ಹಲವು ‘ಪ್ರಭಾವಿ’ ಕುಟುಂಬಗಳು ತಮ್ಮದೇ ಕೋಟೆಗಳನ್ನು ಕಟ್ಟಿಕೊಂಡಿರುವ ಬೆಳಗಾವಿಯಲ್ಲಿ ತಮ್ಮ ಸಾಮ್ರಾಜ್ಯ ವಿಸ್ತರಣೆಗೆ ಮುಂದಾಗಿರುವ ಸಚಿವೆ ಲಕ್ಷ್ಮೀ ಹೆಬ್ಬಾಳಕರ ತಮ್ಮ ಮಗ ಮೃಣಾಲ್ ಅವರನ್ನು ಕಣಕ್ಕೆ ಇಳಿಸಿದ್ದಾರೆ. ಸಂಸದೆ ಮಂಗಳಾ ಅಂಗಡಿ ಅವರ ಬದಲಿಗೆ ಅವರ ಬೀಗರಾದ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಹುಬ್ಬಳ್ಳಿಯಲ್ಲಿ ಬಾಗಿಲು ಹಾಕಿದ್ದ ‘ಅಂಗಡಿ’ಯ ಶಟರ್ ಅನ್ನು ಬೆಳಗಾವಿಯಲ್ಲಿ ತೆರೆಯಲು ಓಡಾಡುತ್ತಿದ್ದಾರೆ. ಬೆಳಗಾವಿಯೆಂದರೆ ಜಾರಕಿಹೊಳಿ, ಕೋರೆ, ಕತ್ತಿ, ಸವದಿ, ಹುಕ್ಕೇರಿ ಕುಟುಂಬದ ಕೋಟೆ. ಅವರೆಲ್ಲರನ್ನೂ ಒಂದುಗೂಡಿಸಿಯೋ, ಎದುರು ಹಾಕಿಕೊಂಡೋ ಸುರೇಶ ಅಂಗಡಿ ಗೆಲ್ಲುತ್ತಲೇ ಬಂದಿದ್ದರು. ಅವರ ಅಕಾಲಿಕ ನಿಧನದ ನಂತರ ಅವರ ಪತ್ನಿ ಮಂಗಳಾ ಅಂಗಡಿ ಉಪಚುನಾವಣೆಯಲ್ಲಿ ಗೆದ್ದರು. ರಾಜಕೀಯವಾಗಿ ಅಷ್ಟೇನೂ ಪ್ರಭಾವ ಇಲ್ಲದ ಕಾಲದಲ್ಲಿ ಸುರೇಶ ಅಂಗಡಿ ಎದುರು ಸೋತಿದ್ದ ಲಕ್ಷ್ಮೀ, ಈಗ ತಮ್ಮ ಮಗನ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಬೆಳಗಾವಿ ಗೆಲ್ಲಿಸಿಕೊಡುವ ಹೊಣೆ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೆಗಲಿಗೆ ಇದೆ. ಲಕ್ಷ್ಮೀಯವರ ಕಡುವಿರೋಧಿ ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ಹೂಡುವ ತಂತ್ರವೇ ವಿಭಿನ್ನ. ಲಕ್ಷ್ಮೀ ಬೆನ್ನಿಗೆ ಸರ್ಕಾರ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇದ್ದರೆ, ಶೆಟ್ಟರ್‌ಗೆ ವಿರೋಧವೇ ಕಾಡುತ್ತಿದೆ. ಕಾಂಗ್ರೆಸ್‌ಗೆ ಬಂದು ಬಿಜೆಪಿಗೆ ಹೋದ ಶೆಟ್ಟರ್‌ಗೆ ಕಮಲದ ಸುವಾಸನೆ ಇನ್ನೂ ಸಿಕ್ಕಿಲ್ಲ. ಮೃಣಾಲ್‌ಗೆ ‘ಲಕ್ಷ್ಮೀ’ಯ ಬಲವಿದೆ. ಶೆಟ್ಟರ್ ಅಂಗಡಿ ತೆರೆಯಲಿದೆಯೋ ಮೃಣಾಲ್ ‘ಹಸ್ತ’ಕ್ಕೆ ಅಭಯ ಸಿಗಲಿದೆಯೋ... ಗುಟ್ಟು ಗೊತ್ತಿರುವುದು ಜಾರಕಿಹೊಳಿ ಕುಟುಂಬಕ್ಕಷ್ಟೆ.