ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹೇಡಿ ಸರ್ಕಾರದ ಸಿಎಂ ಪ್ರತಿಯೊಂದಕ್ಕೂ ಕೇಂದ್ರದತ್ತ ಬೊಟ್ಟು ಶೋಭೆಯಲ್ಲ: ಭಗವಂತ ಖೂಬಾ

Published 29 ಮೇ 2024, 13:09 IST
Last Updated 29 ಮೇ 2024, 13:09 IST
ಅಕ್ಷರ ಗಾತ್ರ

ಬೀದರ್‌: ‘ಹೇಡಿ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪ್ರತಿಯೊಂದಕ್ಕೂ ಕೇಂದ್ರ ಸರ್ಕಾರದ ಕಡೆಗೆ ಬೊಟ್ಟು ಮಾಡುವುದು ಅವರಿಗೆ ಶೋಭೆ ತರುವುದಿಲ್ಲ’ ಎಂದು ಕೇಂದ್ರ ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಹೇಳಿದರು.

ರಾಜ್ಯದ ಮುಖ್ಯಮಂತ್ರಿಗೆ ಕಿಂಚಿತ್ತೂ ಬುದ್ಧಿ ಇದ್ದರೆ ಪ್ರತಿಯೊಂದು ವಿಷಯಕ್ಕೆ ಕೇಂದ್ರದತ್ತ ಬೊಟ್ಟು ಮಾಡಬಾರದು. ಪ್ರಚಂಡ ಬಹುಮತದಿಂದ ಜನ ಅವರನ್ನು (ಕಾಂಗ್ರೆಸ್‌ ಪಕ್ಷವನ್ನು) ಆಯ್ಕೆ ಮಾಡಿದ್ದಾರೆ. ಮೂರುವರೆ ಲಕ್ಷ ಕೋಟಿ ಬಜೆಟ್‌ ಮಂಡಿಸಿದ್ದಾರೆ. ಇಂದಿನ ಎಲ್ಲ ಸಮಸ್ಯೆಗಳಿಗೆ ಕಾಂಗ್ರೆಸ್‌ನವರೇ ಹೊಣೆಗಾರರು. ಹತ್ತು ವರ್ಷಗಳಿಂದ ನರೇಂದ್ರ ಮೋದಿಯವರ ಸರ್ಕಾರ, ಯಾವ ರಾಜ್ಯಗಳಿಗೂ ಭೇದ ಭಾವ ಮಾಡಿದ ಒಂದೇ ಒಂದು ಉದಾಹರಣೆಗಳಿಲ್ಲ ಎಂದು ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು.

ರಾಜ್ಯ ಸರ್ಕಾರದ ಕೆಟ್ಟ ನೀತಿ, ಸಂಸ್ಕೃತಿಗೆ ಇತಿಶ್ರೀ ಹಾಡಬೇಕಾದರೆ ಪದವೀಧರ ಮತದಾರರು ಈ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಪಾಠ ಕಲಿಸಬೇಕು. ರಾಜ್ಯದಲ್ಲಿ ನಡೆಯುತ್ತಿರುವ ಆರು ವಿಧಾನಸಭಾ ಕ್ಷೇತ್ರಗಳ ಚುನಾವಣೆ ಬಹಳ ಮಹತ್ವದ್ದು. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಸೋಲುವುದು ಖಚಿತ. ಈ ಚುನಾವಣೆಯಲ್ಲೂ ಅದಕ್ಕೆ ಸೋಲಿನ ರುಚಿ ತೋರಿಸಬೇಕು ಎಂದು ಮನವಿ ಮಾಡಿದರು.

ಕಳೆದ ಒಂದು ವರ್ಷದಲ್ಲಿ ರಾಜ್ಯ ಸರ್ಕಾರದ ಆಡಳಿತ ನೋಡಿದರೆ ರಾಜ್ಯದಲ್ಲಿ ಅಶಾಂತಿ ಹುಟ್ಟು ಹಾಕಿ, ಬಹುಸಂಖ್ಯಾತರ ಹಿತರಕ್ಷಣೆ ಸಂಪೂರ್ಣ ಹತ್ತಿಕ್ಕಿದೆ. ಕೇವಲ ಅಲ್ಪಸಂಖ್ಯಾತರ ಓಲೈಕೆ, ತುಷ್ಟೀಕರಣ ರಾಜಕಾರಣ ಮಾಡಲಾಗುತ್ತಿದೆ. ಬಹುಸಂಖ್ಯಾತರ ಹಿತರಕ್ಷಣೆಗೆ ಪದವೀಧರ ಮತದಾರರು ಬಿಜೆಪಿಯನ್ನು ಬೆಂಬಲಿಸಬೇಕು.

ಬಹುಸಂಖ್ಯಾತರ ಹಿತಾಸಕ್ತಿಗೆ ವಿರುದ್ಧವಾದ ಕಾನೂನುಗಳನ್ನು ತಂದರೆ ವಿಧಾನ ಪರಿಷತ್ತಿನಲ್ಲಿ ಬಿಜೆಪಿ ಅದನ್ನು ತಡೆಹಿಡಿಯುವ ಕೆಲಸ ಮಾಡಲಿದೆ ಎಂದು ಹೇಳಿದರು.

ಈಶಾನ್ಯ ಪದವೀಧರ ಮತಕ್ಷೇತ್ರದಿಂದ ಬಿಜೆಪಿ ಅಮರನಾಥ ಪಾಟೀಲ ಅವರನ್ನು ಕಣಕ್ಕಿಳಿಸಿದೆ. ಈ ಹಿಂದೆ ಪಾಟೀಲರು ಉತ್ತಮ ಸೇವೆ ಮಾಡಿದ್ದಾರೆ. ಆದಕಾರಣ ಪಕ್ಷ ಮತ್ತೆ ಅವರಿಗೆ ಅವಕಾಶ ಕಲ್ಪಿಸಿದೆ. ಖಂಡಿತವಾಗಿಯೂ ಮತದಾರರು ಬಿಜೆಪಿ ಬೆಂಬಲಿಸುವ ಭರವಸೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT