ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭಾ ಚುನಾವಣೆ: ಮೋದಿ ಗ್ಯಾರಂಟಿ ‘ಮತ ಅಸ್ತ್ರವೇ’

Published 28 ಮಾರ್ಚ್ 2024, 22:02 IST
Last Updated 28 ಮಾರ್ಚ್ 2024, 22:02 IST
ಅಕ್ಷರ ಗಾತ್ರ
ADVERTISEMENT

ದೇಶದಲ್ಲಿ ಈಗ ‘ಗ್ಯಾರಂಟಿ’ಗಳದ್ದೇ ದೊಡ್ಡ ಸದ್ದು. ಒಂದು ಕಡೆ ಮೋದಿ ‘ಗ್ಯಾರಂಟಿ’, ಮತ್ತೊಂದು ಕಡೆ ಕಾಂಗ್ರೆಸ್‌ ‘ಗ್ಯಾರಂಟಿ’. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ತನ್ನ ಐದು ಗ್ಯಾರಂಟಿಗಳನ್ನು ಜನರ ಮುಂದಿಟ್ಟು, ಮತಗಳನ್ನು ಬಾಚಿಕೊಂಡಿತ್ತು. ಈಗ ಲೋಕಸಭಾ ಚುನಾವಣೆಯಲ್ಲಿ ಮೋದಿ ‘ಗ್ಯಾರಂಟಿ’ಗಳು ಮತ ಸೂರೆಗೊಳ್ಳಲು ಅಸ್ತ್ರವಾಗಬಲ್ಲವೇ? ಅಥವಾ ಕಾಂಗ್ರೆಸ್‌ ‘ಗ್ಯಾರಂಟಿ’ಗಳೇ ಮೇಲುಗೈ ಪಡೆಯಲಿವೆಯೇ? ಇಂತಹದೊಂದು ಚರ್ಚೆ ಬಿರುಸುಗೊಂಡಿದೆ.

ಬಡವರ್ಗದವರ ಜೀವನ ದಲ್ಲಿ ಪರಿವರ್ತನೆ ತರುವುದಾಗಿ ಹೇಳಿ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ‘ಜನಧನ’, ‘ಉಜ್ವಲಾ’,
‘ಕಿಸಾನ್‌ ಸಮ್ಮಾನ್‌’ಗಳಂತಹ ಯೋಜನೆಗಳನ್ನು ಜಾರಿಗೊಳಿಸಿದೆ. ಫಲಾನುಭವಿಗಳ ಖಾತೆಗಳಿಗೆ ನೇರವಾಗಿ ನಗದು ಜಮೆ ಆಗುತ್ತಿದೆ. ‘ಕೇಂದ್ರದಿಂದ ಬಿಡುಗಡೆ ಆಗುವ ಮೊತ್ತದಲ್ಲಿ ಒಂದು ಪೈಸೆ ಕೂಡ ಸೋರಿಕೆ ಆಗುತ್ತಿಲ್ಲ. ಮಧ್ಯವರ್ತಿಗಳ ಜೇಬಿಗೆ ಹೋಗುತ್ತಿಲ್ಲ’ ಎಂಬುದನ್ನು
ಪ್ರಧಾನಿ ನರೇಂದ್ರ ಮೋದಿಯವರು ಪದೇ
ಪದೇ ಹೇಳುವ ಮೂಲಕ ತಮ್ಮ ಯೋಜನೆಗಳನ್ನು ಜನರಿಗೆ ನೆನಪಿಸುವ ಕೆಲಸ ಮಾಡುತ್ತಲೇ ಬಂದಿದ್ದಾರೆ. ಮೋದಿ ‘ಗ್ಯಾರಂಟಿ’ಗಳನ್ನು ಚುನಾವಣೆಯಲ್ಲಿ  ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಬಿಜೆಪಿ ತಯಾರಿ ನಡೆಸಿದೆ.

ಲೋಕಸಭಾ ಚುನಾವಣೆಯ ಭಾಗವಾಗಿ ದೇಶದ ಮೂಲೆ– ಮೂಲೆಗಳಲ್ಲೂ ‘ವಿಕಸಿತ ಭಾರತ’ ಕಾರ್ಯಕ್ರಮ ಹಮ್ಮಿಕೊಂಡು, 10 ವರ್ಷಗಳಲ್ಲಿ ಜನ ಸಾಮಾನ್ಯರಿಗಾಗಿ ಜಾರಿ ಮಾಡಿದ ಪ್ರಮುಖ ಯೋಜನೆಗಳ ಮಾಹಿತಿಯನ್ನು ತಲುಪಿಸುವ ಕೆಲಸವನ್ನೂ ಬಿಜೆಪಿ ಮಾಡಿದೆ. ಕರ್ನಾಟಕದಲ್ಲಿ ಮನೆಯಂಗಳದಲ್ಲಿ ಚರ್ಚೆ ಮೂಲಕ ಕೇಂದ್ರದ ಯೋಜನೆಗಳ ಫಲಾನುಭವಿಗಳನ್ನು ಸಂಪರ್ಕಿಸುವ ಕೆಲಸ ಹಮ್ಮಿಕೊಂಡಿದೆ. ಮೂರನೇ ಹಂತದಲ್ಲಿ ಫಲಾನುಭವಿಗಳ ಸಮಾವೇಶವನ್ನು ಹಮ್ಮಿಕೊಂಡಿದೆ. ಇದು, ಜನರಿಗೆ ಮನವರಿಕೆಯಾಗಿ, ಮತವಾಗಿ ಪರಿವರ್ತನೆಯಾಗಲಿದೆ ಎಂಬ ನಿರೀಕ್ಷೆ ಬಿಜೆಪಿ ನಾಯಕರಲ್ಲಿದೆ.

ಇದಕ್ಕೆ ಪ್ರತಿಯಾಗಿ ರಾಜ್ಯದಲ್ಲಿ ಜಾರಿ ಮಾಡಿರುವ ಐದು ಗ್ಯಾರಂಟಿಗಳನ್ನು ಕಾಂಗ್ರೆಸ್‌ ನಾಯಕರು ಪ್ರಚಾರದ ಮುಂಚೂಣಿಗೆ ತಂದಿದ್ದಾರೆ. ಈ ಗ್ಯಾರಂಟಿಗಳು ವಿಫಲವಾಗಿವೆ ಬಿಜೆಪಿ–ಜೆಡಿಎಸ್ ಮೈತ್ರಿಕೂಟ ಟೀಕಿಸುತ್ತಲೇ ಇದೆ. ‘ನಮ್ಮ ಗ್ಯಾರಂಟಿ ಯೋಜನೆಗಳು ಕಾಂಗ್ರೆಸ್‌ ಗ್ಯಾರಂಟಿಗಿಂತ ಭಿನ್ನವಾಗಿವೆ. ಇವು ಜನರ ಜೀವನ ಮಟ್ಟ ಸುಧಾರಿಸುವಂತಹದ್ದು’ ಎಂದು ಬಿಜೆಪಿ ಪ್ರತಿಪಾದಿಸುತ್ತಿದೆ.

ಬಡವರು, ರೈತರು, ಮಹಿಳೆಯರೇ ಫಲಾನುಭವಿಗಳಾದ, ಅವರಿಗೆ ನೇರವಾಗಿ ತಲುಪುವ ಯೋಜನೆಗಳನ್ನು ಮೋದಿ ನೇತೃತ್ವದ ಸರ್ಕಾರ ಜಾರಿ ಮಾಡಿದೆ ಎಂದು ಪ್ರತಿಪಾದಿಸುತ್ತಿರುವ ಬಿಜೆಪಿ, ಅದನ್ನು ಮತಗಳಿಕೆಯ ಅಸ್ತ್ರವನ್ನಾಗಿ ಬಳಸುತ್ತಿದೆ. ಅದು ಫಲ ಕೊಡಲಿದೆ ಎಂಬ ನಿರೀಕ್ಷೆಯೂ ಬಿಜೆಪಿ ನಾಯಕರಲ್ಲಿದೆ.

ಉಜ್ವಲಾ ಮೇಲೆ ನಿರೀಕ್ಷೆ

ಬಿಪಿಎಲ್‌ ವರ್ಗದವರ ಜೀವನಕ್ಕೆ ನೇರವಾಗಿ ತಟ್ಟುವ ಯೋಜನೆಗಳ ಪೈಕಿ ಮುಖ್ಯವಾದುದು ‘ಉಜ್ವಲಾ’ ಯೋಜನೆ. ಈ ಯೋಜನೆಯಿಂದಾಗಿ ಮಹಿಳೆಯರ ಸಬಲೀಕರಣ ಮತ್ತು ಅವರ ಆರೋಗ್ಯದ ಸುಧಾರಣೆಯಾಗಿದೆ. ಉಜ್ವಲಾ ಯೋಜನೆ ಜಾರಿ ಮಾಡಿದ್ದರಿಂದ ಸೌದೆ, ಇದ್ದಿಲು, ಮರದ ಹೊಟ್ಟಿನ ಒಲೆಗಳು, ಸೀಮೆಎಣ್ಣೆ ಸ್ಟೌವ್‌ ಬಳಕೆ ಗಣನೀಯ ಪ್ರಮಾಣದಲ್ಲಿ ತಗ್ಗಿ ಹೋಗಿದೆ ಎಂದು ಬಿಜೆಪಿ ಹೇಳುತ್ತಿದೆ. ಈ ಯೋಜನೆಯಡಿ ಆರಂಭದಲ್ಲಿ ಸಿಲಿಂಡರ್‌ ಉಚಿತವಾಗಿ ಕೊಟ್ಟರೂ ಬಳಿಕ ರೀಫಿಲಿಂಗ್‌ಗೆ ಹಣ ಕೊಡಲೇಬೇಕು ಎಂದು ವಿರೋಧ ಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿದ್ದವು. ಉಜ್ವಲಾ ಯೋಜನೆಯಡಿ ಪಡೆಯುವ ರೀಫಿಲ್ಲಿಂಗ್‌ ಸಿಲಿಂಡರ್‌ಗಳಿಗೆ ಕೇಂದ್ರ ಸರ್ಕಾರ ₹300 ಸಬ್ಸಿಡಿ ನೀಡುತ್ತಿದೆ. ಇದರಿಂದ ಒಂದು ಸಿಲಿಂಡರ್‌ ₹600 ರಂತೆ ಸಿಗುತ್ತಿದೆ.

ಜನ ಧನ

2014ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಪ್ರಕಟಿಸಿದ ಮಹತ್ವದ ಯೋಜನೆಗಳಲ್ಲಿ ಜನಧನ ಯೋಜನೆಯೂ ಒಂದು. ಬ್ಯಾಂಕ್‌ ಖಾತೆಗಳನ್ನೇ ಹೊಂದಿರದ ಕುಟುಂಬಗಳನ್ನು ಶೂನ್ಯ ಠೇವಣಿಯಲ್ಲಿ ಬ್ಯಾಂಕ್‌ ಖಾತೆಗಳನ್ನು ತೆರೆಯುವ ಮೂಲಕ ಬ್ಯಾಂಕಿಂಗ್‌ ವ್ಯವಸ್ಥೆಗೆ ಒಳಪಡಿಸುವುದು ಇದರ ಉದ್ದೇಶ. ಸರ್ಕಾರದ ವಿವಿಧ ಯೋಜನೆಗಳಡಿ ನೇರವಾಗಿ ನಗದು ವರ್ಗಾವಣೆ, ಪಿಂಚಣಿ, ಕ್ರೆಡಿಟ್‌ ವಿಮೆಯ ಮೊತ್ತವನ್ನು ಈ ಖಾತೆಗಳಿಗೆ ಜಮೆ ಮಾಡಲು ಸಾಧ್ಯ. ಈ ಯೋಜನೆಯಡಿ ರಾಜ್ಯದಲ್ಲಿ 1.91 ಕೋಟಿ ಖಾತೆಗಳನ್ನು ತೆರೆಯಲಾಗಿದೆ. ಈ ಖಾತೆಗಳಲ್ಲಿ ₹ 9,047.56 ಕೋಟಿ ಠೇವಣಿ ಇದೆ. 1.15 ಕೋಟಿ ರೂಪೇ ಕಾರ್ಡ್‌ಗಳನ್ನು ಫಲಾನುಭವಿಗಳಿಗೆ ವಿತರಿಸಲಾಗಿದೆ ಎಂಬುದು ಕೇಂದ್ರದ ಮಾಹಿತಿ.

ಕಿಸಾನ್‌ ಸಮ್ಮಾನ್‌

ದೇಶದ ಸಣ್ಣ ರೈತರ ಅಗತ್ಯಗಳನ್ನು ಪೂರೈಸಲು ನೆರವಾಗಲೆಂದು ಜಾರಿ ತಂದ ‘ಕಿಸಾನ್‌ ಸಮ್ಮಾನ್‌’ ಯೋಜನೆ ಅಡಿ ರೈತರಿಗೆ ಪ್ರತಿ ವರ್ಷ ₹6,000 ನಗದು ವರ್ಗಾವಣೆ ಮಾಡಲಾಗುತ್ತಿದೆ.  ರಾಜ್ಯದಲ್ಲಿ ಬಿ.ಎಸ್‌.ಯಡಿಯೂರಪ್ಪ 2019ರಲ್ಲಿ ಮತ್ತೊಮ್ಮೆ ಅಧಿಕಾರ ಸೂತ್ರ ಹಿಡಿದ ಬಳಿಕ ಈ ಯೋಜನೆಗೆ ಇನ್ನೂ ₹4,000 ಸೇರಿಸಿ ಒಟ್ಟು ₹10,000 ರೈತರ ಖಾತೆಗಳಿಗೆ ವರ್ಗಾವಣೆ ಮಾಡಲಾಗುತ್ತಿತ್ತು. ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ಬಳಿಕ ರಾಜ್ಯ ಸರ್ಕಾರದ ವತಿಯಿಂದ ನೀಡುತ್ತಿದ್ದ ₹4,000ಗಳನ್ನು ನೀಡುತ್ತಿಲ್ಲ. ‘ಗ್ಯಾರಂಟಿ’ ಜಾರಿಯಿಂದ ತಿಂಗಳಿಗೆ ಒಂದು ಕುಟುಂಬಕ್ಕೆ ₹5 ಸಾವಿರದವರೆಗೆ ಸಿಗುತ್ತಿರು ವುದರಿಂದ ಅದಕ್ಕಿಂತ ಹೆಚ್ಚಿನ ಮೊತ್ತವೇ ಸಿಗುತ್ತಿದೆ ಎಂದೂ ಕಾಂಗ್ರೆಸ್ ವಾದಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT