ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Lok Sabha Elections 2024 | ಗಣ್ಯರಿಗಿಲ್ಲಿ ಗೆಲುವು ಏಕೆ ಮುಖ್ಯ?

Published 7 ಮೇ 2024, 0:10 IST
Last Updated 7 ಮೇ 2024, 0:10 IST
ಅಕ್ಷರ ಗಾತ್ರ

ಮಲ್ಲಿಕಾರ್ಜುನ ಖರ್ಗೆ

ಇಡೀ ದೇಶದಲ್ಲಿ ಕಾಂಗ್ರೆಸ್ ಮುನ್ನಡೆಸುತ್ತಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರಿಗೆ ತಾವು ಬಹುಕಾಲ ಪ್ರತಿನಿಧಿಸಿದ್ದ ತವರು ಕ್ಷೇತ್ರ ಕಲಬುರಗಿಯಲ್ಲಿ ತಮ್ಮ ಅಳಿಯ ರಾಧಾಕೃಷ್ಣ ದೊಡ್ಡಮನಿಯವರನ್ನು ಗೆಲ್ಲಿಸಿಕೊಂಡು, ತಮ್ಮ ಪ್ರಭಾವ ಇನ್ನೂ ಮಾಸಿಲ್ಲ ಎಂದು ತೋರಿಸಬೇಕಾದ ದರ್ದು ಇದೆ. ಜತೆಗೆ, 14 ಕ್ಷೇತ್ರಗಳೂ ಪ್ರಮುಖವಾದರೂ ಕಲ್ಯಾಣ ಕರ್ನಾಟಕದ ಕನಿಷ್ಠ ಐದು ಕ್ಷೇತ್ರಗಳನ್ನು ಕಾಂಗ್ರೆಸ್‌ ತೆಕ್ಕೆಗೆ ತಂದುಕೊಡುವುದು ಪ್ರತಿಷ್ಠೆಯಾಗಿದೆ. ಅವರ ಮಗ, ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ತಮ್ಮ ಪ್ರಭಾವ ಎಷ್ಟಿದೆ ಎಂದು ನಿರೂಪಿಸುವ ಅನಿವಾರ್ಯವೂ ಎದುರಾಗಿದೆ.


ಸಿದ್ದರಾಮಯ್ಯ

ವಿಧಾನಸಭೆ ಚುನಾವಣೆಯಲ್ಲಿ ಭಾರಿ ಬಹುಮತ ಪಡೆದು, ಮುಖ್ಯಮಂತ್ರಿ ಗಾದಿಗೇರಿರುವ ಸಿದ್ದರಾಮಯ್ಯನವರಿಗೆ ಹಳೆ ಮೈಸೂರು ಭಾಗ ಮಾತ್ರವಲ್ಲದೇ, ಉತ್ತರ ಕರ್ನಾಟಕ ಭಾಗದಲ್ಲೂ ತಮ್ಮ ಪ್ರಭಾವಳಿ ಬಲವಾಗಿಯೇ ಇದು ಎಂದು ತೋರಿಸಬೇಕಾಗಿದೆ. ‘ಅಹಿಂದ’ ಸಮುದಾಯದ ನಾಯಕ ಎಂದು ಕರೆಸಿಕೊಳ್ಳುವ ಅವರಿಗೆ, ಈ ಸಮುದಾಯದವರ ಮತಬಾಹುಳ್ಯ ಇರುವ ಬಹುತೇಕ ಕ್ಷೇತ್ರಗಳಲ್ಲಿ ಕಾಂಗ್ರೆಸ್‌, ಹುರಿಯಾಳುಗಳನ್ನು ಗೆಲ್ಲಿಸಿ ಲೋಕಸಭೆಗೆ ಕಳುಹಿಸುವ ಸವಾಲು ಇದೆ. ಅದರಲ್ಲೂ ದಾವಣಗೆರೆ, ಕೊಪ್ಪಳ, ಧಾರವಾಡ ಹಾಗೂ ಹಾವೇರಿ ಕ್ಷೇತ್ರಗಳಲ್ಲಿ ಕುರುಬ ಸಮುದಾಯದ ಮತಗಳು ನಿರ್ಣಾಯಕ ಸ್ವರೂಪದಲ್ಲಿದ್ದು, ಕೈ ಅರಳಿಸುವ–ಕಮಲ ಬಾಡಿಸುವ ಶಕ್ತಿಯನ್ನು ಅವರು ಪ್ರದರ್ಶಿಸಬೇಕಿದೆ.

ಡಿ.ಕೆ. ಶಿವಕುಮಾರ್‌

ಕೆಪಿಸಿಸಿ ಅಧ್ಯಕ್ಷರಾಗಿರುವ ಡಿ.ಕೆ. ಶಿವಕುಮಾರ್ ಅವರಿಗೆ ಎಲ್ಲ 14 ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್‌ ಅಭ್ಯರ್ಥಿಗಳನ್ನು ಗೆಲ್ಲಿಸುವುದು, ಬಳಿಕ ತಮ್ಮ ಬಾಹುಬಲ ಉತ್ತರಕ್ಕೂ ವಿಸ್ತರಿಸಿದೆ ಎಂಬುದನ್ನು ಸಾಬೀತುಪಡಿಸಬೇಕಾದ ಅನಿವಾರ್ಯವಿದೆ. ಜಾತಿ ರಾಜಕಾರಣ ಲೆಕ್ಕದಲ್ಲಿ ಶಿವಮೊಗ್ಗ ಬಿಟ್ಟರೆ, ಶಿವಕುಮಾರ್ ಪ್ರಭಾವಿಸುವ ಕ್ಷೇತ್ರಗಳು ಎರಡನೇ ಹಂತದಲ್ಲಿ ಇಲ್ಲ. ಅಧ್ಯಕ್ಷರಾಗಿರುವ ಕಾರಣಕ್ಕೆ ಎಲ್ಲ ಕ್ಷೇತ್ರಗಳೂ ಪ್ರಮುಖ. ಅದರಲ್ಲೂ ಶಿವಮೊಗ್ಗ, ತಮ್ಮ ಆಪ್ತ ಬಣದಲ್ಲಿ ಗುರುತಿಸಿಕೊಂಡಿರುವ ಲಕ್ಷ್ಮೀ ಹೆಬ್ಬಾಳಕರ ಪುತ್ರ ಮೃಣಾಲ್ ಸ್ಪರ್ಧಿಸಿರುವ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಗೆಲುವು ಕೊಡಿಸುವುದು ಅವರಿಗೆ ಸವಾಲಾಗಿದೆ. 

ಸತೀಶ ಜಾರಕಿಹೊಳಿ

ರಾಜಕಾರಣದಲ್ಲಿ ದೊಡ್ಡ ಆಕಾಂಕ್ಷೆ ಇಟ್ಟುಕೊಂಡಿರುವ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರಿಗೆ ಈ ಚುನಾವಣೆ ತಮ್ಮ ಸಾಮರ್ಥ್ಯ ಹಾಗೂ ರಾಜಕೀಯ ಚಾಣಾಕ್ಷತೆಯನ್ನು ದೃಢಪಡಿಸುವ ಅಗ್ನಿಪರೀಕ್ಷೆ. ಲೋಕಸಭೆ ಉಪಚುನಾವಣೆಯಲ್ಲಿ ಬೆಳಗಾವಿಯಲ್ಲಿ ಸ್ಪರ್ಧಿಸಿದ್ದ ಅವರು, ಅಂದು ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದರೂ ಕೇವಲ ಐದು ಸಾವಿರ ಮತಗಳಿಂದ ಸೋತಿದ್ದರು. ಈ ಬಾರಿ ಕಾಂಗ್ರೆಸ್ ಸರ್ಕಾರ ಇದ್ದು, ಶಾಸಕರ ಸಂಖ್ಯೆಯೂ ಹೆಚ್ಚಾಗಿಯೇ ಇದೆ. ತಮ್ಮ ಪ್ರಭಾವ ಇರುವ ಬೆಳಗಾವಿಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ, ಚಿಕ್ಕೋಡಿಯಲ್ಲಿ ತಮ್ಮ ಪುತ್ರಿ ಪ್ರಿಯಾಂಕಾ ಅವರನ್ನು ಗೆಲ್ಲಿಸುವುದು ಅವರ ಶಕ್ತಿಗೆ ಒಡ್ಡಿದ ಪರೀಕ್ಷೆ. ಅದರ ಜತೆಗೆ, ಎರಡನೇ ಹಂತದ ಬಹುತೇಕ ಕ್ಷೇತ್ರಗಳಲ್ಲಿ ವಾಲ್ಮೀಕಿ ಸಮುದಾಯದ ಮತಗಳು ಗೆಲುವಿನಲ್ಲಿ ನಿರ್ಣಾಯಕವಾಗಿವೆ. ಬಳ್ಳಾರಿ, ದಾವಣಗೆರೆ, ರಾಯಚೂರು, ಕೊಪ್ಪಳಗಳಲ್ಲಂತೂ ಪ್ರಭಾವಿಯಾಗಿಯೇ ಇವೆ.  ಈ ಕ್ಷೇತ್ರಗಳಲ್ಲಿಯೂ ಅವರು ಪಕ್ಷವನ್ನು ಗೆಲ್ಲಿಸಬೇಕಾಗಿದೆ. 


ಎಚ್‌.ಡಿ. ಕುಮಾರಸ್ವಾಮಿ

ಎರಡನೇ ಹಂತದಲ್ಲಿ ಮತದಾನ ನಡೆಯುತ್ತಿರುವ 14 ಲೋಕಸಭಾ ಕ್ಷೇತ್ರಗಳಲ್ಲಿ ಜೆಡಿಎಸ್‌ ಪ್ರಾಬಲ್ಯದ ಕ್ಷೇತ್ರಗಳು ಇಲ್ಲ. ಆದರೂ, ಕೆಲವು ವಿಧಾನಸಭಾ ಕ್ಷೇತ್ರಗಳಲ್ಲಿ ಜೆಡಿಎಸ್‌ ಪ್ರಬಲ ನೆಲೆ ಹೊಂದಿತ್ತು. ಯಾವುದೇ ಕ್ಷೇತ್ರದಲ್ಲಿಯೂ ಜೆಡಿಎಸ್‌ನ ಅಭ್ಯರ್ಥಿಗಳಿಲ್ಲ. ಇಲ್ಲಿ ಜೆಡಿಎಸ್‌ನ ಮತಗಳನ್ನು ಸಂಪೂರ್ಣವಾಗಿ ಬಿಜೆಪಿ ಅಭ್ಯರ್ಥಿಗಳಿಗೆ ವರ್ಗಾವಣೆಯಾಗುವಂತೆ ಮಾಡಿ, ಮಿತ್ರಪಕ್ಷದ ಗೆಲುವನ್ನು ಖಾತರಿಪಡಿಸಬೇಕಿದೆ. ಆ ಮೂಲಕ ಬಿಜೆಪಿ–ಜೆಡಿಎಸ್‌ ಮೈತ್ರಿಗೆ ಧಕ್ಕೆಯಾಗದಂತೆ ರಕ್ಷಿಸಬೇಕಾದ ಜವಾಬ್ದಾರಿ ಕೂಡ ಕುಮಾರಸ್ವಾಮಿ ಅವರ ಮೇಲಿದೆ. ಎಚ್‌.ಡಿ. ದೇವೇಗೌಡರ ಕುಟುಂಬದ ರಾಜಕೀಯ ಪ್ರಭಾವ ಹಳೆ ಮೈಸೂರು ಭಾಗಕ್ಕೆ ಸೀಮಿತವಾಗಿಲ್ಲ ಎಂಬುದನ್ನು ಸಾಬೀಪಡಿಸುವ ಸವಾಲು ಕೂಡ ಕುಮಾರಸ್ವಾಮಿ ಮೇಲಿದೆ.

ಬಿ.ಎಸ್. ಯಡಿಯೂರಪ್ಪ ಮತ್ತು ವಿಜಯೇಂದ್ರ 

ಎರಡನೇ ಹಂತದ 14 ಕ್ಷೇತ್ರಗಳೂ ಲಿಂಗಾಯತ ಸಮುದಾಯದ ಪ್ರಭಾವ ಇರುವ ಕ್ಷೇತ್ರಗಳಾಗಿದ್ದು, ಲಿಂಗಾಯತರ ನಾಯಕ ಎನಿಸಿಕೊಂಡಿರುವ ಬಿ.ಎಸ್. ಯಡಿಯೂರಪ್ಪ ಅವರಿಗೆ ಪ್ರತಿಷ್ಠೆಯಾಗಿವೆ. ತಮ್ಮ ಮಗ ಬಿ.ವೈ. ರಾಘವೇಂದ್ರ ಕಣಕ್ಕೆ ಇಳಿದಿರುವ ಶಿವಮೊಗ್ಗ ಕ್ಷೇತ್ರದಲ್ಲಿ ಲೋಕಸಭೆಯ ಈ ಹಿಂದಿನ ಮೂರು ಚುನಾವಣೆಗಳಿಗೆ ಹೋಲಿಸಿದರೆ ಈ ಬಾರಿ ತೀವ್ರ ಪೈಪೋಟಿ ಇದೆ. ಮಗನನ್ನು ಗೆಲ್ಲಿಸಿಕೊಳ್ಳುವ ಸವಾಲು ಒಂದೆಡೆಯಾದರೆ, ಬಿಜೆಪಿ ತೆಕ್ಕೆಯಲ್ಲೇ ಇರುವ ಅಷ್ಟೂ ಕ್ಷೇತ್ರಗಳಲ್ಲಿ ಕಮಲ ಪತಾಕೆ ಹಾರುವಂತೆ ನೋಡಿಕೊಳ್ಳುವುದು ತಮ್ಮ ಎರಡನೇ ಮಗ ಬಿ.ವೈ. ವಿಜಯೇಂದ್ರ ಅವರ ಅಧ್ಯಕ್ಷ ಪಟ್ಟ ಉಳಿಯಲು ಅನಿವಾರ್ಯ. ಅನೇಕ ಕ್ಷೇತ್ರಗಳಲ್ಲಿ ಪಕ್ಷದೊಳಗೆ ಭಿನ್ನಮತ ಇದ್ದು, ಅವೆಲ್ಲವೂ ಮೇಲ್ನೋಟಕ್ಕೆ ಶಮನವಾದಂತೆ ಅನಿಸಿದರೂ ಒಳಪಟ್ಟುಗಳನ್ನು ನಿವಾರಿಸಿಕೊಳ್ಳುವುದು ಯಡಿಯೂರಪ್ಪ ಮುಂದಿರುವ ಹೊಣೆಯೂ ಆಗಿದೆ.

ಪ್ರಲ್ಹಾದ ಜೋಶಿ

ಚುನಾವಣೆಯಲ್ಲಿ ಮತ್ತೊಮ್ಮೆ ಗೆಲುವು ಬಯಸಿರುವ ಸಂಸದರ ಪೈಕಿ, ಕೇಂದ್ರ ಸಚಿವರಾಗಿ ಚುನಾವಣೆ ಎದುರಿಸುತ್ತಿರುವುದು ಧಾರವಾಡದ ಪ್ರಲ್ಹಾದ ಜೋಶಿ ಹಾಗೂ ಬೀದರ್‌ನ ಭಗವಂತ ಖೂಬಾ. ಸಚಿವರಾಗಿ ಎಷ್ಟು ಸಾಧನೆ ಮಾಡಿದ್ದಾರೆ ಎಂಬುದಕ್ಕಿಂತ, ಕ್ಷೇತ್ರಕ್ಕೆ ಎಷ್ಟು ಕೊಡುಗೆ ನೀಡಿದ್ದಾರೆ; ಮೋದಿ ನಾಮಬಲ ಎಷ್ಟು ಕೆಲಸ ಮಾಡಲಿದೆ ಎಂಬುದು ಇಬ್ಬರ ಭವಿಷ್ಯವನ್ನು ನಿರ್ಧರಿಸಲಿದೆ. ಲಿಂಗಾಯತರ ಮತಗಳನ್ನೇ ನೆಚ್ಚಿಕೊಂಡು ಗೆಲ್ಲುತ್ತಿದ್ದ ಜೋಶಿಯವರಿಗೆ ಈ ಬಾರಿ, ದಿಂಗಾಲೇಶ್ವರ ಸ್ವಾಮೀಜಿ ನೇತೃತ್ವದ ಸ್ವಾಮೀಜಿಗಳ ಗುಂಪೊಂದು ಸಡ್ಡುಹೊಡೆದಿದೆ. ಅಷ್ಟು ದೊಡ್ಡ ಮಟ್ಟದ ಪ್ರಭಾವ ಬೀರದೇ ಇದ್ದರೂ, ಲಿಂಗಾಯತರಿಗೆ ಅನ್ಯಾಯವಾಗಿದೆ ಎಂಬ ಸಂಕಥನವನ್ನು ಹೆಣೆದಿರುವುದು ಜೋಶಿಯವರ ಗೆಲುವಿನ ಹಾದಿಯಲ್ಲಿನ ಕಲ್ಲುಮುಳ್ಳುಗಳಾಗಿವೆ. 

ಬಸವರಾಜ ಬೊಮ್ಮಾಯಿ

ಶಿಗ್ಗಾವಿ ಕ್ಷೇತ್ರದ ಶಾಸಕ ಬಸವರಾಜ ಬೊಮ್ಮಾಯಿ, ಕೇಂದ್ರದಲ್ಲಿ ಮತ್ತೆ ಬಿಜೆಪಿ ಸರ್ಕಾರ ಬಂದರೆ ಸಚಿವರಾಗುವ ಉಮೇದಿನಲ್ಲಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಪರಿಷತ್‌ ಹಾಗೂ ವಿಧಾನಸಭೆ ಕಂಡಿರುವ, ಸಚಿವರಾಗಿ ಹಲವು ಖಾತೆ ನಿಭಾಯಿಸಿ, ಮುಖ್ಯಮಂತ್ರಿಯಾಗಿಯೂ ಕಾರ್ಯನಿರ್ವಹಿಸಿದ ಬೊಮ್ಮಾಯಿ, ಕ್ಷೇತ್ರ ಗೆದ್ದು, ಮೋದಿಯವರನ್ನು ಗೆಲ್ಲಿಸಬೇಕಿದೆ. ಪರಿಷತ್‌ ಸದಸ್ಯರಾಗಿದ್ದಾಗಿನಿಂದಲೂ ಹಾವೇರಿ– ಗದಗ ಓಡಾಡಿ ಗೊತ್ತಿರುವ ಬೊಮ್ಮಾಯಿ, ನಾಲ್ಕನೇ ಬಾರಿ ಶಾಸಕರಾದವರು. ಮುಖ್ಯಮಂತ್ರಿಯಾಗಿ ಎದುರಿಸಿದ ಚುನಾವಣೆಯಲ್ಲಿ ತಮ್ಮ ಪಕ್ಷವನ್ನು ದಡ ಸೇರಿಸಲು ಆಗಿರಲಿಲ್ಲ. ಕಾಂಗ್ರೆಸ್‌ನ ಗ್ಯಾರಂಟಿ ಹಾಗೂ ಶಾಸಕರ ಬಲವನ್ನಷ್ಟೇ ಆಶ್ರಯಿಸಿರುವ ಎದುರಾಳಿ, ಆನಂದಸ್ವಾಮಿ ಗಡ್ಡದೇವರ ಮಠ ಅವರ ಮುಂದೆ, ತಮ್ಮ ಗ್ಯಾರಂಟಿಯನ್ನೇ ಬೊಮ್ಮಾಯಿ ಪಣಕ್ಕಿಟ್ಟಿದ್ದಾರೆ.

ಜಗದೀಶ ಶೆಟ್ಟರ್

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್‌ ಸಿಗಲಿಲ್ಲ ಎಂಬ ಕಾರಣಕ್ಕೆ ಜಗದೀಶ ಶೆಟ್ಟರ್ ಸಿಟ್ಟಿಗೆದ್ದು ಬಿಜೆಪಿಗೆ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರಿದರು. ಧಾರವಾಡ ದಕ್ಷಿಣ ಕ್ಷೇತ್ರದಿಂದ ಕಾಂಗ್ರೆಸ್‌ ಟಿಕೆಟ್‌ನಿಂದ ಸ್ಪರ್ಧಿಸಿ ಸೋತರು. ಇದೀಗ ಲೋಕಸಭೆ ಚುನಾವಣೆ ಘೋಷಣೆ ಆಗುತ್ತಿದ್ದಂತೆಯೇ ಕಾಂಗ್ರೆಸ್‌ ಬಿಟ್ಟು ಬಿಜೆಪಿ ಸೇರಿ ಬೆಳಗಾವಿ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ. ಈ ಚುನಾವಣೆಯ ಗೆಲುವು ಅವರ ರಾಜಕೀಯ ಅಳಿವು ಉಳಿವಿನ ಪ್ರಶ್ನೆ. ಸಚಿವೆ ಲಕ್ಷ್ಮೀ ಹೆಬ್ಬಾಳಕರ ಪುತ್ರ ಮೃಣಾಲ್‌ ಅವರು ಶೆಟ್ಟರ್‌ಗೆ  ಪೈಪೋಟಿ ನೀಡುತ್ತಿದ್ದಾರೆ. ಸದ್ಯದ ಮಟ್ಟಿಗೆ ಲಕ್ಷ್ಮೀ ಅತ್ಯಂತ ಪ್ರಭಾವಿ ರಾಜಕಾರಣಿ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಕೂಡಾ ಮೃಣಾಲ್‌ ಗೆಲುವಿಗೆ ಶ್ರಮಿಸುತ್ತಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ ರಾಜಕೀಯವಾಗಿ ತಮ್ಮ ಶಕ್ತಿ ಸಾಮರ್ಥ್ಯ ಪ್ರದರ್ಶನಕ್ಕೆ ಹೆಬ್ಬಾಳಕರ ಅವರಿಗೆ ಈ ಚುನಾವಣೆ ಮುಖ್ಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT