ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಣಿಪುರದಲ್ಲಿ ಚುನಾವಣೆಗೆ ಸಿದ್ಧತೆ: ಮೊದಲು ಶಾಂತಿ ಸ್ಥಾಪನೆ, ಬಳಿಕ ಮತ ಚಲಾವಣೆ

ಸಂಘರ್ಷ ಪೀಡಿತ ಮಣಿಪುರ ಬುಡಕಟ್ಟು ಸಮುದಾಯದ ಮೈತೇಯಿ, ಕುಕಿಗಳ ಅಪೇಕ್ಷೆ
ಸುಮಿರ್ ಕರ್ಮಾಕರ್‌
Published 3 ಏಪ್ರಿಲ್ 2024, 15:45 IST
Last Updated 3 ಏಪ್ರಿಲ್ 2024, 15:45 IST
ಅಕ್ಷರ ಗಾತ್ರ

ಇಂಫಾಲ್‌/ಮೋರೆ(ಮಣಿಪುರ): ಸಂಘರ್ಷದಿಂದ ನಲುಗಿ, ಚೇತರಿಸಿಕೊಳ್ಳಲು ಹೆಣಗುತ್ತಿರುವ ಮಣಿಪುರದಲ್ಲಿ ಲೋಕಸಭಾ ಚುನಾವಣೆಗೆ ಸಿದ್ಧತೆಗಳು ನಡೆದಿವೆ. ಆದರೆ, ‘ನಮ್ಮ ಹಕ್ಕು ಚಲಾವಣೆಗೂ ಮುನ್ನ ರಾಜ್ಯದಲ್ಲಿ ಶಾಂತಿ ಸ್ಥಾಪನೆಯಾಗಬೇಕು’ ಎಂಬುದು ಇಲ್ಲಿನ ಪ್ರಮುಖ ಬುಡಕಟ್ಟು ಸಮುದಾಯದವರಾದ ಮೈತೇಯಿ ಮತ್ತು ಕುಕಿಗಳ ಒಕ್ಕೊರಲ ಆಗ್ರಹವಾಗಿದೆ.

ಇಂಫಾಲ್‌ದಲ್ಲಿ ಮೈತೇಯಿ ಜನರು ಹೆಚ್ಚಿನ ಸಂಖ್ಯೆಯಲ್ಲಿದ್ದರೆ, ಮೋರೆ ಪಟ್ಟಣದಲ್ಲಿ ಕುಕಿಗಳ ಸಂಖ್ಯಾಬಾಹುಳ್ಯವಿದೆ. ಕಳೆದ ವರ್ಷ ಮೇನಲ್ಲಿ ಸಂಘರ್ಷ ಶುರುವಾದ ನಂತರ, ತಮ್ಮ ವಾಸಸ್ಥಾನಗಳನ್ನು ತೊರೆದಿರುವ ಇವರು ಪರಿಹಾರ ಶಿಬಿರಗಳಲ್ಲಿ ಆಶ್ರಯ ಪಡೆದಿದ್ದಾರೆ.

‘ಲೋಕಸಭಾ ಚುನಾವಣೆಯಲ್ಲಿ ನಾವು ತಪ್ಪದೇ ಮತ ಚಲಾವಣೆ ಮಾಡಬೇಕು ಎನ್ನುವುದು ಎಲ್ಲ ರಾಜಕೀಯ ಪಕ್ಷಗಳು ಹಾಗೂ ಚುನಾವಣಾ ಆಯೋಗದ ಬಯಕೆಯಾಗಿದೆ. ಆದರೆ, ನಾವು ಮತ ಚಲಾವಣೆ ಮಾಡುವುದಕ್ಕೂ ಮುನ್ನ ಇಲ್ಲಿ ಶಾಂತಿ ನೆಲೆಸಬೇಕು ಎಂಬುದೇ ನಮ್ಮ ಆದ್ಯತೆಯಾಗಿದೆ’ ಎಂದು ಎರಡೂ ಸಮುದಾಯದವರು ಹೇಳುತ್ತಾರೆ.

ಇನ್ನೊಂದೆಡೆ, ರಾಜ್ಯದಲ್ಲಿ ತೆರೆಯಲಾಗಿರುವ ಪರಿಹಾರ ಶಿಬಿರಗಳ ಸಮೀಪ ಮತಗಟ್ಟೆಗಳನ್ನು ಸ್ಥಾಪಿಸುವ ಚುನಾವಣಾ ಆಯೋಗ ನಿರ್ಧಾರದ ಬಗ್ಗೆಯೂ ಈ ಸಮುದಾಯಗಳಲ್ಲಿ ಅಸಮಾಧಾನ ಇದೆ.

‘ಇಲ್ಲಿ (ಪರಿಹಾರ ಶಿಬಿರಗಳ ಬಳಿ) ಸ್ಥಾಪಿಸಲಿರುವ ಮತಗಟ್ಟೆಗಳಲ್ಲಿ ನಮ್ಮ ಹಕ್ಕು ಚಲಾಯಿಸಲು ನಮಗೆ ಇಷ್ಟ ಇಲ್ಲ. ನಮ್ಮ ಮನೆಗಳಿಗೆ ಮರಳಿ, ಅಲ್ಲಿಯೇ ಮತ ಚಲಾಯಿಸಲು ಬಯಸುತ್ತೇವೆ’ ಎಂದು ಮೈತೇಯಿ ಸಮುದಾಯದ ಮಹಿಳೆ ಚಿಂಗ್‌ಥಮ್ ಐಬೋಮ್ಚ ಎಂಬುವವರು ‘ಪ್ರಜಾವಾಣಿ’ಗೆ ತಿಳಿಸಿದರು.

ಮೈತೇಯಿ ಸಮುದಾಯದ ಮತ್ತೊಬ್ಬ ವ್ಯಕ್ತಿ ಬೀರೇನ್‌ ಚಂದಮ್‌ ಅವರು, ಚಿಂಗ್‌ಥಮ್‌ ಮಾತಿಗೆ ಸಹಮತ ವ್ಯಕ್ತಪಡಿಸುತ್ತಾರೆ. ‘ರಾಜಕೀಯ ಪಕ್ಷಗಳು, ಚುನಾವಣಾ ಆಯೋಗದಿಂದ ಮತದಾನದ ಬಗ್ಗೆ ಮಾತ್ರ ಮಾತುಗಳು ಕೇಳಿಬರುತ್ತವೆ. ಇಲ್ಲಿ ಯಾವಾಗ ಶಾಂತಿ ಸ್ಥಾಪನೆಯಾಗುತ್ತದೆ ಎಂಬ ಬಗ್ಗೆ ಯಾರೂ ಹೇಳುತ್ತಿಲ್ಲ’ ಎಂದು ಬೀರೇನ್‌ ಹೇಳುತ್ತಾರೆ.

ಚಿಂಗ್‌ಥಮ್ ಅವರು ಕುಕಿ ಜನರೇ ಹೆಚ್ಚಾಗಿರುವ ಮೋರೆ ಪಟ್ಟಣದ ನಿವಾಸಿ. ಸಂಘರ್ಷದ ವೇಳೆ ದುಷ್ಕರ್ಮಿಗಳು ಅವರ ಮನೆಗೆ ಬೆಂಕಿ ಹಚ್ಚಿದ ನಂತರ, ಆಕೆ ತನ್ನ 15 ವರ್ಷದ ಮಗನೊಂದಿಗೆ ಊರು  ತೊರೆದು, ಇಂಫಾಲ್‌ನಲ್ಲಿರುವ ಶಿಬಿರದಲ್ಲಿ ಆಶ್ರಯ ಪಡೆದಿದ್ದಾರೆ.

‘ಮನೆಗೆ ಬಿದ್ದ ಬೆಂಕಿಯಲ್ಲಿ ಎಲ್ಲ ವಸ್ತುಗಳು ಸುಟ್ಟು ಭಸ್ಮವಾಗಿವೆ. ನಾನು ಏನನ್ನೂ ತಂದಿಲ್ಲ’  ಎಂದು ಅಸಹಾಯಕತೆ ವ್ಯಕ್ತಪಡಿಸುತ್ತಾರೆ.

ಬೀರೇನ್‌ ಅವರ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ಕಾಕ್‌ಚಿಂಗ್‌ ಜಿಲ್ಲೆಯ ಚೆರೋವ್‌ ಎಂಬಲ್ಲಿನ ಅವರ ಮನೆ ಬೆಂಕಿಗೆ ಆಹುತಿಯಾಯಿತು. ಹೀಗಾಗಿ, ಬೀರೇನ್‌ ಸಹ ಶಿಬಿರದಲ್ಲಿ ಆಶ್ರಯ ಪಡೆದಿದ್ದಾರೆ.

ಮೋರೆ ಪಟ್ಟಣದ ಸರ್ಕಾರಿ ಪ್ರೌಢಶಾಲೆಯಲ್ಲಿ ಸ್ಥಾಪಿಸಿರುವ ಶಿಬಿರಗಳಲ್ಲಿ ಕುಕಿ–ಝೋ ಸಮುದಾಯಕ್ಕೆ ಸೇರಿದ 79 ಮಂದಿ ಆಶ್ರಯ ಪಡೆದಿದ್ದಾರೆ. ಈ ಚುನಾವಣೆಯಲ್ಲಿ ಮತ ಚಲಾಯಿಸುವ ಕುರಿತು ಇವರು ಇನ್ನೂ ನಿರ್ಧರಿಸಿಲ್ಲ.

‘ನಮ್ಮ ಸಮುದಾಯದ ಸಂಘಟನೆಗಳ ಮುಖಂಡರು ಕೈಗೊಳ್ಳುವ ನಿರ್ಧಾರವನ್ನು ಎದುರು ನೋಡುತ್ತಿದ್ದೇವೆ. ಅವರು ಸೂಚಿಸಿದರೆ ಮತ ಚಲಾವಣೆ ಮಾಡುತ್ತೇವೆ. ಇಲ್ಲದಿದ್ದರೆ ಮತದಾನದಿಂದ ದೂರ ಉಳಿಯುತ್ತೇವೆ’ ಕುಕಿ ಸಮುದಾಯದ ಕಲೇಬ್‌ ಬೈಟೆ ಹೇಳುತ್ತಾರೆ.

‘ಮತ ಯಾಚಿಸಿ ನಮ್ಮ ಬಳಿ ಈ ವರೆಗೆ ಯಾವ ಮುಖಂಡನೂ ಬಂದಿಲ್ಲ. ಹಾಗೊಂದು ವೇಳೆ ಬಂದಲ್ಲಿ ಕುಕಿಗಳಿಗೆ ಪ್ರತ್ಯೇಕ ಆಡಳಿತ ವ್ಯವಸ್ಥೆ ರೂಪಿಸಲು ಕೇಂದ್ರಕ್ಕೆ ಮನವರಿಕೆ ಮಾಡಿಕೊಡುವಂತೆ ಅವರನ್ನು ಒತ್ತಾಯಿಸುತ್ತೇವೆ’ ಎಂದು ವೃತ್ತಿಯಲ್ಲಿ ಬಡಗಿಯಾಗಿರುವ ಕಲೇಬ್‌ ಹೇಳುತ್ತಾರೆ. 

‘ದಾಖಲೆಗಳು ಇಲ್ಲ’: ಮತ ಚಲಾಯಿಸಬೇಕು ಎಂದರೂ, ಇಲ್ಲಿನ ಶಿಬಿರಗಳಲ್ಲಿ ಆಶ್ರಯ ಪಡೆದವರಿಗೆ ಮತ್ತೊಂದು ಸಮಸ್ಯೆ ಎದುರಾಗಿದೆ.

‘ಮತದಾನ ದಿನಾಂಕದ 10 ದಿನಗಳಿಗೂ ಮೊದಲು ಗುರುತಿಗೆ ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸಬೇಕು’ ಎಂದು ಮಣಿಪುರದ ಮುಖ್ಯ ಚುನಾವಣಾ ಅಧಿಕಾರಿ ಸೂಚನೆ ನೀಡಿದ್ದಾರೆ.  ಶಿಬಿರಗಳಲ್ಲಿ ಆಶ್ರಯ ಪಡೆದಿರುವ ಮೈತೇಯಿ ಮತ್ತು ಕುಕಿ ಸಮುದಾಯದವರು, ರಾಜ್ಯದಲ್ಲಿ ಭುಗಿಲೆದ್ದ ಹಿಂಸಾಚಾರ ಸಂಬಂಧಿತ ಅವಘಡಗಳಲ್ಲಿ ತಮ್ಮ ಎಲ್ಲ ದಾಖಲೆ ಪತ್ರಗಳನ್ನು ಕಳೆದುಕೊಂಡಿರುವುದು ಸಮಸ್ಯೆಗೆ ಕಾರಣ.

ನಾವು ನಮ್ಮ ಊರುಗಳಿಗೆ ಮರಳಿ ಹೊಸ ಜೀವನ ಆರಂಭಿಸಬೇಕು. ಇದು ಸಾಧ್ಯವಾಗಬೇಕಾದರೆ ಶಾಂತಿ ಸ್ಥಾಪನೆಯಾಗಬೇಕು. ಇದೇ ನಮ್ಮ ಪ್ರಾರ್ಥನೆ.
-ಕಲೇಬ್‌ ಬೈಟೆ, ಕುಕಿ ಸಮುದಾಯದ ವ್ಯಕ್ತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT