ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

LS Polls: 150ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಅರಣ್ಯ ಹಕ್ಕುಗಳೇ ನಿರ್ಣಾಯಕ

Published 13 ಏಪ್ರಿಲ್ 2024, 0:24 IST
Last Updated 13 ಏಪ್ರಿಲ್ 2024, 0:24 IST
ಅಕ್ಷರ ಗಾತ್ರ

ನವದೆಹಲಿ: ಕಳೆದ ಐದು ವರ್ಷಗಳಲ್ಲಿ ಬುಡಕಟ್ಟು ಹಾಗೂ ಅರಣ್ಯವಾಸಿ ಸಮುದಾಯಗಳಿಂದ ಅರಣ್ಯದ ಮೇಲಿರುವ ಅವರ ಹಕ್ಕನ್ನು ಕಸಿದುಕೊಳ್ಳುವಂಥ ಹಲವಾರು ಬೆಳವಣಿಗೆಗಳು ನಡೆದಿವೆ. ಆದ್ದರಿಂದ, ಈ ಬೆಳವಣಿಗೆಗಳು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಯಾವ ರೀತಿಯ ಪರಿಣಾಮ ಬೀರಲಿದೆ ಎಂಬುದು ಕುತೂಹಲಕರ ಅಂಶ. ಆದರೆ, 2019ರ ಲೋಕಸಭಾ ಚುನಾವಣೆಯಲ್ಲಿ ಈ ಸಮುದಾಯದ ಜನರು ಬಿಜೆಪಿಗೆ ಮತ ನೀಡಿದ್ದರು. ಈ ಸಮುದಾಯಗಳು ವಾಸವಿರುವ ದೇಶದ 153 ಕ್ಷೇತ್ರಗಳಲ್ಲಿ 103 ಕ್ಷೇತ್ರಗಳಲ್ಲಿ ಬಿಜೆಪಿಯೇ ಗೆಲುವು ಸಾಧಿಸಿತ್ತು.

2006ರಲ್ಲಿ ಕಾಂಗ್ರೆಸ್‌ ನೇತೃತ್ವದ ಯುಪಿಎ ಸರ್ಕಾರವು ಅರಣ್ಯ ಹಕ್ಕು ಕಾಯ್ದೆಯನ್ನು ಜಾರಿಗೊಳಿಸಿತ್ತು. ‘ಪರಿಶಿಷ್ಟ ಪಂಗಡ ಹಾಗೂ ಅರಣ್ಯವಾಸಿಗಳಿಗೆ ಶತಮಾನಗಳಿಂದ ಆದ ಅನ್ಯಾಯಗಳನ್ನು ನಿವಾರಿಸುವಲ್ಲಿ ಈ ಕಾಯ್ದೆಯ ಜಾರಿಯು ಮೈಲಿಗಲ್ಲು’  ಎನ್ನುತ್ತಾರೆ ಅರಣ್ಯವಾಸಿಗಳ ಹಕ್ಕಿನ ಹೋರಾಟಗಾರರು. ಆದರೆ, 2019ರ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆದ್ದದ್ದು 11 ಕ್ಷೇತ್ರಗಳಲ್ಲಿ. ‘ವಸುಂಧರಾ’ ಎನ್ನುವ ಸ್ವತಂತ್ರ ಸಂಸ್ಥೆಯೊಂದು ಈ ಎಲ್ಲ ಮಾಹಿತಿಗಳನ್ನು ಕಲೆ ಹಾಕಿ ವರದಿಯನ್ನು ಸಿದ್ಧಪಡಿಸಿದೆ.

‘ನಮ್ಮ ಅರಣ್ಯ ಹಕ್ಕುಗಳನ್ನು ನಮಗೆ ನೀಡಿ’ ಎಂದು ಬುಡಕಟ್ಟು ಹಾಗೂ ಅರಣ್ಯವಾಸಿ ಸಮುದಾಯಗಳು 86 ಲೋಕಸಭಾ ಕ್ಷೇತ್ರಗಳಲ್ಲಿ ಬೇಡಿಕೆ ಇರಿಸಿವೆ. ಈ ಕ್ಷೇತ್ರಗಳಲ್ಲಿ ಈ ಸಮುದಾಯಗಳ ಮತದಾರರು ಶೇ 30ರಷ್ಟಿದ್ದಾರೆ. ಇಷ್ಟು ಮತಗಳು ಈ ಎಲ್ಲ ಕ್ಷೇತ್ರಗಳಲ್ಲಿ ನಿರ್ಣಾಯಕವಾಗಲಿವೆ. ಇನ್ನು 45 ಕ್ಷೇತ್ರಗಳಲ್ಲಿ ಇದೇ ಸಮುದಾಯದ ಮತದಾರರ ಪ್ರಮಾಣ ಶೇ 40ರಷ್ಟಿದೆ. ಈ 45 ಕ್ಷೇತ್ರಗಳ ಪೈಕಿ ಒಂದು ಕ್ಷೇತ್ರದಲ್ಲಿ ಈಗಿನ ಬುಡಕಟ್ಟು ವ್ಯವಹಾರಗಳ ಸಚಿವ ಅರ್ಜುನ್‌ ಮುಂಡಾ ಅವರು ಬಿಜೆಪಿಯಿಂದ ಸ್ಪರ್ಧಿಸಿದ್ದಾರೆ.

2019ರ ಚುನಾವಣೆಯಲ್ಲಿ ಈ 153 ಕ್ಷೇತ್ರಗಳ ಪೈಕಿ 74 ಕ್ಷೇತ್ರಗಳಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ ನೇರ ಹಣಾಹಣಿ ನಡೆಸಿದ್ದವು. ಇದರಲ್ಲಿ ಕಾಂಗ್ರೆಸ್‌ ಕೇವಲ ಐದು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಪರಿಶಿಷ್ಟ ಪಂಗಡದ ಜನರು ಹೆಚ್ಚಿರುವ 47 ಲೋಕಸಭಾ ಕ್ಷೇತ್ರಗಳಿವೆ. ಇವುಗಳಲ್ಲಿ 42 ಕ್ಷೇತ್ರಗಳಲ್ಲಿ ಪರಿಶಿಷ್ಟ ಪಂಗಡದ ಮತದಾರರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಈ 47 ಕ್ಷೇತ್ರಗಳ ಪೈಕಿ 2019ರಲ್ಲಿ ಬಿಜೆಪಿಯು 31 ಕ್ಷೇತ್ರಗಳಲ್ಲಿ ಜಯ ಸಾಧಿಸಿತ್ತು. ಕಾಂಗ್ರೆಸ್‌ 3 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಷ್ಟೇ ಶಕ್ತವಾಗಿತ್ತು.

‘ಬುಡಕಟ್ಟು ಹಕ್ಕುಗಳ ವಿಚಾರವೇ ಈ ಎಲ್ಲ 153 ಕ್ಷೇತ್ರಗಳ ಮುಖ್ಯ ಚುನಾವಣಾ ವಿಷಯವಾಗಿದೆ. ಇದೇ ಕಾರಣಕ್ಕೆ ಅರಣ್ಯ ಹಕ್ಕುಗಳ ಕುರಿತು ಬಿಜೆಪಿ ಹಾಗೂ ವಿರೋಧ ಪಕ್ಷಗಳು ಪ್ರಚಾರದ ವೇಳೆ ಮಾತನಾಡುತ್ತಿವೆ. ಆದರೆ, ಚುನಾವಣೆ ಘೋಷಣೆಯಾಗುವುದಕ್ಕೂ ಮುನ್ನ, ಅರಣ್ಯ ಹಕ್ಕು ಕಸಿದುಕೊಂಡಿರುವ ಕುರಿತು ಹಲವು ಜನಪರ ಹೋರಾಟಗಳು ನಡೆದಿದ್ದವು’ ಎಂದು ವರದಿಯಲ್ಲಿ ಹೇಳಲಾಗಿದೆ.

ಅರಣ್ಯದಿಂದ ತಮ್ಮನ್ನು ಒಕ್ಕಲೆಬ್ಬಿಸಲಾಗುತ್ತದೆ ಎಂಬ ಭಯವು ಬುಡಕಟ್ಟು ಜನರಲ್ಲಿ, ಅರಣ್ಯವಾಸಿಗಳಲ್ಲಿ ಅಧಿಕಗೊಂಡಿದೆ. ಈ ಬಾರಿಯ ಚುನಾವಣೆಯಲ್ಲಿ ಈ ವಿಷಯಗಳು ಯಾವ ರೀತಿ ಪರಿಣಾಮ ಬೀರಲಿವೆ ಎಂಬುದನ್ನು ಕಾದುನೋಡಬೇಕು
ತುಷಾರ್‌ ದಾಸ್‌, ವಸುಂಧರಾ ಸಂಸ್ಥೆಯ ಸದಸ್ಯ

ಚುನಾವಣೆಯನ್ನು ಪ್ರಭಾವಿಸಬಹುದಾದ ಪ್ರಮುಖ ವಿಚಾರಗಳು

 • ಅರಣ್ಯ ಹಕ್ಕು ಕಾಯ್ದೆಯ ಪರಿಣಾಮಕಾರಿ ಜಾರಿ. ಅದರಲ್ಲೂ ಅರಣ್ಯ ಸಂಪನ್ಮೂಲಗಳ ಮೇಲಿನ ಸಾಮುದಾಯಿಕ ಹಕ್ಕಿನ ಜಾರಿಯ ಖಾತರಿ

 • ಅರಣ್ಯ ಹಕ್ಕು ಕಾಯ್ದೆಯಡಿ ಸಲ್ಲಿಸಲಾದ ಅರ್ಜಿಗಳನ್ನು ದೊಡ್ಡ ಸಂಖ್ಯೆಯಲ್ಲಿ ತಿರಸ್ಕರಿಸಿರುವುದು

 • ಅರಣ್ಯ ಭೂಮಿಯಿಂದ ಒಕ್ಕಲೆಬ್ಬಿಸುವ ಭಯ

 • 1996 ಪಂಚಾಯಿತಿ (ಅನುಸೂಚಿತ ಪ್ರದೇಶಕ್ಕೆ ವಿಸ್ತರಣೆ) ಕಾಯ್ದೆಯ ಜಾರಿ ಮತ್ತು ಗ್ರಾಮಸಭೆಗಳ ಸಶಕ್ತೀಕರಣ

 • ಅರಣ್ಯ ನಿಯಮ ಉಲ್ಲಂಘಿಸಿದ ಪ್ರಕರಣಗಳ ಹಿಂತೆಗೆದುಕೊಳ್ಳುವುದು

 • ಅರಣ್ಯ ಉತ್ಪನ್ನಗಳಿಗೆ ಉತ್ತಮ ಬೆಲೆ

ಶಾಸನ ತಿದ್ದುಪಡಿ ಮತ್ತು ಅರಣ್ಯ ಹಕ್ಕು ಮೊಟಕು

 • ಭೂ ಸ್ವಾದೀನ ಪ್ರಕ್ರಿಯೆಯಲ್ಲಿನ ಬದಲಾವಣೆ

 • ಅರಣ್ಯ ಹಕ್ಕು ಕಾಯ್ದೆಗೆ 2023ರಲ್ಲಿ ತಂದ ತಿದ್ದುಪಡಿ

 • ಪರಿಹಾರಾತ್ಮಕ ಅರಣ್ಯೀಕರಣ ನಿಧಿ ಕಾಯ್ದೆ, 2018ರ ರಾಷ್ಟ್ರೀಯ ಅರಣ್ಯ ಕರಡು ನೀತಿ, ‍ಪುನರ್ವಸತಿ ಮತ್ತು ಪುನರ್ ವ್ಯವಸ್ಥೆ ಕಾಯ್ದೆ

 • ಅರಣ್ಯ ಭೂಮಿಯನ್ನು ಅರಣ್ಯೇತರ ಪ್ರದೇಶವೆಂದು ಮಾಡಲು ಗ್ರಾಮಸಭೆಯ ಒಪ್ಪಿಗೆಯು ಕಡ್ಡಾಯವಾಗಿತ್ತು. 2022ರ ಅರಣ್ಯ ಸಂರಕ್ಷಣಾ ನಿಯಮಗಳು ಈ ಕಡ್ಡಾಯದ ಒಪ್ಪಿಗೆ ವಿಚಾರವನ್ನು ದುರ್ಬಲಗೊಳಿಸಿದೆ

ಕಾಯ್ದೆಯಡಿ ಸಲ್ಲಿಸಿದ್ದ ಅರ್ಜಿಗಳ ತಿರಸ್ಕಾರ ಪ್ರಮಾಣ ಹೆಚ್ಚಳ

ಕಳೆದ ಐದು ವರ್ಷದಲ್ಲಿ ಅರಣ್ಯ ಹಕ್ಕು ಕಾಯ್ದೆ ಅಡಿಯಲ್ಲಿ ಸಲ್ಲಿಸುವ ಅರ್ಜಿಗಳನ್ನು ತಿರಸ್ಕರಿಸುವ ಪ್ರಕರಣಗಳು ದೇಶದಲ್ಲಿ ಹೆಚ್ಚಾಗಿವೆ. ಉತ್ತರಾಖಂಡ, ಛತ್ತೀಸಗಢದ ನಂತರ ಕರ್ನಾಟಕದಲ್ಲೇ ಇಂಥ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ನಡೆಯುತ್ತಿವೆ. ಇದು ಬುಡಕಟ್ಟು ಹಾಗೂ ಅರಣ್ಯವಾಸಿ ಸಮುದಾಯದ ಜನರ ಆತಂತಕ್ಕೆ ಕಾರಣವಾಗಿದೆ. ಕಳೆದ ಐದು ವರ್ಷಗಳಲ್ಲಿ ಇಂಥ ಅರ್ಜಿಗಳನ್ನು ವಿಲೇವಾರಿ ಮಾಡುವ ಪ್ರಮಾಣವು ಶೇ 87.72ರಷ್ಟಿಂದ ಶೇ 84.44ರಷ್ಟಕ್ಕೆ ಕುಸಿದಿದೆ. 

ಅಧಿಕಾರಿಗಳು ಹೇಳುವುದೇನು?

ಕೋವಿಡ್‌ ಕಾರಣದಿಂದಾಗಿ 2020–21ರಲ್ಲಿ ಅರಣ್ಯ ಹಕ್ಕು ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿ ಮಾಡಲಾಗಲಿಲ್ಲ

ತಜ್ಞರು ಹೇಳುವುದೇನು?

‘ರಾಜಕೀಯ ಇಚ್ಛಾಶಕ್ತಿಯ ಕೊರತೆ ಹಾಗೂ ಭ್ರಷ್ಟಾಚಾರವೇ ಅರ್ಜಿಗಳ ತಿರಸ್ಕಾರಕ್ಕೆ ಮುಖ್ಯ ಕಾರಣ. ಅರ್ಜಿ ಸಲ್ಲಿಕೆಯ ಪ್ರಕ್ರಿಯೆ, ಬೇಕಾಗುವ ಸಾಕ್ಷ್ಯಗಳು ಹಾಗೂ ನೀಡಬೇಕಾದ ದಾಖಲೆಗಳ ಕುರಿತು ಅರ್ಜಿದಾರರು ಹಾಗೂ ಅಧಿಕಾರಿಗಳಲ್ಲಿ ಸ್ಪಷ್ಟತೆ ಇಲ್ಲ. ವಿವಿಧ ಹಂತದ ಅರಣ್ಯ ಹಕ್ಕು ಸಮಿತಿಗಳಿಗೇ ಕಾಯ್ದೆಯ ಕುರಿತು ತಿಳಿವಳಿಕೆ ಇಲ್ಲ. ಉಪವಿಭಾಗೀಯ ಮಟ್ಟದ ಹಾಗೂ ಜಿಲ್ಲಾ ಮಟ್ಟದ ಸಮಿತಿಗಳು ತಳ ಮಟ್ಟದ ಅರಣ್ಯ ಹಕ್ಕು ಸಮಿತಿಗಳಿಗೆ ಅರ್ಜಿಗಳು ತಿರಸ್ಕಾರವಾಗಿರುವುದರ ಕುರಿತು ಮಾಹಿತಿಗಳನ್ನೇ ನೀಡುವುದಿಲ್ಲ. ಇದರಿಂದಾಗಿ ಹೊಸದಾಗಿ ಮತ್ತೊಮ್ಮೆ ಅರ್ಜಿ ಸಲ್ಲಿಸಲಾಗುತ್ತಿದೆ. ಈಗಾಗಲೇ ಭೂಮಿಯ ಒಡೆತನ ಇದೆ ಹಾಗೂ ಕುಟುಂಬದಲ್ಲಿ ಉದ್ಯೋಗಸ್ಥರಿದ್ದಾರೆ ಎನ್ನುವ ಕಾರಣಗಳನ್ನೊಡ್ಡಿ ಅರ್ಜಿಗಳನ್ನು ತಿರಸ್ಕರಿಸಲಾಗುತ್ತಿದೆ’ ಎನ್ನುತ್ತಾರೆ ಗುಜರಾತ್‌ನ ‘ಇಕಲಾಜಿಕಲ್‌ ಸೆಕ್ಯುರಿಟಿ’ ಎಂಬ ಎನ್‌ಜಿಒದ ಪ್ರಧಾನ ಕಾರ್ಯದರ್ಶಿ ಬೃಜೇಶ್‌ ಕುಮಾರ್‌ ದುಬೆ.

 • ಕಾಯ್ದೆ ಜಾರಿಯಾದಾಗಿನಿಂದ ಇಲ್ಲಿಯವರೆಗೆ ಉತ್ತರಾಖಂಡದಲ್ಲಿ 6,678 ಅರ್ಜಿಗಳನ್ನು ಸಲ್ಲಿಸಿದ್ದರೆ, ಕೇವಲ 185 ಅರ್ಜಿಗಳಷ್ಟೇ ವಿಲೇವಾರಿಯಾಗಿವೆ. ಅಂದರೆ, ಶೇ 97.23ರಷ್ಟು ಅರ್ಜಿಗಳು ಇಲ್ಲಿ ತಿರಸ್ಕೃತವಾಗಿವೆ

 • ಕಾಯ್ದೆ ಜಾರಿಯಾದಾಗಿನಿಂದ ಇಲ್ಲಿಯವರೆಗೆ ಛತ್ತೀಸಗಢದಲ್ಲಿ 9.41 ಲಕ್ಷ ಅರ್ಜಿಗಳು ಸಲ್ಲಿಕೆಯಾಗಿದ್ದರೆ, 4 ಲಕ್ಷ ಅರ್ಜಿಗಳು ತಿರಸ್ಕೃತವಾಗಿವೆ

 • ಕಾಯ್ದೆ ಜಾರಿಯಾದಾಗಿನಿಂದ ಇಲ್ಲಿಯವರೆಗೆ 2.94 ಲಕ್ಷ ಅರ್ಜಿಗಳು ಕರ್ನಾಟಕದಲ್ಲಿ ಸಲ್ಲಿಕೆಯಾಗಿವೆ. ಇವುಗಳಲ್ಲಿ 2.53 ಲಕ್ಷ ಅರ್ಜಿಗಳು ತಿರಸ್ಕೃತಗೊಂಡಿವೆ. ಅಂದರೆ, ಶೇ 86.01ರಷ್ಟು ಅರ್ಜಿಗಳು ತಿರಸ್ಕಾರಗೊಂಡಿವೆ

 • 7.88 ಲಕ್ಷ;ಕಳೆದ ಐದು ವರ್ಷಗಳಲ್ಲಿ ಸಲ್ಲಿಕೆಯಾದ ಒಟ್ಟು ಅರ್ಜಿಗಳ ಸಂಖ್ಯೆ

 • 5.21 ಲಕ್ಷ;ಕಳೆದ ಐದು ವರ್ಷಗಳಲ್ಲಿ ವಿಲೇವಾರಿಯಾದ ಅರ್ಜಿಗಳ ಸಂಖ್ಯೆ

 • 2.67 ಲಕ್ಷ;ಕಳೆದ ಐದು ವರ್ಷಗಳಲ್ಲಿ ವಿಲೇವಾರಿಗೆ ಬಾಕಿ ಇರುವ ಅರ್ಜಿಗಳ ಸಂಖ್ಯೆ

 • 5,827;ಕಳೆದ ಐದು ವರ್ಷಗಳಲ್ಲಿ ತಿರಸ್ಕೃತಗೊಂಡ ಅರ್ಜಿಗಳ ಸಂಖ್ಯೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT