ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಾಗಲಕೋಟೆ ಲೋಕಸಭಾ ಕ್ಷೇತ್ರ: ವೀಣಾಗೆ ಟಿಕೆಟ್ ನೀಡುವಂತೆ ಬೆಂಬಲಿಗರ ಒತ್ತಡ

Published 18 ಮಾರ್ಚ್ 2024, 22:50 IST
Last Updated 18 ಮಾರ್ಚ್ 2024, 22:50 IST
ಅಕ್ಷರ ಗಾತ್ರ

ಬೆಂಗಳೂರು: ಬಾಗಲಕೋಟೆ ಲೋಕಸಭಾ ಕ್ಷೇತ್ರದಿಂದ ವೀಣಾ ಕಾಶಪ್ಪನವರ್‌ಗೆ ಟಿಕೆಟ್ ನೀಡುವಂತೆ ಆಗ್ರಹಿಸಿ ಅವರ ಬೆಂಬಲಿಗರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾವೇರಿ ನಿವಾಸದ ಬಳಿ ಸೋಮವಾರ ಪ್ರತಿಭಟನೆ ನಡೆಸಿದರು.

ಬಾಗಲಕೋಟೆ ಕ್ಷೇತ್ರಕ್ಕೆ ಅಭ್ಯರ್ಥಿ ಹೆಸರು ಇನ್ನೂ ಘೋಷಣೆ ಆಗಿಲ್ಲ. ಆದರೆ, ಸಚಿವ ಶಿವಾನಂದ ಪಾಟೀಲ ಅವರ ಮಗಳು ಸಂಯುಕ್ತಾ ಪಾಟೀಲ ಹೆಸರಿದೆ. ಯಾವುದೇ ಕಾರಣಕ್ಕೂ ಸಂಯುಕ್ತಾಗೆ ಟಿಕೆಟ್ ನೀಡಬಾರದು. ಲಿಂಗಾಯತ ಪಂಚಮಸಾಲಿ ಸಮುದಾಯದ ವೀಣಾ ಕಾಶಪ್ಪನವರ್‌ಗೆ ಟಿಕೆಟ್ ನೀಡಬೇಕು ಎಂದು ಬೆಂಬಲಿಗರು ಒತ್ತಾಯಿಸಿದರು. ಟಿಕೆಟ್‌ ನೀಡದಿದ್ದರೆ ಮತದಾನ ಬಹಿಷ್ಕರಿಸಲು ನಿರ್ಣಯ ಕೈಗೊಂಡಿದ್ದೇವೆ ಎಂದೂ ಹೇಳಿದರು.

‘ಬಾಗಲಕೋಟೆ ಕ್ಷೇತ್ರಕ್ಕೆ ಈ ಬಾರಿ ವೀಣಾ ಸೂಕ್ತ ಅಭ್ಯರ್ಥಿಯಾಗಿದ್ದಾರೆ. ಅವರಿಗೆ ಟಿಕೆಟ್ ಕೊಟ್ಟರೆ ನಾವು ಕಾರ್ಯಕರ್ತರು ಗೆಲ್ಲಿಸಿಕೊಂಡು ಬರುತ್ತೇವೆ. ಕಾರ್ಯಕರ್ತರ ಮಾತು ಕೇಳದೆ, ನಾಯಕರ ಮಾತು ಕೇಳಿ ಬೇರೆಯವರಿಗೆ ಟಿಕೆಟ್ ಕೊಟ್ಟರೆ ಪರಿಣಾಮ ಎದುರಿಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

ಮುಖ್ಯಮಂತ್ರಿ ನಿವಾಸ ಬಳಿ ಸುದ್ದಿಗಾರರ ಜೊತೆ ಮಾತನಾಡಿದ ವೀಣಾ ಕಾಶಪ್ಪನವರ್, ‘ಕಳೆದ ಬಾರಿ ಲೋಕಸಭಾ ಚುನಾವಣೆಗೆ ನನಗೆ ಟಿಕೆಟ್ ನೀಡಿದ್ದರು. ಸೋತರೂ ಕ್ಷೇತ್ರದಲ್ಲಿ ಕೆಲಸ‌ ಮಾಡಿಕೊಂಡು ಬಂದಿದ್ದೇನೆ. ಜಿಲ್ಲೆಯ ಜನರ ಕಷ್ಟ ಸುಖಕ್ಕೆ ಸ್ಪಂದಿಸಿದ್ದೇನೆ. ಈ ಬಾರಿಯೂ ನಮ್ಮ ಜಿಲ್ಲೆಯವರಿಗೆ ಅವಕಾಶ ನೀಡಬೇಕು. ಅನ್ಯ ಜಿಲ್ಲೆಯವರಾದ ಸಂಯುಕ್ತಾ ಪಾಟೀಲ್‌ ಅವರಿಗೆ ಟಿಕೆಟ್ ನೀಡಬಾರದು. ನನ್ನ ಬೆಂಬಲಿಗರು ಮುಖ್ಯಮಂತ್ರಿಗೆ ಮನವಿ ಮಾಡಲು ಬಂದಿದ್ದಾರೆ. ಹೈಕಮಾಂಡ್ ಮೇಲೆ ನನಗೆ ವಿಶ್ವಾಸ ಇದೆ. ಇನ್ನೂ ಟಿಕೆಟ್ ಅಂತಿಮ ಆಗಿಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT