ಸೋಮವಾರ, ಆಗಸ್ಟ್ 2, 2021
26 °C

ಎಸ್ಸೆಸ್ಸೆಲ್ಸಿ ಪರೀಕ್ಷಾ ದಿಕ್ಸೂಚಿ | ಓದುವುದರ ಬದಲು ಬಿಡಿಸಿ ಅಭ್ಯಸಿಸಿ

ವೆಂಕಟ ಸುಬ್ಬರಾವ್ ವಿ. Updated:

ಅಕ್ಷರ ಗಾತ್ರ : | |

prajavani

ಎಸ್ಸೆಸ್ಸೆಲ್ಸಿ ಪರೀಕ್ಷೆ, ಅದೂ ಗಣಿತ ಪರೀಕ್ಷೆ, ಅದರಲ್ಲೂ ಈಗಿನ ಸಂದಿಗ್ಧ ಪರಿಸ್ಥಿತಿಯಲ್ಲಿ ನಡೆಯುತ್ತಿರುವ ಪರೀಕ್ಷೆ! ಪರಿಸ್ಥಿತಿ ಹೇಗಾದರೂ ಇರಲಿ, ನೀವು ಸರಿಯಾದ ರೀತಿಯಲ್ಲಿ ತಯಾರಿ ನಡೆಸಿದ್ದೀರಿ. ಆದ್ದರಿಂದ ಆತ್ಮವಿಶ್ವಾಸದಿಂದ ಇರಿ. ಆತಂಕ ಬೇಡ.

ಈಗ ಪರೀಕ್ಷೆಗೆ ಕೆಲವೇ ದಿನಗಳು ಉಳಿದಿವೆ. ಗಣಿತದ ವಿಷಯಕ್ಕೆ ಬರುವುದಾದರೆ ನಿಮ್ಮ ತಯಾರಿಯು ಸರಿಯಾದ ರೀತಿಯಲ್ಲಿರಲಿ. ಹೇಗೆ ಒಬ್ಬ ಶಿಲ್ಪಿಯು ಶಿಲ್ಪವನ್ನು ಕಡೆದಾದ ಮೇಲೆ, ಅಂತಿಮ ಹಂತದಲ್ಲಿ ಸಣ್ಣ ಸಣ್ಣ ಅಂತಿಮ ಸ್ಪರ್ಶವನ್ನು ಕೊಡುತ್ತಾನೋ, ಹಾಗೆಯೇ ಈ ಹಂತದಲ್ಲಿ ಗಣಿತ ಪರೀಕ್ಷೆಗೆ ಅತ್ಯಂತ ಆವಶ್ಯಕವಾದ, ಸಣ್ಣ ಸಣ್ಣ ಆದರೆ ಅತ್ಯಂತ ಪ್ರಮುಖವಾದ ಕೆಲವು ಅಂಶಗಳನ್ನು ತಿಳಿಯೋಣ.

ಗಣಿತ ಪರೀಕ್ಷೆಯನ್ನು ಎದುರಿಸುವುದು ಹಾಗೂ ಗಣಿತದಲ್ಲಿ ಹೆಚ್ಚು ಅಂಕಗಳನ್ನು ಪಡೆಯುವುದು ಬಹಳ ಸುಲಭ. ಆದರೆ ಅದಕ್ಕಾಗಿ ಸರಿಯಾದ ರೀತಿಯ ಅಭ್ಯಾಸ, ಆಲೋಚನಾ ಕ್ರಮ ಹಾಗೂ ಪ್ರಶ್ನೆಗಳನ್ನು ಸಮಾಧಾನದಿಂದ ಉತ್ತರಿಸುವ ತಾಳ್ಮೆ ಇರಬೇಕು.

ಬಿಡಿಸಿ ಅಭ್ಯಸಿಸಿ

ಗಣಿತದ ಸಮಸ್ಯೆಗಳನ್ನು ಪುಸ್ತಕದಲ್ಲಿ ನೋಡಿದಾಗ ಎಲ್ಲಾ ತಿಳಿದಿದೆ ಮತ್ತು ಉತ್ತರಿಸುವುದು ಸುಲಭ ಎನಿಸುತ್ತದೆ. ಆದರೆ ಆ ಸಮಸ್ಯೆಗಳನ್ನು ಬಿಡಿಸಲು ಕುಳಿತಾಗ ಅದರ ನಿಜವಾದ ಆಳ ತಿಳಿಯುತ್ತದೆ. ಆದ್ದರಿಂದ ಗಣಿತವನ್ನು ಓದಲು ಹೋಗಬೇಡಿ! ಗಣಿತದ ಸಮಸ್ಯೆಗಳನ್ನು ಬರೆದು, ಬಿಡಿಸಿ, ಅಭ್ಯಸಿಸಿ. ಆಗ ನಿಮ್ಮ ಆತ್ಮವಿಶ್ವಾಸವು ನಿಮಗೇ ತಿಳಿಯದಂತೆ ಹೆಚ್ಚುತ್ತದೆ ಹಾಗೂ ಪರೀಕ್ಷೆಯಲ್ಲಿ ತಪ್ಪುಗಳಿಲ್ಲದೆ ಉತ್ತರಿಸುವ ಜಾಣ್ಮೆ ವೃದ್ಧಿಸುತ್ತದೆ.

ಯಾವ ಪ್ರಶ್ನೆಗೆ ಎಷ್ಟು ಅಂಕಗಳು ಇವೆ ಹಾಗೂ ಯಾವ ಪಾಠದಿಂದ ಎಷ್ಟು ಅಂಕಗಳ ಪ್ರಶ್ನೆಗಳು ಬರುತ್ತವೆ ಎಂದು ನಿಮ್ಮ ಶಿಕ್ಷಕರು ನಿಮಗೆ ತಿಳಿಸಿದ್ದಾರಲ್ಲವೇ? ಅದರ ಆಧಾರದ ಮೇಲೆ ಅಭ್ಯಾಸದ ಸಮಯವನ್ನು ನಿಗದಿ ಪಡಿಸಿ ಗಣಿತದ ಸಮಸ್ಯೆಗಳನ್ನು ಬಿಡಿಸಿ.

ಸಮಸ್ಯೆಗಳನ್ನು ವೇಗವಾಗಿ ಓದಿ

ಗಣಿತದ ಸಮಸ್ಯೆಗಳನ್ನು ವೇಗವಾಗಿ ಓದಿ ದೃಶ್ಯೀಕರಿಸುವುದನ್ನು ಅಭ್ಯಾಸ ಮಾಡಿಕೊಳ್ಳಿ. ಬಹಳಷ್ಟು ವಿದ್ಯಾರ್ಥಿಗಳು ಇದರ ಬಗ್ಗೆ ಗಮನವನ್ನು ಕೊಟ್ಟಿರುವುದಿಲ್ಲ. ಆದರೆ ಇದು ಪರೀಕ್ಷೆಯಲ್ಲಿ ಬಹಳ ಮುಖ್ಯ ಪಾತ್ರವನ್ನು ವಹಿಸುತ್ತದೆ. ಪರೀಕ್ಷೆಯಲ್ಲಿ ಪ್ರಶ್ನೆಗಳನ್ನು ಓದುವುದಕ್ಕೆ ಕೊಟ್ಟಿರುವ ಅವಧಿಯನ್ನು ಈ ದೃಶ್ಯೀಕರಣದಿಂದ ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಳ್ಳಬಹುದು ಹಾಗೂ ಇದರಿಂದ ನಿಮ್ಮ ಆತ್ಮವಿಶ್ವಾಸವೂ ಹೆಚ್ಚುತ್ತದೆ.

ಎಲ್ಲ ಪ್ರಶ್ನೆಗಳಿಗೂ ಉತ್ತರಿಸಿದ ನಂತರ ಮತ್ತೊಮ್ಮೆ ನಿಮ್ಮ ಉತ್ತರಪತ್ರಿಕೆಯನ್ನು ಪರಾಮರ್ಶಿಸಿ. ಆತುರ ಬೇಡ.

ಎಲ್ಲ ಪ್ರಶ್ನೆಗಳಿಗೂ ಉತ್ತರಿಸಿ

ಗಣಿತದ ಪರೀಕ್ಷೆಯಲ್ಲಿ, ಕೆಲವು ಪ್ರಶ್ನೆಗಳಿಗೆ ಉತ್ತರಗಳು ತಿಳಿಯದಿದ್ದರೆ ಆತಂಕ ಬೇಡ. ಹಾಗೆಯೇ ಯಾವುದೇ ಪ್ರಶ್ನೆಯನ್ನೂ ಉತ್ತರಿಸದೆ ಬಿಡಬೇಡಿ. ನಿಮಗೆ ಆ ಪ್ರಶ್ನೆ ಅಥವಾ ಸಮಸ್ಯೆಯ ಬಗ್ಗೆ ಏನು ತಿಳಿದಿದೆಯೋ ಅದನ್ನು ಬರೆಯಿರಿ.

ಉದಾಹರಣೆಗೆ, ನಿಮಗೆ ಪ್ರಶ್ನಪತ್ರಿಕೆಯಲ್ಲಿ ಕೇಳಿರುವ ಯಾವುದೋ ಪ್ರಮೇಯದ ಚಿತ್ರ ಮಾತ್ರ ಗೊತ್ತಿದ್ದರೆ ಅಷ್ಟನ್ನಾದರೂ ಬರೆಯಿರಿ, ಕೆಲವೊಮ್ಮೆ ಆ ಚಿತ್ರವೂ ಸ್ವಲ್ಪ ಅಂಕಗಳನ್ನು ತಂದುಕೊಡಬಹುದು.

ಇನ್ನಷ್ಟು ವಿಷಯಗಳನ್ನು ಹಾಗೂ ಪಠ್ಯಾಧಾರಿತ ಅಂಶಗಳನ್ನು ಮುಂದಿನ ಲೇಖನದಲ್ಲಿ ನೋಡೋಣ.

(ಲೇಖಕ: ನಿರ್ದೇಶಕರು, ಸ್ಮಾರ್ಟ್‌ ಸೆರೆಬ್ರಮ್, ಬೆಂಗಳೂರು)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು