ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಾಜ್ಯಪಾಲರ ವಿರುದ್ಧದ ಲೈಂಗಿಕ ದೌರ್ಜನ್ಯ ಆರೋಪದ ಬಗ್ಗೆ ಮೋದಿ‌ ಮೌನವೇಕೆ?: ಮಮತಾ

Published 12 ಮೇ 2024, 10:55 IST
Last Updated 12 ಮೇ 2024, 10:55 IST
ಅಕ್ಷರ ಗಾತ್ರ

ಬರಾಸತ್‌: ಸಂದೇಶ್‌ಖಾಲಿ ಪ್ರಕರಣ ಕುರಿತು ಸುಳ್ಳು ಹರಡುವುದನ್ನು ಮುಂದುವರಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು, ರಾಜ್ಯಪಾಲ ಸಿ.ವಿ. ಆನಂದ ಬೋಸ್‌ ವಿರುದ್ಧ ಕೇಳಿ ಬಂದಿರುವ ಲೈಂಗಿಕ ದೌರ್ಜನ್ಯ ಆರೋಪಗಳ ಬಗ್ಗೆ ಮೌನವಾಗಿರುವುದು ಏಕೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಭಾನುವಾರ ಪ್ರಶ್ನಿಸಿದ್ದಾರೆ.

ಉತ್ತರದ 24 ‍ಪರಗಣ ಜಿಲ್ಲೆಯ ಅಮ್ದಂಗಾದಲ್ಲಿ ನಡೆದ ಚುನಾವಣಾ ರ‍್ಯಾಲಿಯಲ್ಲಿ ಮಾತನಾಡಿರುವ ಮಮತಾ, ಸಂದೇಶಖಾಲಿ ವಿಚಾರವಾಗಿ ಬಿಜೆಪಿ ನಡೆಸಿದ ಪಿತೂರಿಯು ಬಹಿರಂಗಗೊಂಡಿದೆ. ಪ್ರಧಾನಿಗೆ ನಾಚಿಕೆಯಾಗಬೇಕು ಎಂದು ಗುಡುಗಿದ್ದಾರೆ. ಅಮ್ದಂಗಾ ಗ್ರಾಮವು, ಬ್ಯಾರಕ್‌ಪುರ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಬರುತ್ತದೆ.

'ಲೈಂಗಿಕ ದೌರ್ಜನ್ಯ ಮತ್ತು ಭೂಕಬಳಿಕೆ ಆರೋಪ ಹೊತ್ತಿರುವ ಟಿಎಂಸಿ ನಾಯಕ ಶಹಜಹಾನ್‌ ಶೇಖ್‌ ವಿರುದ್ಧದ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು 70ಕ್ಕೂ ಹೆಚ್ಚು ಮಹಿಳೆಯರು ತಲಾ ₹ 2,000 ಪಡೆದಿದ್ದಾರೆ' ಎಂದು ಬಿಜೆಪಿಯ ಸ್ಥಳೀಯ ನಾಯಕರೊಬ್ಬರು ಹೇಳಿರುವುದನ್ನು ಉಲ್ಲೇಖಿಸಿದ ಮಮತಾ, 'ಪ್ರಧಾನಿ ಮೋದಿ ಸಂದೇಶ್‌ಖಾಲಿ ಕುರಿತು ಈಗಲೂ ಸುಳ್ಳುಗಳನ್ನು ಹೇಳುತ್ತಿದ್ದಾರೆ. ಬಿಜೆಪಿಯ ಪಿತೂರಿ ಬಯಲಾಗಿರುವುದರಿಂದ ಅವರಿಗೆ ನಾಚಿಕೆಯಾಗಬೇಕು' ಎಂದಿದ್ದಾರೆ.

ಬಿಜೆಪಿಯ ಸಂದೇಶ್‌ಖಾಲಿ ಮಂಡಲ ಅಧ್ಯಕ್ಷ ಗಂಗಾಧರ್‌ ಕಾಯಲ್‌ ಅವರನ್ನು ಹೋಲುವ ವ್ಯಕ್ತಿಯು, ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಅವರು ಇಡೀ ಪಿತೂರಿಯ ಹಿಂದೆ ಇದ್ದಾರೆ. ಅವರ ಸೂಚನೆಯಂತೆ ಪ್ರತಿಭಟನೆಗಳನ್ನು ನಡೆಸಲಾಗಿದೆ ಎಂದಿರುವುದು ಮತ್ತೊಂದು ವಿಡಿಯೊದಲ್ಲಿ ದಾಖಲಾಗಿದೆ.

ಲೋಕಸಭಾ ಚುನಾವಣೆ ಪ್ರಯುಕ್ತ ರಾಜ್ಯದಲ್ಲಿ ಪ್ರಚಾರ ಕೈಗೊಂಡ ವೇಳೆ ಮೋದಿ ಅವರು, ಸಂದೇಶ್‌ಖಾಲಿಯ ಸಂತ್ರಸ್ತ ಮಹಿಳೆಯರು ಪ್ರತಿಭಟನೆಗಳನ್ನು ನಡೆಸದಂತೆ ಟಿಎಂಸಿಯ ಗೂಂಡಾಗಳು ಬೆದರಿಸಿದ್ದಾರೆ ಎಂದು ಆರೋಪಿಸಿದ್ದರು.

'ಸಂದೇಶ್‌ಖಾಲಿಯ ಸಹೋದರಿಯರು ಹಾಗೂ ತಾಯಂದಿರೊಂದಿಗೆ ಟಿಎಂಸಿ ಹೇಗೆ ನಡೆದುಕೊಂಡಿದೆ ಎಂಬುದನ್ನು ಎಲ್ಲರೂ ನೋಡಿದ್ದಾರೆ. ಸಂದೇಶ್‌ಖಾಲಿ ಪ್ರಕರಣದ ತಪ್ಪಿತಸ್ಥರನ್ನು ರಕ್ಷಿಸುವುದಕ್ಕಾಗಿ ಟಿಎಂಸಿಯ ಗುಂಡಾಗಳು ಮಹಿಳೆಯರನ್ನು ಬೆದರಿಸುತ್ತಿದ್ದಾರೆ. ಆ ಪಕ್ಷವು ತಪ್ಪಿತಸ್ಥರನ್ನು ಉಳಿಸಲು ಏನುಬೇಕಾದರೂ ಮಾಡಲು ಸಿದ್ಧವಿದೆ' ಎಂದು ಗುಡುಗಿದ್ದರು.

ಮೋದಿ ಆರೋಪಗಳಿಗೆ ತಿರುಗೇಟು ನೀಡಿರುವ ಮಮತಾ, ರಾಜ್ಯಪಾಲರ ವಿರುದ್ಧ ಕೇಳಿ ಬಂದಿರುವ ಆರೋಪದ ಬಗ್ಗೆ ಕೇಂದ್ರ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದಿರುವುದು ನಿಜವಾದ ಮಹಿಳಾ ವಿರೋಧಿ ನಿಲುವನ್ನು ತೋರಿಸುತ್ತದೆ ಎಂದಿದ್ದಾರೆ.

'ರಾಜಭವನದಲ್ಲೇ ಉಳಿದುಕೊಂಡಿದ್ದ ಮೋದಿ, ರಾಜ್ಯಪಾಲರಿಂದ ರಾಜೀನಾಮೆ ಕೇಳಿಲ್ಲವೇಕೆ?' ಎಂದು ಪ್ರಶ್ನಿಸಿದ್ದಾರೆ.

ಶನಿವಾರ ಕೋಲ್ಕತ್ತಕ್ಕೆ ಬಂದಿದ್ದ ಪ್ರಧಾನಿ, ಭಾನುವಾರ ಬೆಳಿಗ್ಗೆ ಪ್ರಚಾರಕ್ಕೆ ತೆರಳುವವರೆಗೆ ರಾಜಭವನದಲ್ಲೇ ತಂಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT