ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂದರ್ಶನ: ಮಲೆನಾಡ ಸಂಪರ್ಕ ವ್ಯವಸ್ಥೆ ಬಲಪಡಿಸುವೆ– ಗೀತಾ ಶಿವರಾಜಕುಮಾರ್

-
Published 29 ಏಪ್ರಿಲ್ 2024, 0:06 IST
Last Updated 29 ಏಪ್ರಿಲ್ 2024, 0:06 IST
ಅಕ್ಷರ ಗಾತ್ರ

ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಚುನಾವಣೆಯ ಕಾವು ವಿಪರೀತ ಎನ್ನುವಷ್ಟು  ಏರುತ್ತಿದೆ. ಕ್ಷೇತ್ರದಲ್ಲಿ ಈ ಬಾರಿ ಗೀತಾ ಶಿವರಾಜಕುಮಾರ್ ಕಾಂಗ್ರೆಸ್‌ನಿಂದ ಕಣಕ್ಕಿಳಿದಿದ್ದಾರೆ. ಅವರು 2014ರಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿ ಸೋತಿದ್ದರು. ಗೀತಾ, ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರ ಪುತ್ರಿ. ಪಕ್ಷದ ಸಂಘಟನೆ, ಅಪ್ಪನ ನಾಮಬಲ, ಪತಿ, ನಟ ಶಿವರಾಜಕುಮಾರ್ ಅವರ ತಾರಾವರ್ಚಸ್ಸು, ಜಿಲ್ಲಾ ಉಸ್ತುವಾರಿ ಸಚಿವರೂ ಆದ ಸಹೋದರ ಮಧು ಬಂಗಾರಪ್ಪ ಬೆನ್ನಿಗೆ ನಿಂತಿರುವುದು ಅವರಿಗೆ ಬಲ ತಂದಿದೆ.

ಶಿವರಾಜಕುಮಾರ್, ಕಳೆದೊಂದು ತಿಂಗಳಿಂದ ಪತ್ನಿ ಗೀತಾ ಪರ ಶಿವಮೊಗ್ಗದಲ್ಲಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಹಳ್ಳಿಹಳ್ಳಿಯಲ್ಲೂ ‘ಶಿವಣ್ಣ’ನ ನೋಡಲು ಜನರು ದೊಡ್ಡ ಸಂಖ್ಯೆಯಲ್ಲಿ ಸೇರುತ್ತಿದ್ದಾರೆ. ಅಭಿಮಾನಿಗಳು ‘ಸೆಲ್ಫಿ’ಗೂ ಮುಗಿಬೀಳುತ್ತಿದ್ದಾರೆ. 

ಪ್ರಚಾರದ ನಡುವೆ, ಗೀತಾ ಮತ್ತು ಶಿವರಾಜ್‌ ಕುಮಾರ್ ಅವರು ‘ಪ್ರಜಾವಾಣಿಗೆ ನೀಡಿದ ಸಂದರ್ಶನದ ಆಯ್ದ ಭಾಗ ಇಲ್ಲಿದೆ:  

* ಪ್ರಚಾರ ಹೇಗಿದೆ. ಜನರ ಸ್ಪಂದನೆ ಬಗ್ಗೆ ಹೇಳಿ?

ಕ್ಷೇತ್ರದ ಎಲ್ಲ ಕಡೆಯೂ ಜನರ ಬಳಿಗೆ ಹೋಗಿದ್ದೇವೆ. ಪ್ರಚಾರ ಬಿರುಸಿನಿಂದ ಸಾಗಿದೆ. ಎಲ್ಲಿಗೆ ಹೋದರೂ ಜನರು ಅಭಿಮಾನ, ಪ್ರೀತಿ ತೋರುತ್ತಿದ್ದಾರೆ. ಅಕ್ಕನೋ, ತಂಗಿಯೋ, ಮಗಳೋ ಮನೆಗೆ ಬಂದಷ್ಟು ವಾತ್ಸಲ್ಯ ತೋರುತ್ತಿದ್ದಾರೆ. ವಿಶೇಷವಾಗಿ ಹೆಣ್ಣುಮಕ್ಕಳಿಂದ ಹೆಚ್ಚು ಬೆಂಬಲ ಸಿಗುತ್ತಿದೆ.

*ಅಪ್ಪನ (ಎಸ್.ಬಂಗಾರಪ್ಪ) ರಾಜಕಾರಣ ನೋಡುತ್ತಾ ಅವರ ನೆರಳಲ್ಲಿ ಬೆಳೆದವರು ನೀವು. ಈಗ ಅವರ ಅನುಪಸ್ಥಿತಿ ಕಾಡುತ್ತಿದೆಯೇ?

ಬಾಲ್ಯದಲ್ಲಿ ಅಪ್ಪ ನಾಮಪತ್ರ ಸಲ್ಲಿಸುವಾಗ ನಾನು ಜೊತೆಗೆ ಹೋಗಿದ್ದ ನೆನಪು...  ದೊಡ್ಡವಳಾದಂತೆ ರಾಜಕೀಯ ಕ್ಷೇತ್ರ ಅರ್ಥವಾಗತೊಡಗಿತು. ಪ್ರಮುಖ ರಾಜಕೀಯ ನಿರ್ಧಾರಗಳನ್ನು ತೆಗೆದುಕೊಳ್ಳುವ ಮುನ್ನ ಅಪ್ಪ ನನಗೆ ಹಾಗೂ ಅಕ್ಕನಿಗೆ (ಸುಜಾತಾ) ಆ ಕುರಿತು ಹೇಳುತ್ತಿದ್ದರು. ಬಾಲ್ಯದಲ್ಲಿ ಮಲೆನಾಡಿನ ಸಾಮಾಜಿಕ ಬದುಕನ್ನು ಅರ್ಥೈಸುತ್ತಿದ್ದರು. ಈಗ ಅವರು ಇಲ್ಲ ಅನಿಸುತ್ತಿಲ್ಲ. ಅವರ ದೊಡ್ಡ ಬೆಂಬಲಿಗರ ಬಳಗದಲ್ಲಿ ಈಗಲೂ ಜೀವಂತವಾಗಿದ್ದಾರೆ. ಪ್ರಚಾರಕ್ಕೆ ಹೋದಾಗ ಜನರು ಅವರೊಂದಿಗಿನ ಒಡನಾಟ, ನೆನಪುಗಳನ್ನು ಹಂಚಿಕೊಳ್ಳುತ್ತಾರೆ. ಇದು ನನಗೆ ಹಾಗೂ ಪಕ್ಷಕ್ಕೆ ಸಕಾರಾತ್ಮಕ ಸಂಗತಿ.

* ಕ್ಷೇತ್ರದಲ್ಲಿ ಪ್ರಮುಖವಾಗಿ ಏನು ಸಮಸ್ಯೆಗಳನ್ನು ಗುರುತಿಸಿದ್ದೀರಿ?

ಮಲೆನಾಡಿನಲ್ಲಿ ಕಾಡಂಚಿನ ಬಹುತೇಕ ಗ್ರಾಮಗಳಿಗೆ ರಸ್ತೆ, ಕಾಲುಸಂಕದಂತಹ ಮೂಲ ಸೌಕರ್ಯ ಇಲ್ಲ. ಹೀಗಾಗಿ ಮಕ್ಕಳನ್ನು ಓದಿಸಲು ಪೋಷಕರು, ನೆಂಟರ ಮನೆಗೆ ಇಲ್ಲವೇ ಹಾಸ್ಟೆಲ್‌ಗೆ ಬಿಡುತ್ತಿದ್ದಾರೆ. ಎಳವೆಯಲ್ಲಿ ಅಪ್ಪ–ಅಮ್ಮನೊಂದಿಗೆ ಇದ್ದು ಬೆಳೆಯಬೇಕಾದ ಮಕ್ಕಳು ಅವರಿಂದ ದೂರ ಹೋಗುತ್ತಿರುವ ವಿಚಾರ ಕೇಳಿ ಮನ ಕಲಕಿತು. ಗೆದ್ದರೆ ಮೊದಲು ಸಂಪರ್ಕ ವ್ಯವಸ್ಥೆ ಬಲ‍ಪಡಿಸುವೆ. ಮೊಬೈಲ್‌ ನೆಟ್‌ವರ್ಕ್‌ ಸಮಸ್ಯೆ ಪರಿಹರಿಸಲು ಒತ್ತು ನೀಡುತ್ತೇನೆ.

ಶರಾವತಿ ಮುಳುಗಡೆ ಪ್ರದೇಶದಿಂದ ಬಂದವರು ಅರಣ್ಯ ಪ್ರದೇಶದಲ್ಲಿ ವಾಸವಿದ್ದಾರೆ. ಅರಣ್ಯ ಇಲಾಖೆಯವರು ಅದು ನಮ್ಮ ಜಮೀನು ಎನ್ನುತ್ತಾರೆ. ಸಂತ್ರಸ್ತರು ಇದು ನಮ್ಮದು ಅನ್ನುತ್ತಾರೆ. ಇದು ಹಗ್ಗಜಗ್ಗಾಟ. ಅಲ್ಲಿ ನೆಲೆಸಿರುವವರು ಸಂತ್ರಸ್ತರಾಗಿರುವುದರಿಂದ ಅವರಿಗೆ ಜಮೀನು ಕೊಡಲೇಬೇಕು. ಸಂತ್ರಸ್ತರಿಗೆ ಅಲ್ಲಿಯೇ ಶಾಶ್ವತ ನೆಲೆ ಕೊಡಿಸಬೇಕಿದೆ. ಆ ವಿಚಾರದಲ್ಲಿ ಕೆಲವು ನಿರ್ಧಾರ ರಾಜ್ಯದಲ್ಲಿ, ಇನ್ನೂ ಕೆಲವು ಕೇಂದ್ರದಿಂದ ತೆಗೆದುಕೊಳ್ಳಬೇಕಿದೆ. ಹೀಗಾಗಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಲಿದ್ದೇನೆ.

* ಗ್ಯಾರಂಟಿ ಯೋಜನೆಗಳು ನಿಮಗೆ ವರವಾಗಲಿವೆಯೇ?

ಖಂಡಿತ. ಈಗ ರಾಜ್ಯದಲ್ಲಿ ಬರಗಾಲ ಇದೆ. ಮನೆ ನಿರ್ವಹಣೆ ವೆಚ್ಚ ಭರಿಸಲು ಮಹಿಳೆಯರಿಗೆ ₹2000 ನೆರವಾಗಿದೆ. ಹೆಣ್ಣುಮಕ್ಕಳು ಕಾಲೇಜಿಗೆ ಹೋಗಲು ಉಚಿತ ಬಸ್ ಪ್ರಯಾಣ ನೆರವಾಗಿದೆ. ಅದನ್ನು ಕಾಲೇಜು ಹುಡುಗರಿಗೂ ವಿಸ್ತರಿಸುವುದು ಅಗತ್ಯ ಅನಿಸುತ್ತಿದೆ. 200 ಯೂನಿಟ್‌ವರೆಗಿನ ಉಚಿತ ವಿದ್ಯುತ್‌ ಜನರ ಜೇಬಿನ ಹೊರೆ ತಪ್ಪಿಸಿದೆ.

* ರಾಜ್ಯದಲ್ಲಿ ಜನರು ಕಾಂಗ್ರೆಸ್‌ಗೆ ಏಕೆ ಮತ ಹಾಕಬೇಕು?

ಗ್ಯಾರಂಟಿ ಯೋಜನೆಗಳ ನಂಬಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜನರು ನಮಗೆ ಮತ ಹಾಕಿದ್ದರು. ಐದಾರು ತಿಂಗಳಲ್ಲಿ ‘ಗ್ಯಾರಂಟಿ’ ಅನುಷ್ಠಾನಗೊಳಿಸಿ ಕೊಟ್ಟ ಮಾತು, ಜನರ ನಂಬಿಕೆ ಎರಡನ್ನೂ ಉಳಿಸಿಕೊಂಡಿದ್ದೇವೆ. ರಾಷ್ಟ್ರಮಟ್ಟದಲ್ಲೂ ಈಗ ಘೋಷಿಸಿರುವ ಗ್ಯಾರಂಟಿಗಳಿಂದ ಜನರಿಗೆ ಅನುಕೂಲವಾಗಲಿದೆ. ಕಾಂಗ್ರೆಸ್ ಪಕ್ಷ ಮಾತ್ರ ಜನರಿಗೆ ನೆರವಾಗಲಿದೆ. ಜೊತೆಗೆ ಕರ್ನಾಟಕವು ಸರ್ವಜನಾಂಗದ ಶಾಂತಿಯ ತೋಟ. ಎಲ್ಲಾ ಜಾತಿ–ಜನಾಂಗದವರನ್ನು ಒಗ್ಗೂಡಿಸಿ ಒಟ್ಟಿಗೆ ಕರೆದೊಯ್ಯಲು ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ ಎಂಬುದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತೋರಿಸಿಕೊಟ್ಟಿದ್ದಾರೆ. 

ಶಿವರಾಜಕುಮಾರ್ ಹಾಗೂ ಗೀತಾ ದಂಪತಿ
ಶಿವರಾಜಕುಮಾರ್ ಹಾಗೂ ಗೀತಾ ದಂಪತಿ
ಶಿವಮೊಗ್ಗದ ಮಾಚೇನಹಳ್ಳಿಯ ಗಾರ್ಮೆಂಟ್ಸ್‌ವೊಂದಕ್ಕೆ ಭೇಟಿ ನೀಡಿದ್ದ ಗೀತಾ ಹಾಗೂ ಶಿವರಾಜಕುಮಾರ್ ದಂಪತಿ ಮಹಿಳೆಯರಿಂದ ಮತಯಾಚನೆ ಮಾಡಿದರು–ಚಿತ್ರ: ಶಿವಮೊಗ್ಗ ನಾಗರಾಜ್
ಶಿವಮೊಗ್ಗದ ಮಾಚೇನಹಳ್ಳಿಯ ಗಾರ್ಮೆಂಟ್ಸ್‌ವೊಂದಕ್ಕೆ ಭೇಟಿ ನೀಡಿದ್ದ ಗೀತಾ ಹಾಗೂ ಶಿವರಾಜಕುಮಾರ್ ದಂಪತಿ ಮಹಿಳೆಯರಿಂದ ಮತಯಾಚನೆ ಮಾಡಿದರು–ಚಿತ್ರ: ಶಿವಮೊಗ್ಗ ನಾಗರಾಜ್

ಶಿವಮೊಗ್ಗ ಯಾರ ಭದ್ರ ಕೋಟೆಯೂ ಅಲ್ಲ...

* ಗೀತಾ ಬಂಗಾರಪ್ಪ ಅವರ ಪುತ್ರಿ. ರಾಜಕೀಯ ಕುಟುಂಬದಿಂದ ಬಂದವರು. ಅದರ ಹೊರತಾಗಿ ಅವರಲ್ಲಿ ಏನು ಸಾಮರ್ಥ್ಯ ಗುರುತಿಸಿದ್ದೀರಿ?

ರಾಜಕೀಯಕ್ಕೆ ಬರಲು ರಾಜಕೀಯ ಜ್ಞಾನ ಇರಲೇಬೇಕು ಅಂತೇನೂ ಇಲ್ಲ. ಬದುಕಿನ ಅನುಭವವೇ ಸಾಕು. ಗೀತಾ ಮದುವೆ ಆದ ನಂತರ ಸಂಸಾರ ಚೆನ್ನಾಗಿ ನಿಭಾಯಿಸಿದ್ದಾರೆ. ಸಮಸ್ಯೆಗಳು ಬಂದಾಗ ಎದೆಗುಂದಿಲ್ಲ. ಕುಟುಂಬದ ಆದಾಯ ಖರ್ಚು–ವೆಚ್ಚ ಎಲ್ಲವನ್ನೂ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಮೈಸೂರಿನ ಶಕ್ತಿಧಾಮಕ್ಕೆ ವಿಶೇಷ ರೂಪು ಕೊಟ್ಟು ಹೆಣ್ಣುಮಕ್ಕಳಿಗೆ ನೆರವು ಕೊಡುವ ಸಾಮಾಜಿಕ ಕಾರ್ಯದಲ್ಲೂ ತೊಡಗಿದ್ದಾರೆ. ಆ ಮಕ್ಕಳನ್ನು ತಾಯಿಯಂತೆ ನೋಡಿ ಅವರನ್ನು ಸ್ವಾವಲಂಬಿಯಾಗಿಸುವ ಕೆಲಸ ಮಾಡಿದ್ದಾರೆ. ಅಷ್ಟೊಂದು ಸಾಮರ್ಥ್ಯ ಅವರಲ್ಲಿ ಇದೆ. ವಾತ್ಸಲ್ಯ ಅಂತಃಕರಣ ಸಹಜವಾಗಿಯೇ ಇದೆ. ರಾಜಕಾರಣಿ ಆಗಿ ಕ್ಷೇತ್ರವನ್ನು ಚೆನ್ನಾಗಿ ನಿಭಾಯಿಸಬಲ್ಲರು. ಜೊತೆಗೆ ಶಿಕ್ಷಿತೆ. ಇಂಗ್ಲಿಷ್ ಹಿಂದಿ ಚೆನ್ನಾಗಿ ಮಾತಾಡುತ್ತಾರೆ. ಧೈರ್ಯವಿದೆ. ಜನರೊಂದಿಗೆ ಬೆರೆಯುತ್ತಾರೆ.

* ಶಿವಮೊಗ್ಗದ ಜನರು ಗೀತಾ ಅವರನ್ನೇ ಏಕೆ ಆಯ್ಕೆ ಮಾಡಬೇಕು?

ರಾಜಕೀಯ ಇಂದು ವ್ಯವಹಾರ ಆಗಿದೆ. ಆದರೆ ನಮ್ಮ ಕುಟುಂಬ ಮೊದಲಿನಿಂದಲೂ ಚಿತ್ರೋದ್ಯಮದ ವ್ಯವಹಾರದಲ್ಲಿ ತೊಡಗಿಕೊಂಡಿದೆ. ರಾಜಕೀಯವನ್ನು ವ್ಯವಹಾರ ಮಾಡಿಕೊಂಡು ಆದಾಯ ಪಡೆಯುವ ಅಗತ್ಯ ಇಲ್ಲ. ನಮಗೆ ಜನರು ಸ್ಥಾನಮಾನ ಕೊಟ್ಟಿದ್ದಾರೆ. ತಾರಾ ವರ್ಚಸ್ಸು ಕೊಟ್ಟಿದ್ದಾರೆ. ರಾಜ್‌ಕುಮಾರ್ ಅವರ ಕುಟುಂಬ ಅಂದರೆ ಅದಕ್ಕೊಂದು ಗೌರವ ಇದೆ. ಅದನ್ನು ಉಳಿಸಿಕೊಳ್ಳಬೇಕು. ಹೀಗಾಗಿ ಲಾಭದ ಅಪೇಕ್ಷೆ ಇಲ್ಲದೇ ಕೆಲಸ ಮಾಡಬೇಕು. ಗೀತಾ ಆಯ್ಕೆಯಾದರೆ ಜನರಿಗೆ ಹೆಚ್ಚು ಲಾಭವಾಗಲಿದೆ. * ಪತ್ನಿ ಪರ ಪ್ರಚಾರ ಕಾರ್ಯದಲ್ಲಿ ತೊಡಗಿದ್ದೀರಿ ಮುಖ್ಯವಾಗಿ ಏನು ಗುರುತಿಸಿದ್ದೀರಿ? ಮದುವೆ ಆಗಿ 38 ವರ್ಷಗಳ ನಂತರ ಮಾವನವರು (ಎಸ್.ಬಂಗಾರಪ್ಪ) ಮಾಡಿರುವ ಜನಪರ ಕೆಲಸಗಳು ಗೊತ್ತಾಗುತ್ತಿವೆ. ಅವರಲ್ಲಿ ಆ ಕಾಲದಲ್ಲಿಯೇ ಎಂತಹ ದೂರದೃಷ್ಟಿ ಇತ್ತು. ಬಂಗಾರಪ್ಪನವರ ಆಶ್ರಯ ಆರಾಧನಾ ಅಕ್ಷಯ ಯೋಜನೆಗಳೇ ಇಂದಿನ ಗ್ಯಾರಂಟಿ ಯೋಜನೆಗಳಿಗೂ ಸ್ಫೂರ್ತಿ.

* ಶಿವಮೊಗ್ಗವು ಬಿಜೆಪಿಯ ಶಕ್ತಿ ಕೇಂದ್ರ. ಇಲ್ಲಿ ಗೀತಾ ಅವರನ್ನು ಚುನಾವಣೆಗೆ ನಿಲ್ಲಿಸಿ ದೊಡ್ಡ ಸವಾಲು ಎದುರಿಸುತ್ತಿದ್ದೇವೆ ಅನಿಸುತ್ತಿದೆಯೆ?

ಜೀವನದಲ್ಲಿ ಎಲ್ಲ ಸಂಗತಿಯೂ ಸವಾಲೇ. ಅದನ್ನು ಎದುರಿಸಲು ಯಾರಾದರೇನು? ಶಿವಮೊಗ್ಗ ಯಾರ ಭದ್ರಕೋಟೆಯೂ ಅಲ್ಲ. ಇದು ಜನರ ಕೋಟೆ. ಹೀಗಾಗಿ ಎಲ್ಲರಿಗೂ ಅವಕಾಶ ಇದೆ. ಅವರು ಸಾಹುಕಾರರು ಅವರ ಮುಂದೆ ಬದುಕೋದು ಹೆಂಗಪ್ಪಾ ಎಂದು ಯೋಚಿಸಿದರೆ ಏನೂ ಸಾಧನೆ ಸಾಧ್ಯವಿಲ್ಲ. ಕೂಲಿ ಮಾಡುವ ಮನುಷ್ಯನಿಗೂ ಇಲ್ಲಿ ಬದುಕುವ ಅವಕಾಶವಿದೆ. ಹೀಗಾಗಿ ಗೀತಾ ದೊಡ್ಡ ಸವಾಲು ಎದುರಿಸುತ್ತಿದ್ದಾರೆ ಎಂದು ಭಾವಿಸುವ ಅಗತ್ಯವಿಲ್ಲ.

* ಗೀತಾ ಅವರ ಪರ ಸಿನಿಮಾ ರಂಗದವರು ಪ್ರಚಾರಕ್ಕೆ ಬರುತ್ತಾರಾ?

ಹೌದು. ಚಲನಚಿತ್ರ ವಾಣಿಜ್ಯ ಮಂಡಳಿಯವರು ಬೆಂಬಲ ನೀಡಿದ್ದಾರೆ. ನಟರಾದ ದುನಿಯಾ ವಿಜಯ್ ಡಾಲಿ ಧನಂಜಯ ವಿಜಯ್‌ ರಾಘವೇಂದ್ರ ಧ್ರುವ ಸರ್ಜಾ ವಿರಾಟ್ ಅನುಶ್ರೀ ನಿಶ್ವಿಕಾ ನಾಯ್ಡು ಬರಲಿದ್ದಾರೆ. ಇನ್ನಷ್ಟು ಜನರು ಬರುವುದಾಗಿ ಹೇಳಿದ್ದಾರೆ. ಯಾರನ್ನೂ ಒತ್ತಾಯ ಮಾಡುತ್ತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT