ಶುಕ್ರವಾರ, ಸೆಪ್ಟೆಂಬರ್ 17, 2021
23 °C

PV Web Exclusive | ಹೇಗಿತ್ತು... ಹೇಗಾಯ್ತು ಆರ್‌ಟಿಇ ಸೀಟು?

ಎಸ್‌. ಸಂಪತ್‌ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ರಾಜ್ಯದಲ್ಲಿ ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ (ಆರ್‌ಟಿಇ) ಜಾರಿಯಾದಾಗಿನಿಂದ ಭಾರಿ ಬೇಡಿಕೆಯಿದ್ದ ಆರ್‌ಟಿಇ ಕೋಟಾದ ಸೀಟುಗಳಿಗೆ ಕಳೆದ ವರ್ಷವೇ ಬೇಡಿಕೆ ಕುಸಿದಿತ್ತು. ಅದು ಈ ವರ್ಷ ಇನ್ನೂ ಕುಸಿತ ಕಂಡಿದೆ.

ಕೆಲ ವರ್ಷಗಳ ಹಿಂದೆ ರಾಜ್ಯದಲ್ಲಿ ಲಕ್ಷಾಂತರ ಮಕ್ಕಳು ಈ ಕೋಟಾದಡಿ ಪ್ರವೇಶ ಪಡೆಯುತ್ತಿದ್ದರು. ಆದರೆ ಪ್ರಸಕ್ತ ವರ್ಷ (2020–21) ಈ ಕೊಟಾದಡಿ ಪ್ರವೇಶ ಪಡೆದಿರುವ ಮಕ್ಕಳ ಸಂಖ್ಯೆ 3700 ದಾಟಿಲ್ಲ! ಕಳೆದ ವರ್ಷ (2019–20) ಈ ಸಂಖ್ಯೆ ಐದು ಸಾವಿರ ದಾಟಿರಲಿಲ್ಲ!

ಕರ್ನಾಟಕದಲ್ಲಿ ಆರ್‌ಟಿಇ ಜಾರಿಯಾಗಿ ಇನ್ನೂ ದಶಕವಾಗಿಲ್ಲ. ಈ ಕುರಿತು ಕೇಂದ್ರ ಸರ್ಕಾರ 2009ರಲ್ಲಿ ಕಾಯ್ದೆ ರೂಪಿಸಿದ್ದರೂ, ಅದನ್ನು ದೇಶದಲ್ಲಿ ಮೊದಲಿಗೆ ಅನುಷ್ಠಾನಗೊಳಿಸಿದ (2012)ರಾಜ್ಯ ಎಂಬ ಕೀರ್ತಿ ಕರ್ನಾಟಕದ್ದು.

ಈ ಕಾಯ್ದೆಯು ಖಾಸಗಿ ಅನುದಾನ ರಹಿತ ಶಾಲೆಗಳಲ್ಲಿ ಶೇ 25ರಷ್ಟು ಸೀಟುಗಳನ್ನು ದುರ್ಬಲ ವರ್ಗದವರಿಗೆ ಮೀಸಲಿರಿಸಿತ್ತು. ಇದರಿಂದಾಗಿ ಪ್ರತಿ ವರ್ಷ ತಮ್ಮ ಮಕ್ಕಳಿಗೆ ಸೀಟು ಪಡೆದುಕೊಳ್ಳಲು ಪೋಷಕರು ಮುಗಿಬೀಳುತ್ತಿದ್ದರು.

ಆದರೆ ಕಳೆದ ವರ್ಷದಿಂದ ರಾಜ್ಯದಲ್ಲಿ ಇದರ ಚಿತ್ರಣವೇ ಬದಲಾಗಿದೆ. ಈ ವರ್ಷವಂತೂ ಆರ್‌ಟಿಇ ಸೀಟಿಗೆ ಬೇಡಿಕೆ ಗಣನೀಯವಾಗಿ ಕುಸಿದಿದೆ. ಒಮ್ಮೆ ತಮ್ಮ ಮಕ್ಕಳಿಗೆ ಈ ಸೀಟು ಸಿಕ್ಕರೆ, ಎಂಟನೇ ತರಗತಿವರೆಗೆ ಶುಲ್ಕ ಪಾವತಿಸುವ ಚಿಂತೆ ಇರುವುದಿಲ್ಲ ಎನ್ನುತ್ತಿದ್ದ ಪೋಷಕರು, ಇದೀಗ ಆರ್‌ಟಿಇ ಸೀಟು ಎಂದರೆ ಮೂಗು ಮುರಿಯುತ್ತಿದ್ದಾರೆ.

ಆರ್‌ಟಿಇ ಕಾಯ್ದೆಯ ನಿಯಮಗಳಲ್ಲಿ ಸರ್ಕಾರ ಆರಂಭದಿಂದಲೂ ಕೆಲ ಮಾರ್ಪಾಡುಗಳನ್ನು ಮಾಡುತ್ತಾ ಬಂದಿದ್ದರೂ ಸೀಟುಗಳಿಗೆ ಬೇಡಿಕೆ ಕುಸಿದಿರಲಿಲ್ಲ. ‘ನೆರೆ ಹೊರೆ’ ಶಾಲೆಗಳ ಗಡಿಯ ಮಿತಿಯನ್ನು ಕೆಲ ಬಾರಿ ಸರ್ಕಾರ ಬದಲು ಮಾಡಿತ್ತು. ಪ್ರವೇಶಕ್ಕೆ ವಾಸದೃಢೀಕರಣ, ಆಧಾರ್‌ ಕಾರ್ಡ್‌ ಅನ್ನೂ ಕಡ್ಡಾಯ ಮಾಡಿತ್ತು. ಆನ್‌ಲೈನ್‌ ಅರ್ಜಿ ಸಲ್ಲಿಕೆ ವಿಧಾನವನ್ನೂ ಜಾರಿಗೆ ತಂದಿತ್ತು. ಲಾಟರಿ ವ್ಯವಸ್ಥೆಯಲ್ಲಿ ಮಾರ್ಪಾಡು ಮಾಡಿ ಕೇಂದ್ರೀಕೃತ ಆನ್‌ಲೈನ್‌ ಲಾಟರಿ ವ್ಯವಸ್ಥೆ ಜಾರಿಗೊಳಿಸಿತು. ಇಷ್ಟೆಲ್ಲದರ ನಡುವೆಯೂ ಆರ್‌ಟಿಇ ಸೀಟುಗಳಿಗೆ ಬೇಡಿಕೆ ಕುಸಿದಿರಲಿಲ್ಲ.

ಆದರೆ, 2019ರಲ್ಲಿ ರಾಜ್ಯ ಸರ್ಕಾರವು ಆರ್‌ಟಿಇ ಕಾಯ್ದೆಗೆ ತಿದ್ದುಪಡಿ ತಂದು ಜಾರಿಗೊಳಿಸಿದ ನಿಯಮದಿಂದ ಆರ್‌ಟಿಇ ಸೀಟುಗಳಿಗೆ ಬೇಡಿಕೆ ಕುಸಿಯುವಂತಾಯಿತು.

ಆರ್‌ಟಿಇ ಅಡಿಯಲ್ಲಿ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಪ್ರವೇಶಕ್ಕೆ ಮೊದಲ ಆದ್ಯತೆ. ಒಂದು ವೇಳೆ ಆ ಪ್ರದೇಶದಲ್ಲಿ ಸರ್ಕಾರಿ ಅಥವಾ ಅನುದಾನಿತ ಶಾಲೆ ಲಭ್ಯವಿಲ್ಲದಿದ್ದರೆ ಮಾತ್ರ ಖಾಸಗಿ ಅನುದಾನರಹಿತ ಶಾಲೆಗಳಲ್ಲಿ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತದೆ ಎಂದು ನಿಯಮ ಮಾರ್ಪಡಿಸಿತು.

ಜತೆಗೆ ನೆರೆಹೊರೆ ಶಾಲೆಗಳ ವ್ಯಾಖ್ಯಾನವನ್ನೂ ಬದಲಿಸಿತು. ಅದರಂತೆ, ಗ್ರಾಮೀಣ ಪ್ರದೇಶಗಳಲ್ಲಿ ಕಂದಾಯ ಗ್ರಾಮದ ಗಡಿಯನ್ನು, ಪಟ್ಟಣ ಪ್ರದೇಶಗಳಲ್ಲಿ ನಗರಸಭೆ, ಮುನ್ಸಿಪಲ್‌ ಕೌನ್ಸಿಲ್‌, ಪಟ್ಟಣ ಪಂಚಾಯಿತಿ ಗಡಿಯನ್ನು ಹಾಗೂ ಮಹಾನಗರ ಪಾಲಿಕೆ, ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಪ್ರತಿ ವಾರ್ಡ್‌ ಅನ್ನು ಭೌಗೋಳಿಕ ಗಡಿ ಎಂದು ನಿಗದಿಪಡಿಸಿತು.

ಈ ಗಡಿ ವ್ಯಾಪ್ತಿಯಲ್ಲಿ ಮೊದಲು ಸರ್ಕಾರಿ ಶಾಲೆಗಳ ಸೀಟು ಭರ್ತಿಯಾಗಬೇಕು. ಆ ನಂತರ ಅನುದಾನಿತ ಶಾಲೆಗಳ ಸೀಟುಗಳು ತುಂಬಬೇಕು. ಒಂದು ವೇಳೆ ‘ನೆರೆಹೊರೆ’ ಗಡಿ ವ್ಯಾಪ್ತಿಯಲ್ಲಿ ಸರ್ಕಾರಿ ಶಾಲೆ ಅಥವಾ ಅನುದಾನಿತ ಶಾಲೆ ಇಲ್ಲದ ಸಂದರ್ಭದಲ್ಲಿ ಮಾತ್ರ ಖಾಸಗಿ ಶಾಲೆಗಳಿಗೆ ಆರ್‌ಟಿಇ ಕೋಟಾದಡಿ ಮಕ್ಕಳಿಗೆ ಪ್ರವೇಶ ಕಲ್ಪಿಸಬೇಕು ಎಂದು ನಿಯಮದಲ್ಲಿ ಬದಲಾವಣೆಗಳನ್ನು ಸರ್ಕಾರ ತಂದಿತು.

ಈ ಬದಲಾವಣೆಯು ಸರ್ಕಾರಿ ಶಾಲೆಗಳ ಬಲವರ್ದನೆಗೆ ಎಂದು ಸರ್ಕಾರ ಸಮರ್ಥಿಸಿಕೊಂಡಿತು. ಈ ಮೂಲಕ ಖಾಸಗಿ ಶಾಲೆಗಳಲ್ಲಿ ದುರ್ಬಲ ವರ್ಗದ ಮಕ್ಕಳ ಕಲಿಕೆಗೆ ತೆರೆದಿದ್ದ ಅವಕಾಶದ ಬಾಗಿಲನ್ನು ಸರ್ಕಾರವೇ ಬಹುತೇಕ ಮುಚ್ಚಿತು. ಸರ್ಕಾರಕ್ಕೆ ಹೆಚ್ಚಿದ ಆರ್ಥಿಕ ಹೊರೆ, ಪ್ರತಿಷ್ಠಿತ ಖಾಸಗಿ ಶಾಲೆಗಳ ಒತ್ತಡ ಈ ನಿರ್ಧಾರದ ಹಿಂದೆ ಕೆಲಸ ಮಾಡಿದೆ. ಕೆಲ ಪೋಷಕರು, ಅಧಿಕಾರಿಗಳು, ಹಲವು ಖಾಸಗಿ ಶಾಲೆಗಳು ಆರ್‌ಟಿಇ ಅನ್ನು ವಿವಿಧ ರೀತಿಯಲ್ಲಿ ದುರ್ಬಳಕೆ ಮಾಡಿಕೊಂಡಿದ್ದು ಕೂಡ ಈ ಮಾರ್ಪಾಡಿಗೆ ಕಾರಣವಾಗಿದೆ ಎನ್ನುತ್ತಾರೆ ಶಿಕ್ಷಣ ತಜ್ಞರು.

ಲಭ್ಯ ಸೀಟುಗಳಲ್ಲಿ ಗಣನೀಯ ಕಡಿತ: 2018–19ನೇ ಸಾಲಿನಲ್ಲಿ ರಾಜ್ಯದಲ್ಲಿ ಆರ್‌ಟಿಇ ಕೋಟಾದಡಿ ಲಭ್ಯವಿದ್ದ ಸೀಟುಗಳ ಸಂಖ್ಯೆ 1.52 ಲಕ್ಷ. ಈ ಸೀಟುಗಳಿಗೆ ಪ್ರವೇಶ ಬಯಸಿ 2.39 ಲಕ್ಷ ಅರ್ಜಿಗಳು ಸಲ್ಲಿಕೆಯಾಗಿದ್ದವು. ಅಂತಿಮವಾಗಿ 1.20 ಲಕ್ಷ ಸೀಟುಗಳು ಭರ್ತಿಯಾಗಿದ್ದವು.

ಈ ಕಾಯ್ದೆಯ ತಿದ್ದುಪಡಿ ತಂದ ನಂತರ 2019–20ನೇ ಸಾಲಿನಲ್ಲಿ ಈ ಕೋಟಾದಡಿ ರಾಜ್ಯದಾದ್ಯಂತ ಲಭ್ಯವಾಗಿದ್ದು ಕೇವಲ 17,720 ಸೀಟುಗಳು. ಇದರಲ್ಲಿ ಭರ್ತಿಯಾಗಿದ್ದು 4,705 ಮಾತ್ರ. ಇನ್ನು 2020–21ನೇ ಸಾಲಿನಲ್ಲಿ ಲಭ್ಯ ಸೀಟುಗಳ ಸಂಖ್ಯೆ 17,453ಕ್ಕೆ ಇಳಿದಿದ್ದು, 3,680 ವಿದ್ಯಾರ್ಥಿಗಳಷ್ಟೇ ಈ ಕೋಟಾದಡಿ ಪ್ರವೇಶ ಪಡೆದಿದ್ದಾರೆ.

ಈ ಕಾಯ್ದೆಯು ರಾಜ್ಯದಲ್ಲಿ ಜಾರಿಯಾದ 2012–13ನೇ ಸಾಲಿನಲ್ಲಿ 49,282 ವಿದ್ಯಾರ್ಥಿಗಳು ಈ ಕೋಟಾದಡಿ ದಾಖಲಾಗಿದ್ದರು. ಅಂತೆಯೇ 2013–14ನೇ ಸಾಲಿನಲ್ಲಿ 73,108 ವಿದ್ಯಾರ್ಥಿಗಳು, 2014–15ನೇ ಸಾಲಿನಲ್ಲಿ 93,690 ವಿದ್ಯಾರ್ಥಿಗಳು, 2015–16ನೇ ಸಾಲಿನಲ್ಲಿ 1 ಲಕ್ಷ ವಿದ್ಯಾರ್ಥಿಗಳು, 2016–17ರಲ್ಲಿ 97,991 ವಿದ್ಯಾರ್ಥಿಗಳು, 2017–18ರಲ್ಲಿ 1.09 ಲಕ್ಷ ವಿದ್ಯಾರ್ಥಿಗಳು ಆರ್‌ಟಿಇ ಕೋಟಾದಡಿ ದಾಖಲಾಗಿದ್ದರು ಎನ್ನುತ್ತವೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಂಕಿ ಅಂಶ.

ಈ ಕಾಯ್ದೆಯ ತಿದ್ದುಪಡಿಗೂ ಮೊದಲು ರಾಮನಗರ ಜಿಲ್ಲೆಯ ನಾಲ್ಕೂ ತಾಲ್ಲೂಕುಗಳ ವ್ಯಾಪ್ತಿಯಲ್ಲಿ 168 ಖಾಸಗಿ ಶಾಲೆಗಳು ಆರ್‌ಟಿಇ ಅಡಿ ಶೇ 25ರಷ್ಟು ಸೀಟುಗಳನ್ನು ದುರ್ಬಲ ವರ್ಗದವರಿಗೆ ಮೀಸಲಿಟ್ಟಿದ್ದವು. ಆದರೆ ತಿದ್ದುಪಡಿ ನಂತರ, ಇಡೀ ಜಿಲ್ಲೆಯಲ್ಲಿ ಕೇವಲ ಒಂದು ಖಾಸಗಿ ಅನುದಾನ ರಹಿತ ಶಾಲೆ ಆರ್‌ಟಿಇ ವ್ಯಾಪ್ತಿಗೆ ಬಂದಿದೆ.

ವರ ಮತ್ತು ಶಾಪ: ಆರ್‌ಟಿಇ ಕಾಯ್ದೆಯು ಕೆಲ ಖಾಸಗಿ ಶಾಲೆಗಳಿಗೆ ವರದಾನವಾಗಿ ಪರಿಣಮಿಸಿದ್ದರೆ, ಕೆಲ ಪ್ರತಿಷ್ಠಿತ ಖಾಸಗಿ ಶಾಲೆಗಳಿಗೆ ಶಾಪವಾಗಿ ಪರಿಣಮಿಸಿತ್ತು. ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯಾರ್ಥಿಗಳಿಲ್ಲದೆ ಮುಚ್ಚುವ ಹಂತದಲ್ಲಿದ್ದ ಬಹುತೇಕ ಖಾಸಗಿ ಶಾಲೆಗಳಿಗೆ ಆರ್‌ಟಿಇ ವರವಾಗಿತ್ತು. ಈ ಕೋಟಾದಡಿ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಮರು ಪಾವತಿ ರೂಪದಲ್ಲಿ ಬರುತ್ತಿದ್ದ ಹಣದಿಂದಲೇ ಸಾವಿರಾರು ಖಾಸಗಿ ಶಾಲೆಗಳು ನಡೆಯುತ್ತಿದ್ದವು.

2012ರಲ್ಲಿ ಈ ಕಾಯ್ದೆ ಜಾರಿಗೆ ಬಂದಾಗ ಪೂರ್ವ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ತಲಾ ಗರಿಷ್ಠ ₹5924 ಹಾಗೂ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಗರಿಷ್ಠ ₹11,848ವರೆಗೂ ಸರ್ಕಾರ ಶಾಲೆಗಳಿಗೆ ಮರುಪಾವತಿ ಮಾಡುತ್ತಿತ್ತು. 2018ರಲ್ಲಿ ಸರ್ಕಾರ ಈ ಮೊತ್ತವನ್ನು ಪರಿಷ್ಕರಿಸಿತು. ಅದರಂತೆ ಪೂರ್ವ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ತಲಾ ಗರಿಷ್ಠ ₹8,000 ಹಾಗೂ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ತಲಾ ಗರಿಷ್ಠ ₹16,000 ಎಂದು ನಿಗದಿಪಡಿಸಿತು. ಇದು ಹಲವು ಖಾಸಗಿ ಶಾಲೆಗಳ ಉಳಿವಿಗೂ ಕಾರಣವಾಗಿತ್ತು.

ಆದರೆ, ಬೆಂಗಳೂರು, ಮೈಸೂರು, ಹುಬ್ಬಳ್ಳಿ, ದಾವಣಗೆರೆ, ಮಂಗಳೂರು, ಕಲಬುರ್ಗಿ ಸೇರಿದಂತೆ ಬಹುತೇಕ ಜಿಲ್ಲಾ ಕೇಂದ್ರಗಳಲ್ಲಿನ ಪ್ರತಿಷ್ಠಿತ ಖಾಸಗಿ ಶಾಲೆಗಳಿಗೆ ಈ ಮೊತ್ತ ಏನೂ ಸಾಲುತ್ತಿರಲಿಲ್ಲ. ಹೀಗಾಗಿ ಈ ಶಾಲೆಗಳಲ್ಲಿ ಆರ್‌ಟಿಇ ಶಾಪವಾಗಿತ್ತು. ಈ ನಗರಗಳಲ್ಲಿ ವಿದ್ಯಾರ್ಥಿಗಳ ಪ್ರವೇಶಕ್ಕೆ ಲಕ್ಷಾಂತರ ರೂಪಾಯಿ ಶುಲ್ಕ ಪಡೆಯುವ ಹಲವಾರು ಶಾಲೆಗಳಿಗೆ ಆರ್‌ಟಿಇ ಕಾಯ್ದೆಯಡಿ ದುರ್ಬಲ ವರ್ಗದವರ ಮಕ್ಕಳಿಗೆ ಶೇ 25ರಷ್ಟು ಮೀಸಲಾತಿ ಕಲ್ಪಿಸುವುದು ಅಷ್ಟಾಗಿ ಇಷ್ಟವಿರಲಿಲ್ಲ. ಆದ್ದರಿಂದ ಈ ಶಾಲೆಗಳ ಆಡಳಿತ ಮಂಡಳಿಗಳಿಗಳು ಸರ್ಕಾರ, ರಾಜಕಾರಣಿಗಳ ಮೇಲೆ ಆರ್‌ಟಿಇ ನಿಯಮಗಳಲ್ಲಿ ಮಾರ್ಪಾಡು ತರಲು ವಿವಿಧ ರೀತಿಯಲ್ಲಿ ಒತ್ತಡ ಹೇರುತ್ತಲೇ ಇದ್ದವು ಎನ್ನುತ್ತಾರೆ ಶಿಕ್ಷಣ ತಜ್ಞರು.

ಪೋಷಕರಿಂದಲೂ ವಂಚನೆ: ತಮ್ಮ ಮಕ್ಕಳಿಗೆ ಹೇಗಾದರೂ ಮಾಡಿ ಆರ್‌ಟಿಇ ಕೋಟಾದಡಿ ಪ್ರತಿಷ್ಠಿತ ಖಾಸಗಿ ಶಾಲೆಯಲ್ಲಿ ಸೀಟು ಪಡೆದುಕೊಳ್ಳುವ ತವಕದಲ್ಲಿ ಪೋಷಕರು ನಕಲಿ ದಾಖಲೆಗಳನ್ನು ಸೃಷ್ಟಿಸಿ ವಂಚಿಸುತ್ತಿದ್ದರು. ಇದು ವ್ಯಾಪಕವಾಗುತ್ತಿದ್ದಂತೆ ಸರ್ಕಾರ ನೆರೆಹೊರೆ ಶಾಲೆಯ ಗಡಿಯನ್ನು ಗುರುತಿಸಿತು. ಗ್ರಾಮೀಣ ಪ್ರದೇಶಕ್ಕೆ ಕಂದಾಯ ಗ್ರಾಮವನ್ನು, ನಗರ ಪ್ರದೇಶಗಳಲ್ಲಿ ವಾರ್ಡ್‌ ವ್ಯಾಪ್ತಿಯನ್ನು ಗಡಿಯಾಗಿ ಗುರುತು ಮಾಡಲಾಯಿತು. ಆದರೂ ಕೆಲ ಪೋಷಕರು ಪ್ರತಿಷ್ಠಿತ ಖಾಸಗಿ ಶಾಲೆಯ ವಾರ್ಡ್‌ ವ್ಯಾಪ್ತಿಯಲ್ಲಿಯೇ ವಾಸ ಇರುವಂತೆ ಬಾಡಿಗೆಗೆ ಸಂಬಂಧಿಸಿದ ನಕಲಿ ಕರಾರು ಪತ್ರಗಳನ್ನು ಸಲ್ಲಿಸಿ, ಸೀಟು ಪಡೆಯುತ್ತಿದ್ದರು. ಹೆಚ್ಚಿನ ಆದಾಯ ಇದ್ದರೂ ಅದನ್ನು ಬಹಿರಂಗ ಪಡಿಸದೆ, ದುರ್ಬಲ ವರ್ಗದವರು ಎಂದು ದಾಖಲೆಗಳನ್ನು ಸೃಷ್ಟಿಸಿ ಸೀಟು ಗಿಟ್ಟಿಸುತ್ತಿದ್ದರು.

ಇದಕ್ಕೆಲ್ಲ ಕಡಿವಾಣ ಹಾಕಲು ಸರ್ಕಾರ ಮಗುವಿನ ಆಧಾರ್‌ ಕಾರ್ಡ್‌ ಅನ್ನು ಕಡ್ಡಾಯಗೊಳಿಸಿತು. ಅದರಲ್ಲಿ ದಾಖಲಾಗಿರುವ ವಿಳಾಸದ ಬಳಿಯಷ್ಟೇ ಪ್ರವೇಶಕ್ಕೆ ಅವಕಾಶ ಕಲ್ಪಿಸಿತ್ತು. ಇದನ್ನೂ ಅರಿತ ಪೋಷಕರು ಮಗುವಿನ ಆಧಾರ್‌ ಕಾರ್ಡ್‌ನಲ್ಲಿ ವಿಳಾಸ ಬದಲು ಮಾಡಿಸಿ, ಸೀಟು ಪಡೆಯುತ್ತಿದ್ದರು. ಪ್ರತಿಷ್ಠಿತ ಇಂಗ್ಲಿಷ್‌ ಮಾಧ್ಯಮದ ಶಾಲೆಗಳಲ್ಲೇ ತಮ್ಮ ಮಕ್ಕಳಿಗೆ ಉಚಿತ ಶಿಕ್ಷಣ ದೊರೆಯುವಂತಾಗಬೇಕು ಎಂಬ ಉದ್ದೇಶದಿಂದ ಕೆಲ ಪೋಷಕರು ಈ ವಂಚನೆ ಮಾರ್ಗ ಹಿಡಿಯುತ್ತಿದ್ದರು. ಆದರೆ ಇದರಿಂದ ಅರ್ಹ ದುರ್ಬಲ ವರ್ಗದ ಮಕ್ಕಳು ಅವಕಾಶದಿಂದ ವಂಚಿತರಾಗುತ್ತಿದ್ದರು. ಕಳೆದ ವರ್ಷದಿಂದ ಬದಲಾಗಿರುವ ನಿಯಮಗಳಿಂದಾಗಿ ಇದೀಗ ಪೋಷಕರು ಆರ್‌ಟಿಇ ಸೀಟಿನ ಬಗ್ಗೆ ವ್ಯಾಮೋಹ ಕಳೆದುಕೊಂಡಿದ್ದಾರೆ. ಬಹುತೇಕ ಪ್ರತಿಷ್ಠಿತ ಇಂಗ್ಲಿಷ್‌ ಮಾಧ್ಯಮದ ಶಾಲೆಗಳು ಇದರ ವ್ಯಾಪ್ತಿಯಿಂದ ಹೊರಗಿರುವುದೇ ಇದಕ್ಕೆ ಕಾರಣ.

ಅಧಿಕಾರಿಗಳ ಪಾತ್ರ: ಈ ಕಾಯ್ದೆ ಆರಂಭವಾದ ವರ್ಷ ಶಿಕ್ಷಣ ಇಲಾಖೆಯ ಅಧಿಕಾರಿಗಳು ಖಾಸಗಿ ಶಾಲೆಗಳಿಗೆ ಹೋಗಿ ಬಂದಿರುವ ಅರ್ಜಿಗಳನ್ನು ಪರಿಶೀಲಿಸಿ, ವಿದ್ಯಾರ್ಥಿಗಳನ್ನು ಆಯ್ಕೆ ಮಾಡುತ್ತಿದ್ದರು. ಈ ವೇಳೆ ತಮಗೆ ಬೇಕಾದವರಿಗೆ ಅಧಿಕಾರಿಗಳು ಸೀಟು ಹಂಚಿಕೆ ಮಾಡುತ್ತಿದ್ದಾರೆ ಎಂಬ ಆರೋಪ ಬಂದಿತ್ತು. ಆಗ ಸರ್ಕಾರ ಲಾಟರಿ ವಿಧಾನ ಅಳವಡಿಸಿಕೊಂಡಿತ್ತು. ಅದರಲ್ಲಿ ಇದ್ದ ಲೋಪಗಳನ್ನು ಸರಿಪಡಿಸಲು ಕೇಂದ್ರೀಕೃತ ಆನ್‌ಲೈನ್‌ ಲಾಟರಿ ವಿಧಾನವನ್ನು ಜಾರಿಗೊಳಿಸಿತು. ಖಾಸಗಿ ಶಾಲೆಗಳಿಗೆ ಆರ್‌ಟಿಇ ಮೊತ್ತ ಮರುಪಾವತಿಸುವಾಗ ಕೆಲ ಅಧಿಕಾರಿಗಳು ಕಮಿಷನ್‌ ಪಡೆಯುತ್ತಿದ್ದಾರೆ ಎಂಬ ದೂರುಗಳೂ ಬಂದವು. ಆಗ ಸರ್ಕಾರ ಮರುಪಾವತಿ ಮೊತ್ತ ನೇರವಾಗಿ ಶಾಲೆಯ ಖಾತೆಗಳಿಗೆ ಹೋಗುವಂತೆ ವ್ಯವಸ್ಥೆ ಮಾಡಿತು.

ಅನುದಾನದ ಹೊರೆಗೆ ಬಾಗಿದ ಸರ್ಕಾರ: 2012–13ರಲ್ಲಿ ಹುಮ್ಮಸ್ಸಿನಿಂದ ರಾಜ್ಯ ಸರ್ಕಾರ ಈ ಕಾಯ್ದೆಯನ್ನು ಜಾರಿಗೊಳಿಸಿತು. ಮೊದಲ ಒಂದೆರಡು ವರ್ಷ ಯಾವುದೇ ಸಮಸ್ಯೆ ಆಗಿರಲಿಲ್ಲ. ಕ್ರಮೇಣ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾದಂತೆ, ಖಾಸಗಿ ಶಾಲೆಗಳಿಗೆ ಮರುಪಾವತಿಸಬೇಕಾದ ಮೊತ್ತವೂ ಬೆಟ್ಟದಂತೆ ಹೆಚ್ಚುತ್ತಾ ಹೋಯಿತು. ಇದನ್ನು ಸರಿದೂಗಿಸುವುದು ಸರ್ಕಾರಕ್ಕೆ ಸವಾಲಾಯಿತು. 

2012–13ನೇ ಸಾಲಿನಲ್ಲಿ ₹22 ಕೋಟಿ, 2013–14ರಲ್ಲಿ ₹73 ಕೋಟಿ, 2014–15ರಲ್ಲಿ ₹160 ಕೋಟಿ, 2015–16ರಲ್ಲಿ ₹204.22 ಕೋಟಿ, 2016–17ರಲ್ಲಿ ₹226.19 ಕೋಟಿ, 2017–18ರಲ್ಲಿ ₹392 ಕೋಟಿ, 2018–19ರಲ್ಲಿ ₹199 ಕೋಟಿ, 2019–20ರಲ್ಲಿ₹ 113 ಕೋಟಿಯನ್ನು ಸರ್ಕಾರ ಖಾಸಗಿ ಶಾಲೆಗಳಿಗೆ ಮರುಪಾವತಿ ಮಾಡಿದೆ. 2020–21ರಲ್ಲಿ ₹ 412 ಕೋಟಿ ಹಣವನ್ನು ಸರ್ಕಾರ ಬಿಡುಗಡೆ ಮಾಡಿದ್ದು, ಇದರಲ್ಲಿ ₹272 ಕೋಟಿಯಷ್ಟು ಮರುಪಾವತಿಸಿದೆ. ಇನ್ನೂ ನೂರಾರು ಕೊಟಿ ಹಣವನ್ನು ಸರ್ಕಾರ ಮರುಪಾವತಿ ಮಾಡಬೇಕಿದೆ.

’ಹೀಗೆ ವರ್ಷದಿಂದ ವರ್ಷಕ್ಕೆ ಬೊಕ್ಕಸಕ್ಕೆ ಆಗುತ್ತಿರುವ ಹೊರೆಯನ್ನು ತಪ್ಪಿಸುವ ಉದ್ದೇಶವೂ ಆರ್‌ಟಿಇ ಕಾಯ್ದೆಯ ನಿಯಮಗಳಿಗೆ ತಿದ್ದುಪಡಿ ತಂದಿದ್ದರ ಹಿಂದಿತ್ತು ಎನಿಸುತ್ತದೆ‘ ಎಂದು ಕರ್ನಾಟಕ ಖಾಸಗಿ ಶಾಲೆಗಳ ಒಕ್ಕೂಟದ ಕಾರ್ಯದರ್ಶಿ ಡಿ. ಶಶಿಕುಮಾರ್‌ ಅಭಿಪ್ರಾಯಪಡುತ್ತಾರೆ. 

ಉಳಿದ ಮಕ್ಕಳು ಎಲ್ಲಿ ದಾಖಲಾದರು?

‘ಆರ್‌ಟಿಇ ಕೋಟಾದಡಿ ಮೊದಲು ಲಕ್ಷಾಂತರ ವಿದ್ಯಾರ್ಥಿಗಳು ಖಾಸಗಿ ಶಾಲೆಗಳಿಗೆ ದಾಖಲಾಗುತ್ತಿದ್ದರು. ಕಳೆದ ವರ್ಷದಿಂದ ಅದು 5 ಸಾವಿರ ದಾಟುತ್ತಿಲ್ಲ. ಅಂದರೆ ಉಳಿದ ವಿದ್ಯಾರ್ಥಿಗಳೆಲ್ಲ ಸರ್ಕಾರಿ ಅಥವಾ ಅನುದಾನಿತ ಶಾಲೆಗಳಿಗೆ ಸೇರಿದ್ದಾರಾ? ಸರ್ಕಾರ ಆರ್‌ಟಿಇ ಕಾಯ್ದೆಗೆ ತಂದ ತಿದ್ದುಪಡಿಯ ಆಶಯ ಈಡೇರಿದೆಯಾ’ ಎಂದು ಪ್ರಶ್ನಿಸುತ್ತಾರೆ ಶಿಕ್ಷಣ ತಜ್ಞ ಶ್ರೀಪಾದ ಭಟ್‌.

‘ಸರ್ಕಾರಿ ಶಾಲೆಗಳನ್ನು ಸಬಲೀಕರಿಸದೇ ಈ ಕಾಯ್ದೆಯನ್ನು ತರಾತುರಿಯಲ್ಲಿ ಜಾರಿಗೆ ತರಲಾಯಿತು. ಇಂಗ್ಲಿಷ್‌ ಮಾಧ್ಯಮದ ನೆಪದಲ್ಲಿ ಪೋಷಕರು ಖಾಸಗಿ ಶಾಲೆಗಳತ್ತ ಮುಖ ಮಾಡಿದರು. ಆದರೆ, ವ್ಯಾಪಾರದ ಮನೋಭಾವನೆ ಹೊಂದಿರುವ ಕೆಲ ಖಾಸಗಿ ಶಾಲೆಗಳು ತಮಗೆ ನಷ್ಟವಾಗುತ್ತವೆ ಎಂಬ ಕಾರಣಕ್ಕೆ ಈ ಕಾಯ್ದೆಯನ್ನು ವಿರೋಧಿಸಿದವು. ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳ ಒಡೆತನ ಹೊಂದಿರುವ ರಾಜಕಾರಣಿಗಳು ಸರ್ಕಾರದ ಮೇಲೆ ಒತ್ತಡ ಹೇರಿ ಈ ಕಾಯ್ದೆಗೆ ತಿದ್ದುಪಡಿ ತರುವಂತೆ ಮಾಡಿದರು’ ಎಂದು ಅವರು ಬೇಸರ ವ್ಯಕ್ತಪಡಿಸುತ್ತಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು