ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

CWC Meeting: ಈ ಫಲಿತಾಂಶ ಭಾರತ್ ಜೋಡೊ ಯಾತ್ರೆಯ ಫಲ; ಖರ್ಗೆ ಭಾಷಣದ ಮುಖ್ಯಾಂಶ

Published 8 ಜೂನ್ 2024, 7:36 IST
Last Updated 8 ಜೂನ್ 2024, 7:36 IST
ಅಕ್ಷರ ಗಾತ್ರ

ನವದೆಹಲಿ: ಲೋಕಸಭೆ ಚುನಾವಣೆ ಫಲಿತಾಂಶ ಹಾಗೂ ಮುಂದಿನ ಕಾರ್ಯತಂತ್ರಗಳ ಕುರಿತು ಚರ್ಚಿಸಲು ಕಾಂಗ್ರೆಸ್ ಕಾರ್ಯಕಾರಿ ಸಮಿತಿಯು (ಸಿಡಬ್ಲ್ಯುಸಿ) ಇಂದು ಸಭೆ ಸೇರಿದೆ.

ಈ ವಿಸ್ತೃತ ಸಭೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಭಾಷಣದ ಮುಖ್ಯಾಂಶಗಳು ಇಲ್ಲಿದೆ.

*ಲೋಕಸಭೆ ಚುನಾವಣೆ ವೇಳೆ ಕಠಿಣ ಪರಿಶ್ರಮ ವಹಿಸಿದ ಕಾಂಗ್ರೆಸ್ ಕಾರ್ಯಕರ್ತರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಒಂದು ತಂಡದಂತೆ ಕೆಲಸ ಮಾಡಿದ ಎಲ್ಲ ನಾಯಕರಿಗೂ ಧನ್ಯವಾದಗಳು. ಕಠಿಣ ಪರಿಶ್ರಮ ಹಾಗೂ ಸಂಕಲ್ಪದಿಂದ ಎದುರಾಳಿಗಳನ್ನು ಸೋಲಿಸಬಹುದು ಎಂದು ಯಾವಾಗಲೂ ನೆನಪಿನಲ್ಲಿಟ್ಟುಕೊಳ್ಳಬೇಕು.

*ಪ್ರಜಾಪ್ರಭುತ್ವ ಮತ್ತು ಸಂವಿಧಾನ ರಕ್ಷಣೆಗೆ ದೇಶದಾದ್ಯಂತ ಕಾಂಗ್ರೆಸ್‌ಗೆ ಜನರಿಂದ ಅಪಾರ ಬೆಂಬಲ ಸಿಕ್ಕಿದೆ.

*ಜನರು ನಮ್ಮ ಮೇಲೆ ನಂಬಿಕೆಯನ್ನಿಡುವ ಮೂಲಕ ಸರ್ವಾಧಿಕಾರಿ ಶಕ್ತಿಗಳು ಹಾಗೂ ಸಂವಿಧಾನ ವಿರೋಧಿ ಶಕ್ತಿಗಳಿಗೆ ಪ್ರಬಲ ತಿರುಗೇಟು ನೀಡಿದ್ದಾರೆ. ಬಿಜೆಪಿಯ 10 ವರ್ಷಗಳ ವಿಭಜನೆ, ದ್ವೇಷ ಹಾಗೂ ಧ್ರುವೀಕರಣ ರಾಜಕಾರಣವನ್ನು ದೇಶದ ಮತದಾರರು ತಿರಸ್ಕರಿಸಿದ್ದಾರೆ.

*ಕಾಂಗ್ರೆಸ್ ಸಂಸದರಾಗಿ ಆಯ್ಕೆಯಾಗಿರುವ ಎಲ್ಲರಿಗೂ ಸಿಡಬ್ಲ್ಯುಸಿ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ.

*ಚುನಾವಣಾ ತಯಾರಿ, ಮೈತ್ರಿ ಸಭೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ತಮ್ಮ ಅನುಭವದ ಮಾರ್ಗದರ್ಶನ ನೀಡಿದ ಪಕ್ಷದ ವರಿಷ್ಠೆ ಸೋನಿಯಾ ಗಾಂಧಿ ಅವರಿಗೂ ಅಭಿನಂದನೆಗಳು.

*ಸಂವಿಧಾನ, ಆರ್ಥಿಕತೆ, ನಿರುದ್ಯೋಗ, ಅಸಮಾನತೆ, ಸಾಮರಸ್ಯ ಮತ್ತು ಸಾಮಾಜಿಕ ನ್ಯಾಯದ ಸಮಸ್ಯೆಗಳನ್ನು ಜನರ ಮುಂದಿಟ್ಟಿರುವ ರಾಹುಲ್ ಗಾಂಧಿ ಅವರಿಗೂ ಅಭಿನಂದನೆಗಳು.

*ಈ ಚುನಾವಣೆ ಫಲಿತಾಂಶದಲ್ಲಿ ರಾಹುಲ್ ಗಾಂಧಿ ಅವರ ಪಾದಯಾತ್ರೆ ಪ್ರತಿಫಲಿಸಿದೆ. ರಾಹುಲ್ ಅವರ ನೇತೃತ್ವದಲ್ಲಿ ಎರಡು ವರ್ಷಗಳ ಹಿಂದೆ 4,000 ಕಿ.ಮೀ. ಉದ್ದದ ಭಾರತ್ ಜೋಡೊ ಯಾತ್ರೆ ಮತ್ತು 6,600 ಕಿ.ಮೀ ಉದ್ದದ ಭಾರತ್ ಜೋಡೊ ನ್ಯಾಯ ಯಾತ್ರೆ ಹಮ್ಮಿಕೊಳ್ಳಲಾಗಿತ್ತು. ಪಾದಯಾತ್ರೆ ಮೂಲಕ ಜನರೊಂದಿಗೆ ಸಂಪರ್ಕ ಸಾಧಿಸಲು ಜನರ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಲು ಸಹಕಾರಿಯಾಯಿತು.

*ಅಮೇಠಿ ಹಾಗೂ ರಾಯ್‌ಬರೇಲಿಯಲ್ಲಿ ಬಿರುಸಿನ ಪ್ರಚಾರ ನಡೆಸಿದ ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಗೂ ಅಭಿನಂದನೆಗಳು.

*ಭಾರತ್ ಜೋಡೊ ಹಾಗೂ ನ್ಯಾಯ ಯಾತ್ರೆ ನಡೆದ ಪ್ರದೇಶಗಳಲ್ಲಿ ಕಾಂಗ್ರೆಸ್ ಮತ ಹೆಚ್ಚಳವಾಗಿದೆ ಎಂದು ಉಲ್ಲೇಖಿಸಲು ಬಯಸುತ್ತೇನೆ.

*ನ್ಯಾಯ ಯಾತ್ರೆ ಆರಂಭವಾದ ಮಣಿಪುರದಲ್ಲಿ ಎರಡೂ ಸ್ಥಾನಗಳನ್ನು ಗೆದ್ದಿದ್ದೇವೆ. ನಾಗಾಲ್ಯಾಂಡ್, ಅಸ್ಸಾಂ, ಮೇಘಾಲಯ ಮುಂತಾದ ಈಶಾನ್ಯ ರಾಜ್ಯಗಳಲ್ಲೂ ಸೀಟು ದೊರಕಿದೆ. ಮಹಾರಾಷ್ಟ್ರದಲ್ಲಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದೇವೆ.

*ಎಸ್‌ಸಿ, ಎಸ್‌ಟಿ, ಹಿಂದುಳಿದ ವರ್ಗ, ಅಲ್ಪಸಂಖ್ಯಾತರು ಮತ್ತು ಗ್ರಾಮೀಣ ಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷದ ಸ್ಥಾನಗಳು ಹೆಚ್ಚಿವೆ.

*ನಗರ ಮತದಾರರಲ್ಲಿ ಪ್ರಭಾವ ಮೂಡಿಸಲು ಮತ್ತಷ್ಟು ಪ್ರಯತ್ನಗಳನ್ನು ಮಾಡಬೇಕಿದೆ.

*ಹಿನ್ನಡೆ ಆಗಿರುವ ರಾಜ್ಯಗಳ ಮೇಲೆ ಹೆಚ್ಚಿನ ಗಮನ ಹರಿಸಬೇಕಿದೆ. ವಿಧಾನಸಭೆಯಲ್ಲಿ ಉತ್ತಮ ಫಲಿತಾಂಶ ಪಡೆದಿರುವ ರಾಜ್ಯಗಳಲ್ಲಿ ಲೋಕಸಭೆಯಲ್ಲಿ ಪ್ರದರ್ಶನವನ್ನು ಪುನರಾವರ್ತಿಸಲು ಸಾಧ್ಯವಾಗಲಿಲ್ಲ.

*'ಇಂಡಿಯಾ' ಮೈತ್ರಿಕೂಟದ ಪಕ್ಷಗಳಿಗೂ ಅಭಿನಂದನೆಗಳು. ಒಗ್ಗಟ್ಟಾಗಿ ಸಂಸತ್ತಿನ ಒಳಗೆ ಹಾಗೂ ಹೊರಗೆ ಕೆಲಸ ಮುಂದುವರಿಸಲಿದ್ದೇವೆ.

*ದೇಶದ ಜನರು ನಮ್ಮ ಮೇಲೆ ನಂಬಿಕೆಯನ್ನು ಇರಿಸಿದ್ದಾರೆ. ಅವರ ನಂಬಿಕೆ ಉಳಿಸಿಕೊಳ್ಳಲು ಪ್ರಯತ್ನಗಳನ್ನು ಮಾಡಲಿದ್ದೇವೆ. ಸಂಸತ್ತಿನಲ್ಲಿ ಜನರ ಪರವಾಗಿ ಪ್ರಶ್ನೆಗಳನ್ನು ಕೇಳಲಿದ್ದೇವೆ. ಶಿಸ್ತುಬದ್ಧವಾಗಿ ಒಗ್ಗಟ್ಟಾಗಿ ಉಳಿಯೋಣ.

*ಅಧಿಕಾರದಲ್ಲಿ ಇದ್ದರೂ ಇಲ್ಲದಿದ್ದರೂ ಜನರ ಮಧ್ಯೆ ಇದ್ದು ಅವರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕಿದೆ.

*ಕೆಲವೇ ತಿಂಗಳಲ್ಲಿ ಪ್ರಮುಖ ರಾಜ್ಯಗಳ ಚುನಾವಣೆ ನಡೆಯಲಿದ್ದು, ಮತ್ತೆ ಗೆಲ್ಲಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT