ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive: ಮನೆಯೆಂಬ ಶಾಲೆ, ಶಾಲೆಯೆಂಬ ಮನೆ

Last Updated 11 ಸೆಪ್ಟೆಂಬರ್ 2020, 4:41 IST
ಅಕ್ಷರ ಗಾತ್ರ

‘ನಿಮ್ಮ ಮಗುವಿನ ಮತ್ತು ನಿಮ್ಮ ಕುಟುಂಬದ ವಿವರಗಳನ್ನು ಕೆಳಗೆ ಕೊಟ್ಟಿರುವ ಗೂಗಲ್‌ ಶೀಟ್‌ ಲಿಂಕ್‌ನಲ್ಲಿ ಭರ್ತಿ ಮಾಡಿ’

–ಇಂಥದ್ದೊಂದು ಎಸ್‌ಎಂಎಸ್‌ ಇಂಗ್ಲಿಷ್‌ನಲ್ಲಿ ಬಂದ ಕೂಡಲೇ ತಾಯಿಗೆ ಕೊಂಚ ಗಾಭರಿಯಾಯಿತು. ಒಂದನೇ ಕ್ಲಾಸಿನ ಮಕ್ಕಳ ಎಲ್ಲ ತಾಯಂದಿರನ್ನು ಸೇರಿಸಿದ್ದ ವಾಟ್ಸ್‌ ಅಪ್‌ ಗ್ರೂಪ್‌ಗೆ ಸ್ಕೂಲ್ ಟೀಚರ್‌ ಅನಾಯಾಸವಾಗಿ ಲಿಂಕ್‌ ಕಳಿಸಿಬಿಟ್ಟಿದ್ದರು. ತಾಯಿಗೆ ಲಿಂಕ್‌ ಎಂದರೆ ಏನೆಂದು ಗೊತ್ತು. ಆದರೆ ಗೂಗಲ್‌ ಶೀಟ್‌ ಗೊತ್ತಿರಲಿಲ್ಲ.

‘ಇರಲಿ, ಕೊಂಚ ಸಮಯ ಕಾದು ನೋಡೋಣ’ ಎಂದು ಅರ್ಧ ದಿನ ಕಾದರು. ಪೋಷಕರು ಒಬ್ಬೊಬ್ಬರಾಗಿ ಮಾಹಿತಿ ಭರ್ತಿ ಮಾಡಿ ಟೀಚರ್‌ ರೆಫರೆನ್ಸ್‌ಗೆ ಇರಲಿ ಎಂದು ಗೂಗಲ್‌ ಶೀಟ್‌ ಪ್ರತಿಯನ್ನು ಗ್ರೂಪ್‌ಗೆ ಹಾಕತೊಡಗಿದ್ದರು.

ಈಗ ಈ ತಾಯಿಗೆ ಮನಸು ಕೊಂಚ ಹಗುರವಾಯಿತು. ಒಂದು ಪ್ರತಿಯನ್ನು ಓಪನ್‌ ಮಾಡಿದರು. ಹಲವು ಮಕ್ಕಳ ಹೆಸರಿತ್ತು. ಆ ಪಟ್ಟಿಯಲ್ಲೇ ತಮ್ಮ ಮಗುವಿನ ಹೆಸರನ್ನು ಟೈಪ್‌ ಮಾಡೋಣ ಎಂದು ಮುಂದುವರಿದರೆ ಆಗುತ್ತಲೇ ಇಲ್ಲ. ವಿಷಯ ತಂದೆಯನ್ನು ಮುಟ್ಟಿತು.

ತಾಯಿಗಿಂತ ಕೊಂಚ ದೊಡ್ಡ ಆಂಡ್ರಾಯ್ಡ್‌ ಫೋನ್‌ ಇದ್ದ ತಂದೆಯೂ ಅದೇ ಫಾರ್ವರ್ಡೆಡ್ ಶೀಟ್‌ ಅನ್ನು ಓಪನ್‌ ಮಾಡಿದರು. ಅವರ ಫೋನಲ್ಲಿ ಎಕ್ಸ್ಎಲ್‌ ಶೀಟ್‌ ಆಪ್‌ ಇದ್ದುದರಿಂದ ಸುಲಭವಾಗಿ ತೆರೆದುಕೊಂಡಿತು. ಅಲ್ಲಿಯೇ ಎಡಿಟ್‌ ಆಯ್ಕೆಮಾಡಿಕೊಂಡು ಮಾಹಿತಿ ಸೇರಿಸಿ ತಾಯಿ ಫೋನಿಗೆ ಕಳಿಸಿದರು. ತಾಯಿ ಟೀಚರಿಗೆ ಕಳಿಸಿದರು. ಕೆಲಸವಾಯಿತು ಎಂದು ನಿರಾಳವಾದರು.

ಆದರೆ ಕೆಲವೇ ನಿಮಿಷಗಳಲ್ಲಿ ಟೀಚರ್‌ ಮೆಸೇಜ್‌ ಬಂತು. ‘ಗೂಗಲ್‌ ಶೀಟ್‌ನಲ್ಲೇ ಭರ್ತಿ ಮಾಡಬೇಕು. ಮತ್ತೆ ಅದನ್ನು ನಮಗೆ ಕಳಿಸುವ ಅವಶ್ಯಕತೆಯೂ ಇಲ್ಲ. ಒಮ್ಮೆ ನೀವು ಭರ್ತಿ ಮಾಡಿದರೆ ನಾವು ಇಲ್ಲಿಯೇ ಕುಳಿತು ನೋಡುತ್ತೇವೆ’ ಎಂದ ಸಂದೇಶವಿತ್ತು.

ಈಗ ತಾಯಿಯ ಫೋನ್‌ ತಂದೆಯ ಕೈಗೆ ಬಂತು. ಟೀಚರ್‌ ಕಳಿಸಿದ್ದ ಲಿಂಕ್‌ ಅನ್ನು ತಮ್ಮ ಫೋನಿಗೆ ಕಳಿಸಿಕೊಂಡು ಓಪನ್‌ ಮಾಡಿದರೆ ಅದು ಮೊದಲು ಗೂಗಲ್‌ ಪೇಜ್‌ ಡೌನ್‌ಲೋಡ್‌ಗೆ ಕರೆದೊಯ್ದಿತು. ಪ್ಲೇಸ್ಟೋರಿನಲ್ಲಿ ಡೌನ್‌ಲೋಡ್‌ ಮಾಡಿಕೊಂಡ ಬಳಿಕ ತೆರೆದುಕೊಂಡ ಶೀಟ್‌ನಲ್ಲಿ ಹಲವು ಪೋಷಕರು ಮಾಹಿತಿ ತುಂಬಿದ್ದು ಕಾಣಿಸಿತು. ತಂದೆಯೂ ಎಲ್ಲ ಮಾಹಿತಿಯನ್ನು ತುಂಬಿದರು. ಟೀಚರ್‌ಗೆ ಕರೆ ಮಾಡಿ ಹೇಳಿದರು.
ಟೀಚರ್‌ ಪ್ರತಿಕ್ರಿಯೆ ಹೀಗಿತ್ತು: ‘ಮಾಹಿತಿ ಬಂದಿದೆ. ನೀವು ಭರ್ತಿ ಮಾಡುತ್ತಿದ್ದುದು ನನಗೆ ಗೊತ್ತಾಗುತ್ತಿತ್ತು’ !

ಬಳ್ಳಾರಿಯಲ್ಲಿ 1ನೇ ಕ್ಲಾಸಿಗೆ ಮಗಳನ್ನು ಸೇರಿಸಿದ ತಂದೆ ತಾಯಿ ಹೀಗೆ ತಾವು ಮಗಳಿಗಿಂತಲೂ ಮೊದಲೇ ಆನ್‌ಲೈನ್‌ ತರಗತಿಯ ಪಾಠಗಳಿಗೆ ಮುಖಾಮುಖಿಯಾದರು.

ಇದು ಒಂದು ಊರಿನ ಒಬ್ಬ ತಂದೆ–ತಾಯಿಯ ಅನುಭವವಷ್ಟೇ ಅಲ್ಲ. ಎಲ್ಲ ಊರುಗಳ ಪೋಷಕರ ಇಕ್ಕಟ್ಟು–ಬಿಕ್ಕಟ್ಟು. ಕೋವಿಡ್‌ 19 ತಂದಿಟ್ಟಿರುವ ‘ಡಿಜಿಟಲ್‌ ಮೀಡಿಯಂ’ ಮೂಲಕ ಬೋಧನೆ ಮತ್ತು ಕಲಿಕೆಯ ಮೊದಲ ಪಾಠವನ್ನು ಶಿಕ್ಷಕರು ಮೊದಲು ಪೋಷಕರಿಗೆ ಹೇಳಿಕೊಡಬೇಕು.

ಅದರಲ್ಲೂ ಪ್ರಾಥಮಿಕ ಶಾಲೆಗಳ ಮಕ್ಕಳ ಪೋಷಕರಿಗೆ ಈ ತರಬೇತಿ ಅನಿವಾರ್ಯ. ಶಾಲೆಗಳು ಪೋಷಕರಿಗಾಗಿಯೇ ಕಲಿಕೆ ಕಾರ್ಯಕ್ರಮಗಳನ್ನು ರೂಪಿಸದೇ ಇದ್ದರೆ, ದಾಖಲಾತಿ ಹಂತದಲ್ಲೇ ಪೋಷಕರು ಹಲವು ಸಮಸ್ಯೆಗಳಿಂದ ನರಳುವುದು ಖಚಿತ.

ಶಾಲೆಗಳು ಯಾವತ್ತಿನಿಂದ ಆರಂಭವಾಗುತ್ತವೆ ಎಂಬುದು ಇನ್ನೂ ಖಚಿತವಾಗಿಲ್ಲ. ಆದರೆ ಚಿಕ್ಕ ಮಕ್ಕಳನ್ನು ಶಾಲೆಗೆ ಕಳಿಸಲು ಆಗದೆ ಮನೆಯಲ್ಲೇ ಉಳಿಸಿಕೊಂಡ ಪೋಷಕರು ಮನೆಯನ್ನೇ ಶಾಲೆಯನ್ನಾಗಿ ಮಾಡಿಕೊಳ್ಳಬೇಕಾದ ಪರಿಸ್ಥಿತಿಯನ್ನು ಕೋವಿಡ್‌ ತಂದಿಟ್ಟಿದೆ.

‘ಮಕ್ಕಳಿಗೆ ಮನೆಯೇ ಮೊದಲ ಪಾಠ ಶಾಲೆ’ ಎಂಬ ನಾಣ್ಣುಡಿ ಹೊಸ ರೂಪರೇಷೆಯಲ್ಲಿ ಕಾಣಿಸಿಕೊಂಡಿದೆ. ಇಲ್ಲಿ ಮಕ್ಕಳಿಗಿಂತ ಮೊದಲು ಪೋಷಕರಿದ್ದಾರೆ. ಅವರಿಗೆ ಅವರ ಮಕ್ಕಳ ಮೂಲಕ ಅವರ ಮನೆಯೇ ಪಾಠಶಾಲೆಯಾಗಿದೆ. ಇಲ್ಲಿ ಮಕ್ಕಳಷ್ಟೇ ಕಲಿಯುವುದಿಲ್ಲ. ಮಕ್ಕಳೊಂದಿಗೆ ಪೋಷಕರೂ ಕಲಿಯಲೇಬೇಕು. ಮಕ್ಕಳಲ್ಲಿ ಕಲಿಕೆಯ ಕುರಿತು ಉತ್ತೇಜನ ತುಂಬಲೇಬೇಕು. ಇಲ್ಲದಿದ್ದರೆ ಮಕ್ಕಳು ಕಲಿಕೆಯಲ್ಲಿ ಹಿಂದೆಬೀಳುತ್ತಾರೆ.

ಮಗುವನ್ನು ಶಾಲೆಗೆ ಕಳಿಸಿ, ತಾಯಿಯು ಮನೆಕೆಲಸಕ್ಕೆ, ತಂದೆಯು ಕಚೇರಿ ಕೆಲಸಕ್ಕೆ ಹೋಗುವ ಕಾಲ ಹೋಗಿಯಾಯಿತು. ಏಕೆಂದರೆ ತಂದೆಯ ಕಚೇರಿಯೂ ಮನೆಗೇ ಬಂದಿದೆ. ಶಾಲೆಯೂ ಮನೆಯೊಳಕ್ಕೇ ಬಂದಿದೆ. ಮನೆ ಕೆಲಸ, ಕಚೇರಿ ಕೆಲಸ, ಶಾಲೆ ಕೆಲಸ ಎಲ್ಲವೂ ಈಗ ಮನೆಯಲ್ಲೇ. ಹೀಗಾಗಿಯೇ ತರಗತಿಯು ಶಾಲೆಯೊಳಗೋ ಮನೆಯೊಳಗೋ..ಎಂಬ ಗೊಂದಲ, ಅಚ್ಚರಿ, ಆಘಾತಗಳೂ ಏರ್ಪಡುತ್ತಿವೆ.

ಇದು ಮನೆಯೊಳಗೆ ಇರುವವರ ಕಷ್ಟವಷ್ಟೇ ಎಂದು ಹೇಳುವಂತಿಲ್ಲ. ಏಕೆಂದರೆ ಇನ್ನೂ ತೆರೆಯದ ಶಾಲೆಯ ಕೆಲಸಗಳನ್ನು ಮನೆಗಳಲ್ಲೇ ಕುಳಿತು ಮಾಡುತ್ತಿರುವ ಶಿಕ್ಷಕರು ಮಕ್ಕಳಿಗಿಂತ ಮೊದಲು ಶಿಕ್ಷಕರಿಗೆ ಆನ್‌ಲೈನ್‌ ಕಲಿಕೆಯ ಪಾಠಗಳನ್ನು ಹೇಳಿಕೊಡುವ ಸವಾಲಿನ ಮುಂದೆ ನಿಂತಿದ್ದಾರೆ.
ಫೀಸು ಕಟ್ಟಿ, ನಮ್ಮ ಮಗುವಿನ ಮೇಲೆ ಒಂದು ಕಣ್ಣಿಡಿ ಎಂದು ಹೇಳಿ ಕೈಮುಗಿದು ಹೋಗುತ್ತಿದ್ದ ಪೋಷಕರ ವಿದ್ಯಾರ್ಹತೆ ಏನು? ಆಂಡ್ರಾಯ್ಡ್‌ ಫೋನ್‌ ಬಳಕೆಯ ಭಿನ್ನ ವಿಧಾನಗಳು ಅವರಿಗೆ ಗೊತ್ತಿವೆಯೇ? ಅವರ ಬಳಿ ಲ್ಯಾಪ್‌ಟಾಪ್‌, ಟ್ಯಾಬ್‌, ಡೆಸ್ಕ್‌ ಟಾಪ್‌ ಇದೆಯೇ ಎಂಬ ಮಾಹಿತಿಗಳನ್ನೂ ಅವರು ತಿಳಿದುಕೊಳ್ಳಬೇಕು.

ಈ ಸಾಧನಗಳನ್ನು ಬಳಸಿ ಮಕ್ಕಳೊಂದಿಗೆ ಕುಳಿತು ಬೋಧನೆ–ಕಲಿಕೆಯ ಪ್ರಕ್ರಿಯೆಯಲ್ಲಿ ಅವರು ಪ್ರಮುಖ ಕೊಂಡಿಯಾಗಿ ಇರುತ್ತಾರೆಯೇ ಎಂಬುದನ್ನು ಅಂದಾಜು ಮಾಡಬೇಕು. ಕೊಂಡಿಯಾಗಲು ಇರುವ ತೊಡಕುಗಳ ಬಗ್ಗೆಯೂ ತಿಳಿದುಕೊಂಡು ಅವುಗಳನ್ನು ಪರಿಹರಿಸಬೇಕು. ಆ ಬಗ್ಗೆ ಸಹಶಿಕ್ಷಕರು, ಮುಖ್ಯಶಿಕ್ಷಕರೊಂದಿಗೆ ಚರ್ಚಿಸಬೇಕು. ಇದು ಪಾಠ ಬೋಧನೆಗೆ ಮುನ್ನ ನಡೆಯಬೇಕಾದ ಕಡ್ಡಾಯ ಕ್ರಮ. ಇಲ್ಲಿ ಎಡವಿದರೆ ಮಗುವಿನ ಕಲಿಕೆಯೂ ಗೋತಾ ಹೊಡೆಯುತ್ತದೆ.

ಹಿಂದಿನಂತೆ ಶಾಲೆ ಕಲಿಕೆ ಎಂಬುದು ಈಗ ವಿದ್ಯಾರ್ಥಿ ಕೇಂದ್ರಿತವಾಗಿಲ್ಲ. ಅದು ಪೋಷಕ ಕೇಂದ್ರಿತವೂ ಆಗಿದೆ. ಹೀಗಾಗಿ ಶಿಕ್ಷಕರು ಮಕ್ಕಳೊಂದಿಗಷ್ಟೇ ಅಲ್ಲದೆ, ಅವರ ಪೋಷಕರೊಂದಿಗೆ ಸಂವಹನ ನಡೆಸುವ ಹೊಸ ಕೌಶಲಗಳನ್ನೂ ಕಲಿಯಬೇಕು.

ಕೊರೋನೋತ್ತರ ಕಾಲಘಟ್ಟದ ಶಾಲೆಯ ಪಾಠ ಎಂಬುದು ಹೀಗೆ ಬಹುಮುಖಿಯಾಗಿ ಮಾರ್ಪಟ್ಟಿದೆ. ಶಿಕ್ಷಕರಿಂದ ವಿದ್ಯಾರ್ಥಿಗೆ ಅಲ್ಲ. ಶಿಕ್ಷಕರಿಂದ ಪೋಷಕರಿಗೆ, ಅವರಿಂದ ಮಕ್ಕಳಿಗೆ. ಇದು ತ್ರಿಕೋನ ಪ್ರಕ್ರಿಯೆ. ಯಾರು ಎಚ್ಚರ ತಪ್ಪಿದರೂ, ನಿರುತ್ಸಾಹ ತೋರಿದರೂ ಶೈಕ್ಷಣಿಕ ಚಟುವಟಿಕೆ ಗುರಿ ತಲುಪದೆ ಅಡ್ಡಾದಿಡ್ಡಿ ಚಲಿಸುತ್ತದೆ.

ಈ ಕಾಲಘಟ್ಟದ ಪ್ರಮುಖ ಅಗತ್ಯವಾಗಿರುವ ಆನ್‌ಲೈನ್‌ ಕಲಿಕೆ ಎಂಬುದು ಏಕಕಾಲಕ್ಕೆ ಮಕ್ಕಳು, ಪೋಷಕರು ಮತ್ತು ಶಿಕ್ಷಕರ ಬೋಧನೆ–ಕಲಿಕೆಯ ಸಾಮರ್ಥ್ಯಕ್ಕೆ ಸಂಬಂಧಿಸಿದ ಸಂಕೀರ್ಣ ವಿಷಯವೂ ಹೌದು.

ಮನೆಯಲ್ಲಿ ಆನ್‌ಲೈನ್‌ ಗೋಡೆಯ ಮೇಲೆ ಕಾಣಿಸುವ ‘ವರ್ಚುಯಲ್‌ ಕ್ಲಾಸ್‌ ರೂಂ’ನಲ್ಲಿ ಆಡಿಯೋ, ವೀಡಿಯೋ, ಇ–ಬುಕ್‌ಗಳು, ರೆಕಾರ್ಡ್‌ ಮಾಡಿದ ಪಾಠಗಳು, ಲೈವ್‌ ಕ್ಲಾಸ್‌ಗಳು, ಪಾಠಗಳ ಮೂಲಕವೇ ಶೈಕ್ಷಣಿಕ ವಾತಾವರಣವನ್ನು ನಿರ್ಮಿಸಬೇಕು. ಇಲ್ಲಿ ಯಾರೂ ಹಿಂಜರಿಯುವಂತಿಲ್ಲ. ನಿಂತಲ್ಲೇ ನಿಲ್ಲುವಂತೆಯೂ ಇಲ್ಲ. ಮುಂದುವರಿಯಲೇ ಬೇಕು. ಗೊಣಗಾಟಗಳು ಇದ್ದರೆ ಇರಲಿ.

ಪಾಠ ಆನ್‌ಲೈನ್‌ನಲ್ಲಿ, ಪರೀಕ್ಷೆ? ಪ್ರಶ್ನೆಪತ್ರಿಕೆ? ಅದೂ ಆನ್‌ಲೈನೇ. ಪಾಠ–ಕಲಿಕೆ–ಸಾಮರ್ಥ್ಯ ಪರೀಕ್ಷೆ ಎಲ್ಲವೂ ಆನ್‌ಲೈನ್‌.
ಇದು ನಮ್ಮ ದೇಶಕ್ಕೆ ಹೊಸತೇನೂ ಅಲ್ಲ. ತರಗತಿಗಳಲ್ಲಿ ಜೋರು ಗಲಾಟೆಗಳ ನಡುವೆಯೇ ಬೋಧನೆಯು ನಡೆಯುತ್ತಿದ್ದ ಕಾಲಘಟ್ಟದಲ್ಲೇ, ಶಾಲೆಗೆ ಹೋಗಲು ಆಗದವರಿಗೆ ರೇಡಿಯೋ ಪಾಠಗಳು, ದೂರದರ್ಶನದ ಪಾಠಗಳು ದಶಕಗಳ ಮುಂಚೆಯಿಂದಲೂ ಕಲಿಸುತ್ತಾ ಬಂದಿವೆ.

ಈಗ ಯಾವ ಮಕ್ಕಳೂ ಶಾಲೆಗೆ ಹೋಗಲು ಸದ್ಯಕ್ಕೆ ಆಗುವುದಿಲ್ಲ. ಅದಕ್ಕೆಂದೇ, ಅಥವಾ ಅದಕ್ಕೂ ಮುಂಚೆಯಿಂದಲೇ ಎನ್‌ಸಿಇಆರ್‌ಟಿ, ಸಿಬಿಎಸ್‌ಇ ಪಠ್ಯಪುಸ್ತಕಗಳು ಆನ್‌ಲೈನ್‌ನಲ್ಲಿ ದೊರಕುತ್ತಿವೆ. ಅವುಗಳನ್ನು ಡೌನ್‌ಲೋಡ್‌ ಮಾಡಿಕೊಳ್ಳಬಹುದು. ವೀಡಿಯೋ ಪಾಠಗಳನ್ನು ನೋಡಬಹುದು. ಕೇಂದ್ರ ಸರ್ಕಾರದ ‘ದೀಕ್ಷಾ’ ವೆಬ್‌ಸೈಟ್‌ನಲ್ಲಿ ಸಾವಿರಾರು ಪಾಠಗಳು ಸಿಗುತ್ತವೆ. ಅದೂ ಒಂದರಿಂದ ಹತ್ತನೇ ತರಗತಿವರೆಗೂ...

ಇಂಥ ಅನುಕೂಲಕರ ಕಲಿಕೆಯ ನಡುವೆಯೇ, ಪ್ರಾಥಮಿಕ ತರಗತಿಗಳಿಗೆ ಮಕ್ಕಳನ್ನು ಸೇರಿಸಿದ ಪೋಷಕರ ಕಷ್ಟಗಳೇನು, ಅಗತ್ಯಗಳೇನು? ಏನೂ ಅರಿಯದ ಅವರ ಮಕ್ಕಳ ಕಷ್ಟಗಳೇ ಎಂಬ ಕುರಿತು ಶಾಲೆಗಳು ಹಾಗೂ ಶಿಕ್ಷಣ ಇಲಾಖೆ ಗಂಭೀರ ಗಮನ ಹರಿಸಲೇಬೇಕು. ಇಲ್ಲವಾದರೆ ಕಲಿಕೆಯ ಪ್ರಕ್ರಿಯೆಗಿಂತಲೂ ಮುಂಚಿನ ನಿಯಮಗಳ ಪಾಲನೆಯೇ ದೊಡ್ಡ ಸವಾಲಾಗಿಬಿಡುವ ಸಾಧ್ಯತೆ ದಟ್ಟವಾಗಿದೆ.

ಉನ್ನತ ಶಿಕ್ಷಣದ ಹಂತದಲ್ಲಿ ಆನ್‌ಲೈನ್‌ ಕಲಿಕೆ ಹೇಗಿರಬಹುದು ಎಂಬುದಕ್ಕೂ ಬಳ್ಳಾರಿಯದ್ದೇ ಒಂದು ನಿದರ್ಶನವನ್ನು ಕೊಡಬಹುದು.
ಜಿಮ್‌ನಲ್ಲಿ ಕಿವಿಗೆ ಈಯರ್‌ಫೋನ್‌ ಹಾಕಿಕೊಂಡು ವ್ಯಾಯಾಮ ಮಾಡುತ್ತಿದ್ದ ಯುವತಿಯ ಫೋನ್‌ನಲ್ಲಿ ಪ್ರೊಫೆಸರೊಬ್ಬರ ಲೈವ್‌ ಕ್ಲಾಸ್‌ ನಡೆಯುತ್ತಿದ್ದುದು ಕಾಣಿಸುತ್ತಿತ್ತು.

ಆಕೆ ಹೈದರಾಬಾದ್‌ನ ವಿಶ್ವವಿದ್ಯಾಲಯದಲ್ಲಿ ರಾಜಕೀಯ ಶಾಸ್ತ್ರದಲ್ಲಿ ಪಿಎಚ್‌ಡಿ– ಸಂಶೋಧನೆ ವಿದ್ಯಾರ್ಥಿನಿ. ಫೋನ್‌ ನೋಡಿದವರು ‘ನಿಮ್ಮ ಫೋನ್‌ನಲ್ಲಿ ಲೈವ್‌ನಲ್ಲಿ ಯಾರೋ ಇದ್ದಾರೆ ನೋಡಿ’ ಎಂದು ಗಮನ ಸೆಳೆದರು. ಈಯರ್‌ ಫೋನ್‌ ತೆಗೆದ ಆಕೆ, ‘ಅವರು ನಮ್ಮ ಪ್ರೊಫೆಸರ್‌. ಲೈವ್‌ ಕ್ಲಾಸ್‌ ತಗೊಂಡಿದ್ದಾರೆ’ಎಂದು ನಕ್ಕು ತನ್ನ ವ್ಯಾಯಾಮದತ್ತ ಗಮನ ಹರಿಸಿದರು. ದೇಹ ದಂಡಿಸುತ್ತಿದ್ದರೂ ಕಿವಿಯಲ್ಲಿ ಪ್ರೊಫೆಸರ್‌ ಪಾಠ ಕೇಳಿಬರುತ್ತಿತ್ತು.

ಇದು ಉನ್ನತ ಶಿಕ್ಷಣದ ಬೋಧನೆ–ಕಲಿಕೆಯ ಹೊಸ ಮಾದರಿ. ‘ಮೇಷ್ಟ್ರು ಎದುರಿಗಿದ್ದಾರೆ. ಅವರತ್ತ ನೋಡುತ್ತಾ ಪಾಠ ಕೇಳುತ್ತಿರಬೇಕು’ ಎಂಬ ಪ್ರಾಥಮಿಕ ಶಿಸ್ತು ಇಲ್ಲಿ ಗೈರುಹಾಜರಾಗಿದೆ. ಅದರ ಪಾಲನೆಯು ಇಲ್ಲಿ ಐಚ್ಛಿಕ. ಇದು ಉನ್ನತ ಶಿಕ್ಷಣದಲ್ಲಿ ಬೋಧನೆ–ಕಲಿಕೆಯ ಪರಿಸ್ಥಿತಿ. ಪ್ರಾಥಮಿಕ ಹಂತದಲ್ಲಿ ತಲೆಕೆಳಗು. ಘನ ಗಂಭೀರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT