ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶಿವಮೊಗ್ಗ ಕ್ಷೇತ್ರ | ಪರ್ಯಾಯ ಪಕ್ಷದತ್ತ ಮತದಾರರ ಚಿತ್ತ: ನಟ ಶಿವರಾಜ ಕುಮಾರ್‌

ಪತ್ನಿ ಪರ ಪ್ರಚಾರಕ್ಕೆ ಹೆಚ್ಚು ಸಮಯ: ಶಿವರಾಜ ಕುಮಾರ್‌
Published 21 ಮಾರ್ಚ್ 2024, 13:34 IST
Last Updated 21 ಮಾರ್ಚ್ 2024, 13:34 IST
ಅಕ್ಷರ ಗಾತ್ರ

ಕುಂದಾಪುರ: ಕಳೆದ 10 ವರ್ಷಗಳಲ್ಲಿ ಪರಿಹಾರವಾಗದಿರುವ ಸಮಸ್ಯೆಗಳಿಂದ ಬೇಸತ್ತಿರುವ ಮತದಾರರು ಪರ್ಯಾಯ ಪಕ್ಷದತ್ತ ಆಕರ್ಷಿತರಾಗುತ್ತಿದ್ದಾರೆ ಎಂದು ನಟ ಶಿವರಾಜ ಕುಮಾರ್‌ ಹೇಳಿದರು.

ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಗೊಳಪಡುವ ಕುಂದಾಪುರ ತಾಲ್ಲೂಕಿನ ವಂಡ್ಸೆಯ ನೆಂಪುವಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಪತ್ನಿ ಗೀತಾ ಅವರ ಪರ ಪ್ರಚಾರ ನಡೆಸಿ ಮಾತನಾಡಿದ ಅವರು, ರಾಜಕಾರಣದಲ್ಲಿ ಭರವಸೆ ನೀಡುವುದು ಮುಖ್ಯವಲ್ಲ, ಈಡೇರಿಸುವುದು ಮುಖ್ಯ. ಎಲ್ಲವನ್ನೂ ಪ್ರಾಯೋಗಿಕವಾಗಿ ನೋಡುವ, ಅಳೆಯುವ ಮನೋಭಾವ ರೂಢಿಸಿಕೊಂಡಿರುವ ಯುವ ಮತದಾರರು ಈ ಬಾರಿ ಪತ್ನಿ ಗೀತಾ ಅವರನ್ನು ಬೆಂಲಿಸುವ ವಿಶ್ವಾಸವಿದೆ ಎಂದರು.

ಕಳೆದ ಲೋಕಸಭಾ ಚುನಾವಣೆ ಸಂದರ್ಭ ಪತ್ನಿಯ ಪರ ಪ್ರಚಾರಕ್ಕೆ ಹೆಚ್ಚು ಸಮಯ ನೀಡಲು ಸಾಧ್ಯವಾಗಿರಲಿಲ್ಲ. ಈ ಬಾರಿ ಸಿನಿಮಾ ಚಿತ್ರೀಕರಣ ಸಮಯವನ್ನು ಹೊಂದಾಣಿಕೆ ಮಾಡಿಕೊಂಡಿದ್ದು ಹೆಚ್ಚಿನ ಅವಧಿಯನ್ನು ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಕಳೆಯುತ್ತೇನೆ. ಪತ್ನಿ ನಿರ್ಮಾಪಕಿಯೂ ಆಗಿರುವುದರಿಂದ ಚಿತ್ರರಂಗದ ಕಲಾವಿದರು, ನಿರ್ಮಾಪಕರು, ನಿರ್ದೇಶಕರು ಸೇರಿದಂತೆ ಹಲವರು ಪ್ರಚಾರಕ್ಕೆ ಬರುವ ವಿಶ್ವಾಸವಿದೆ ಎಂದರು.

ಉಡುಪಿ ಹಾಗೂ ಶಿವಮೊಗ್ಗ ಜಿಲ್ಲೆಗಳ ಜೊತೆ ಡಾ.ರಾಜ್‌ಕುಮಾರ್‌ ಕುಟುಂಬಕ್ಕೆ ನಂಟಿದೆ. ತಂದೆಯವರ ನಂತರ ನನ್ನ ಅತಿ ಹೆಚ್ಚು ಸಿನಿಮಾಗಳು ಕರಾವಳಿ ಭಾಗಗಳಲ್ಲಿ ಚಿತ್ರೀಕರಣವಾಗಿವೆ. ಇಲ್ಲಿನ ಮೀನಿನ ಖಾದ್ಯಗಳು ಬಹಳ ಇಷ್ಟ ಎಂದು ಶಿವರಾಜ ಕುಮಾರ್ ಹೇಳಿದರು.

ಅಭ್ಯರ್ಥಿ ಗೀತಾ ಶಿವರಾಜ್‌ ಕುಮಾರ್‌ ಮಾತನಾಡಿ, ಕ್ಷೇತ್ರದ ಸೇವೆ ಮಾಡಲು ಅವಕಾಶ ನೀಡುವಂತೆ ಕೊಲ್ಲೂರು ಮೂಕಾಂಬಿಕಾ ದೇವಿಯ ಬಳಿ ಬೇಡಿಕೊಂಡಿದ್ದೇನೆ. ತಂದೆ ಬಂಗಾರಪ್ಪನವರ ಹಾದಿಯಲ್ಲಿ ಮುನ್ನೆಡೆಯುವ ಇರಾದೆ ಇದ್ದು, ಬೈಂದೂರು ಮಾಜಿ ಶಾಸಕರಾದ ಕೆ.ಗೋಪಾಲ ಪೂಜಾರಿ, ಬಿ.ಎಂ.ಸುಕುಮಾರ ಶೆಟ್ಟಿ ಜೊತೆಯಾಗಿ ನಿಂತಿರುವುದು ಹೆಚ್ಚು ಬಲ ಬಂದಂತಾಗಿದೆ ಎಂದರು.

ಸಚಿವ ಮಧು ಬಂಗಾರಪ್ಪ, ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್‌ ಕುಮಾರ ಕೊಡವೂರು ಸೇರಿದಂತೆ ಹಲವು ಮುಖಂಡರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT