ಮಂಗಳವಾರ, 25 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಪಿಎಂ ಆಗುವ ಆಸೆಯಿಲ್ಲ, 22 ಕಡೆ ಸ್ಪರ್ಧಿಸಿರುವ ಸಣ್ಣ ಪಕ್ಷ ನಮ್ಮದು: ಕೇಜ್ರಿವಾಲ್

Published 23 ಮೇ 2024, 2:37 IST
Last Updated 23 ಮೇ 2024, 2:37 IST
ಅಕ್ಷರ ಗಾತ್ರ

ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಇಂಡಿಯಾ ಮೈತ್ರಿಕೂಟ ಗೆಲುವು ಸಾಧಿಸಿದರೂ, ತಮಗೆ ಪ್ರಧಾನಿಯಾಗುವ ಉದ್ದೇಶವಿಲ್ಲ. ಸರ್ವಾಧಿಕಾರದಿಂದ ದೇಶವನ್ನು ಹಾಗೂ ಪ್ರಜಾಪ್ರಭುತ್ವವನ್ನು ರಕ್ಷಿಸುವುದೇ ತಮ್ಮ ಗುರಿ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ.

ಪಿಟಿಐಗೆ ಬುಧವಾರ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಅವರು, ಒಂದು ವೇಳೆ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೇರಿದರೆ ವಿರೋಧ ಪಕ್ಷಗಳ ಎಲ್ಲ ನಾಯಕರೂ ಜೈಲು ಸೇರಬೇಕಾಗುತ್ತದೆ. ಚುನಾವಣಾ ವ್ಯವಸ್ಥೆಯನ್ನೇ ಹತ್ತಿಕ್ಕಲಿದೆ ಎಂದು ಆರೋಪಿಸಿದ್ದಾರೆ.

ಆಮ್‌ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕರೂ ಆಗಿರುವ ಕೇಜ್ರಿವಾಲ್, ಇಂಡಿಯಾ ಬಣದಿಂದ ಪ್ರಧಾನಿ ಯಾರಾಗಲಿದ್ದಾರೆ ಎಂಬುದನ್ನು ಲೋಕಸಭಾ ಚುನಾವಣೆ ಫಲಿತಾಂಶ ಜೂನ್‌ 4ರಂದು ಪ್ರಕಟಗೊಂಡ ಬಳಿಕ ನಿರ್ಧರಿಸಲಾಗುವುದು ಎಂದು ತಿಳಿಸಿದ್ದಾರೆ.

ಇಂಡಿಯಾ ಮೈತ್ರಿಕೂಟ ಸುಮಾರು 300 ಸ್ಥಾನಗಳನ್ನು ಗೆಲ್ಲಲಿದೆ ಎಂದಿರುವ ದೆಹಲಿ ಸಿಎಂ, 'ಇಂಡಿಯಾ ಬಣ ಸರ್ಕಾರ ರಚಿಸಲಿದೆ. ಈ ಮೈತ್ರಿಯು ಉತ್ತಮ, ಸ್ಥಿರ ಸರ್ಕಾರ ನಡೆಸಲಿದೆ' ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮೈತ್ರಿಕೂಟದ 'ಪ್ರಧಾನಿ ಅಭ್ಯರ್ಥಿ' ಎಂದು ತಮ್ಮನ್ನು ತಾವು ಪರಿಗಣಿಸುತ್ತೀರಾ ಎಂಬ ಪ್ರಶ್ನೆಗೆ, 'ಅಂತಹ ಯಾವ ಉದ್ದೇಶವಿಲ್ಲ. ಕೇವಲ 22 ಕ್ಷೇತ್ರಗಳಲ್ಲಿ ಕಣಕ್ಕಿಳಿದಿರುವ ಅತ್ಯಂತ ಸಣ್ಣ ಪಕ್ಷ ನಮ್ಮದು' ಎಂದು ಸ್ಪಷ್ಟಪಡಿಸಿದ್ದಾರೆ.

ರಾಹುಲ್‌ ಗಾಂಧಿ ಅವರನ್ನು ಪ್ರಧಾನಿಯಾದರೆ ಒಪ್ಪಿಕೊಳ್ಳುವಿರಾ ಎಂದಾಗ, 'ಸಾಕಷ್ಟು ಚರ್ಚೆಗಳು ನಡೆಯಲಿವೆ. ಇದೊಂದು ಸೈದ್ಧಾಂತಿಕವಾದ ಪ್ರಶ್ನೆ. ನಾವೆಲ್ಲ (ವಿರೋಧ ಪಕ್ಷಗಳ ನಾಯಕರು) ಒಟ್ಟಿಗೆ ಸೇರಿ ನಿರ್ಧರಿಸುತ್ತೇವೆ' ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT