ಶನಿವಾರ, ಆಗಸ್ಟ್ 13, 2022
24 °C

PV Web Exclusive | ಶಾಲೆಯ ಕದ ‘ಇಷ್ಟೇ’ ತೆರೆಯಲು ಮೂರೇ ದಿನ ಬಾಕಿ!

ಕೆ.ನರಸಿಂಹಮೂರ್ತಿ Updated:

ಅಕ್ಷರ ಗಾತ್ರ : | |

ಸೆಪ್ಟೆಂಬರ್‌ 21ಕ್ಕೆ ಇನ್ನು ಮೂರು ದಿನವಷ್ಟೇ ಉಳಿದಿದೆ. ಕೊರೊನಾ ಕಾಲಘಟ್ಟದ ಲಾಕ್‌ಡೌನ್‌ ಪರಿಣಾಮವಾಗಿ ಮಾರ್ಚ್‌ನಿಂದಲೂ ಮುಚ್ಚಿರುವ ದೇಶದ ಶಾಲೆಗಳಿಗೆ, ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಇದು ಸಂಭ್ರಮದ ದಿನವಾಗುವುದೋ, ಗೊಂದಲದ ದಿನವಾಗಿಯೇ ಮುಂದುವರಿಯುವುದೋ ಇನ್ನೂ ಸ್ಪಷ್ಟವಾಗಿಲ್ಲ. ಯುಗಾದಿ ಹೋಗಿ ದಸರೆ ಬಂದಿದೆ.

ಲಾಕ್‌ಡೌನ್‌ ಘೋಷಣೆಗೂ ಮುನ್ನವೇ ಮುಚ್ಚಿದ್ದ ಶಾಲೆಗಳನ್ನು ಸೆ.21ರಿಂದ ವಿದ್ಯಾರ್ಥಿ–ಪೋಷಕರ ಇಷ್ಟಾನುಸಾರವಾಗಿ ಆಂಶಿಕವಾಗಿಯಷ್ಟೇ ತೆರೆಯಲು ಅನುವು ಮಾಡಿರುವ ಕೇಂದ್ರ ಸರ್ಕಾರವು ಸೆಪ್ಟೆಂಬರ್‌ 8 ರಂದು ಮಾರ್ಗಸೂಚಿಗಳನ್ನು ಪ್ರಕಟಿಸಿಯಾಗಿದೆ.

‘ಕೊರೊನಾ ಜನ ಸಮುದಾಯಕ್ಕೇ ಹಬ್ಬಿರುವ ಸನ್ನಿವೇಶದಲ್ಲಿ ಆ ಮಾರ್ಗಸೂಚಿ ಪ್ರಕಟಿಸಿದ್ದೇ ಒಂದು ಮೂರ್ಖತನದ ನಿರ್ಧಾರ’ ಎಂಬ ಟೀಕೆಗಳೂ ಹೊರಬಿದ್ದಿವೆ. ‘ಯಾರಾದರೂ ತಮ್ಮ ಅಮೂಲ್ಯ ಮಕ್ಕಳನ್ನು ಶಾಲೆಗೆ ಕಳಿಸಿ ಕಳೆದುಕೊಳ್ಳಲು ಬಯಸುತ್ತಾರೆಯೇ’ ಎಂಬ ಪ್ರಶ್ನೆಗಳೂ ಬಂದಿವೆ. ಮಾರ್ಚ್‌ ಬಳಿಕ ಎಲ್ಲೆಡೆ, ಎಲ್ಲ ಹಂತಗಳಲ್ಲಿ ದೇಶವು ಅಪ್ಪಿಕೊಂಡ ದೂರಶಿಕ್ಷಣ ಮತ್ತೆ ಹತ್ತಿರವಾಗುವುದೇ ಎಂಬ ಪ್ರಶ್ನೆಗೆ ಉತ್ತರವೂ ದೂರವೇ ಉಳಿದಿದೆ. ತಲೆಗೆ ಹೆಚ್ಚು ಕೆಲಸ ಕೊಟ್ಟಿರುವಾಗ ಹೃದಯದ ಮಾತನ್ನು ಕೇಳಲು ಆಗುವುದಿಲ್ಲ.

’9ರಿಂದ 12ನೇ ತರಗತಿವರೆಗಿನ ವಿದ್ಯಾರ್ಥಿಗಳು ಮಾತ್ರ ಸ್ವಯಂಪ್ರೇರಣೆಯಿಂದ, ಅದೂ ಪೋಷಕರ ಒಪ್ಪಿಗೆಯನ್ನು ಕಡ್ಡಾಯವಾಗಿ ಪಡೆದುಕೊಂಡೇ ಶಾಲೆಗೆ ಬಂದು ಶಿಕ್ಷಕರನ್ನು ಭೇಟಿ ಮಾಡಿ ಪಠ್ಯಕ್ಕೆ ಸಂಬಂಧಿಸಿದ ಗೊಂದಲಗಳನ್ನು ಪರಿಹರಿಸಿಕೊಳ್ಳಬಹುದು. ಶಿಕ್ಷಣ ಸಂಸ್ಥೆಗಳು ಶೇಕಡ 50ರಷ್ಟು ಶಿಕ್ಷಕರನ್ನು ಮಾತ್ರ ಅದಕ್ಕೆ ನಿಯೋಜಿಸಬೇಕು’ ಎಂಬುದು ಕೇಂದ್ರ ಸರ್ಕಾರದ ಸ್ಪಷ್ಟ ಮಾರ್ಗಸೂಚಿ ಮಾತು.

ಅದಕ್ಕಾಗಿ ಶಾಲೆಗಳು ಹಾಗೂ ಶಿಕ್ಷಕರು ಯಾವ ಬಗೆಯಲ್ಲಿ ಸಿದ್ಧತೆ ಮಾಡಿಕೊಳ್ಳಬೇಕು. ಸಿಬ್ಬಂದಿ, ವಿದ್ಯಾರ್ಥಿಗಳಲ್ಲಿ ಸೋಂಕಿನ ಲಕ್ಷಣಗಳು ಕಂಡು ಬಂದರೆ ಏನು ಮಾಡಬೇಕು ಎಂಬುದನ್ನೂ ಪ್ರತ್ಯೇಕವಾಗಿ ವಿವರಿಸಿದೆ. ಶಾಲೆಗಳು ಆರಂಭವಾದರೂ ದೂರಶಿಕ್ಷಣ ಮತ್ತು ಆನ್‌ಲೈನ್‌ ಶಿಕ್ಷಣಕ್ಕೆ ಇರುವ ಆದ್ಯತೆಗಳೇನೂ ಕಡಿಮೆಯಾಗುವುದಿಲ್ಲ ಎಂದೂ ಹೇಳಿದೆ.

ಈ ಪ್ರಕ್ರಿಯೆಯ ನಡುವೆ, 1ರಿಂದ 8ನೇ ತರಗತಿವರೆಗಿನ ಮಕ್ಕಳು ಮನೆಯಲ್ಲಿದ್ದುಕೊಂಡೇ ಕಲಿಯವುದೂ ಮುಂದುವರಿಯಲಿದೆ. ಕತ್ತಲೆ ದಾರಿ ದೂರ ಎಂಬಂತೆ ಅವರಿಗೆ ಶಾಲೆಯ ದಾರಿಯೂ ದೂರ.

21ರಿಂದ ಶಾಲೆಗಳು ಮೊದಲಿನಂತೆ ಪೂರ್ಣಪ್ರಮಾಣದಲ್ಲಿಯೇನೂ ಆರಂಭವಾಗುವುದಿಲ್ಲ. ಬದಲಿಗೆ ಶಾಲೆಯಿಂದ ದೂರ ಉಳಿದು ಆನ್‌ಲೈನ್‌ ಕಲಿಕೆಯಲ್ಲಿ ತೊಡಗಿರುವ ಪ್ರೌಢ ವಿದ್ಯಾರ್ಥಿಗಳಿಗೆ ಶಾಲೆಗೆ ಭೇಟಿ ನೀಡಲು ಇದೊಂದು ಅವಕಾಶವಷ್ಟೇ. ಸದ್ಯ ‘ಇದನ್ನು ಅವಕಾಶ ಎನ್ನಲು ಸಾಧ್ಯವಿಲ್ಲ’ ಎಂಬುವವರೇ ಹೆಚ್ಚಿದ್ದಾರೆ. ‘ಮಕ್ಕಳನ್ನು ಶಾಲೆಗೆ ಕಳಿಸಿ ನೋಡೋಣ’ ಎಂದು ದೈರ್ಯ ತೋರುವ ಪೋಷಕರು ಅತಿಕಡಿಮೆ. ಶಾಲೆಗಳ ಮುಖ್ಯಸ್ಥರು, ಮುಖ್ಯಶಿಕ್ಷಕರು ಗೊಂದಲದಲ್ಲೇ ಇದ್ದಾರೆ. ಯಾವುದೂ ಸ್ಪಷ್ಟವಿಲ್ಲ. ಆದರೆ ಸಿದ್ಧತೆಯಂತೂ ನಡೆದಿದೆ.

‘ಮಕ್ಕಳನ್ನು ಕಳಿಸಬೇಕೋ ಬೇಡವೋ’ಎಂಬುದು ಪೋಷಕರ ಚಿಂತೆ. ‘ಶಾಲೆಗೆ ಮಕ್ಕಳು ಬರುತ್ತಾರೋ ಇಲ್ಲವೋ’ ಎಂಬುದು ಶಿಕ್ಷಣ ಸಂಸ್ಥೆಗಳ ಚಿಂತೆ. ‘ಸದ್ಯ ಶೈಕ್ಷಣಿಕ ಸನ್ನಿವೇಶ ಸುಧಾರಿಸಲು ಇನ್ನೇನನ್ನು ಮಾಡಬೇಕು’ ಎಂಬುದು ಸರ್ಕಾರದ ಚಿಂತೆ.

ಈ ನಡುವೆಯೇ, ವರ್ಚುವಲ್‌ ಶಾಲೆಯ ಆನ್‌ಲೈನ್‌ ಕಲಿಕೆ ಹೆಚ್ಚೋ, ತರಗತಿ ಕೊಠಡಿಯೊಳಗಿನ ಮುಖಾಮುಖಿ ಕಲಿಕೆ ಹೆಚ್ಚೋ ಎಂಬ ಚರ್ಚೆಗಳು ನಿರಂತರವಾಗಿ ನಡೆಯುತ್ತಲೇ ಇವೆ. ಪರಿಣಾಮಕಾರಿ ಕಲಿಕೆಯ ದೃಷ್ಟಿಯಿಂದ ಎರಡೂ ಬಗೆಯ ಶಾಲೆಗಳಿಗೂ ಅವುಗಳದ್ದೇ ಆದ ಭೇದ–ಭಾವ, ಕುಂದು–ಕೊರತೆ, ಲಾಭ–ನಷ್ಟಗಳಿದ್ದೇ ಇವೆ. ಇವುಗಳ ಕುರಿತ ಗಂಭೀರ ಚಿಂತನೆಗಳ ಜೊತೆಗೇ ಜೋಕುಗಳೂ ಸಾಕಷ್ಟು ಬಂದು ಹೋಗಿವೆ.

ಕೊರೊನಾ ಕಾಲಘಟ್ಟದಲ್ಲಿ ಅತಿ ಅವಲಂಬನೆಯ ಜೊತೆಜೊತೆಗೇ ಜನಪ್ರಿಯತೆಯನ್ನೂ ಗಳಿಸಿಕೊಂಡಿರುವ ಆನ್‌ಲೈನ್‌ ಕಲಿಕೆಯ ನಡುವೆಯೇ, ಸಾಂಪ್ರದಾಯಿಕ ಶಾಲಾ ವ್ಯವಸ್ಥೆಯು ತನ್ನ ಮಹತ್ವವವನ್ನು ಕಳೆದುಕೊಂಡಿಲ್ಲ. ಏಕೆಂದರೆ ಆನ್‌ಲೈನ್‌ ಕಲಿಕೆಯ ಬಹುತೇಕ ಕೂಸುಗಳು ಮತ್ತು ಅವರ ಪೋಷಕರು ಈಗಲೂ ‘ತರಗತಿಯೊಳಗಿನ ಪಾಠವೇ ಚೆನ್ನ’ ಎನ್ನುತ್ತಿದ್ದಾರೆ. ಆದರೆ ಆರೋಗ್ಯ ರಕ್ಷಣೆಯ ವಿಚಾರ ಬಂದರೆ ಶಾಲೆ ಎಲ್ಲರಿಗೂ ಯಮನಂತೆ ಕಾಣಿಸುತ್ತಿದೆ. 

ತರಗತಿಯೊಳಗೆ ಶಿಕ್ಷಕರನ್ನು ಮುಖಾಮುಖಿ ನೋಡುತ್ತಾ, ಅವರು ಹೇಳುವುದನ್ನು ಸಹಪಾಠಿಗಳೊಂದಿಗೆ ಕೇಳಿಸಿಕೊಳ್ಳುತ್ತಾ, ನೋಟ್ಸ್‌ ಬರೆದುಕೊಳ್ಳುತ್ತಾ ಶಿಸ್ತು, ಶ್ರದ್ಧೆಯಿಂದ ಪಾಠವನ್ನು ಕೇಳುವ, ನಡುವೆ ತುಂಟಾಟವಾಡಿ ಬೈಗುಳ ತಿನ್ನುವ ಲೋಕಾಂತದ ಖುಷಿಯೇ ಬೇರೆ. ಏಕಾಗ್ರತೆಯನ್ನು ಎಲ್ಲ ದಿಕ್ಕಿನಿಂದಲೂ ಚದುರಿಸುವಂತೆ ಮಾರ್ಪಾಡಾಗಿರುವ ಮನೆಯಲ್ಲೇ ಬೇಕಾದಂತೆ ಕುಳಿತು ಫೋನ್‌, ಟ್ಯಾಬ್‌, ಕಂಪ್ಯೂಟರ್‌ ಅಥವಾ ಲ್ಯಾಪ್‌ಟಾಪ್‌ನಲ್ಲಿ ಮುಖಗಳನ್ನಷ್ಟೇ ನೋಡುತ್ತಾ ಪಾಠ ಕೇಳುವ ಕೃತಕ ಏಕಾಂತದ ಅನಿವಾರ್ಯ ಅವಲಂಬನೆಯೇ ಬೇರೆ.

ಆದರೂ, ತರಗತಿಯೊಳಗೆ ಒಮ್ಮೆ ಮಾತ್ರ ಪಾಠ ಕೇಳಬಹುದು. ’ಮತ್ತೊಮ್ಮೆ ಮಾಡಿ’ ಎಂದರೆ ಶಿಕ್ಷಕರು ಮೊದಲಿನಂತೆಯೇ ಪಾಠ ಮಾಡಲಾರರು. ಆನ್‌ಲೈನ್‌ನಲ್ಲಿ ಯಾವಾಗ ಬೇಕಾದರೂ ಪಾಠ ಕೇಳಬಹುದು, ನೋಡಬಹುದು, ಓದಬಹುದು! ಆದರೆ ಸಾಂಪ್ರದಾಯಿಕ ತರಗತಿಯೊಳಗೆ ಇರುವಂತೆ, ಗೊಂದಲ ಎದ್ದ ಕೂಡಲೇ ಎದ್ದು ನಿಂತು ಕೇಳಿ ಬಗೆಹರಿಸಿಕೊಳ್ಳಲು ಆಗದು. ಎಷ್ಟೇ ಆಪ್‌ಗಳು, ವೆಬ್‌ಸೈಟ್‌ಗಳಿದ್ದರೂ ಆನ್‌ಲೈನ್‌ ಎಂಬುದು ಬಹುತೇಕ ಒಮ್ಮುಖ ಕಲಿಕೆಯೇ.

ಶಾಲೆಗಳು ಪೂರ್ಣಪ್ರಮಾಣದಲ್ಲಿ ಆರಂಭವಾಗಲು ಆಗದ ಪರಿಸ್ಥಿತಿಯಲ್ಲಿ ಕಲಿಕೆಯ ವಿಧಾನಗಳ ಕುರಿತು ತೌಲನಿಕ ವಿಶ್ಲೇಷಣೆಯೂ ನಡೆಯಲೇಬೇಕು. ಆಗ ಮಾತ್ರ ಗೊಂದಲಗಳು ಪರಿಹಾರವಾಗಬಲ್ಲವು. ಎರಡರ ಸಮನ್ವಯ ಸಾಧ್ಯವೇ? ಅದೂ ಚರ್ಚೆಯಾಗಲಿ. ಹೋಲಿಕೆ ಇಲ್ಲದೆ ಜೀವನವಿಲ್ಲ.

21ರಿಂದ ಶಾಲೆಗಳು ಮತ್ತೆ ಆರಂಭವಾಗಲಿರುವುದು ಕೂಡ, ಆನ್‌ಲೈನ್‌ ಬೋಧನೆ ಮತ್ತು ಕಲಿಕೆಯ ಮುಂದುವರಿದ ಭಾಗವೇ ಆಗಿರುತ್ತದೆ ಎಂಬುದನ್ನು ಮರೆಯುವಂತಿಲ್ಲ. ಇದು ಆರಂಭವಲ್ಲ. ಮಧ್ಯಂತರ ಘಟ್ಟ.

ವಿದ್ಯಾರ್ಥಿಗಳು ಶಾಲೆಗೆ ಬರುವುದು, ಆನ್‌ಲೈನ್‌ ಬೋಧನೆಯ ಸಂದರ್ಭದಲ್ಲಿ ಎದ್ದು ಗೊಂದಲಗಳನ್ನು ಪರಿಹರಿಸಿಕೊಳ್ಳುವ ಸಲುವಾಗಿಯೇ ಹೊರತು ಪೂರ್ಣ ಪಾಠವನ್ನು ಮತ್ತೊಮ್ಮೆ ಕೇಳಲು ಅಲ್ಲ. ಅಂಥ ವ್ಯವಸ್ಥೆಯನ್ನು ಮಾಡುವ ಬಗ್ಗೆ ಯಾವುದೇ ಖಚಿತತೆಯೂ ಇಲ್ಲ. ಕೇಳಿದ, ನೋಡಿದ ಮತ್ತು ಓದಿದ ಪಾಠಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುವ ದಾರಿಗಳ ಕುರಿತು ಶಿಕ್ಷಕರೊಂದಿಗೆ ಸಮಾಲೋಚನೆ ನಡೆಸಬಹುದಷ್ಟೇ. ಅದೂ ಸಾಮೂಹಿಕವಾಗಿಯೇ ಅಥವಾ ವೈಯಕ್ತಿಕವಾಗಿಯೇ ಎಂಬುದೂ ಇನ್ನೂ ಸ್ಪಷ್ಟವಾಗಿಲ್ಲ.

ವಿದ್ಯಾರ್ಥಿಗಳನ್ನು ಪೋಷಕರೇ ಕರೆತರುತ್ತಾರೆಯೇ? ಅಥವಾ ವಿದ್ಯಾರ್ಥಿಗಳೇ ಸ್ವತಃ ಬರಬಹುದೇ? ಒಮ್ಮೆಗೇ ನೂರಾರು ವಿದ್ಯಾರ್ಥಿಗಳು ಬಂದರೆ ಶಿಕ್ಷಕರು ಏನು ಮಾಡುತ್ತಾರೆ? ಬೆರಳೆಣಿಕೆಯ ವಿದ್ಯಾರ್ಥಿಗಳಷ್ಟೇ ಬರುತ್ತಾರೆಯೇ? ಬಂದವರನ್ನು ಆರೋಗ್ಯ ತಪಾಸಣೆಯ ಮುನ್ನೆಚ್ಚರಿಕೆಗಳ ಬಳಿಕ ತರಗತಿ, ಪ್ರಯೋಗಾಲಯಗಳಿಗೆ ಕರೆದೊಯ್ಯಬಹುದೇ? ಹೇಗೆ? ತರಗತಿ ಕೊಠಡಿಗಳನ್ನಷ್ಟೇ ಸಜ್ಜುಗೊಳಿಸಬೇಕೇ? ಪ್ರಯೋಗಾಲಯಗಳನ್ನೂ ತೆರೆದಿರಬೇಕೇ?–ಇಂಥ ಪ್ರಶ್ನೆ, ಗೊಂದಲಗಳ ನಡುವೆಯೇ ಸರ್ಕಾರಿ ಮತ್ತು ಖಾಸಗಿ ಶಾಲೆಗಳು ಲಗುಬಗೆಯಿಂದ ತಕ್ಕಮಟ್ಟಿಗೆ ಸಿದ್ಧತೆಗಳನ್ನು ನಡೆಸುತ್ತಿರುವುದು ಕೂಡ ವಿಶೇಷವೇ.

ಕೇಂದ್ರದ ಮಾರ್ಗಸೂಚಿ ಪ್ರಕಟವಾದ ಬಳಿಕ ರಾಜ್ಯ ಸರ್ಕಾರ ಇನ್ನೂ ತನ್ನ ಮಾರ್ಗಸೂಚಿಯನ್ನು ಪ್ರಕಟಿಸಿಲ್ಲ. ಇವತ್ತು ಅಥವಾ ನಾಳೆ ಪ್ರಕಟವಾಗಬಹುದುಬ ನಿರೀಕ್ಷೆಯಲ್ಲೇ ಸಿದ್ಧತೆಗಳು ನಡೆದಿವೆ.

ತರಗತಿಗೆ 25 ಮಂದಿ: ಲಾಕ್‌ಡೌನ್‌ ತೆರವಾದ ಬಳಿಕ ನಡೆದಿರುವ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಅನುಸರಿಸಿದ ನಿಯಮಗಳನ್ನೇ, ಶಾಲೆಗಳು ಭಾಗಶಃ ಆರಂಭವಾಗುವ ಹೊತ್ತಿನಲ್ಲೂ ಅನುಸರಿಸುವ ಇರಾದೆಯೇ ಬಹುತೇಕರಲ್ಲಿ ಇದೆ.

‘ತರಗತಿ ಕೊಠಡಿಗೆ ಕನಿಷ್ಠ 25 ವಿದ್ಯಾರ್ಥಿಗಳಷ್ಟೇ ಕುಳಿತುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಎಲ್ಲ ಕೊಠಡಿಗಳನ್ನೂ ಸ್ಯಾನಿಟೈಸ್‌ ಮಾಡಲಾಗಿದೆ. ಜ್ವರ ತಪಾಸಣೆ ಯಂತ್ರಗಳಿವೆ. ಹ್ಯಾಂಡ್‌ ಸ್ಯಾನಿಟೈಸರ್‌, ಮಾಸ್ಕ್‌ಗಳೂ ಇವೆ. ವಿದ್ಯಾರ್ಥಿ–ಪೋಷಕರಲ್ಲಿ ಆತಂಕ ನಿವಾರಿಸಬಲ್ಲ ಎಲ್ಲ ಅಗತ್ಯ ಮುಂಜಾಗ್ರತೆಗಳನ್ನು ಕೈಗೊಂಡಿದ್ದೇವೆ’ ಎನ್ನುವ ಬಳ್ಳಾರಿ ನಗರದ ಬಾಪೂಜಿ ನಗರ ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕ ಜಿ.ಎಸ್‌.ಮನೋಹರ್ ಅವರಲ್ಲಿ, ‘ಶಾಲೆಗಳು ಎಂದಿನಂತೆ ಆರಂಭವಾಗಿ ಮಕ್ಕಳ ಕಲರವ ಕೇಳಿಬರುವಂತಾಗಬೇಕು’ ಎಂಬ ಆಸೆ ಪುಟಿದೆದ್ದಿದೆ.

‘ಸೆಪ್ಟೆಂಬರ್‌ ತಿಂಗಳು ಕ್ರೀಡಾಕೂಟಗಳ ಕಾಲ. ಇಲಾಖೆಯ ಮತ್ತು ದಸರಾ ಕ್ರೀಡಾಕೂಟಗಳ ಸಂಭ್ರಮದ ಕಾಲ. ಆದರೆ ಈಗ ಅವು ಇತಿಹಾಸದಂತೆ ಆಗಿಬಿಟ್ಟಿವೆ. ಕೇವಲ ಪಾಠ ಹೇಳಲು ಆನ್‌ಲೈನ್‌ ಮೂಲಕವಷ್ಟೇ ಮಕ್ಕಳನ್ನು ನೋಡಬೇಕಾದ ಪರಿಸ್ಥಿತಿ ವಿಷಾದ ಹುಟ್ಟಿಸಿದೆ. ಪಠ್ಯೇತರ ಚಟುವಟಿಕೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಕಣ್ಮರೆಯಾಗಿವೆ’ ಎನ್ನುತ್ತಾರೆ ಅವರು.

ಇಂಥ ವಿಷಾದದ ನಡುವೆಯೇ, ಹಲವು ಮಕ್ಕಳು ಅವರನ್ನು ಈಗಾಗಲೇ ಭೇಟಿ ಮಾಡಿ ‘ಮತ್ತೆ ಶಾಲೆ ಆರಂಭಿಸಿ’ ಎಂದು ಕೋರಿಕೆ ಸಲ್ಲಿಸಿರುವುದು ಅವರಿಗೆ ಕೊಂಚ ಸಂತಸ ತಂದಿದೆ.

‘ಮಕ್ಕಳ ಸರ್ವತೋಮುಖ ಬೆಳವಣಿಗೆ ಎಂಬುದು ಶಾಲೆಗೆ ಬಂದರಷ್ಟೇ ಸಾಧ್ಯ. ಮನೆಯಲ್ಲೇ ಕುಳಿತು ಪಾಠ ಕಲಿತರೆ ಅದಷ್ಟೇ ಲಾಭ. ಸಹಪಾಠಿಗಳೊಂದಿಗೆ ಬೆರೆಯುವುದು, ಶಿಕ್ಷಕರೊಂದಿಗೆ ಸಮಾಲೋಚಿಸುವುದು, ಶಾಲೆಯ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದು ಮಕ್ಕಳ ವಿಕಾಸಕ್ಕೆ ಅತ್ಯಗತ್ಯ’ ಎಂಬುದು ಅವರ ಪ್ರತಿಪಾದನೆ. ಆದರೆ, ‘ಎಷ್ಟು ಮಂದಿ ಪೋಷಕರು ಮಕ್ಕಳನ್ನು ಧೈರ್ಯವಾಗಿ ಶಾಲೆಗೆ ಕಳಿಸಬಲ್ಲರು? ಎಂಬ ಪ್ರಶ್ನೆಯೂ ಅವರ ಮುಂದೆ ಇದೆ.

‘ಆನ್‌ಲೈನ್‌ ತರಗತಿಗಳಿಗೆ ಇದುವರೆಗೆ ಶೇ 25ರಷ್ಟು ವಿದ್ಯಾರ್ಥಿಗಳಷ್ಟೇ ಹಾಜರಾಗಿದ್ದಾರೆ. ಹೀಗಾಗಿ ಎಲ್ಲ ಪಾಠಗಳನ್ನೂ ಮೊದಲಿನಿಂದ ಮಾಡಲೇಬೇಕು. ಪ್ರೊಜೆಕ್ಟ್‌ ವರ್ಕ್‌ಗಳಿಗೆ ಸಂಬಂಧಿಸಿದ ಗೊಂದಲಗಳನ್ನು ನಿವಾರಿಸಿಕೊಳ್ಳಲು 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳು ಬರಬಹುದೆಂಬ ನಿರೀಕ್ಷೆ ಇದೆ’ ಎಂದು ಬಳ್ಳಾರಿಯ ಬಸವರಾಜೇಶ್ವರಿ ಪಬ್ಲಿಕ್‌ ಸ್ಕೂಲ್‌ ಅಂಡ್‌ ಕಾಲೇಜಿನ ಪ್ರಾಂಶುಪಾಲ ಅನಿಲ್‌ಕುಮಾರ್‌ ಮಾಹಿತಿ ನೀಡಿದರು.

‘ಒಂದು ಡೆಸ್ಕಿನಲ್ಲಿ ಒಬ್ಬರು ಕುಳಿತುಕೊಳ್ಳಲಷ್ಟೇ ವ್ಯವಸ್ಥೆ ಮಾಡಲಾಗಿದೆ. ಶಾಲೆಗೆ ಬರುವ ವಿದ್ಯಾರ್ಥಿಗಳ ಸಂಖ್ಯೆಯನ್ನು ನೋಡಿಕೊಂಡು ವೇಳಾಪಟ್ಟಿಯನ್ನೂ ರಚಿಸಲಾಗುವುದು. ವಿಜ್ಞಾನ ಪ್ರಯೋಗಾಲಯಗಳಲ್ಲಿ ಒಂದು ಬಾರಿ ಕೇವಲ 16 ಮಂದಿಗೆ ಮಾತ್ರ ಪ್ರವೇಶ ನೀಡಲು ನಿರ್ಧರಿಸಲಾಗಿದೆ’ ಎನ್ನುವ  ಅವರ ಪ್ರಕಾರ ಇವೆಲ್ಲವೂ, ’ರಾಜ್ಯ ಸರ್ಕಾರ ಬಿಡುಗಡೆ ಮಾಡಲಿರುವ ಮಾರ್ಗಸೂಚಿಗಳನ್ನು ಅವಲಂಬಿಸಿವೆ’.

ಇವೆಲ್ಲ ಸಿದ್ಧತೆಗಳು ಸೋಂಕಿನ ನಿಯಂತ್ರಣಕ್ಕೆ ಬೇಕಾದ ಕಡ್ಡಾಯ ಮುನ್ನೆಚ್ಚರಿಕೆಗಳು. ಆದರೆ ಈ ಮುನ್ನೆಚ್ಚರಿಕೆಗಳ ಬಳಿಕ ವಿದ್ಯಾರ್ಥಿಗಳ ಕಲಿಕೆ ಮತ್ತು ಗೊಂದಲ ಪರಿಹರಿಸಿಕೊಳ್ಳುವ ಪ್ರಕ್ರಿಯೆ ಹೇಗೆ ನಡೆಯುತ್ತದೆ ಅಥವಾ ಹೇಗೆ ನಡೆಯಬೇಕು ಎಂಬುದು ಸ್ಪಷ್ಟವಿಲ್ಲ.

ಶಾಲೆಗಳು ಎಷ್ಟು ಹೊತ್ತು ವಿದ್ಯಾರ್ಥಿಗಳಿಗೆ ತೆರೆದಿರಬೇಕು? ವಿದ್ಯಾರ್ಥಿಗಳು ತಾವು ಬರುವಾಗ ಏನೇನನ್ನು ತರಬೇಕು? ತರಬಾರದು? ಒಮ್ಮೆ ಬಂದವರು ಮತ್ತೆ ಯಾವಾಗ ಬರಬೇಕು? ಎಷ್ಟು ದಿನಗಳ ಬಳಿಕ ಬರಬೇಕು? ದಿನವೂ ಬರಬಹುದೇ? ಒಂದೇ ತರಗತಿಯ ವಿದ್ಯಾರ್ಥಿಗಳು ಒಟ್ಟೊಟ್ಟಿಗೇ ಬರುವುದಾದರೆ ಎಷ್ಟು ಮಂದಿ ಬರಬೇಕು? ಶಾಲೆಗಳಲ್ಲಿ ಅವರ ನಿರ್ವಹಣೆ ಹೇಗೆ ಎಂಬ ವಿಷಯಗಳ ಕುರಿತು ನಿರ್ದಿಷ್ಟ ಸೂಚನೆಗಳು ಇನ್ನೂ ಹೊರಬಿದ್ದಿಲ್ಲ.

ಶಾಲೆಗಳ ಪುನರಾರಂಭದ ಕುರಿತು ಮುಖ್ಯಸ್ಥರು, ಶಿಕ್ಷಕರು, ಪೋಷಕರ ಗೊಂದಲ ಒಂದು ಬಗೆಯದ್ದಾದರೆ, ಕಲಿಕೆಯ ದಾರಿಯಲ್ಲಿರುವ ವಿದ್ಯಾರ್ಥಿಗಳ ಗೊಂದಲವೇ ಬೇರೆ.

‘ಕೊರೊನಾ ಯಾವಾಗ ಹೋಗುತ್ತದೆ, ನಾವು ಶಾಲೆಗೆ ಯಾವಾಗ ಹೋಗುತ್ತೇವೆ’ ಎಂದು ಕೇಳುವ ವಿದ್ಯಾರ್ಥಿಗಳೇ ಹೆಚ್ಚು. ’ಶಾಲೆಯನ್ನು, ಶಿಕ್ಷಕರನ್ನು ನಿಜವಾಗಲೂ ನೋಡುವುದು ಯಾವಾಗ? ತರಗತಿಯೊಳಗೆ ಕುಳಿತು ತುಂಟಾಟವಾಡುತ್ತಾ, ಪಾಠ ಕೇಳುವುದು ಯಾವಾಗ? ಶಾಲೆಯ ಅಂಗಳದಲ್ಲಿ ಆಟ ಆಡುವುದು ಯಾವಾಗ’ ಎಂಬುದು ಅವರ ಮುಗ್ದ ಪ್ರಶ್ನೆ. ಅವರಿಗೆಲ್ಲ ಇಡೀ ಶಿಕ್ಷಣ ವ್ಯವಸ್ಥೆಯು ಕಿವಿ ಮತ್ತು ಕಣ್ಣಾಗುವುದು ಹೇಗೆ ಎಂಬುದು ಸದ್ಯದ ಪ್ರಶ್ನೆ. ಈ ಕುರಿತು ತಲಸ್ಪರ್ಷಿಯಾದ ಚರ್ಚೆ, ಸಂವಾದ, ಅಧ್ಯಯನಗಳು ಸದ್ಯದ ತುರ್ತು.

ವರ್ಚುವಲ್‌ ತರಗತಿ, ಸಾಂಪ್ರದಾಯಿಕ ತರಗತಿಯ ಶಾಲೆಯ ಜೊತೆಗೆ ಇನ್ನೊಂದು ಶಾಲೆಯೂ ಉಂಟು. ಅದು ಲೋಕದ ಶಾಲೆ. ಕಲಿಸಲು ಇನ್ನೊಂದು ಮಾಧ್ಯಮ ಬೇಕು ಎನ್ನದೆಯೇ ಕಲಿಸುವ ಲೋಕಾನುಭವದ ಶಾಲೆಯ ಭಾಗ್ಯ ಎಲ್ಲ ಮಕ್ಕಳಿಗೂ ಸಿಗುವಂತಾಗಬೇಕು. ಅದು ಶಾಲೆ ಮತ್ತು ಮನೆ ಬಿಟ್ಟು ಹೊರಕ್ಕೆ ಬಂದರಷ್ಟೇ ಸಾಧ್ಯ, ಆದರೆ ಕೊರೊನಾ ಮಕ್ಕಳನ್ನು ಮನೆಯಲ್ಲೇ ಇರಿಸಿದೆ. ಶಾಲೆಯೂ ಬಾಗಿಲು ಮುಚ್ಚಿಕೊಂಡಿದೆ. ಇದು ಬದಲಾಗಿ, ಕೆ.ಎಸ್‌.ನರಸಿಂಹಸ್ವಾಮಿಯವರ ’ಹಿಂದಿನ  ಸಾಲಿನ ಹುಡುಗರು’ ಕವನದ ಹುಡುಗರು ಹೇಳುವಂತೆ,

’ಲೋಕದ ಶಾಲೆಯ ಭಾಗ್ಯದ ಸೆರೆಯಲಿ
ಅನಂತಸುಖವನು ಕಂಡಿಹೆವು.
ಇದೇ ಸತ್ಯವೆಮಗಿದರಾಸರೆಯಲಿ
ಜಯಾಪಜಯಗಳ ದಾಟುವೆವು’

–ಎಂಬ ವಿಶ್ವಾಸ ಎಲ್ಲ ಮಕ್ಕಳಲ್ಲೂ ಬರಲಿ. ಅವರು ಯಾವುದೇ ಬೆಂಚಿನವರಾಗಿರಲಿ!

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು