ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ರಹ್ಮಾವರ ಕ್ಷೇತ್ರ ಸ್ಥಿತಿಗತಿ: ಹ್ಯಾಟ್ರಿಕ್ ಬಾರಿಸಿದ್ದ ಜೆ.ಪಿ.ಹೆಗ್ಡೆ

ಕ್ಷೇತ್ರ ಪುನರ್ವಿಂಗಡಣೆಯ ಬಳಿಕ ಬ್ರಹ್ಮಾವರ ವಿಧಾನಸಭಾ ಕ್ಷೇತ್ರ ರದ್ದು
Last Updated 7 ಏಪ್ರಿಲ್ 2023, 22:45 IST
ಅಕ್ಷರ ಗಾತ್ರ

ಉಡುಪಿ: 2008ರಲ್ಲಿ ಕ್ಷೇತ್ರ ಪುನರ್‌ ವಿಂಗಡನೆಯ ಬಳಿಕ ಬ್ರಹ್ಮಾವರ ವಿಧಾನಸಭಾ ಕ್ಷೇತ್ರ ರದ್ದಾಯಿತು. 1957ರಿಂದ 1997ರವರೆಗೂ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಭಾಗವಾಗಿದ್ದ ಬ್ರಹ್ಮಾವರ ಈ ಅವಧಿಯಲ್ಲಿ 9 ವಿಧಾನಸಭಾ ಚುನಾವಣೆಗಳನ್ನು ಕಂಡಿದೆ. ಉಡುಪಿ ಜಿಲ್ಲೆಯ ಭಾಗವಾದ ಬಳಿಕ 2 ಚುನಾವಣೆಗಳು ನಡೆದಿವೆ.

1957ರಲ್ಲಿ ನಡೆದ ಮೊದಲ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಜಗಜೀವನ್‌ದಾಸ್ ಶೆಟ್ಟಿ ಗೆಲುವಿನ ನಗೆ ಬೀರಿದ್ದರು. ಪ್ರತಿಸ್ಪರ್ಧಿ ಪ್ರಜಾ ಸೋಷಲಿಸ್ಟ್ ಪಕ್ಷದ ಶೀನಪ್ಪ ಶೆಟ್ಟಿ ಅವರನ್ನು 6,535 ಮತಗಳಿಂದ ಮಣಿಸಿದ್ದರು.

1962ರ ಚುನಾವಣೆಯಲ್ಲೂ ಕಾಂಗ್ರೆಸ್‌ನ ಎಸ್‌.ಡಿ.ಸಾಮ್ರಾಜ್ಯ ಪ್ರಜಾ ಸೋಷಲಿಸ್ಟ್ ಪಕ್ಷದ ಶೀನಪ್ಪ ಶೆಟ್ಟಿ ಅವರನ್ನು 7,686 ಭಾರಿ ಮತಗಳ ಅಂತರದಿಂದ ಪರಾಭವಗೊಳಿಸಿದರು. 1967ರ ಚುನಾವಣೆಯಲ್ಲಿ ಪಕ್ಷೇತ್ತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಎಸ್‌.ಜೆ.ಶೆಟ್ಟಿ ಕಾಂಗ್ರೆಸ್‌ನ ಎಫ್‌ಎಕ್ಸ್‌ಡಿ ಪಿಂಟೋ ಅವರನ್ನು 12,642 ಮತಗಳ ಅಂತರದಿಂದ ಸೋಲಿಸಿದರು.

1972ರ ಚುನಾವಣೆಯಲ್ಲಿ ಮತ್ತೆ ಕಾಂಗ್ರೆಸ್‌ ಅಧಿಕಾರಕ್ಕೆ ಬಂತು. ಜಯಪ್ರಕಾಶ್‌ ಎಸ್‌.ಕೊಳ್ಕೆಬೈಲ್‌ ಎನ್‌ಸಿಒ ಪಕ್ಷದ ಎಂ.ಎಂ.ಹೆಗ್ಡೆ ಅವರನ್ನು 14575 ಮತಗಳ ಅಂತರದಿಂದ ಸೋಲಿಸಿ ಗೆಲುವಿನ ನಗೆ ಬೀರಿದರು.1977ರ ಚುನಾವಣೆಯಲ್ಲಿ ಕಾಂಗ್ರೆಸ್‌ (ಐ) ಪಕ್ಷದಿಂದ ಸ್ಪರ್ಧಿಸಿದ್ದ ಆನಂದ ಕುಂದ ಹೆಗ್ಡೆ ಜನತಾ ಪಕ್ಷದ ವಿ.ಎಸ್‌.ಆಚಾರ್ಯ ಅವರನ್ನು 2863 ಮತಗಳಿಂದ ಮಣಿಸಿದರು.‌

1983ರ ಚುನಾವಣೆ ತೀವ್ರ ಜಿದ್ದಾಜಿದ್ದಿನಿಂದ ಕೂಡಿತ್ತು. ಮೊದಲ ಬಾರಿಗೆ ಬ್ರಹ್ಮಾವರ ಕ್ಷೇತ್ರದಲ್ಲಿ ಬಿಜೆಪಿ ವಿಜಯದ ನಗೆ ಬೀರಿತ್ತು. ಬಿಜೆಪಿಯ ಬಿ.ಬಿ.ಶೆಟ್ಟಿ ಕಾಂಗ್ರೆಸ್‌ನ ಬಸವರಾಜು ವಿರುದ್ಧ 954 ಮತಗಳ ಪ್ರಯಾಸದ ಗೆಲುವು ಪಡೆದಿದ್ದರು.

1985ರ ಚುನಾವಣೆಯಲ್ಲಿ ಮತ್ತೆ ಕಾಂಗ್ರೆಸ್‌ ಗೆಲುವಿನ ಹಳಿಗೆ ಬಂತು. ಅಭ್ಯರ್ಥಿ ಬಸವರಾಜ್ ಜನತಾ ಪಕ್ಷದ ಜಯಪ್ರಕಾಶ್ ಹೆಗ್ಡೆ ಅವರನ್ನು 7,578 ಮತಗಳಿಂದ ಸೋಲಿಸಿದರು.

1989ರ ಚುನಾವಣೆಯಲ್ಲೂ ಜನತಾದಳದಿಂದ ಸ್ಪರ್ಧಿಸಿದ್ದ ಜಯಪ್ರಕಾಶ್ ಹೆಗ್ಡೆ ಅವರನ್ನು ಮಣಿಸಿ ಕಾಂಗ್ರೆಸ್‌ನ ಬಸವರಾಜ್‌ ಎರಡನೇ ಬಾರಿಗೆ ಶಾಸಕರಾದರು.

ಸತತ ಎರಡು ಸೋಲುಗಳಿಂದ ಕಂಗೆಟ್ಟಿದ್ದ ಜಯಪ್ರಕಾಶ್ ಹೆಗ್ಡೆ 1994ರಲ್ಲಿ ಮೊದಲ ಜಯದ ಸಿಹಿ ಸವಿದರು. ಕಾಂಗ್ರೆಸ್‌ನ ಬಸವರಾಜ್ ಅವರನ್ನು 12,876 ಮತಗಳಿಂದ ಸೋಲಿಸಿ ಶಾಸಕರಾದರು. 1999ರ ಚುನಾವಣೆಯಲ್ಲಿ ಪಕ್ಷೇತ್ತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಕಾಂಗ್ರೆಸ್‌ನ ಸರಳಾ ಕಾಂಚನ್ ಅವರನ್ನು 4,763 ಮತಗಳಿಂದ ಪರಾಭವಗೊಳಿಸಿ ಎರಡನೇ ಬಾರಿಗೆ ಶಾಸಕರಾದರು.

ನಂತರದ ಚುನಾವಣೆಯಲ್ಲೂ ಜೆಪಿ ಹೆಗ್ಡೆ ಅವರ ಗೆಲುವಿನ ಅಭಿಯಾನ ಮುಂದುವರಿಯಿತು. 2004ರಲ್ಲಿ ಕಾಂಗ್ರೆಸ್‌ನ ಯುವ ನಾಯಕ ಪ್ರಮೋದ್ ಮಧ್ವರಾಜ್ ಅವರನ್ನು 12,173 ಮತಗಳಿಂದ ಸೋಲಿಸಿ ಹ್ಯಾಟ್ರಿಕ್ ಗೆಲುವು ಪಡೆದರು. 2004ರ ಚುನಾವಣೆಯೇ ಬ್ರಹ್ಮಾವರ ಕ್ಷೇತ್ರಕ್ಕೆ ನಡೆದ ಕೊನೆಯ ವಿಧಾನಸಭಾ ಚುನಾವಣೆ.

ಕ್ಷೇತ್ರ ಪುನರ್ವಿಂಗಡೆಯ ಬಳಿಕ ವಿಧಾನಸಭಾ ಕ್ಷೇತ್ರ ಸ್ಥಾನ ಕಳೆದುಕೊಂಡ ಬ್ರಹ್ಮಾವರ ನೆರೆಯ ವಿಧಾನಸಭಾ ಕ್ಷೇತ್ರಗಳೊಂದಿಗೆ ವಿಲೀನಗೊಂಡಿದೆ. ಬ್ರಹ್ಮಾವರದ ಹೆಚ್ಚಿನ ಕ್ಷೇತ್ರಗಳು ಉಡುಪಿ ವಿಧಾನಸಭಾ ಕ್ಷೇತ್ರಕ್ಕೊಳಪಟ್ಟಿವೆ. 11 ಪಂಚಾಯಿತಿಗಳು ಹಾಗೂ ಸಾಲಿಗ್ರಾಮ ಪಟ್ಟಣ ಪಂಚಾಯಿತಿ ಕುಂದಾಪುರ ವಿಧಾನಸಭಾ ಕ್ಷೇತ್ರಕ್ಕೆ ಸೇರಿಸಲಾಗಿದೆ.

ವಿಧಾನಸಭಾ ಕ್ಷೇತ್ರವಾಗಿರದಿದ್ರೂ ಪ್ರತ್ಯೇಕ ತಾಲ್ಲೂಕು ಸ್ಥಾನ ಮಾನ ಹೊಂದಿರುವ ಬ್ರಹ್ಮಾವರ ರಾಜಕೀಯ ಚಿತ್ರಣವನ್ನು ಬದಲಿಸುವಷ್ಟು ಪ್ರಬಲವಾಗಿದೆ.

ವರ್ಷ–ಗೆದ್ದ ಅಭ್ಯರ್ಥಿ–ಪಕ್ಷ–ಪಡೆದ ಮತ

1957–ಜಗಜೀವನ್‌ದಾಸ್ ಶೆಟ್ಟಿ-ಕಾಂಗ್ರೆಸ್–16,964

1962–ಎಸ್‌.ಡಿ.ಸಾಮ್ರಾಜ್ಯ–ಕಾಂಗ್ರೆಸ್‌–14,601

1967–ಎಸ್‌.ಜೆ.ಶೆಟ್ಟಿ–ಪಕ್ಷೇತ್ತರ–22,551

1972–ಜಯಪ್ರಕಾಶ್ ಎಸ್‌.ಕೊಳ್ಕೆಬೈಲು–ಕಾಂಗ್ರೆಸ್‌–22,421

1978–ಆನಂದ ಕುಂದ ಹೆಗ್ಡೆ–ಕಾಂಗ್ರೆಸ್‌ (ಐ)–29,021

1983–ಬಿ.ಬಿ.ಶೆಟ್ಟಿ–ಬಿಜೆಪಿ–27,504

1985–ಬಸವರಾಜ್‌–ಕಾಂಗ್ರೆಸ್‌–34,354

1989–ಬಸವರಾಜ್‌–ಕಾಂಗ್ರೆಸ್‌–41,709

1994–ಜಯಪ್ರಕಾಶ್ ಹೆಗ್ಡೆ–ಜನತಾದಳ–38,633

1999–ಜಯಪ್ರಕಾಶ್ ಹೆಗ್ಡೆ–ಪಕ್ಷೇತ್ತರ–32,429

2004–ಜಯಪ್ರಕಾಶ್ ಹೆಗ್ಡೆ–ಪಕ್ಷೇತ್ತರ–39,521

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT