ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಜಾಬ್: ಲೋಕಸಭಾ ಚುನಾವಣೆ– ಪಂಚ ನದಿಗಳ ನಾಡಲ್ಲಿ ಚತುಷ್ಕೋನ ಸ್ಪರ್ಧೆ

ಕಾಂಗ್ರೆಸ್‌, ಆಮ್‌ ಆದ್ಮಿ ಪಕ್ಷ, ಶಿರೋಮಣಿ ಅಕಾಲಿ ದಳ, ಬಿಜೆಪಿ ನಡುವೆ ಹಣಾಹಣಿ
Published 14 ಮೇ 2024, 2:53 IST
Last Updated 14 ಮೇ 2024, 2:53 IST
ಅಕ್ಷರ ಗಾತ್ರ

ನವದೆಹಲಿ: ಪಂಚ ನದಿಗಳ ಬೀಡು ಹಾಗೂ ಸಿಖ್ ಧರ್ಮೀಯರ ನಾಡು ಪಂಜಾಬ್‌ ಬಹು ಆಯಾಮದ ಲೋಕಸಭಾ ಚುನಾವಣಾ ಕದನಕ್ಕೆ ಸಜ್ಜಾಗಿದೆ. ಕಾಂಗ್ರೆಸ್‌, ಆಮ್‌ ಆದ್ಮಿ ಪಕ್ಷ (ಎಎಪಿ), ಶಿರೋಮಣಿ ಅಕಾಲಿ ದಳ (ಎಸ್‌ಎಡಿ) ಹಾಗೂ ಬಿಜೆಪಿ ನಡುವೆ ಚತುಷ್ಕೋನ ಹಣಾಹಣಿ ನಡೆಯಲಿದೆ. ರಾಜ್ಯದಲ್ಲಿ ಜೂನ್‌ 1ರಂದು ಮತದಾನ ನಡೆಯಲಿದೆ. 

ಪಂಜಾಬ್‌ನಲ್ಲಿ 13 ಲೋಕಸಭಾ ಕ್ಷೇತ್ರಗಳಿವೆ. 2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷವು ರಾಜ್ಯದಲ್ಲಿ ಎಂಟು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಉತ್ತರ ಭಾರತದ ರಾಜ್ಯವೊಂದರಲ್ಲಿ ಕೈ ಪಾಳಯವು ಗರಿಷ್ಠ ಸ್ಥಾನಗಳನ್ನು ಗಳಿಸಿದ್ದು ಪಂಜಾಬ್‌ನಲ್ಲೇ. ಆಗ ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರವಿತ್ತು. 2022ರ ವಿಧಾನಸಭಾ ಚುನಾವಣೆಯಲ್ಲಿ ಎಎಪಿ ಅಭೂತಪೂರ್ವ ಜಯ ಗಳಿಸಿತ್ತು. ಲೋಕಸಭಾ ಚುನಾವಣೆಗೆ ದೆಹಲಿ, ಹರಿಯಾಣ ಹಾಗೂ ಗುಜರಾತ್‌ನಲ್ಲಿ ಕಾಂಗ್ರೆಸ್‌–ಎಎಪಿ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿವೆ. ಆದರೆ, ಪಂಜಾಬ್‌ನಲ್ಲಿ ಪ್ರತ್ಯೇಕವಾಗಿ ಸ್ಪರ್ಧೆಗಿಳಿದಿವೆ. ‘ಇಂಡಿಯಾ’ ಮೈತ್ರಿಕೂಟದ ದೋಸ್ತಿಗಳು ಇಲ್ಲಿ ಕುಸ್ತಿಗೆ ಇಳಿದಿವೆ. 

ಪ್ರಮುಖ ನಾಯಕರು ಅಖಾಡಕ್ಕೆ

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೈ ಪಾಳಯದ ಸೋಲಿಗೆ ಆಡಳಿತ ವಿರೋಧಿ ಅಲೆಯ ಜತೆಗೆ ಆಂತರಿಕ ಕಿತ್ತಾಟವೇ ಪ್ರಮುಖ ಕಾರಣವಾಗಿತ್ತು. ರಾಜ್ಯ ಘಟಕದಲ್ಲಿ ಹಲವು ಬಣಗಳಿದ್ದವು. ಚುನಾವಣೆಯಲ್ಲಿ ಹೀನಾಯವಾಗಿ ಸೋತ ಬಳಿಕ ನಾಯಕರು ಮೌನಕ್ಕೆ ಶರಣಾಗಿದ್ದರು. ಪಕ್ಷ ಸಂಘಟನೆಯಲ್ಲೂ ಸಕ್ರಿಯರಾಗಿರಲಿಲ್ಲ. ಹಲವು ನಾಯಕರು ಬಿಜೆಪಿ ಹಾಗೂ ಎಎಪಿಗೆ ವಲಸೆ ಹೋಗಿದ್ದರು. ಆದರೆ, ಲೋಕಸಭಾ ಚುನಾವಣೆಯಲ್ಲಿ ಪಕ್ಷವು ತನ್ನ ತಂತ್ರಗಾರಿಕೆಯಲ್ಲಿ ಬದಲಾವಣೆ ಮಾಡಿದೆ. ರಾಜ್ಯದ ಪ್ರಮುಖ ನಾಯಕರಾದ ಮಾಜಿ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನ್ನಿ, ರಾಜ್ಯ ಘಟಕದ ಅಧ್ಯಕ್ಷ ಅಮರಿಂದರ್ ಸಿಂಗ್ ರಾಜಾ ವಾರಿಂಗ್‌, ಹಿರಿಯ ನಾಯಕ ಸುಖ್ವಿಂದರ್ ಸಿಂಗ್‌ ರಾಂಧವಾ ಅವರನ್ನು ಉಮೇದುವಾರರನ್ನಾಗಿ ಮಾಡಿದೆ. ಈ ಪ್ರಯೋಗ ಫಲ ಕೊಡಬಹುದು ಎಂಬುದು ಕಾಂಗ್ರೆಸ್‌ ನಾಯಕರ ಅಂದಾಜು. 

ಎಎಪಿ ಮುಂದಿರುವ ಸವಾಲು

2014ರ ಲೋಕಸಭಾ ಚುನಾವಣೆಯಲ್ಲೇ ರಾಜ್ಯದಲ್ಲಿ ಗಮನಾರ್ಹ ಸಾಧನೆ ಮಾಡಿದ್ದ ಎಎಪಿ, 4 ಕ್ಷೇತ್ರಗಳಲ್ಲಿ ಗೆದ್ದಿತ್ತು. ಕೆಲವು ಕ್ಷೇತ್ರಗಳಲ್ಲಿ ಕೂದಲೆಳೆ ಅಂತರದಲ್ಲಿ ಗೆಲುವು ತಪ್ಪಿಸಿಕೊಂಡಿತ್ತು. ಆದರೆ, 2019ರ ಚುನಾವಣೆಯಲ್ಲಿ ಪಕ್ಷವು ಒಂದು ಕ್ಷೇತ್ರದಲ್ಲಷ್ಟೇ ಗೆದ್ದಿತ್ತು. ಮತ ಪ್ರಮಾಣವು ಶೇ 24.5ರಿಂದ 7.5ಕ್ಕೆ ಕುಸಿದಿತ್ತು. ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿತ್ತು. 300 ಯೂನಿಟ್‌ ಉಚಿತ ವಿದ್ಯುತ್‌, ಆಮ್ ಆದ್ಮಿ ಕ್ಲಿನಿಕ್‌ನಂತಹ ಕಲ್ಯಾಣ ಕಾರ್ಯಕ್ರಮಗಳ ಅನುಷ್ಠಾನವು ಮತ ತಂದುಕೊಡಬಲ್ಲದು ಎಂಬುದು ಎಎಪಿ ನಾಯಕರ ವಿಶ್ವಾಸ. ಆದರೆ, ಎಎಪಿ ಅಂದುಕೊಂಡಷ್ಟು ಈ ಬಾರಿ ಚುನಾವಣಾ ಕಣ ಸುಲಭವಾಗಿಲ್ಲ. ಮೂರು ಪಕ್ಷಗಳ ಸವಾಲನ್ನು ಎಎಪಿ ಎದುರಿಸಬೇಕಿದೆ. ಜತೆಗೆ, ರೈತರ ಹೋರಾಟವನ್ನು ಹತ್ತಿಕ್ಕುವ ಕೆಲಸವನ್ನು ಭಗವಂತ್‌ ಸಿಂಗ್‌ ಮಾನ್ ಸರ್ಕಾರ ಮಾಡಿದೆ ಎಂಬ ಗಂಭೀರ ಆರೋಪ ಇದೆ. 

ಅಕಾಲಿ ದಳದ ಲೆಕ್ಕಾಚಾರವೇನು?  

ರಾಜ್ಯದಲ್ಲಿ ಶಿರೋಮಣಿ ಅಕಾಲಿ ದಳ (ಎಸ್‌ಎಡಿ) ಹಾಗೂ ಬಿಜೆಪಿ 1990ರ ದಶಕದಿಂದಲೂ ಮಿತ್ರ ಪಕ್ಷಗಳಾಗಿದ್ದವು. ಮೈತ್ರಿಕೂಟದಲ್ಲಿ ಬಿಜೆಪಿ ಕಿರಿಯ ಪಾಲುದಾರ ಪಕ್ಷವಾಗಿತ್ತು. ಕೇಂದ್ರ ಸರ್ಕಾರವು ಜಾರಿಗೆ ತಂದಿದ್ದ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ, ಬಿಜೆಪಿ ಜತೆಗಿನ ಮೈತ್ರಿಯನ್ನು ಎಸ್‌ಎಡಿ 2020ರ ಸೆಪ್ಟೆಂಬರ್‌ನಲ್ಲಿ ಕಡಿದುಕೊಂಡಿತ್ತು. ಹಾಗಾಗಿ, ಪಂಜಾಬ್‌ನಲ್ಲಿ ಬಿಜೆಪಿ ಏಕಾಂಗಿಯಾಗಿತ್ತು. 2022ರ ವಿಧಾನಸಭಾ ಚುನಾವಣೆಯಲ್ಲಿ ಎಸ್‌ಎಡಿ ಗೆದ್ದಿದ್ದು ಮೂರು ಕ್ಷೇತ್ರಗಳಲ್ಲಿ ಮಾತ್ರ. ಬಿಜೆಪಿ ಎರಡು ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿತ್ತು. ಪ್ರಕಾಶ್ ಸಿಂಗ್‌ ಬಾದಲ್‌ ನಿಧನದ ಬಳಿಕ ಪಕ್ಷವು ಮತ್ತಷ್ಟು ಸೊರಗಿದೆ. ಲೋಕಸಭಾ ಚುನಾವಣೆಯಲ್ಲಿ ಅಕಾಲಿ ದಳದೊಂದಿಗೆ ಮೈತ್ರಿ ಮಾಡಿಕೊಳ್ಳಲು ಬಿಜೆಪಿ ಉತ್ಸುಕತೆ ತೋರಿತ್ತು. ಬಿಜೆಪಿ ಜತೆಗೆ ಮೈತ್ರಿ ಮಾಡಿಕೊಂಡರೆ ಜಾಟರ ಮತಗಳು ಕೈ ತಪ್ಪಿಹೋಗಬಹುದು ಎಂಬ ಕಾರಣಕ್ಕೆ ಎಸ್‌ಎಡಿ ನಾಯಕರು ಮೈತ್ರಿಗೆ ಹಸಿರು ನಿಶಾನೆ ತೋರಲಿಲ್ಲ. 

ವಲಸೆ ನಾಯಕರೇ ಬಿಜೆಪಿಗೆ ಆಸರೆ  

ಪಂಜಾಬ್‌ನಲ್ಲಿ ಬಿಜೆಪಿಗೆ ಸ್ವಂತ ಅಸ್ತಿತ್ವ ಎಂಬುದು ಇತ್ತೀಚಿನ ವರೆಗೆ ಇರಲೇ ಇಲ್ಲ. ಕಾಂಗ್ರೆಸ್‌ ಹಾಗೂ ಎಎಪಿಯ ಪ್ರಮುಖ ನಾಯಕರನ್ನು ಸೆಳೆದುಕೊಂಡಿರುವ ಪಕ್ಷವು ಈ ಸಲ ಉತ್ತಮ ಸಾಧನೆ ಮಾಡುವ ವಿಶ್ವಾಸದಲ್ಲಿದೆ. 

ಪಂಜಾಬ್ ಮುಖ್ಯಮಂತ್ರಿ ಹುದ್ದೆಯಿಂದ ಕ್ಯಾಪ್ಟನ್‌ ಅಮರಿಂದರ್ ಸಿಂಗ್‌ ಅವರನ್ನು ವಿಧಾನಸಭಾ ಚುನಾವಣೆಗೆ ಆರು ತಿಂಗಳಿರುವಾಗ ಕೆಳಗಿಳಿಸಲಾಗಿತ್ತು. ‘ಪಂಜಾಬ್‌ ಲೋಕ ಕಾಂಗ್ರೆಸ್‌’ ಪಕ್ಷ ಸ್ಥಾಪಿಸಿದ್ದ ಅವರು ಬಿಜೆಪಿ ಜತೆಗೆ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಿದ್ದರು. ಆದರೆ, ಅವರ ಪಕ್ಷವು ಹೀನಾಯವಾಗಿ ಸೋತಿತ್ತು. ಬಳಿಕ ಅವರು ತಮ್ಮ ಪಕ್ಷವನ್ನು ಬಿಜೆಪಿ ಜತೆಗೆ ವಿಲೀನಗೊಳಿಸಿದ್ದರು. ಅವರ ಪತ್ನಿ ಪ್ರಣೀತ್‌ ಕೌರ್ ಕಾಂಗ್ರೆಸ್‌ ಸಂಸದರಾಗಿದ್ದರು. ಲೋಕಸಭಾ ಚುನಾವಣೆಗೆ ಮುನ್ನ ಅವರು ಕಮಲ ಪಾಳಯಕ್ಕೆ ಸೇರಿದ್ದರು. ಅವರನ್ನು ಪಟಿಯಾಲ ಕ್ಷೇತ್ರದಿಂದ ಕಣಕ್ಕಿಳಿಸಲಾಗಿದೆ. 

ಸುನಿಲ್‌ ಜಾಖಡ್‌ ಅವರು ಈ ಹಿಂದೆ ‍ಪಂಜಾಬ್‌ ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷರಾಗಿದ್ದರು. ಮುಖ್ಯಮಂತ್ರಿ ಸ್ಥಾನ ಸಿಗದ ಕಾರಣಕ್ಕೆ ಮುನಿಸಿಕೊಂಡ ಅವರು ಬಿಜೆಪಿ ಸೇರ್ಪಡೆಯಾಗಿದ್ದರು. ಬಿಜೆಪಿಯ ರಾಜ್ಯ ಘಟಕದ ಅಧ್ಯಕ್ಷರನ್ನಾಗಿ ಜಾಖಡ್‌ ಅವರನ್ನು ಕಳೆದ ವರ್ಷ ನೇಮಿಸಲಾಗಿತ್ತು. ಕಾಂಗ್ರೆಸ್‌ ಸಂಸದ ರವನೀತ್ ಸಿಂಗ್‌ ಬಿಟ್ಟೂ ಹಾಗೂ ಎಎಪಿಯ ಸಂಸದ ಸುಶೀಲ್‌ ಕುಮಾರ್‌ ರಿಂಕು ಇತ್ತೀಚೆಗೆ ಬಿಜೆಪಿಗೆ ಸೇರ್ಪಡೆಯಾಗಿದ್ದರು. ರಾಜ್ಯದಲ್ಲಿ ಈ ಹಿಂದೆ ಬಿಜೆಪಿಗೆ ಪ್ರಭಾವಿ ನಾಯಕರೂ ಇರಲಿಲ್ಲ. ಗೆಲ್ಲಬಲ್ಲ ಅಭ್ಯರ್ಥಿಗಳೂ ಇರಲಿಲ್ಲ. ಪಕ್ಷವು ನಗರ ಪ್ರದೇಶಕ್ಕೆ ಮಾತ್ರ ಸೀಮಿತವಾಗಿತ್ತು. ರಾಜ್ಯದಲ್ಲಿ ಪಕ್ಷದ ಸಂಘಟನೆಯೂ ವಿಸ್ತರಣೆಗೊಂಡಿದೆ. ಹೀಗಾಗಿ, ಪಕ್ಷವು ಕಳೆದ ಬಾರಿಗಿಂತ ಹೆಚ್ಚಿನ ಸ್ಥಾನಗಳನ್ನು ಗಳಿಸಲಿದೆ ಎಂಬುದು ಬಿಜೆಪಿ
ನಾಯಕರ ಲೆಕ್ಕಾಚಾರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT