ಬುಧವಾರ, ಆಗಸ್ಟ್ 4, 2021
28 °C

ಸ್ಪಷ್ಟ ಗುರಿ ಯಶಸ್ಸಿಗೆ ದಾರಿ

ಉಪೇಂದ್ರ ಶೆಟ್ಟಿ Updated:

ಅಕ್ಷರ ಗಾತ್ರ : | |

Prajavani

ಸ್ಪರ್ಧೆ ನಿರಂತರ ಪ್ರಕ್ರಿಯೆ. ಸ್ಪರ್ಧಾರ್ಥಿಯಾಗಿರುವವರು ಯಶಸ್ಸಿನ ಶಿಖರದ ಕೊನೆಯ ಹಂತ ತಲುಪುವವರೆಗೂ ನಿರಂತರವಾಗಿ ತೊಡಗಿಸಿಕೊಳ್ಳಬೇಕು.

ಸ್ಪರ್ಧಾತ್ಮಕ ಪರೀಕ್ಷೆಗೆ ತೊಡಗುವವರು ಪದವಿ ತೇರ್ಗಡೆಯಾಗುವವರೆಗೂ ಅಧ್ಯಯನಕ್ಕೆ ಕಾಯದೇ ಪಿಯು ಹಂತದಲ್ಲಿಯೇ ನೇಮಕಾತಿ ಹಂತಗಳು ಮತ್ತು ಪ್ರಕ್ರಿಯೆಗಳ ಬಗ್ಗೆ ತಿಳಿಯುತ್ತಾ ಪರೀಕ್ಷೆಗಳಲ್ಲಿ ಕೇಳಬಹುದಾದ ವಿಷಯಗಳನ್ನು ಅರ್ಥೈಸಿಕೊಂಡು ತಯಾರಿ ನಡೆಸುವುದು ಒಳ್ಳೆಯದು.

ಉದಾಹರಣೆಗೆ ಕೇಂದ್ರ ಲೋಕಸೇವಾ ಆಯೋಗದ ನೇಮಕಾತಿ ವೇಳಾಪಟ್ಟಿ ಮೊದಲೇ ನಿರ್ಧಾರವಾಗಿ ಪ್ರಕಟವಾಗುತ್ತದೆ. ಈ ಆಯೋಗವು ನಡೆಸುವ ಐಎಎಸ್/ಐಪಿಎಸ್ ಪರೀಕ್ಷೆಗಳಿಗೆ 21 ವರ್ಷ ವಯಸ್ಸು ಮತ್ತು ಪದವಿ ಹೊಂದಿರಬೇಕು. ಪದವಿ ಹಂತದ 3 ವರ್ಷಗಳನ್ನು ತಮ್ಮ ಅಧ್ಯಯನಕ್ಕೆ ಮೀಸಲಿಟ್ಟು ತಯಾರಿ ನಡೆಸಬಹುದು. ಈ ರೀತಿಯ ಅಧ್ಯಯನ ನಿರೀಕ್ಷಿತ ಅವಧಿಯಲ್ಲಿ ಯಶಸ್ಸಿಗೆ ಕಾರಣವಾಗಬಹುದು. 

ಫಲಿತಾಂಶ ಅವಧಿಯ ಗೊಂದಲ ಬೇಡ

ಒಂದೊಂದು ವಿಶ್ವವಿದ್ಯಾಲಯ ಒಂದೊಂದು ರೀತಿಯ ವೇಳಾಪಟ್ಟಿ ಹಾಗೂ ಪರೀಕ್ಷಾ ಫಲಿತಾಂಶಗಳನ್ನು ಪ್ರಕಟಿಸುವುದುಂಟು. ಕೇಂದ್ರ ಲೋಕಸೇವಾ ಆಯೋಗವು ಯೋಜಿತ ನೇಮಕಾತಿ ಮಂಡಳಿಗಳಲ್ಲಿ ಒಂದಾಗಿದ್ದು, ದೇಶದ ಎಲ್ಲಾ ವಿಶ್ವವಿದ್ಯಾಲಯಗಳ ವೇಳಾಪಟ್ಟಿಗಳನ್ನು ಪರಿಶೀಲಿಸಿಯೇ ತನ್ನ ವೇಳಾಪಟ್ಟಿ ತಯಾರಿಸುತ್ತದೆ. ವಿಶ್ವವಿದ್ಯಾಲಯಗಳ ಪರೀಕ್ಷೆ ಅಥವಾ ಫಲಿತಾಂಶ ಪ್ರಕಟಣೆಯ ಅವಧಿಯ ವ್ಯತ್ಯಾಸ ಸ್ಪರ್ಧಾರ್ಥಿಗಳಿಗೆ ತೊಡಕಾಗದು. ಮುಖ್ಯ ಪರೀಕ್ಷೆಗೆ ಮಾತ್ರ ಪದವಿಯ ಅಂಕಪಟ್ಟಿಗಳು ಅಗತ್ಯ. 

ಯಾವುದೇ ವಿಶ್ವವಿದ್ಯಾಲಯ ಪದವಿ ಪರೀಕ್ಷೆಯ ನಂತರ ಫಲಿತಾಂಶ ಪ್ರಕಟಿಸಲು 3 ರಿಂದ 4 ತಿಂಗಳು ಸಮಯ ತೆಗೆದುಕೊಂಡರೂ ಸಹ ಕೇಂದ್ರ ಲೋಕಸೇವಾ ಆಯೋಗದ ಪೂರ್ವಭಾವಿ ಮತ್ತು ಮುಖ್ಯ ಪರೀಕ್ಷೆಯ ನಡುವೆ 3 ತಿಂಗಳು ವ್ಯತ್ಯಾಸ ಇದ್ದೇ ಇರುತ್ತದೆ. ಆದ್ದರಿಂದ ಫಲಿತಾಂಶದ ಬಗ್ಗೆ ತಲೆಕೆಡಿಸಿಕೊಳ್ಳದೇ ಅಧ್ಯಯನದ ಕಡೆ ಗಮನಹರಿಸಿ. ಈ ಬಾರಿ ಕೋವಿಡ್-19 ಇರುವುದರಿಂದ ಯುಪಿಎಸ್‌ಸಿ ಕೂಡ ಅದನ್ನು ಅರ್ಥಮಾಡಿಕೊಂಡು ಪರೀಕ್ಷೆ ನಡೆಸುತ್ತದೆ.

ಬೇರೇನು ಗೊಂದಲ?

ಸ್ಪರ್ಧಾರ್ಥಿಗಳಿಗೆ ಹಲವು ಗೊಂದಲಗಳಿರುವುದು ಸಹಜ. ಕೇಂದ್ರ ಲೋಕಸೇವಾ ಆಯೋಗ ನಡೆಸುವ ಐಎಎಸ್‌, ಐಪಿಎಸ್‌, ಐಎಫ್‌ಎಸ್‌, ಐಎಫ್‌ಒಎಸ್‌, ಐಆರ್‌ಎಸ್‌, ಸಿಡಿಎಸ್‌, ಐಇಎಸ್‌, ಡಬ್ಲ್ಯೂಡಿಎ ಪರೀಕ್ಷೆಗಳು, ರ‍್ವೆಲ್ವೆ ನೇಮಕಾತಿ, ಬ್ಯಾಂಕ್‌ ನೇಮಕಾತಿ... ಹೀಗೆ ಪ್ರತಿ ವರ್ಷ 30 ಲಕ್ಷಕ್ಕೂ ಅಧಿಕ ವಿವಿಧ ನೇಮಕಾತಿಗಳು ನಡೆಯುವುದರಿಂದ ಯಾವುದೇ ಗೊಂದಲಕ್ಕೆ ಒಳಗಾಗದೇ ಆಯಾ ಪರೀಕ್ಷೆಯ ಸ್ವರೂಪ, ಪರೀಕ್ಷೆಯ ಪಠ್ಯ ಪರೀಕ್ಷೆ ಅಪೇಕ್ಷೆಸುವ ವಿದ್ಯಾರ್ಹತೆಗಳನ್ನು ಗಮನದಲ್ಲಿರಿಸಿಕೊಂಡು ಎಲ್ಲಾ ಪರೀಕ್ಷೆಗೆ ತಯಾರಿ ನಡೆಸುವುದು ಸೂಕ್ತ. ಅಲ್ಲದೇ ಕರ್ನಾಟಕದ ಪೊಲೀಸ್‌ ಇಲಾಖೆ, ಶಿಕ್ಷಕರ ನೇಮಕಾತಿಗೆ ಕೆಪಿಎಸ್‌ಸಿ ನಡೆಸುವ ‘ಸಿ’ ಗ್ರೂಪ್ ಪರೀಕ್ಷೆ ಎಫ್‌‌ಡಿಎ/ ಎಸ್‌ಡಿಎ ಯಂತಹ ಪರೀಕ್ಷೆಗಳಿಗೂ ತಯಾರಿ ನಡೆಸಬಹುದು.

ಈ ವರ್ಷದ ಮಟ್ಟಿಗೆ ಯಾವ ಸ್ಪರ್ಧಾತ್ಮಕ ಪರೀಕ್ಷೆ ಸೂಕ್ತ?

ಸ್ಪರ್ಧಾರ್ಥಿಗಳಿಗೆ ಈ ವರ್ಷ ಹೊಸದಾಗಿ ವಿವಿಧ ಕಾರಣಗಳಿಂದ ಲಕ್ಷಾಂತರ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ. ಒಂದು ಉದ್ಯೋಗ ದೊರಕಿಸಿಕೊಳ್ಳುವುದು ಕಷ್ಟವೇನಲ್ಲ. ಅಲ್ಲದೇ ಕೇಂದ್ರ ಸರ್ಕಾರವು ರಾಷ್ಟೀಯ ನೇಮಕಾತಿ ಸಂಸ್ಥೆಯನ್ನು(ಡಬ್ಲ್ಯೂಆರ್‌ಎ) ಸ್ಥಾಪಿಸಿದೆ. ಎಸ್ಸೆಸ್ಸೆಲ್ಸಿ, ಪಿಯುಸಿ, ಪದವಿ ಹಂತದಲ್ಲಿಯೇ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ವರ್ಷದಲ್ಲಿ 2 ಬಾರಿ ನಡೆಸುತ್ತಿದೆ. ಈ ಪರೀಕ್ಷೆಗಳಲ್ಲಿ ಯಶಸ್ವಿಯಾದಲ್ಲಿ ಗ್ರೂಪ್ ಸಿ ಮತ್ತು ಗ್ರೂಪ್ ಬಿ (ನಾನ್‌ ಗೆಜೆಟೆಡ್‌) ನೇಮಕಾತಿ ಹಂತದಲ್ಲಿ ಪರಿಗಣಿಸುವುದರಿಂದ ವರ್ಷಪೂರ್ತಿ ಅಧ್ಯಯನ, ವರ್ಷಪೂರ್ತಿ ಪರೀಕ್ಷೆಯಲ್ಲಿ ತೊಡಗಿಕೊಳ್ಳಬಹುದು. ಹಂತಹಂತವಾಗಿ ಅನುಭವ ಪಡೆಯುತ್ತಾ ಅಂಕಗಳನ್ನೂ ವೃದ್ಧಿಸಿಕೊಳ್ಳಬಹುದು. ಇದು ನಿರಂತರ ಪ್ರಕ್ರಿಯೆ ಆದಲ್ಲಿ ಐಎಎಸ್‌, ಐಪಿಎಸ್‌, ಕೆಎಎಸ್‌ ಪರೀಕ್ಷೆಗಳು ಕ್ರಮೇಣ ಸುಲಭ.

ರಾಷ್ಟೀಯ ನೇಮಕಾತಿ (ಡಬ್ಲ್ಯೂಆರ್‌ಎ) ಪರೀಕ್ಷೆಯ 50 ಅಂಕಗಳಿಗೆ ಸಾಮಾನ್ಯ ಅಧ್ಯಯನ, 50 ಅಂಕಗಳಿಗೆ ಮಾನಸಿಕ ಸಾಮರ್ಥ್ಯ ಮತ್ತು 50 ಅಂಕಗಳಿಗೆ ಇಂಗ್ಲಿಷ್ ಸಂವಹನ.. ಹೀಗೆ ಪರೀಕ್ಷೆಯು ಒಟ್ಟು 150 ಅಂಕಗಳಿಗೆ ನಡೆಯಲಿದೆ.

ವಿದ್ಯಾರ್ಥಿಗಳಿಗೆ ಕಳೆದೊಂದು ವರ್ಷ ಒಂದು ರೀತಿಯಲ್ಲಿ ವರದಾನವಾಗಿದೆ. ಏಕೆಂದರೆ, ತಮ್ಮ ಪ್ರಯಾಣಕ್ಕಾಗಿ ಹೆಚ್ಚು ಸಮಯ ಕಳೆಯುತ್ತಿದ್ದ ವಿದ್ಯಾರ್ಥಿಗಳಿಗೆ ಕೊರೊನಾ ಅವಧಿಯು ಅಧ್ಯಯನಕ್ಕೆ ಹೆಚ್ಚಿನ ಅವಕಾಶ ಕಲ್ಪಿಸಿದೆ. ಈ ಅವಧಿಯನ್ನು  ಸ್ಪರ್ಧಾರ್ಥಿಗಳು ಚೆನ್ನಾಗಿ ಬಳಸಿಕೊಂಡಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ.

 (ಲೇಖಕರು: ಮುಖ್ಯಸ್ಥರು, ಯೂನಿವರ್ಸಲ್‌ ಕೋಚಿಂಗ್‌ ಸೆಂಟರ್,‌ ವಿಜಯನಗರ ಬೆಂಗಳೂರು)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು