ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಋಣ ತೀರಿಸಲು ಕಾಂಗ್ರೆಸ್‌ ಪರ ಪ್ರಚಾರ: ಸ್ಟಾರ್‌ ಚಂದ್ರು ಪರ ನಟ ದರ್ಶನ್‌ ರೋಡ್‌ ಶೋ

Published 23 ಏಪ್ರಿಲ್ 2024, 4:24 IST
Last Updated 23 ಏಪ್ರಿಲ್ 2024, 4:24 IST
ಅಕ್ಷರ ಗಾತ್ರ

ಮದ್ದೂರು: ‘ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು ಅಪಾರ ಸಹಾಯ ಮಾಡಿದ್ದಾರೆ. ಆ ಋಣ ನನ್ನ ಮೇಲಿದ್ದು ಈ ಚುನಾವಣೆಯಲ್ಲಿ ನಾನು ಕಾಂಗ್ರೆಸ್‌ ಅಭ್ಯರ್ಥಿ ಸ್ಟಾರ್‌ ಚಂದ್ರು ಅವರ ಪರ ಪ್ರಚಾರ ನಡೆಸುತ್ತಿದ್ದೇನೆ’ ಎಂದು ನಟ ದರ್ಶನ್‌ ಹೇಳಿದರು.

ತಾಲ್ಲೂಕಿನ ಕೊಪ್ಪದಲ್ಲಿ ಸೋಮವಾರ ಕಾಂಗ್ರೆಸ್‌ ಅಭ್ಯರ್ಥಿ ಸ್ಟಾರ್‌ ಚಂದ್ರು ಪರ ಪ್ರಚಾರ ನಡೆಸಿ ಮಾತನಾಡಿದರು.

‘ತೆರೆಯ ಹಿಂದೆ ಕಾಂಗ್ರೆಸ್‌ ನಾಯಕರು ನಮಗೆ ಸಹಾಯ ಮಾಡಿದ್ದರು. ಆ ಋಣವನ್ನು ಈ ಜನ್ಮದಲ್ಲಿ ತೀರಿಸಲು ಸಾಧ್ಯವಿಲ್ಲ. ಇಲ್ಲಿರುವ ಕೆಲವು ನಾಯಕರುಗಳು ನನಗೆ ಈ ಹಿಂದೆ ಮಾಡಿದ ಸಹಾಯವನ್ನು ಹಾಗೂ ಋಣವನ್ನು ತೀರಿಸಲು ಆಗುವುದಿಲ್ಲ. ಅವರಿಗೋಸ್ಕರ ಚುನಾವಣಾ ಪ್ರಚಾರಕ್ಕಾಗಿ ಬಂದಿದ್ದೇನೆ’ ಎಂದರು.

‘ಸ್ಟಾರ್ ಚಂದ್ರು ಮಂಡ್ಯ ಕ್ಷೇತ್ರದ ಜನರ ಪರವಾಗಿ ಕೆಲಸ ಮಾಡುತ್ತಾರೆ. ಉತ್ತಮ ವ್ಯಕ್ತಿತ್ವದ ಅವರು ಜನರಿಗೆ ಧ್ವನಿಯಾಗಿ ಕೆಲಸ ಮಾಡುತ್ತಾರೆ. ಜನಸೇವೆಗಾಗಿ ಅವರು ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿದ್ದಾರೆ. ಮಂಡ್ಯದ ಹಿರಿಮೆಯನ್ನು ರಕ್ಷಿಸುವ ಕೆಲಸ ಮಾಡುತ್ತಾರೆ ಎಂಬ ವಿಶ್ವಾಸ ನನಗಿದೆ’ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಮಾತನಾಡಿ, ‘ರಾಜ್ಯ ಸರ್ಕಾರವು ಮಹಿಳೆಯರಿಗೆ ಹಾಗೂ ಬಡವರಿಗೆ, ಜನ ಸಾಮಾನ್ಯರ ಅಭಿವೃದ್ಧಿಗೆ 5 ಗ್ಯಾರಂಟಿಗಳನ್ನು ನೀಡಿದೆ. ಜಿಲ್ಲೆಯ ಲಕ್ಷಾಂತರ ಜನರಿಗೆ ಗ್ಯಾರಂಟಿ ಯೋಜನೆಗಳಿಂದ ಅನುಕೂಲವಾಗಿದೆ. ಮುಂದೆಯೂ ಜನರಿಗೆ ಸಹಾಯ ನೀಡುವಂತಾಗಲು ಕಾಂಗ್ರೆಸ್‌ ಅಭ್ಯರ್ಥಿಗೆ ಬೆಂಬಲವಾಗಿ ನಿಲ್ಲಬೇಕು’ ಎಂದರು.

‘ಮೈತ್ರಿ ಪಕ್ಷಗಳ ಅಭ್ಯರ್ಥಿಯಾದ ಎಚ್.ಡಿ.ಕುಮಾರಸ್ವಾಮಿ ಅವರು ಸ್ಥಳೀಯ ಅಭ್ಯರ್ಥಿಯಲ್ಲ, ಬೇರೆ ಕ್ಷೇತ್ರದಲ್ಲಿ ಅಲ್ಲಿಯ ಜನರಿಗೆ ಅನ್ಯಾಯ ಮಾಡಿ ಬಂದಿದ್ದಾರೆ. ಆದರೆ ನಮ್ಮ ಸ್ಥಳೀಯರೇ ಆದ ಸ್ಟಾರ್ ಚಂದ್ರು ಅವರು ಮಂಡ್ಯದ ಬಗ್ಗೆ ಎಲ್ಲಾ ಸಮಗ್ರ ಮಾಹಿತಿ ಪಡೆದಿದ್ದಾರೆ. ಹೊರಗಿನವರನ್ನು ಬಿಟ್ಟು ಸ್ಥಳೀಯರಿಗೆ ಬೆಂಬಲ ನೀಡಬೇಕು’ ಎಂದರು.

‘ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗಲೇ ಜಿಲ್ಲೆಯ ಅಭಿವೃದ್ಧಿಗೆ ಯಾವ ಕೊಡುಗೆ ನೀಡಿಲ್ಲ, ಶಾಶ್ವತ ಎನಿಸುವ ಯಾವ ಕೆಲಸಗಳನ್ನೂ ಮಾಡಿಲ್ಲ. ಕುಮಾರಸ್ವಾಮಿ ಕೊಡುಗೆ ಎಂಬ ಯಾವುದೇ ಕಾಮಗಾರಿ ಜಿಲ್ಲೆಯಲ್ಲಿ ನಡೆದಿಲ್ಲ. ಈಗ ಬಂದು ಅವರು ವೋಟು ಕೇಳುತ್ತಿದ್ದಾರೆ. ಜನರು ಅವರ ಮೊಸಳೆ ಕಣ್ಣೀರನ್ನು ನಂಬಬಾರದು’ ಎಂದರು.

‘ಕಾವೇರಿ ನದಿ ನೀರಿನ ಹಂಚಿಕೆ ವಿಷಯ ಸುಪ್ರೀಂ ಕೋರ್ಟ್‌ನಲ್ಲಿದೆ. ರಾಜ್ಯ ಸರ್ಕಾರ ಕಾನೂನು ಹೋರಾಟ ಮಾಡುತ್ತಿದ್ದು ರಾಜ್ಯದ ಜನರಿಗೆ ನ್ಯಾಯ ಕೊಡಿಸುವ ಕೆಲಸ ಮಾಡುತ್ತಿದೆ. ಕುಮಾರಸ್ವಾಮಿ ಅವರು ತಾನೇ ನ್ಯಾಯ ಕೊಡಿಸುತ್ತೇನೆ ಎಂದು ಹೇಳುತ್ತಿರುವುದು ಹಾಸ್ಯಾಸ್ಪದ’ ಎಂದರು.

ಶಾಸಕರಾದ ಉದಯ್ ಮಾತನಾಡಿ ‘ಕಾಂಗ್ರೆಸ್‌ ಅಭ್ಯರ್ಥಿ ಸ್ಟಾರ್‌ ಚಂದ್ರು ಅವರ ಪರವಾಗಿ ಜಿಲ್ಲೆಯಾದ್ಯಂತ ಉತ್ತಮವಾದ ಅಭಿಪ್ರಾಯವಿದೆ. ಯಾವುದೇ ಹಳ್ಳಿಗೇ ಹೋದರೂ ಸ್ಥಳೀಯ ಅಭ್ಯರ್ಥಿ ಎಂದು ಮಾತನಾಡಿಸುತ್ತಾರೆ. ಬೇರೆ ಎಲ್ಲಿಂದಲೋ ಬಂದವರಿಗೆ ಜಿಲ್ಲೆಯ ಸ್ವಾಭಿಮಾನದ ಜನರು ಮಣೆ ಹಾಕುವುದಿಲ್ಲ’ ಎಂದರು.

ನಟ ದರ್ಶನ್‌ ಅವರು ಮದ್ದೂರು ಪಟ್ಟಣ ಸೇರಿದಂತೆ ಕೆಸ್ತೂರು, ಹೊನ್ನಲಗೆರೆ, ಮಡೇನಹಳ್ಳಿ ಗೇಟ್‌, ಭಾರತೀನಗರದಲ್ಲೂ ರೋಡ್‌ ಶೋ ನಡೆಸಿ ಪ್ರಚಾರ ಮಾಡಿದರು.

ಶಾಸಕ ಗಣಿಗ ರವಿಕುಮಾರ್, ಮುಖಂಡರಾದ ಅಪ್ಪಾಜಿಗೌಡ,  ಕೆ.ಎನ್.ದಿವಾಕರ್, ಲಕ್ಷ್ಮಿ ಚೆನ್ನರಾಜು, ರಾಮಚಂದ್ರು, ಬೆಕ್ಕಳಲೆ ರಘು,  ಕುಮಾರ್ ಕೊಪ್ಪ, ಕ್ರಾಂತಿಸಿಂಹ, ಚಿಕ್ಕೊನಹಳ್ಳಿ ತಮ್ಮಯ್ಯ, ಪರ್ವೇಜ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT