ವರ್ಷ ಮುಂದೆ. ರೊಬೋಟಿಕ್ ಟೀಚರ್‌ನಿಂದ ಕಂಪ್ಯೂಟರ್ ಮೂಲಕ ಮನೆಯಲ್ಲೇ ಕಲಿಯುವ ಹನ್ನೊಂದು ವರ್ಷ ವಯಸ್ಸಿನ ಮಾರ್ಗೀ ಎಂಬ ಬಾಲಕಿಯ ಕಥೆ ಅದು. ಅವಳ ಸ್ನೇಹಿತ, ನೆರೆಮನೆಯ ಬಾಲಕ ಟಾಮ್ಮೀಗೆ ಒಂದು ದಿನ ಮನೆಯ ಅಟ್ಟದ ಮೇಲೆ ಒಂದು ನಿಜವಾದ ಪುಸ್ತಕ ‘ರಿಯಲ್ ಬುಕ್’ ಸಿಕ್ಕಿಬಿಡುತ್ತದೆ. ಅದು ಅವರ ಅಜ್ಜನ ಅಜ್ಜನದು! ಇಬ್ಬರೂ ಪುಟ ತಿರುಗಿಸಿ ನೋಡುತ್ತಾರೆ. ಪದಗಳು, ಅಕ್ಷರಗಳು ಪರದೆಯಲ್ಲಿದ್ದಂತೆ ಓಡದೆ, ಅಲ್ಲೇ ನಿಂತೇ ಇರುವುದನ್ನು ನೋಡಿ ಆಶ್ಚರ್ಯಪಡುತ್ತಾರೆ. ಟಾಮ್ಮೀ ಹೇಳುತ್ತಾನೆ: ‘ಎಂಥಾ ವೇಸ್ಟ್! ಪುಸ್ತಕ ಓದಾದ ತಕ್ಷಣ, ಅದನ್ನು ಎಸೆಯುವುದೇ ಸರಿ! ನನ್ನ ಕಂಪ್ಯೂಟರ್‌ನಲ್ಲಿ ಮಿಲಿಯನ್ ಪುಸ್ತಕಗಳಿವೆ, ಮತ್ತೂ ಜಾಗ ಇದೆ’.

ಅಜ್ಜನ ಅಜ್ಜನಿಗೆ ಶಾಲೆಯಲ್ಲಿ ಇರುತ್ತಿದ್ದದ್ದು ಒಬ್ಬ ‘ರಿಯಲ್ ಟೀಚರ್’. ಅಂದರೆ ಒಬ್ಬ ‘ಮನುಷ್ಯ’ ಎಂಬುದನ್ನು ಕೇಳಿ ಮಾರ್ಗೀ ಹೌಹಾರುತ್ತಾಳೆ! ತನ್ನ ಮನೆ ಒಳಗೆ ಒಬ್ಬ ‘ಅಪರಿಚಿತ’ ಬರುವುದು ತನಗಿಷ್ಟವಿಲ್ಲ ಎನ್ನುತ್ತಾಳೆ. ಆಗ ಟಾಮ್ಮೀ ನಕ್ಕು ಹೇಳುವ ‘ಮಾರ್ಗೀ, ನಿನಗೆ ಗೊತ್ತಿಲ್ಲ. ಒಂದು ಸ್ಪೆಷಲ್ ಕಟ್ಟಡ ಇರ್ತಿತ್ತು. ಅಲ್ಲಿ ಈ ಟೀಚರ್‌ಗಳು ಇರ್ತಿದ್ರು. ಮಕ್ಕಳೆಲ್ಲರೂ ಅಲ್ಲಿಗೆ ಹೋಗಬೇಕು!’ ಮಾತು ಮಾರ್ಗೀಗೆ ವಿಚಿತ್ರವೆನಿಸುತ್ತದೆ.

ಮಾರ್ಗೀ ಹೋಗಬೇಕಾಗಿದ್ದ ಶಾಲೆ ಅವಳ ಬೆಡ್‍ರೂಂನ ಪಕ್ಕದ ಕೋಣೆ. ಅಲ್ಲಿದ್ದ ಯಾಂತ್ರಿಕ ಟೀಚರ್ ಪರದೆ, ಆಕೆ ಹೋದ ತಕ್ಷಣ ಮಿಂಚಿ, ಹಿಂದಿನ ದಿನದ ‘ಹೋಂವರ್ಕ್’ ಕೇಳುತ್ತಿತ್ತು. ಮಾರ್ಗೀಗೆ ಅನಿಸುತ್ತದೆ: ‘ಅಜ್ಜನ ಅಜ್ಜ ಎಷ್ಟು ಲಕ್ಕಿ! ಒಬ್ಬರು ಇನ್ನೊಬ್ಬರೊಡನೆ ಆಡುತ್ತಾ, ಹೊಂವರ್ಕ್‍ಗೆ ಸಹಾಯ ಮಾಡುತ್ತಾ, ಒಟ್ಟಿಗೆ ಮನೆಗೆ ಹೋಗುವುದು ಎಂಥ ಸಂತಸ! ಅದೂ ಟೀಚರ್ ಕೂಡ ನನ್ನಂತೆಯೇ ಜೀವವಿರುವ ಮನುಷ್ಯ!’.

ಯಾವ ಕಾಲಕ್ಕೂ ಶಾಲೆಯನ್ನು ‘ಆಟದಷ್ಟು’ ಇಷ್ಟಪಡದ ಮುಗ್ಧ ಮಕ್ಕಳ ಮನೋಭಾವ ಸಾರ್ವಕಾಲಿಕ ಎಂಬುದು ಈ ಕಥೆಯಲ್ಲಿಯೂ ಎದ್ದು ಕಾಣುತ್ತದೆ. ಐಸಾಕ್ ಅಸಿಮೋವ್ ಅಮೆರಿಕನ್ ಬರೆಹಗಾರ, ಜೀವರಸಾಯನ ವಿಜ್ಞಾನದ ಪ್ರಾಧ್ಯಾಪಕ. ಆತ ವೈಜ್ಞಾನಿಕ ಕಲ್ಪನೆಯ ಹಲವು ಕಥೆಗಳನ್ನು ಬರೆದ. 500ರಷ್ಟು ಪುಸ್ತಕಗಳನ್ನು ಬರೆದ. 11ರ ವಯಸ್ಸಿನಲ್ಲಿ ಕಥೆ ಬರೆಯಲಾರಂಭಿಸಿದ ಅಸಿಮೋವ್‍ನ ವಿಜ್ಞಾನ ಜ್ಞಾನವೂ ಅಗಾಧವಾಗಿತ್ತು. ಆತನ ಕಲ್ಪನಾಶಕ್ತಿ ಎಷ್ಟು ವೈಜ್ಞಾನಿಕವಾಗಿ ರೂಪುಗೊಂಡಿತ್ತು ಎಂದರೆ ಇಂದು ಆತನ ಹಲವು ಕಥೆಗಳು ‘ವಾಸ್ತವ’ವಾಗಿವೆ!

1951ರಲ್ಲಿ ಬಂದ ಈ ಕಥೆಯ ನಂತರ ನಾನು ನೆನಪಿಸಿಕೊಳ್ಳುವ ಇನ್ನೊಂದು ಕಥೆ ‘ಒರಿಜಿನ್’ ಎಂಬ ಕಾದಂಬರಿಯಲ್ಲಿದೆ. ಹಲವು ಜನಪ್ರಿಯ, ಸಂಶೋಧನೆ ಆಧಾರಿತ, ದೇವರು-ವಿಜ್ಞಾನಗಳ, ವಿಜ್ಞಾನ-ಮಾನವೀಯತೆಯ ಅಂತರ್ಸಂಬಂಧವನ್ನು ಶೋಧಿಸುವ ಕಾದಂಬರಿಗಳನ್ನು ನೀಡಿದ ಡ್ಯಾನ್‍ಬ್ರೌನ್ ಬರೆದ ಕೃತಿ ಇದು. ಇದು ಬಿಡುಗಡೆಯಾದದ್ದು 2017ರಲ್ಲಿ. ಇಡೀ ಕಾದಂಬರಿಯ ವಸ್ತು ಕೃತಕ ಬುದ್ಧಿಮತ್ತೆಯ ಸುತ್ತ ತಿರುಗುತ್ತದೆ. ಕಂಪ್ಯೂಟರ್ ವಿಜ್ಞಾನಿ ಕ್ರಿಷ್, ತನ್ನ ಸ್ನೇಹಿತ - ಶಿಷ್ಯನಾಗಿ ರೂಪಿಸುವ ಯಂತ್ರಮಾನವ, ಕ್ರಮೇಣ ಮನುಷ್ಯನಿಗಿಂತ ಮುಂದಾಗಿ ಯೋಚಿಸುವುದನ್ನು ಕಲಿಯುತ್ತದೆ.

ಕಥೆಗಿಂತ ಹೆಚ್ಚಾಗಿ ನಮ್ಮ ಗಮನ ಸೆಳೆಯುವುದು ಕ್ರಿಷ್ ಈ ಕಾದಂಬರಿಯ ಕೊನೆಯಲ್ಲಿ ಮಾಡುವ, ಇಡೀ ಜಗತ್ತಿನ ಲಕ್ಷಾಂತರ ಜನ ಕೇಳುವ ಒಂದು ಭಾಷಣ. ಜೀವದ ಮೂಲ ದೇವರ ಸೃಷ್ಟಿ ಎಂಬ ಅಂಶವನ್ನು ಕ್ರಿಷ್ ವೈಜ್ಞಾನಿಕವಾಗಿ ಅಲ್ಲಗಳೆಯುತ್ತಾನೆ. ಅಲ್ಲಿಗೇ ನಿಲ್ಲಿಸದೇ, ಸುಮಾರು 50 ವರ್ಷಗಳ ನಂತರ ಮಾನವ ಸಂತತಿ ಈ ಭೂಮಿಯ ಮೇಲೆ ಇರುವುದೇ ಇಲ್ಲ ಎನ್ನುತ್ತಾನೆ! ಹಾಗಿದ್ದರೆ ಭೂಮಿಯ ಮೇಲೆ ಉಳಿಯುವುದು ಏನು? 'animal kingdom' – ಪ್ರಾಣಿಗಳ ರಾಜ್ಯ – ಬದಲು ತಾಂತ್ರಿಕ ಜಗತ್ತು. ಈ ತಾಂತ್ರಿಕ ಜಗತ್ತು ಪ್ರಾಣಿ ಜಗತ್ತನ್ನು ಹೀರಿಕೊಂಡುಬಿಡುತ್ತದೆ ಎನ್ನುತ್ತಾನೆ. ಕಂಪ್ಯೂಟರ್‌ನಿಂದ ಸ್ಮಾರ್ಟ್‍ ಫೋನ್‌ಗಳು, ಸ್ಪೇಸ್‍ಷಿಪ್‍ಗಳು, ರೊಬಾಟಿಕ್ ಶಸ್ತ್ರಚಿಕಿತ್ಸಕರೂ ಹುಟ್ಟಿದ್ದಾರಷ್ಟೆ. ಮನುಷ್ಯನೇ ಈ ಹೊಸ ‘ಟೆಕ್ನಿಯಮ್’ ಜಗತ್ತನ್ನು ನಿರ್ಮಿಸಿದ್ದಾನೆ ಎನ್ನುತ್ತಾನೆ. ಎಲ್ಲೆಡೆಯೂ ಈಗ ನಾವು ನೋಡುವ ಟ್ಯಾಬ್‍ನೊಡನೆ ಆಟವಾಡುವ ಮಗು, ಬ್ಲೂಟೂತ್ ಸಿಕ್ಕಿಸಿಕೊಂಡಿರುವ ಯುವಕರು, ಇವೆಲ್ಲವೂ ಜೀವಿಗಳು ಒಟ್ಟಾಗಿ ಬದುಕುವ, ಒಬ್ಬರನ್ನೊಬ್ಬರು ಬಿಟ್ಟಿರಲಾರದ ‘ಸಿಂಬೈಯಾಸಿಸ್’.

ಆದರೆ ಕ್ರಿಷ್ ಇದನ್ನು ಆಶಾವಾದದೊಂದಿಗೇ ಮುಗಿಸುತ್ತಾನೆ. ಸ್ವಚ್ಛ ನೀರು, ಪೌಷ್ಠಿಕ ಆಹಾರ, ಕ್ಯಾನ್ಸರ್‌ಗೆ ಪರಿಹಾರ ನೀಡುವ ಜೀನೋಮಿಕ್ ಚಿಕಿತ್ಸೆ, ಜಗತ್ತಿನ ಯಾವುದೇ ಮೂಲೆಯಲ್ಲಿಯೂ ಉತ್ತಮ ಶಿಕ್ಷಣದ ಲಭ್ಯತೆ, ಇವೆಲ್ಲವೂ ಮುಂದೆ ಎಲ್ಲರೂ ಹೊಂದಬಹುದಾದ ಸಂಗತಿಗಳು ಎಂಬುದರಿಂದ ಕ್ರಿಷ್‍ನ ಭಾಷಣ ಅಂತಿಮ ಹಂತ ತಲುಪುತ್ತದೆ. ವಿಜ್ಞಾನಿ, ದೇವರಲ್ಲಿ ನಂಬಿಕೆಯಿಲ್ಲದ ಕ್ರಿಷ್‍ನ ಭಾಷಣ ಮುಗಿಯುವುದು ಮಾತ್ರ ಒಂದು ಚಿಕ್ಕ ಪ್ರಾರ್ಥನೆಯಿಂದ! ‘ನಮ್ಮ ತತ್ವಗಳು ನಮ್ಮ ತಾಂತ್ರಿಕತೆಯ ಜೊತೆ, ನಮ್ಮ ದಯೆ-ಕರುಣೆಗಳು ನಮ್ಮ ಬಲದೊಡನೆ, ಜೊತೆ ಜೊತೆಗೆ, ಸಮವೇಗದಲ್ಲಿ ಸಾಗಲಿ! ಆತಂಕ, ಭಯಗಳ ಬದಲು ಪ್ರೀತಿಯು ಬದಲಾವಣೆಯ ಯಂತ್ರವಾಗಲಿ!’ ಎಂಬ ಪ್ರಾರ್ಥನೆ ಇಂದಿನ ದಿನಗಳಲ್ಲಿ ಪ್ರಸ್ತುತ ಎನಿಸಿಬಿಡುತ್ತದೆ!

ಎರಡೂ ಕಥೆಗಳು ಇವತ್ತಿನ ಸಂದರ್ಭದಲ್ಲಿ ಎಚ್ಚರ ಮೂಡಿಸುತ್ತವೆ. ಸಾಹಿತ್ಯ, ಮನಸ್ಸು, ಸಮಾಜಕ್ಕಿರುವ ಸಂಬಂಧಗಳನ್ನು ತಂತ್ರಜ್ಞಾನದ ಹಿನ್ನೆಲೆಯಲ್ಲಿ ಶೋಧಿಸುತ್ತವೆ. ತಂತ್ರ ಮಾನವರಾಗಿ ನಾವು ಮುನ್ನಡೆದರೂ, ಮನಸ್ಸಿನ ಭಾವನೆಗಳನ್ನು ಕಡೆಗಣಿಸದ, ಮಗುವಿನ ಮುಗ್ಧತೆಯನ್ನು ಬದಿಗಿಡದ ಮಾನವರಾಗಿಯೇ ಉಳಿಸು ಎಂದು ಬೇಡುವಂತೆ ಪ್ರೇರೇಪಿಸುತ್ತದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು