ಮಂಗಳವಾರ, 18 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭಾ ಚುನಾವಣೆ | 2004ರ ಫಲಿತಾಂಶ ಪುನರಾವರ್ತನೆ: ಮಲ್ಲಿಕಾರ್ಜುನ ಖರ್ಗೆ

ಮಿತ್ರಪಕ್ಷಗಳೊಂದಿಗೆ ಚರ್ಚಿಸಿ ಪ್ರಧಾನಿ ಅಭ್ಯರ್ಥಿ ಬಗ್ಗೆ ನಿರ್ಧಾರ
Published 31 ಮೇ 2024, 16:04 IST
Last Updated 31 ಮೇ 2024, 16:04 IST
ಅಕ್ಷರ ಗಾತ್ರ

ನವದೆಹಲಿ: 2024ರ ಲೋಕಸಭಾ ಚುನಾವಣೆಯಲ್ಲಿ 2004ರ ಫಲಿತಾಂಶವೇ ಪುನರಾವರ್ತನೆ ಆಗಲಿದೆ ಎಂದು ಅಭಿಪ್ರಾಯಪಟ್ಟಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, ‘ಇಂಡಿಯಾ’ ಕೂಟದ ಮಿತ್ರಪಕ್ಷಗಳು ಚರ್ಚಿಸಿ ಪ್ರಧಾನಿ ಅಭ್ಯರ್ಥಿಯನ್ನು ನಿರ್ಧರಿಸುತ್ತವೆ ಎಂದು ಶುಕ್ರವಾರ ಹೇಳಿದರು.

‘ಪ್ರಜಾವಾಣಿ’ ಜತೆ ಮಾತನಾಡಿದ ಅವರು, ‘ಜನ ಬದಲಾವಣೆ ಬಯಸಿದ್ದಾರೆ. ಮೋದಿ ಅವರು ತಾವು ನೀಡಿದ್ದ ಭರವಸೆಗಳನ್ನು ಈಡೇರಿಸಿಲ್ಲ ಎನ್ನುವುದು ಜನರ ತಲೆಯಲ್ಲಿದೆ. ಅವರ ಪ್ರಚಾರವು ಗೊಬೆಲ್ಸ್‌ಅನ್ನು ಹೋಲುತ್ತಿತ್ತು. ಅವರು ಒಬ್ಬ ಸಮರ್ಥ ನಾಯಕನಂತೆ ವರ್ತಿಸಲಿಲ್ಲ. ಮುಸ್ಲಿಂ, ಮಸೀದಿ, ಮಂದಿರ, ಮಚ್ಲಿ, ಮಟನ್ ಮತ್ತು ಮಂಗಳಸೂತ್ರದ ಬಗ್ಗೆ ಮಾತನಾಡಿದರು. ಆದರೆ, ಅವರ ಕೆಲಸದ ಬಗ್ಗೆ ಮಾತ್ರ ಮಾತನಾಡಲಿಲ್ಲ’ ಎಂದರು.

‘ಸಂಸತ್ತಿನಲ್ಲಿ ಮೂರನೇ ಎರಡರಷ್ಟು ಬಹುಮತ ಬಂದರೆ ಸಂವಿಧಾನ ಬದಲಿಸುತ್ತೇವೆ ಎಂದು ಆರ್‌ಎಸ್‌ಎಸ್‌ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದಲೂ ಹೇಳುತ್ತಲೇ ಇದೆ. ಅವರು ಕೇಂದ್ರದ ಸಾಂವಿಧಾನಿಕ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಂಡರು. ನಂತರ ಎಸ್‌ಸಿ, ಎಸ್‌ಟಿ, ಒಬಿಸಿಗಳಿಗೆ ಪ್ರಾತಿನಿಧ್ಯ ಇರುವಂತಹ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲಿಲ್ಲ. ನಾವು ಅದರ ವಿರುದ್ಧ ಧ್ವನಿ ಎತ್ತಿದೆವು. ಈ ವಿಚಾರ ಜನರ ಗಮನ ಸೆಳೆಯಿತು ಎಂದು ಗೊತ್ತಾಗುತ್ತಿದ್ದಂತೆಯೇ ಮೋದಿ ಅವರು ನಾವು ಸಂವಿಧಾನ ಬದಲಿಸುವುದಿಲ್ಲ ಎಂದು ಹೇಳತೊಡಗಿದರು’ ಎಂದು ತಿಳಿಸಿದರು.

‘ಕಾಂಗ್ರೆಸ್ ಎಂದೂ ಕೋಮು ಭಾವನೆ ಕೆರಳಿಸುವ ಮಾತುಗಳನ್ನು ಆಡಿಲ್ಲ. ಅದಕ್ಕಾಗಿ ಈ ಬಾರಿ ಉತ್ತರ ಪ್ರದೇಶ, ಮಹಾರಾಷ್ಟ್ರ, ಬಿಹಾರ, ಜಾರ್ಖಂಡ್‌ನ ಜನ ‘ಇಂಡಿಯಾ’ ಕೂಟವನ್ನು ಬೆಂಬಲಿಸಿದ್ದಾರೆ. ಮೋದಿ ಮತ್ತೆ ಪ್ರಧಾನಿ ಆಗುವುದನ್ನು ನಾವು ತಡೆಯಲಿದ್ದೇವೆ. ‘ಇಂಡಿಯಾ’ ಕೂಟದಲ್ಲಿ ಯಾರು ಪ್ರಧಾನಿ ಆಗಲಿದ್ದಾರೆ ಎನ್ನುವುದು ನಂತರದ ವಿಚಾರವಾಗಿದ್ದು, ಮಿತ್ರಪಕ್ಷಗಳೊಂದಿಗೆ ಚರ್ಚಿಸಿ ನಿರ್ಧರಿಸುತ್ತೇವೆ’ ಎಂದು ಹೇಳಿದರು.

‘ಇಂಡಿಯಾ’ ಕೂಟ ಎಷ್ಟು ಸ್ಥಾನ ಗಳಿಸಬಹುದು ಎಂಬ ಪ್ರಶ್ನೆಗೆ ಉತ್ತರಿಸಿದ ಖರ್ಗೆ ಅವರು, ‘ಸಂವೇದನಾಶೀಲನಾದ ಯಾವ ರಾಜಕಾರಣಿಯೂ ಇಷ್ಟೇ ಸ್ಥಾನ ಬರುತ್ತೆ ಎಂದು ಹೇಳಲಾರ. ಇದು ಲಾಟರಿ ಅಲ್ಲ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT