ಶನಿವಾರ, 25 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭಾ ಚುನಾವಣೆ | ಎರಡನೇ ಬಾರಿಯೂ ಪಾಟೀಲರಿಗೆ ನಿರಾಯಾಸ ಗೆಲುವು

ಸಂಸದರಾಗಿ ಉತ್ತಮ ಕಾರ್ಯನಿರ್ವಹಣೆ, ಕುಗ್ಗದ ಜನಪ್ರಿಯತೆ
Published 7 ಏಪ್ರಿಲ್ 2024, 5:59 IST
Last Updated 7 ಏಪ್ರಿಲ್ 2024, 5:59 IST
ಅಕ್ಷರ ಗಾತ್ರ

ಬಾಗಲಕೋಟೆ: ರಾಷ್ಟ್ರ ಹಾಗೂ ಬಾಗಲಕೋಟೆಗೆ 1967ರಲ್ಲಿ ನಡೆದ ನಾಲ್ಕನೇ ಲೋಕಸಭಾ ಚುನಾವಣೆ ವಿಶೇಷವಾಗಿತ್ತು. ಜವಹಾರಲಾಲ್‌ ನೆಹರೂ, ಲಾಲ್‌ ಬಹಾದ್ದೂರ ಶಾಸ್ತ್ರಿ ನೇತೃತ್ವ ಹೊತ್ತಿದ್ದ ದೇಶದ ಪ್ರಧಾನಿ ಹುದ್ದೆಯನ್ನು ಇಂದಿರಾಗಾಂಧಿ ವಹಿಸಿಕೊಂಡಿದ್ದರು. 

ದೇಶದಲ್ಲಿ 494 ಇದ್ದ ಲೋಕಸಭಾ ಸ್ಥಾನಗಳ ಸಂಖ್ಯೆ 520ಕ್ಕೆ ಹೆಚ್ಚಾಯಿತು. ಜೊತೆಗೆ ವಿಜಯಪುರ ದಕ್ಷಿಣವಾಗಿದ್ದ ಲೋಕಸಭಾ ಕ್ಷೇತ್ರವು ಬಾಗಲಕೋಟೆ ಹೆಸರಿನಲ್ಲಿ ಅಸ್ತಿತ್ವಕ್ಕೆ ಬಂದಿತು. 

ಸತತ ಎರಡನೇ ಬಾರಿಗೆ ಎಸ್‌.ಬಿ. ಪಾಟೀಲ ಅವರಿಗೆ ಕಾಂಗ್ರೆಸ್ ಟಿಕೆಟ್‌ ನೀಡಿತು. ರಾಜ್ಯ ಕೆಲವು ಕಡೆಗಳಲ್ಲಿ ಸಿ. ರಾಜಗೋಪಾಲಚಾರಿ ಸ್ಥಾಪಿಸಿದ್ದ ಸ್ವತಂತ್ರ ಪಾರ್ಟಿಯ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರು. ಆದರೆ, ಬಾಗಲಕೋಟೆ ಕ್ಷೇತ್ರದಲ್ಲಿ ಹೆಚ್ಚಿನ ಪ್ರಭಾವ ಹೊಂದಿದ್ದ ಕಾಂಗ್ರೆಸ್ ಪಕ್ಷ ಹಾಗೂ ಅಭ್ಯರ್ಥಿಯಾಗಿದ್ದ ಎಸ್‌.ಬಿ. ಪಾಟೀಲ ಅವರ ಸರಳತೆಯಿಂದಾಗಿ ಪಾಟೀಲ ಗೆಲುವು ಸಾಧಿಸಿದರು. ಸ್ವತಂತ್ರ ಪಾರ್ಟಿಯಿಂದ ಸ್ಪರ್ಧಿಸಿದ್ದ ಎ.ಡಿ. ತೊಂಡಿಹಾಳ ಎರಡನೇ ಸ್ಥಾನ ಗಳಿಸಿ ಗಮನ ಸೆಳೆದರು.

ಈ ಚುನಾವಣೆಯಲ್ಲಿ 3,16,256 (ಶೇ66.98) ಮತಗಳು ಚಲಾವಣೆಯಾಗಿದ್ದವು. ತ್ರಿಕೋನ ಸ್ಪರ್ಧೆಯಾಗಿದ್ದರಿಂದ ಪಾಟೀಲರ ಮತಗಳ ಗಳಿಕೆ ಸಂಖ್ಯೆಯು 1962ರ ಚುನಾವಣೆಗೆ ಹೋಲಿಸಿದರೆ ಐದು ಸಾವಿರ ಮತಗಳು ಕಡಿಮೆಯಾಗಿದ್ದವು. ಆದರೆ, ಅಚ್ಚರಿ ಎಂದರೆ ಗೆಲುವಿನ ಅಂತರದಲ್ಲಿ ಕಳೆದ ಬಾರಿಗಿಂತ ನಾಲ್ಕು ಸಾವಿರ ಹೆಚ್ಚಾಗಿತ್ತು.

ಎಸ್‌.ಬಿ. ಪಾಟೀಲರು 1,83,984 ಮತಗಳನ್ನು ಪಡೆದರೆ, ಅಲ್ಲಿಯವರೆಗೆ ಎರಡನೇ ಸ್ಥಾನದಲ್ಲಿರುತ್ತಿದ್ದ ಜನಸಂಘವನ್ನು ಹಿಂದೆ ಹಾಕಿ ಸ್ವತಂತ್ರ ಪಾರ್ಟಿಯಿಂದ ಸ್ಪರ್ಧಿಸಿದ್ದ ಎ.ಡಿ. ತೊಂಡಿಹಾಳ 58,304 ಮತಗಳನ್ನು ಪಡೆದು ಎರಡನೇ ಸ್ಥಾನ ಗಳಿಸಿದ್ದರು. ಜನಸಂಘದಿಂದ ಸ್ಪರ್ಧಿಸಿದ್ದ ಸಾರಿಗೆ ಉದ್ಯಮಿ ಎ.ಎಸ್‌. ಭಾಟಿ 57,315 ಮತಗಳನ್ನು ಪಡೆದಿದ್ದರು. 

ಐದು ವರ್ಷ ಸಂಸದರಾಗಿದ್ದ ಪಾಟೀಲರು ಉತ್ತಮವಾಗಿ ಕಾರ್ಯ ನಿರ್ವಹಿಸಿದ್ದರು. ಅವರ ಜನಪ್ರಿಯತೆ ಒಂದಷ್ಟೂ ಕುಗ್ಗಿರಲಿಲ್ಲ. ಅದೆಲ್ಲದರ ಪರಿಣಾಮವಾಗಿ ಅವರು 1,25,680 ಮತಗಳಿಂದ ಗೆಲುವು ಸಾಧಿಸುವ ಮೂಲಕ ಗೆಲುವಿನ ಅಂತರ ಹೆಚ್ಚಿಸಿಕೊಂಡಿದ್ದರು.

ಸ್ವಾತಂತ್ರ್ಯ ಸೇನಾನಿ ಗಾಂಧಿವಾದಿ ಎಸ್.ಬಿ.ಪಾಟೀಲ ಅವರು 1945ರ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಭಾಗವಹಿಸಿದ್ದರು. ಸ್ವಾತಂತ್ಯ್ರ ಹೋರಾಟದ ಕರಪತ್ರಗಳನ್ನು ಹಂಚಿ ಜೈಲುವಾಸ ಅನುಭವಿಸಿದ್ದರು. ಮಹಾತ್ಮಾ ಗಾಂಧೀಜಿ ಅವರ ಹತ್ಯೆಯಾದಾಗ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರು. ಬರುವಾಗ ಗಾಂಧೀಜಿಯವರ ಚಿತಾಭಸ್ಮವನ್ನು ತಂದು ಗ್ರಾಮದ ಮಧ್ಯೆ ಗುಂಡಿಯಲ್ಲಿ ಹಾಕಿ ಅಲ್ಲೊಂದು ಬೇವಿನ ಮರವನ್ನು ನೆಟ್ಟಿದ್ದರು. ಆಸ್ಪತ್ರೆ ಪೊಲೀಸ್‌ ಠಾಣೆ ನಿರ್ಮಾಣಕ್ಕೆ ತಮ್ಮ ಸ್ವಂತ ಭೂಮಿಯನ್ನು ನೀಡಿದ್ದರು. ಶಾಲಾ ಕಟ್ಟಡ ನಿರ್ಮಾಣ ಕಾರ್ಯಕ್ರಮವೊಂದಕ್ಕೆ ಬಿ.ಡಿ.ಜತ್ತಿ ಹಾಗೂ ವೀರೆಂದ್ರ ಪಾಟೀಲ ಅವರನ್ನು ಕರೆಸಿ ಗೌರವಿಸಿದ್ದರು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT