ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನ್‌ಲೈನ್‌/ ಆಫ್‌ಲೈನ್‌ ಯಾವ ಅಧ್ಯಯನ ಸೂಕ್ತ?

Last Updated 16 ಫೆಬ್ರುವರಿ 2020, 19:30 IST
ಅಕ್ಷರ ಗಾತ್ರ

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುವಾಗ ಅದು ಆನ್‌ಲೈನ್‌ ಇರಲಿ ಅಥವಾ ಆಫ್‌ಲೈನ್‌ ಇರಲಿ, ವಿದ್ಯಾರ್ಥಿಗಳು ಎರಡನ್ನೂ ಅವಲೋಕಿಸಿ ನಮಗೆ ಸೂಕ್ತವೆನಿಸುವ ಅಧ್ಯಯನವನ್ನು ಆಯ್ಕೆ ಮಾಡಿಕೊಳ್ಳಬೇಕು. ಈ ಎರಡು ಅಧ್ಯಯನಗಳಲ್ಲೂ ಅಧ್ಯಯನ ಸಾಮಗ್ರಿಗಳ ಮಹತ್ವ ಬಹುಮುಖ್ಯವಾದದ್ದು

ನಿಮಗೆ ಅರ್ಥೈಸಲು ಮತ್ತು ವಿವರಿಸಲು ಬಾಹ್ಯವಾಗಿ ಒಬ್ಬ ಶಿಕ್ಷಕರ ಪ್ರೇರಣೆ ಅಗತ್ಯವಿದೆ ಎನಿಸಿದರೆ ನಿಮಗೆ ಆಫ್‌ಲೈನ್‌ನ ತರಬೇತಿ ಅತ್ಯವಶ್ಯ. ಇದಲ್ಲದೇ ಅಭ್ಯಸಿಸುವಾಗ ನಿಮ್ಮ ಸ್ಥಿರತೆ, ಶಿಸ್ತು ಹಾಗೂ ಜವಾಬ್ದಾರಿಗಳನ್ನು ನೀವು ಬಾಹ್ಯವಾಗಿ ಅಪೇಕ್ಷಿಸುತ್ತಿದ್ದಲ್ಲಿ ಖಂಡಿತ ಇಂತಹ ತರಬೇತಿಯ ಅವಶ್ಯವಿದೆ.

ಉದಾಹರಣೆಗೆ ಯಾವುದೋ ಒಂದು ವಿಷಯದ ವಿವರಣೆ ನೀಡಿದ ತರಬೇತುದಾರರು ಕೆಲವು ಪ್ರಶ್ನೆಗಳನ್ನು ನೀಡಿ ‘ನಾಳೆಯೊಳಗೆ ಇವುಗಳನ್ನು ಉತ್ತರಿಸಿ’ ಎಂಬ ಕಾಲಮಿತಿ ನೀಡಿದ್ದಾರೆ ಎಂದುಕೊಳ್ಳೋಣ. ಒಂದು ತರಬೇತಿ ಶಿಬಿರದ ವಾತಾವರಣದಲ್ಲಿ ವಿದ್ಯಾರ್ಥಿ ಇವುಗಳನ್ನು ತನ್ನ ಪರಿಶ್ರಮದಿಂದ ಅಥವಾ ಸ್ನೇಹಿತರ ಜೊತೆ ಸೇರಿ ಉತ್ತರಿಸಲು ಪ್ರಯತ್ನಿಸುತ್ತಾನೆ. ಆದರೆ ಆನ್‌ಲೈನ್‌ ಅಧ್ಯಯನದಲ್ಲಿ ಈ ವಾತಾವರಣ ಇರುವುದಿಲ್ಲ. ಇಲ್ಲಿ ವಿದ್ಯಾರ್ಥಿ ಸ್ವ ಇಚ್ಛೆಯಿಂದ ಹಾಗೂ ಸ್ವಯಂ ಪ್ರೇರಣೆಯಿಂದ ಪೂರ್ತಿಗೊಳಿಸುವ ಶಿಸ್ತು ಇದ್ದಾಗ ಮಾತ್ರ ತನ್ನಷ್ಟಕ್ಕೆ ತಾನೇ ಅಧ್ಯಯನ ನಡೆಸಲು ಸಾಧ್ಯ.

ಸಮಯ ನಿರ್ವಹಣೆ

ಅಧ್ಯಯನ ಸಮಯಕ್ಕೆ ಆಫ್‌ಲೈನ್‌ಗಿಂತಲೂ ಆನ್‌ಲೈನ್‌ನಲ್ಲಿ ಹೆಚ್ಚು ಸಮಯ ದೊರಕುತ್ತದೆ. ಉದಾಹರಣೆಗೆ ತರಬೇತಿಯ ಅವಧಿಯು ನಿತ್ಯ 2 ಗಂಟೆ ಇದ್ದರೆ ಹಾಗೂ ತರಬೇತಿ ಶಿಬಿರ ದೂರವಿದ್ದರೆ ಪ್ರತಿನಿತ್ಯ 3–4 ಗಂಟೆ ವ್ಯಯಿಸಬೇಕಾಗುತ್ತದೆ. ಒಂದು ವೇಳೆ ನಿಮಗೆ ಆರೋಗ್ಯದ ಸಮಸ್ಯೆ ಎದುರಾದಲ್ಲಿ ಆ ದಿನ ನಡೆದ ತರಬೇತಿಯನ್ನು ಕಳೆದುಕೊಳ್ಳಬೇಕಾಗುತ್ತದೆ, ಅದು ಬಹುಮುಖ್ಯವಾಗಿದ್ದರೂ ಕೂಡ. ಆದರೆ ಆನ್‌ಲೈನ್‌ ಅಧ್ಯಯನದಲ್ಲಿ ಈ ತೊಂದರೆ ಬಾರದು. ಇಲ್ಲಿ ನೀವು ಲೈವ್ ಕ್ಲಾಸ್‌ಗಳನ್ನು ಹಲವಾರು ಕಾರಣಗಳಿಂದಾಗಿ ವೀಕ್ಷಿಸಲು ಸಾಧ್ಯವಾಗದಿದ್ದಲ್ಲಿ ನಂತರ ನಿಮಗೆ ಅನುಕೂಲವಾದ ಸಮಯದಲ್ಲಿ ರೆಕಾರ್ಡೆಡ್ ವಿಡಿಯೊ ತರಗತಿಗಳನ್ನು ವೀಕ್ಷಿಸಬಹುದು. ಉದಾಹರಣೆಗೆ ಗ್ರಂಥಾಲಯದಲ್ಲಿ, ಪ್ರಯಾಣದಲ್ಲಿ ಅಥವಾ ಕೆಫೆಯಲ್ಲಿ ಅಥವಾ ಮನೆಯಲ್ಲಿ. ಆದರೆ ಕೋಚಿಂಗ್ ಕ್ಲಾಸ್ ವಿಷಯದಲ್ಲಿ ನೀವು ಆ ನಿರ್ದಿಷ್ಟ ಕಾಲಮಿತಿಯೊಳಗೆ ಹಾಜರಾಗಬೇಕಾಗುತ್ತದೆ

ಅನುಮಾನಗಳ ನಿವಾರಣೆ

ಕೋಚಿಂಗ್‌ನಲ್ಲಿ ಸಹಪಾಠಿಗಳು ಹಾಗೂ ಪ್ರಾಧ್ಯಾಪಕರ ಜೊತೆಗೆ ಪರಸ್ಪರ ಚರ್ಚೆಗೆ ಅವಕಾಶವಿರುತ್ತದೆ ಹಾಗೂ ಅನುಮಾನ ನಿವಾರಣೆಗಳಿಗೆ ಅವಕಾಶ ಇರುತ್ತದೆಯಾದರೂ ಕೋಚಿಂಗ್‌ನಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಸಾಕಷ್ಟು ಇದ್ದಾಗ ಇದರ ಸಾಧ್ಯತೆ ಬಹಳ ಕಡಿಮೆ. ಆದರೆ ಯುಟ್ಯೂಬ್ ತರಗತಿಗಳಲ್ಲಿ ನೀವು ಪರಸ್ಪರ ಚರ್ಚೆ ನಡೆಸಬಹುದು ಹಾಗೂ ಅನುಮಾನ ಪರಿಹರಿಸಿಕೊಳ್ಳಬಹುದು. ಅದರಲ್ಲೂ ನೀವು ಹಣ ಪಾವತಿಸಿ ಕೋರ್ಸ್ ತೆಗೆದುಕೊಂಡಲ್ಲಿ (ಉದಾಹರಣೆಗೆ ಒಂದು ವರ್ಷದ ಆನ್‌ಲೈನ್‌ ಕೋಚಿಂಗ್ ಕ್ಲಾಸ್ ಅಣಕು ಪರೀಕ್ಷೆಗಳನ್ನು ಒಳಗೊಂಡಂತೆ) ಇದರ ಫಲಿತಾಂಶ ಧನಾತ್ಮಕವಾಗಿ ಇರುತ್ತದೆ. ಇವುಗಳಲ್ಲಿ ಎಂತಹ ತರಬೇತಿ ತರಗತಿಗಳನ್ನು ಆಯ್ಕೆ ಮಾಡಿಕೊಳ್ಳುತ್ತೀರಿ ಎಂಬುದರ ಮೇಲೆ ನಿಮ್ಮ ಪರಿಪೂರ್ಣತೆ ಅವಲಂಬಿಸಿರುತ್ತದೆ.

ಅದರಲ್ಲೂ ಕೆಲವು ಪ್ರಮುಖ ಆನ್‌ಲೈನ್‌ ತರಬೇತಿ ತರಗತಿಗಳು ಎಷ್ಟರಮಟ್ಟಿಗೆ ವಿದ್ಯಾರ್ಥಿಗಳಲ್ಲಿ ವಿಶ್ವಾಸ ಹೆಚ್ಚಿಸುತ್ತಿವೆ ಎಂದರೆ ದಿನನಿತ್ಯ ಎಲ್ಲಾ ವಿಷಯಕ್ಕೆ ಸಂಬಂಧಿಸಿದ ಆನ್‌ಲೈನ್‌ ತರಗತಿಗಳು, ಅದಕ್ಕೆ ಸಂಬಂಧಿಸಿದ ವಿಡಿಯೊಗಳು ಹಾಗೂ ಪ್ರತಿನಿತ್ಯ ಸ್ಪೀಡ್‌ ಪರೀಕ್ಷೆಗಳು, ಪ್ರಚಲಿತ ವಿದ್ಯಮಾನದ ಪ್ರಶ್ನೆಗಳು ಹಾಗೂ ವಾರಕ್ಕೊಂದು ಲೈವ್ ಪ್ರಾಕ್ಟೀಸ್ ಸೆಷನ್ ಇರುತ್ತವೆ. ಇದರಲ್ಲಿ ವಿದ್ಯಾರ್ಥಿಯ ಸಾಮರ್ಥ್ಯ ಏನು, ದೌರ್ಬಲ್ಯ ಏನು, ಯಾವ ವಿಷಯದಲ್ಲಿ ಇನ್ನೂ ಹೆಚ್ಚಿನ ತಯಾರಿಯ ಅವಶ್ಯಕತೆ ಇದೆ ಎಂಬುದನ್ನು ಆಯಾ ಪ್ರಾಕ್ಟೀಸ್ ಸೆಷನ್‌ ಮುಗಿದ ನಂತರ ಸ್ಕೋರ್ ಬೋರ್ಡ್ ಮುಖಾಂತರ ವಿದ್ಯಾರ್ಥಿಗಳಿಗೆ ತಲುಪಿಸಲಾಗುತ್ತದೆ. ಆಗ ಸಹಜವಾಗಿ ವಿದ್ಯಾರ್ಥಿ ತನಗೆ ಕಷ್ಟ ಇರುವ ವಿಷಯದಲ್ಲಿ ಹೆಚ್ಚು ಶ್ರಮ ಹಾಕಿ ಅಂಕ ಗಳಿಸುವಲ್ಲಿ ಸಫಲನಾಗಬಲ್ಲ. ಇದಲ್ಲದೆ ನಾವು ಅಭ್ಯಾಸ ಹೇಗೆ ನಡೆಸಬೇಕು, ಅಧ್ಯಯನಕ್ಕೆ ವೇಳಾಪಟ್ಟಿ ಹೇಗಿರಬೇಕು.. ಇನ್ನೂ ಹತ್ತು ಹಲವಾರು ಪ್ರಶ್ನೆಗಳಿಗೆ ಆನ್‌ಲೈನ್‌ ಚಾರ್ಟ್ ಮುಖಾಂತರ ತರಬೇತುದಾರರಿಂದ ಅಥವಾ ಸ್ನೇಹಿತರಿಂದ 24×7 ಆನ್‌ಲೈನ್‌ ಶಂಕೆ ನಿವಾರಣೆ ಸೌಲಭ್ಯವಿರುತ್ತದೆ. ಇದಲ್ಲದೆ ಸಂದರ್ಶನ ಅಭ್ಯಾಸದ ತರಬೇತಿಗೆ ವಿಡಿಯೊ ಚ್ಯಾಟ್‌ ಮುಖಾಂತರ ವಿದ್ಯಾರ್ಥಿಗೆ ಮುಖಾಮುಖಿ ತರಬೇತಿ ನೀಡಲಾಗುತ್ತದೆ. ಈ ಎಲ್ಲ ಸೌಲಭ್ಯಗಳು ಆಫ್‌ಲೈನ್‌ ಕೋಚಿಂಗ್‌ನಲ್ಲಿ ದೊರೆಯುವುದು ಕಷ್ಟಕರ.

(ಮುಂದಿನ ವಾರ: ಸೂಕ್ತ ಆನ್‌ಲೈನ್‌ ಕೋಚಿಂಗ್ ಕ್ಲಾಸ್ ಆಯ್ಕೆ ಹೇಗೆ?)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT