ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮಿತ್‌ ಶಾ ಹೇಳಿಕೆ ತಿರುಚಿದ ಆರೋಪ; ಜಾರ್ಖಂಡ್‌ ಕಾಂಗ್ರೆಸ್ ಅಧ್ಯಕ್ಷಗೆ ನೋಟಿಸ್‌

ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿಕೆಯ ತಿರುಚಿದ ವಿಡಿಯೊ ಹಂಚಿದ ಆರೋಪ
Published 1 ಮೇ 2024, 13:40 IST
Last Updated 1 ಮೇ 2024, 13:40 IST
ಅಕ್ಷರ ಗಾತ್ರ

ರಾಂಚಿ: ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ಹೇಳಿಕೆಯ ತಿರುಚಿದ ವಿಡಿಯೊ ಹಂಚಿದ ಆರೋಪದ ಮೇರೆಗೆ ಜಾರ್ಖಂಡ್ ಕಾಂಗ್ರೆಸ್‌ ಅಧ್ಯಕ್ಷ ರಾಜೇಶ್‌ ಠಾಕೂರ್ ಅವರಿಗೆ ದೆಹಲಿ ಪೊಲೀಸರು ಸಮನ್ಸ್‌ ಜಾರಿ ಮಾಡಿದ್ದಾರೆ.

ದೆಹಲಿ ಪೊಲೀಸ್‌ ವಿಶೇಷ ಘಟಕವು ಏಪ್ರಿಲ್‌ 28ರಂದು ದಾಖಲಿಸಿದ ಎಫ್‌ಐಆರ್‌ಗೆ ಸಂಬಂಧಿಸಿದ ವಿಚಾರಣೆಗೆ ಮೇ 2ರಂದು ಹಾಜರಾಗಬೇಕು ಎಂದು ಸೂಚಿಸಿದ್ದಾರೆ.

‘ನೋಟಿಸ್‌ ಸ್ವೀಕರಿಸಿದ್ದೇನೆ. ಏಕೆ ನೋಟಿಸ್‌ ನೀಡಲಾಗಿದೆ ಎನ್ನುವುದು ಅರ್ಥವಾಗುತ್ತಿಲ್ಲ. ಇದು ಅವ್ಯವಸ್ಥೆ ಅಲ್ಲದೆ ಮತ್ತೇನೂ ಅಲ್ಲ’ ಎಂದು ಠಾಕೂರ್‌ ಪ್ರತಿಕ್ರಿಯಿಸಿದ್ದಾರೆ.

‘ದೂರು ದಾಖಲಾಗಿದ್ದರೆ ಮೊದಲು ನನ್ನ ‘ಎಕ್ಸ್‌’ ಖಾತೆ ಪರಿಶೀಲಿಸಬೇಕು. ಚುನಾವಣಾ ಪ್ರಚಾರದ ತೀವ್ರತೆ ಹೆಚ್ಚಾಗಿದೆ. ಅದರಲ್ಲಿ ನನ್ನ ಭಾಗವಹಿಸುವಿಕೆಯ ಅಗತ್ಯದ ಬಗ್ಗೆಯೂ ತಿಳಿದಿದೆ. ಹೀಗಿದ್ದೂ ನನ್ನ ಲ್ಯಾಪ್‌ಟಾಪ್‌ ಮತ್ತು ಇತರ ಎಲೆಕ್ಟ್ರಾನಿಕ್‌ ವಸ್ತುಗಳನ್ನು ಕೇಳಿದ್ದಾರೆ. ಪರಿಶೀಲನೆ ನಡೆಸದೆ ನೋಟಿಸ್‌ ಕಳುಹಿಸುವುದು ಸರಿಯಾದ ಕ್ರಮ ಅಲ್ಲ’ ಎಂದು ಅವರು ಹೇಳಿದ್ದಾರೆ.

ವ್ಯಕ್ತಿ ವಿರುದ್ಧ ದೂರು ದಾಖಲು

ಶ್ರೀನಗರ ವರದಿ: ಅಮಿತ್ ಶಾ ಅವರ ಹೇಳಿಕೆಯ ನಕಲಿ ವಿಡಿಯೊವನ್ನು ಹಂಚಿದ ಆರೋಪದ ಮೇಲೆ ಬುದ್ಗಾಂ ನಿವಾಸಿಯೊಬ್ಬರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಿಜೆಪಿ ನಾಯಕ ಅಲ್ತಾಫ್‌ ಠಾಕೂರ್ ಅವರು ದೂರು ನೀಡಿದ ಬೆನ್ನಲ್ಲೇ, ಮಹಮ್ಮದ್‌ ಇಲ್ಯಾಸ್‌ ಹುಸೇನ್‌ ಮಿರ್‌ ವಿರುದ್ಧ  ಪ್ರಕರಣ ದಾಖಲಿಸಿದ್ದಾರೆ.

ಕೇಂದ್ರ ಸರ್ಕಾರವು ಜಮ್ಮು ಮತ್ತು ಕಾಶ್ಮೀರದಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಕ್ಕೆ ನೀಡಿರುವ ಮೀಸಲಾತಿಯನ್ನು ರದ್ದು ಮಾಡಲಿದೆ ಎಂದು ಅಮಿತ್‌ ಶಾ ಹೇಳಿದ್ದಾರೆ ಎನ್ನಲಾದ ವಿಡಿಯೊವನ್ನು ಇಲ್ಯಾಸ್‌ ಹುಸೇನ್‌ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿದ್ದರು. ಆದರೆ, ಅದು ನಕಲಿ ವಿಡಿಯೊ ಎಂದು ಠಾಕೂರ್‌ ದೂರು ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಚಾರಣೆಗೆ ಹಾಜರಾದ ರೇವಂತ್‌ ರೆಡ್ಡಿ ಪರ ವಕೀಲರು

ನವದೆಹಲಿ: ಅಮಿತ್‌ ಶಾ ಅವರ ಹೇಳಿಕೆಯ ತಿರುಚಿದ ವಿಡಿಯೊ ಹಂಚಿಕೆ ಆರೋಪಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆಯ ಭಾಗವಾಗಿ ತೆಲಂಗಾಣ ಮುಖ್ಯಮಂತ್ರಿ ರೇವಂತ ರೆಡ್ಡಿ ಪರ ವಕೀಲರು ಬುಧವಾರ ದೆಹಲಿ ಪೊಲೀಸರ ಎದುರು ಹಾಜರಾದರು.

ರೇವಂತ ರೆಡ್ಡಿ ಅವರಿಗೆ ದೆಹಲಿ ಪೊಲೀಸರು ಸಿಆರ್‌ಪಿಸಿ ಸೆಕ್ಷನ್‌ 160/91ನ ಅಡಿಯಲ್ಲಿ ನೋಟಿಸ್‌ ಜಾರಿ ಮಾಡಿದ್ದರು.

‘ವಿಡಿಯೊ ಹಂಚಿಕೊಂಡಿರುವ ಸಾಮಾಜಿಕ ಜಾಲತಾಣ ಖಾತೆಯು ರೇವಂತ ರೆಡ್ಡಿ ಅವರಿಗೆ ಸಂಬಂಧಿಸಿದ್ದಲ್ಲ’ ಎಂದು ವಕೀಲೆ ಸೌಮ್ಯಾ ಗುಪ್ತಾ ಮಾಧ್ಯಮಗಳಿಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT