ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಕ್ಷದ ಪ್ರಚಾರದ ಹಾಡಿಗೆ ನಿಷೇಧ ಹೇರಿದ ಚುನಾವಣಾ ಆಯೋಗ: ಎಎಪಿ ಆರೋಪ

Published 28 ಏಪ್ರಿಲ್ 2024, 10:31 IST
Last Updated 28 ಏಪ್ರಿಲ್ 2024, 10:31 IST
ಅಕ್ಷರ ಗಾತ್ರ

ನವದೆಹಲಿ: ಪಕ್ಷದ ಪ್ರಚಾರದ ಹಾಡಿಗೆ ಚುನಾವಣಾ ಆಯೋಗ (ಇಸಿ) ನಿಷೇಧ ಹೇರಿದೆ ಎಂದು ಆಮ್ ಆದ್ಮಿ ಪಕ್ಷ (ಎಎಪಿ) ಭಾನುವಾರ ಆರೋಪಿಸಿದೆ.

ಎಎಪಿ ಇತ್ತೀಚೆಗಷ್ಟೇ 'ಜೈಲ್ ಕೆ ಜವಾಬ್ ಮೇ ಹಮ್ ವೋಟ್ ದೇಂಗೆ' ಎಂಬ ಚುನಾವಣಾ ಪ್ರಚಾರ ಹಾಡನ್ನು ಬಿಡುಗಡೆಗೊಳಿಸಿತ್ತು.

ಇದು ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಮತ್ತು ಕೇಂದ್ರ ತನಿಖಾ ಸಂಸ್ಥೆಗಳನ್ನು ಕೆಟ್ಟದಾಗಿ ಬಿಂಬಿಸುತ್ತಿದೆ ಎಂದು ಹೇಳಿ ಹಾಡಿಗೆ ಚುನಾವಣಾ ಆಯೋಗ ನಿಷೇಧ ಹೇರಿರುವುದಾಗಿ ಎಎಪಿ ಹೇಳಿಕೊಂಡಿದೆ.

ಎಎಪಿ ಆರೋಪಕ್ಕೆ ಸಂಬಂಧಿಸಿದಂತೆ ಚುನಾವಣಾ ಆಯೋಗದಿಂದ ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ಎಎಪಿ ನಾಯಕಿ ಅತಿಶಿ, 'ಬಹುಶಃ ಇದೇ ಮೊದಲ ಬಾರಿ ಪಕ್ಷವೊಂದರ ಪ್ರಚಾರದ ಹಾಡಿಗೆ ಚುನಾವಣಾ ಆಯೋಗ ನಿಷೇಧ ಹೇರಿದೆ' ಎಂದು ಹೇಳಿದ್ದಾರೆ.

'ಹಾಡಿನಲ್ಲಿ ಬಿಜೆಪಿಯನ್ನು ಉಲ್ಲೇಖಿಸಿಲ್ಲ. ಅಲ್ಲದೆ ಚುನಾವಣಾ ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸಿಲ್ಲ. ವಾಸ್ತವಿಕ ವಿಡಿಯೊ ಮತ್ತು ಘಟನೆಗಳನ್ನು ಮಾತ್ರ ಆಧರಿಸಿವೆ' ಎಂದು ಅವರು ಹೇಳಿದ್ದಾರೆ.

'ಬಿಜೆಪಿ ಸರ್ವಾಧಿಕಾರ ಮಾಡಿದರೆ ಅದು ಸರಿ. ಆದರೆ ಯಾರೇ ಅದರ ವಿರುದ್ಧ ಮಾತನಾಡಿದರೆ ಅದು ತಪ್ಪು. ಇದು ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂದು ತೋರಿಸುತ್ತದೆ. ನೀತಿ ಸಂಹಿತೆ ಉಲ್ಲಂಘಿಸಿದ ಬಿಜೆಪಿ ವಿರುದ್ಧ ಚುನಾವಣಾ ಆಯೋಗ ಕ್ರಮ ಕೈಗೊಳ್ಳುವಂತೆ ನಾನು ಒತ್ತಾಯಿಸುತ್ತೇನೆ. ವಿರೋಧ ಪಕ್ಷಗಳ ಪ್ರಚಾರಕ್ಕೆ ತಡೆ ಒಡ್ಡಬೇಡಿ' ಎಂದು ಅವರು ಮನವಿ ಮಾಡಿದ್ದಾರೆ.

ಎರಡು ನಿಮಿಷಗಳ ಪ್ರಚಾರದ ಹಾಡನ್ನು ಎಎಪಿ ಶಾಸಕ ದಿಲೀಪ್ ಪಾಂಡೆ ಹಾಡಿದ್ದಾರೆ. ಗುರುವಾರ ಇದನ್ನು ಬಿಡುಗಡೆಗೊಳಿಸಲಾಗಿತ್ತು.

ದೆಹಲಿ ಅಬಕಾರಿ ನೀತಿ ಹಗರಣ ಸಂಬಂಧ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರನ್ನುಮಾರ್ಚ್ 21ರಂದು ಜಾರಿ ನಿರ್ದೇಶನಾಲಯ (ಇ.ಡಿ) ಬಂಧಿಸಿತ್ತು. ಸದ್ಯ ಅವರು ತಿಹಾರ್ ಜೈಲಿನಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT