ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ | ಈ ಕ್ಷೇತ್ರಗಳ ಮತ ನಿರ್ಣಾಯಕ

Published 19 ಮಾರ್ಚ್ 2024, 23:33 IST
Last Updated 19 ಮಾರ್ಚ್ 2024, 23:33 IST
ಅಕ್ಷರ ಗಾತ್ರ

ಬೆಂಗಳೂರು: ಚುನಾವಣಾ ಪ್ರಚಾರದ ಆರಂಭದಲ್ಲೇ ಜಿದ್ದಾಜಿದ್ದಿನ ಅಖಾಡಗಳಲ್ಲಿ ಪ್ರಮುಖವೆಂದು ಗುರುತಿಸಿಕೊಂಡಿರುವ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ‘ಫಲಿತಾಂಶ’ವನ್ನು ಬೆಂಗಳೂರು ದಕ್ಷಿಣ ಮತ್ತು ಆರ್‌ಆರ್‌ ನಗರ ವಿಧಾನಸಭಾ ಕ್ಷೇತ್ರಗಳು ನಿರ್ಣಯಿಸಲಿವೆ. ಏಕೆಂದರೆ, ಈ ಲೋಕಸಭಾ ಕ್ಷೇತ್ರದ ಒಟ್ಟು ಮತದಾರರಲ್ಲಿ ಶೇ 45ರಷ್ಟು ಈ ಎರಡೂ ಕ್ಷೇತ್ರಗಳಲ್ಲಿ ಇದ್ದಾರೆ.

ಹಾಲಿ ಸಂಸದ ಕಾಂಗ್ರೆಸ್‌ನ ಡಿ.ಕೆ. ಸುರೇಶ್‌ ಮತ್ತು ಬಿಜೆಪಿಯ ಡಾ.ಸಿ.ಎನ್‌. ಮಂಜುನಾಥ್‌ ಇಲ್ಲಿ ಮುಖಾಮುಖಿ ಆಗಿದ್ದಾರೆ. ಬೆಂಗಳೂರು ದಕ್ಷಿಣ ಮತ್ತು ಆರ್‌ಆರ್‌ ನಗರ ವಿಧಾನಸಭೆ ಕ್ಷೇತ್ರಗಳಲ್ಲಿ ಗಳಿಸುವ ಮತಗಳು ಅಭ್ಯರ್ಥಿಯ ಗೆಲುವಿಗೆ ನಿರ್ಣಾಯಕವಾಗಲಿದೆ ಎನ್ನುವುದು ಕಾಂಗ್ರೆಸ್‌ ಮತ್ತು ಬಿಜೆಪಿ ನಾಯಕರ ಲೆಕ್ಕಾಚಾರ. ಹೀಗಾಗಿ, ಎರಡೂ ಪಕ್ಷಗಳು ಈ ಕ್ಷೇತ್ರಗಳಲ್ಲಿ ಮತದಾರರ ಓಲೈಕೆಗೆ ಈಗಲೇ ಪೈಪೋಟಿಗೆ ಬಿದ್ದಿವೆ.

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿರುವ ಒಟ್ಟು ಮತದಾರ ಸಂಖ್ಯೆ 27 ಲಕ್ಷ. ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರವೊಂದರಲ್ಲೇ ಸುಮಾರು ಏಳೂವರೆ ಲಕ್ಷ ಮತದಾರರು ಇದ್ದಾರೆ. ಆರ್‌ಆರ್‌ ನಗರ ಕ್ಷೇತ್ರದಲ್ಲಿ ನಾಲ್ಕೂವರೆ ಲಕ್ಷಕ್ಕೂ ಅಧಿಕ‌ ಮತದಾರರಿದ್ದಾರೆ. ಎರಡೂ ಕ್ಷೇತ್ರಗಳ‌ ಮತಗಳು ಸೇರಿದರೆ 12 ಲಕ್ಷ ಆಗಲಿದೆ. ಈ ಕಾರಣಕ್ಕೆ ಕಾಂಗ್ರೆಸ್ ಹಾಗೂ ಬಿಜೆಪಿ- ಜೆಡಿಎಸ್ ಮೈತ್ರಿ ಪಕ್ಷಗಳ ಕಣ್ಣು ಇತ್ತ ಬಿದ್ದಿದೆ.

ಲೋಕಸಭಾ ಕ್ಷೇತ್ರದಲ್ಲಿ ಎಂಟು (ಕನಕಪುರ, ಆರ್‌ಆರ್‌ ನಗರ, ಆನೇಕಲ್‌, ಕುಣಿಗಲ್‌, ರಾಮನಗರ, ಚನ್ನಪಟ್ಟಣ, ಮಾಗಡಿ, ಬೆಂಗಳೂರು ದಕ್ಷಿಣ) ವಿಧಾನಸಭಾ ಕ್ಷೇತ್ರಗಳಿವೆ. ಈ ಪೈಕಿ, ಈ ಎರಡೂ ವಿಧಾನಸಭಾ ಕ್ಷೇತ್ರಗಳು (ಆರ್‌ಆರ್‌ ನಗರ ಮತ್ತು ಬೆಂಗಳೂರು ದಕ್ಷಿಣ) ಬಿಜೆಪಿ ಹಿಡಿತದಲ್ಲಿವೆ. ವಿಧಾನಸಭೆ ಚುನಾವಣೆಯಲ್ಲಿ ಇಲ್ಲಿ ಎರಡೂ ಪಕ್ಷಗಳ ನಡುವೆ ತೀವ್ರ ಪೈಪೋಟಿ ನಡೆದಿತ್ತು. ಚನ್ನಪಟ್ಟಣ ಜೆಡಿಎಸ್‌ (ಎಚ್‌.ಡಿ. ಕುಮಾರಸ್ವಾಮಿ) ಕೈಯಲ್ಲಿದೆ. ತಮ್ಮದೇ ಕ್ಷೇತ್ರಗಳಲ್ಲಿ ಮತಗಳು ಬಂದೇ ಬರಲಿದೆ ಎಂಬ ಲೆಕ್ಕಾಚಾರ ಬಿಜೆಪಿ- ಜೆಡಿಎಸ್ ಮೈತ್ರಿ ಪಕ್ಷಗಳದ್ದು. ಆದರೆ, ಗ್ರಾಮಾಂತರದಲ್ಲಿ ಇತರ ಐದು ಕ್ಷೇತ್ರಗಳಲ್ಲಿ ತಮ್ಮದೇ ಪಕ್ಷಗಳ ಶಾಸಕರಿದ್ದರೂ ಬೆಂಗಳೂರು ದಕ್ಷಿಣ ಹಾಗೂ ಆರ್‌.ಆರ್‌. ನಗರ ಕ್ಷೇತ್ರದ ಮೇಲೆ ‘ಕೈ’ ಕಣ್ಣು.

ಆರ್‌ಆರ್‌ ನಗರ ಮತ್ತು ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರಗಳಲ್ಲಿ ಯಾರು ಹೆಚ್ಚು ಮತಗಳನ್ನು ಸೆಳೆಯುತ್ತಾರೋ ಅವರಿಗೆ ಗೆಲುವು ಎಂಬ ಮಾತು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಈಗಾಗಲೇ ಹರಡಿದೆ. ಈ ಕಾರಣಕ್ಕೆ ಈ ಕ್ಷೇತ್ರಗಳ ಮೇಲೆ ಇನ್ನಿಲ್ಲದ ಗಮನ ಕೇಂದ್ರೀಕರಿಸಿರುವ ಡಿ.ಕೆ. ಸಹೋದರರು, ತಮ್ಮದೇ ತಂತ್ರಗಾರಿಕೆ ರೂಪಿಸುತ್ತಿದ್ದಾರೆ ಎನ್ನುತ್ತವೆ ಕಾಂಗ್ರೆಸ್‌ ಮೂಲಗಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT