ಶುಕ್ರವಾರ, ಆಗಸ್ಟ್ 6, 2021
25 °C
ರಾಜ್ಯ, ದೇಶದ ಮೂಲೆ ಮೂಲೆಗೂ ನೆರವಿನ ಪೂರೈಕೆ

ಲಾಕ್‌ಡೌನ್‌ನಲ್ಲಿನ ಸಂಕಷ್ಟಕ್ಕೆ ಮಿಡಿದ ಬೆಂಗಳೂರಿನ ‘ಸಮರ್ಥನಂ‘

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಣ್ಣು ಕಾಣದ ಜ್ಯೋತಿ ಏಳು ತಿಂಗಳ ಗರ್ಭಿಣಿ. ಲಾಕ್‌ಡೌನ್‌ನಿಂದ ಕೆಲಸವೂ ಇಲ್ಲ. ಕೈಯಲ್ಲಿ ಕಾಸಿಲ್ಲ. ತನ್ನಂತೆ ಪತಿ ಶಿವಕುಮಾರ್‌ಗೂ ಕಣ್ಣು ಕಾಣಿಸುತ್ತಿಲ್ಲ. ಟಿವಿಯಲ್ಲಿ ಕೊರೊನಾ ಸಂಬಂಧಿಸಿದ ನಾನಾ ರೋಚಕ ಸುದ್ದಿಗಳನ್ನು ಕೇಳುತ್ತಿದ್ದಂತೆ ಇಬ್ಬರಿಗೂ ಮೈ ನಡುಗುತ್ತಿತ್ತು. ಮುಂದೇನು ಮಾಡುವುದು ಅಂತ ಯೋಚಿಸಲು ಶುರು ಮಾಡಿದರು.

ಆಗ ನೆನಪಿಗೆ ಬಂದಿದ್ದೇ ತನ್ನನ್ನು ಸಾಕಿ ಬೆಳೆಸಿ, ಅಕ್ಷರ ಕಲಿಸಿದ ಬೆಂಗಳೂರಿನ ಎಚ್‌ಎಸ್‌ಆರ್‌ಲೇಔಟ್‌ನಲ್ಲಿರುವ ‘ಸಮರ್ಥನಂ ಅಂಗವಿಕಲರ ಟ್ರಸ್ಟ್‌.  ನೆನಪಾದ ಕೂಡಲೇ ಶಿವಕುಮಾರ್ ದಂಪತಿ ಟ್ರಸ್ಟ್‌ನ ಸಂಸ್ಥಾಪಕ ವ್ಯವಸ್ಥಾಪಕ ಟ್ರಸ್ಟಿ ಮಹಾತೇಶ್ ಜಿ.ಕಿವುಡಸಣ್ಣವರ್‌ ಅವರಿಗೆ ಕರೆ ಮಾಡಿದರು. ಅವರ ಬಳಿ ಕಷ್ಟ ತೋಡಿಕೊಂಡರು. ಅವರು ಕಷ್ಟ ಹೇಳಿಕೊಳ್ಳುತ್ತಿದ್ದಾಗ, ತಾನು ಎತ್ತಿ ಆಡಿಸಿ ಬೆಳೆಸಿದ ಮಗು ಎಂಥ ಕಷ್ಟದ ದಿನಗಳನ್ನು ಎದುರಿಸುತ್ತಿದೆ ಎಂದು ನೆನೆಸಿಕಂಡು ಕಣ್ಣೀರು ಬಂತು ಟ್ರಸ್ಟಿಗೆ. 

ರೇಣುಕಾ, ಮಲ್ಲಿಕಾರ್ಜುನ ಅಂಧ ದಂಪತಿಯ ಕತೆಯೂ ಇದೇ. ಇವರು ಗಾರ್ಮೆಂಟ್ಸ್‌ ಕೆಲಸಕ್ಕೆ ಹೋಗುತ್ತಿದ್ದರು. ಲಾಕ್‌ಡೌನ್ ‌ನಿಂದಾಗಿ ಒಮ್ಮೆಲೆ ಗಾರ್ಮೆಂಟ್ಸ್‌ ಮುಚ್ಚಿದರು. ಸಂಬಳವೂ ಕೈಗೆ ಸಿಕ್ಕಿರಲಿಲ್ಲ. ಸಣ್ಣಪುಟ್ಟ ನೆರವಿಗೂ ಯಾರೂ ಸಿಗಲಿಲ್ಲ. ಇನ್ನು ಕಿವಿ ಕೇಳದ ದೀಪಕ್‌– ಬಸವ್ವ ದಂಪತಿಯನ್ನು ಲಾಕ್‌ಡೌನ್‌ ಅಕ್ಷರಶಃ ಕಂಗೆಡಿಸಿತ್ತು.

ಶಿವಕುಮಾರ್ – ಜ್ಯೋತಿ ಈ ಎರಡೂ ಕುಟುಂಬಗಳೂ ಸಹಾಯಕ್ಕಾಗಿ ‘ಸಮರ್ಥನಂ ಟ್ರಸ್ಟ್‌‘ ಮೊರೆ ಹೋದರು. 

ಇಂಥ ನೂರಾರು ಅಂಗವಿಕಲರನ್ನು ಪೋಷಿಸಿ, ವಿದ್ಯೆ ನೀಡಿದ ಸಮರ್ಥನಂ ಟ್ರಸ್ಟ್‌ಗೆ ಲಾಕ್‌ಡೌನ್‌ ಅವಧಿಯಲ್ಲಿ ನೆರವು ಕೇಳಿಕೊಂಡು ನೂರಾರು ಮಂದಿ ಫೋನ್ ಮಾಡಿದ್ದರು. ಇಂಥ ಕರೆಗಳಿಂದಾಗಿ ಟ್ರಸ್ಟಿ ಮಹಾಂತೇಶ್ ಈ ಎರಡು ತಿಂಗಳು ರಾಜ್ಯದ ಮೂಲೆ ಮೂಲೆಯಲ್ಲಿರುವ ಅಂಗವಿಕಲರಿಗೆ ನೆರವಾಗಲು ಮುಂದಾದರು. ರಾಜ್ಯವಷ್ಟೇ ಅಲ್ಲದೇ ಹೊರ ರಾಜ್ಯಗಳಿಗೂ ಸಮರ್ಥನಂ ಸಹಾಯಸ್ತ ಚಾಚಿತು. ಇಲ್ಲಿವರೆಗೂ ಬೇರೆ ಬೇರೆ ಮೂಲಗಳಿಂದ ದೇಣಿಗೆ ಸಂಗ್ರಹಿಸಿ, ಅಂಗವಿಕಲರು, ಹಿರಿಯ ನಾಗರಿಕರು, ಸಂಕಷ್ಟದಲ್ಲಿರುವ ದಿನಗೂಲಿ ಕಾರ್ಮಿಕರ 11 ಸಾವಿರಕ್ಕೂ ಹೆಚ್ಚು ಕುಟುಂಬಗಳಿಗೆ ಟ್ರಸ್ಟ್‌ ನೆರವು ನೀಡಿದೆ.

ಇತ್ತೀಚೆಗೆ ತಮ್ಮ ಸಂಸ್ಥೆ ಈ ನಡುವೆ ಕೈಗೊಂಡ ಕೆಲವೊಂದು ಕಾರ್ಯಗಳ ಬಗ್ಗೆ ವಿವರಿಸುವಾಗ, ಇಂಥ  ಅನೇಕ ಮನಮಿಡಿಯುವ ಘಟನೆಗಳನ್ನು ಮಹಾತೇಂಶ್‌ ಬಿಚ್ಚಿಟ್ಟರು. 

ಲಾಕ್‌ಡೌನ್‌ ಘೋಷಣೆಯಾದ ಎರಡು– ಮೂರು ದಿನದಲ್ಲಿಯೇ ಸಮರ್ಥನಂ ಟ್ರಸ್ಟ್ ಅಂಗವಿಕಲರಿಗೆ ಹಣಕಾಸು ನೆರವು, ರೇಷನ್ ಕಿಟ್‍ಗಳು, ಬಿಸಿಯೂಟದ ಆಹಾರ ಪೊಟ್ಟಣ ಮತ್ತಿತರ ಸಹಾಯವನ್ನು ಮಾಡಲು ನಿರ್ಧರಿಸಿತು. ಅದಕ್ಕಿಂತ ಮುಂಛೆ ಸಂಸ್ಥೆಯು ಅಲ್ಲಿದ್ದ ಮಕ್ಕಳನ್ನೆಲ್ಲ ಮನೆಗೆ ಕಳುಹಿಸಿತು. ಇದೇ ವೇಳೆಗೆ ಹೊರಗಿನಿಂದ ನೆರವು ಕೇಳಿಕೊಂಡು ಅನೇಕ ಸಂಘ ಸಂಸ್ಥೆಗಳಿಂದ ಫೋನ್‌ಕರೆಗಳು ಬರಲಾರಂಭಿಸಿತು. ಆಗ ಮಹಾತೇಶ್ ಅವರು ತಮ್ಮ ಸಂಸ್ಥೆಯಿಂದ ಅಂಗವಿಕಲರು, ಹಿರಿಯ ನಾಗರಿಕರ ಮನೆ ಬಾಗಿಲಿಗೆ ಉಚಿತ ಸೇವೆ, ಅವರಿಗೆ ಉಚಿತ ರೇಷನ್‌ ಕಿಟ್‌, ಮಾಸ್ಕ್‌, ಸ್ಯಾನಿಟೈಸರ್‌, ಸಂಕಷ್ಟದಲ್ಲಿರುವ ಕಾರ್ಮಿಕರಿಗೆ ಬಿಸಿಯೂಟ ನೀಡುವ ಕಾರ್ಯ ಆರಂಭಿಸಿದರು. ಇವರ ಈ ಕೆಲಸಕ್ಕೆ ನಗರದ ಅನೇಕ ದಾನಿಗಳು ದೇಣಿಗೆ ನೀಡಿದರು. ಕಂಪನಿಗಳು ಸಹಾಯಾಸ್ತ ಚಾಚಿದವು. ‘ತಮ್ಮ ಉದ್ದೇಶ ಕೇಳಿದ ಕೂಡಲೇ ಅಮೆರಿಕದಲ್ಲಿರುವ ಈರಪ್ಪ ಅರಬಾವಿ ಅವರು ₹50 ಸಾವಿರ ಕೊಟ್ಟರು. ಅನೇಕ ಮಂದಿ ನಮ್ಮ ನೆರವಿನ ಕಾರ್ಯಕ್ಕೆ ಕೈ ಜೋಡಿಸಿದರು’ ಎಂದು ವಿವರಿಸಿದರು ಮಹಾತೇಂಶ್‌. 

ಸಂಸ್ಥೆ ಸಮೀಪದಲ್ಲಿ ಗುಡಿಸಲಲ್ಲಿ ವಾಸವಿದ್ದ 25 ವಲಸೆ ಕಾರ್ಮಿಕರಿಗೆ ನಿತ್ಯ ಮೂರು ಹೊತ್ತು ಆಹಾರ ಪೊಟ್ಟಣಗಳನ್ನು ವಿತರಿಸಿದರು. ಮುಂದೆ, ಎರಡು ತಿಂಗಳ ಕಾಲ ಎಚ್‌ಎಸ್‌ಆರ್‌ ಲೇಔಟ್‌, ವಸಂತನಗರ, ಜಯಮಹಲ್‌ ಅರಮನೆ ಸುತ್ತಮುತ್ತ ಇರುವ 5 ಸಾವಿರಕ್ಕೂ ಹೆಚ್ಚು ವಲಸೆ ಕಾರ್ಮಿಕರಿಗೆ ಪ್ರತಿದಿನ ಬಿಸಿಯೂಟ ಪೊಟ್ಟಣಗಳನ್ನು ಪೂರೈಸಿದ್ದಾರೆ.  ಅಲ್ಲದೇ, 11 ಸಾವಿರ ಕುಟುಂಬಗಳಿಗೆ ರೇಷನ್‌ ಕಿಟ್, 1 ಲಕ್ಷಕ್ಕೂ ಹೆಚ್ಚು ಮಾಸ್ಕ್‌ಗಳನ್ನು ಹಂಚಿದ್ದಾರೆ. ಹಾಗೆಯೇ ರಾಜ್ಯದ 10ಕ್ಕೂ ಹೆಚ್ಚು ಸರ್ಕಾರಿ ಆಸ್ಪತ್ರೆಗಳಿಗೆ 8 ಸಾವಿರಕ್ಕೂ ಅಧಿಕ ಪಿಪಿಇ ಕಿಟ್‌, ರಕ್ತದೊತ್ತಡ ಪರೀಕ್ಷಿಸುವ‌ ಕಿಟ್‌ಗಳನ್ನು ಟ್ರಸ್ಟ್‌ ಒದಗಿಸಿದೆ. 

ಬೆಂಗಳೂರು ಮಾತ್ರವಲ್ಲದೇ ದೆಹಲಿ, ಮುಂಬೈ, ನೋಯ್ಡಾ, ಚೆನ್ನೈ, ಪುಣೆ, ಕೊಚ್ಚಿ, ಭುವನೇಶ್ವರ ನಗರ, ಗುರುಗ್ರಾಮ ಸೇರಿದಂತೆ 14 ನಗರಗಳಲ್ಲಿ ಸಮರ್ಥನಂ ಟ್ರಸ್ಟ್‌ ಶಾಖೆಗಳನ್ನು ಹೊಂದಿದ್ದು, ಈ ಎಲ್ಲಾ ಕಡೆಗಳಲ್ಲಿಯೂ ಟ್ರಸ್ಟ್‌ ಮೂಲಕ ಅಂಗವಿಕಲರಿಗೆ ಹಣಕಾಸು ಸಹಾಯ, ಬಿಸಿಯೂಟ, ರೇಷನ್‌ ಕಿಟ್‌ ಸೇರಿದಂತೆ ಅಗತ್ಯ ಸಹಾಯವನ್ನು ಮಾಡುತ್ತಾ ಬಂದಿದೆ.

‘ಗಿವ್‌ ಇಂಡಿಯಾ’ ಸ್ವಯಂ ಸೇವಾ ಸಂಸ್ಥೆಯು ಸಮರ್ಥನಂ ಟ್ರಸ್ಟ್‌ಗೆ ₹25 ಲಕ್ಷ ದೇಣಿಗೆ ನೀಡಿದ್ದು, ಆ ಹಣವನ್ನು ತೀರಾ ಕಷ್ಟದಲ್ಲಿರುವ ಅಂಗವಿಕಲರನ್ನು ಗುರುತಿಸಿ ವಿತರಿಸುತ್ತಿದೆ. ಈಗಾಗಲೇ 400 ಜನರ ಬ್ಯಾಂಕ್‌ ಖಾತೆಗೆ ಹಣ ಜಮಾ ಮಾಡಿದ್ದು, ಗ್ರಾಮೀಣ ಭಾಗದವರಿಗೆ ತಲಾ ₹5 ಸಾವಿರ ಹಾಗೂ ನಗರ ಪ್ರದೇಶದವರಿಗೆ ₹7 ಸಾವಿರ ಟ್ರಸ್ಟ್‌ನಿಂದ ನೀಡಲಾಗಿದೆ.  

‘ಸಮರ್ಥನಂ ಟ್ರಸ್ಟ್‌ನ ಈ ಎಲ್ಲ ಸೇವೆಗಳಿಗೆ ದುಡಿದವರು ಸಂಸ್ಥೆಯ ಸಿಬ್ಬಂದಿ. ಸಂಸ್ಥೆಯ ಆಧುನಿಕ ಅಡುಗೆ ಕೋಣೆಯನ್ನು ಬಿಸಿಯೂಟ ತಯಾರಿಗೆ ಬಳಸಿಕೊಳ್ಳಲಾಯಿತು. ಶಿಕ್ಷಕರು, ಚಾಲಕರು, ಇತರ ಸಿಬ್ಬಂದಿ ಸೇರಿ 350ಕ್ಕೂ ಹೆಚ್ಚು ಜನರು ಮಾಸ್ಕ್‌ ತಯಾರಿ, ರೇಷನ್‌ ಕಿಟ್‌ ಹಂಚಿಕೆ, ಬಿಸಿಯೂಟದ ಆಹಾರ ಪೊಟ್ಟಣ ವಿತರಣೆ ಕೆಲಸಗಳಿಗೆ ಕೈ ಜೋಡಿಸಿದ್ದಾರೆ. 

‘ಅಂಗವಿಕಲರು ಅನೇಕ ಸಂದರ್ಭದಲ್ಲಿ ಪರಿಹಾರದಿಂದ ವಂಚಿತರಾಗುತ್ತಾರೆ. ಅವರಲ್ಲಿ ಅರಿವಿನ ಪ್ರಮಾಣ ಕಡಿಮೆ ಇರುವುದರಿಂದಲೋ ಅಥವಾ ಅವರನ್ನು ನಿರ್ಲಕ್ಷ್ಯ ಮಾಡುವುದರಿಂದ ಈ ಲಾಕ್‌ಡೌನ್‌ ಅವಧಿಯಲ್ಲಿ ಅವರು ತುಂಬ ತೊಂದರೆಗೊಳಗಾದರು. ನಾವು ಈ ತಪ್ಪನ್ನು ಎತ್ತಿ ತೋರುವ ಬದಲು, ದಾನಿಗಳು ಮತ್ತು ಸೇವಾ ಸಂಸ್ಥೆಗಳಿಂದ ಸ್ವತಃ ನಿಧಿ ಸಂಗ್ರಹ ಮಾಡಿ ಅವರಿಗೆ ನೆರವಾಗಲು ನಿರ್ಧರಿಸಿದೆವು. ಇಂತಹ ಅತ್ಯಂತ ಕಠಿಣ ಸಂದರ್ಭದಲ್ಲಿ, ಸಂಕಷ್ಟದಲ್ಲಿರುವ ಅಂಗವಿಕಲರ ಕೈಗೆ ನಗದು ನೀಡುವುದು ಅತ್ಯಂತ ಅಗತ್ಯವಾದ ಕೆಲಸವಾಗಿತ್ತು’ ಎಂದು ತಮ್ಮ ಸಂಸ್ಥೆಯ ಕೆಲಸದ ಬಗ್ಗೆ ವಿವರಿಸಿದರು ಮಹಾತೇಶ್ ಜಿ.ಕೆ.

ಲಾಕ್‌ಡೌನ್‌ ಸಡಿಲಿಕೆ ಸಂದರ್ಭದಲ್ಲೂ ಅಂಗವಿಕಲರ ಜೀವನಕ್ಕೆ ಉಪಯೋಗವಾಗುವಂತೆ ತರಬೇತಿ, ಅಗತ್ಯ ಶಿಕ್ಷಣ ಒದಗಿಸುವ ಯೋಜನೆಯನ್ನು ಸಂಸ್ಥೆ ಯೋಜಿಸಿದೆ. 

ಸಂಸ್ಥೆ ಮಾಹಿತಿಗೆ– 80257 29922.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು