ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು–ಕೊಡಗು ಲೋಕಸಭಾ ಕ್ಷೇತ್ರ: ಪಕ್ಷೇತರರು ಮಾಡುತ್ತಾರಾ ಜಾದು?

ಮೈಸೂರು–ಕೊಡಗು ಲೋಕಸಭಾ ಕ್ಷೇತ್ರದ ಕಣದಲ್ಲಿ ಒಟ್ಟು 18 ಮಂದಿ ಸ್ಪರ್ಧೆ
Published 17 ಏಪ್ರಿಲ್ 2024, 5:49 IST
Last Updated 17 ಏಪ್ರಿಲ್ 2024, 5:49 IST
ಅಕ್ಷರ ಗಾತ್ರ

ಮೈಸೂರು: ರಾಷ್ಟ್ರೀಯ ಪಕ್ಷಗಳ ಇಬ್ಬರು ಘಟಾನುಘಟಿಗಳ ನಡುವೆ ಇತರ 16 ಅಭ್ಯರ್ಥಿಗಳೂ ಈ ಬಾರಿ ಮೈಸೂರು–ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಕಣದಲ್ಲಿದ್ದು, ಸದ್ದಿಲ್ಲದೇ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಪಕ್ಷೇತರರು ಗೆದ್ದರೆ ಇತಿಹಾಸವೇ ಸೃಷ್ಟಿ ಆಗಲಿದೆ.

ಈ ಬಾರಿ ಕಣದಲ್ಲಿ ಕಾಂಗ್ರೆಸ್‌, ಬಿಜೆಪಿ ಅಭ್ಯರ್ಥಿ ಕಣದಲ್ಲಿದ್ದಾರೆ. ಬಿಜೆಪಿ ಅಭ್ಯರ್ಥಿಯನ್ನು ಜೆಡಿಎಸ್‌ ಬೆಂಬಲಿಸಿದೆ. ಇವರಲ್ಲದೇ ಎಸ್‌ಯುಸಿಐಸಿ, ಕರ್ನಾಟಕ ರಾಷ್ಟ್ರ ಸಮಿತಿ, ಸಮಾಜವಾದಿ ಜನತಾ ಪಾರ್ಟಿ, ಅಖಿಲ ಭಾರತ ಹಿಂದೂ ಮಹಾಸಭಾ, ಜಾತ್ಯತೀತ ಪ್ರಜಾಪ್ರಭುತ್ವ ಕಾಂಗ್ರೆಸ್, ಕರುನಾಡು ಪಾರ್ಟಿ, ಉತ್ತಮ ಪ್ರಜಾಕೀಯ ಪಾರ್ಟಿ, ಸೋಷಿಯಲಿಸ್ಟ್‌ ಪಾರ್ಟಿ ಅಭ್ಯರ್ಥಿಗಳು ಸ್ಪರ್ಧೆ ಒಡ್ಡಿದ್ದಾರೆ. ಜೊತೆಗೆ ಇತರ ಏಳು ಮಂದಿ ಸ್ವತಂತ್ರ ಅಭ್ಯರ್ಥಿಗಳಾಗಿ ಸ್ಪರ್ಧೆ ಮಾಡಿದ್ದಾರೆ.

ಚುನಾವಣಾ ಆಯೋಗವು ಸಣ್ಣ ಪಕ್ಷಗಳ ಜೊತೆಗೆ ಪಕ್ಷೇತರರಿಗೆ ಈಗಾಗಲೇ ಚಿಹ್ನೆ ಹಂಚಿಕೆ ಮಾಡಿದೆ. ಸಣ್ಣ ಪಕ್ಷಗಳು ಹಾಗೂ ಸ್ವತಂತ್ರ ಅಭ್ಯರ್ಥಿಗಳು ದೊಡ್ಡ ಮಟ್ಟದಲ್ಲಿ ಸಮಾವೇಶಗಳನ್ನು ಮಾಡದಿದ್ದರೂ ಆಟೊ ಪ್ರಚಾರ, ನಗರದ ಪ್ರಮುಖ ವೃತ್ತಗಳಲ್ಲಿ ಕರಪತ್ರಗಳ ಹಂಚಿಕೆ ಮೂಲಕ ಸಾರ್ವಜನಿಕರನ್ನು ಭೇಟಿ ಆಗುತ್ತಿದ್ದಾರೆ.

ಎರಡು ಬಾರಿ ಪ್ರಬಲ ಸ್ಪರ್ಧೆ: 1952ರಿಂದ ಈವರೆಗಿನ ಲೋಕಸಭಾ ಚುನಾವಣೆಯಲ್ಲಿ ಮೈಸೂರು ಕ್ಷೇತ್ರದಿಂದ ಪಕ್ಷೇತರರು ಗೆದ್ದ ಉದಾಹರಣೆ ಇಲ್ಲ. ಮೊದಲ ಚುನಾವಣೆಯಲ್ಲಿ (1952) ಕಿಸಾನ್ ಮಜ್ದೂರ್‌ ಪಕ್ಷದಿಂದ ಎಂ.ಎಸ್. ಗುರುಪಾದಸ್ವಾಮಿ ಗೆದ್ದಿರುವುದು ಬಿಟ್ಟರೆ ನಂತರದಲ್ಲಿ 1996ರವರೆಗೂ ಇಲ್ಲಿ ಕಾಂಗ್ರೆಸ್ ಗೆಲ್ಲುತ್ತಲೇ ಬಂದಿತ್ತು. 1998ರಲ್ಲಿ ಸಿ.ಎಚ್. ವಿಜಯಶಂಕರ್ ಇಲ್ಲಿ ಬಿಜೆಪಿಗೆ ಮೊದಲ ಗೆಲುವು ತಂದುಕೊಟ್ಟರು. ನಂತರದ ಚುನಾವಣೆಗಳಲ್ಲಿ ಈ ಎರಡು ಪಕ್ಷಗಳ ನಡುವೆ ಗೆಲುವಿನ ಹಾವು ಏಣಿ ಆಟ ನಡೆದಿದೆ. ಜೆಡಿಎಸ್ ಸಹ ಇಲ್ಲಿ ಒಮ್ಮೆಯೂ ಗೆಲ್ಲಲು ಆಗಿಲ್ಲ.

ಒಂದೆರಡು ಚುನಾವಣೆಗಳಲ್ಲಿ ಮಾತ್ರ ಇಲ್ಲಿ ಪಕ್ಷೇತರ ಹಾಗೂ ಇತರೆ ಸಣ್ಣ ಪಕ್ಷಗಳ ಅಭ್ಯರ್ಥಿಗಳು ಪ್ರಬಲ ಪೈಪೋಟಿ ಒಡ್ಡಿದ್ದಾರೆ. 1967ರಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದ ಬಿ.ಎನ್‌. ಕೆಂಗೇಗೌಡ ಒಟ್ಟು ಚಲಾವಣೆಯಾದ ಮತಗಳ ಪೈಕಿ ಶೇ 34.46 (90,566) ಮತ ಗಳಿಕೆ ಮೂಲಕ ಎರಡನೇ ಸ್ಥಾನ ಪಡೆದಿದ್ದರು. ಆ ಚುನಾವಣೆಯಲ್ಲಿ ಕಾಂಗ್ರೆಸ್‌ನ ಎಚ್‌. ತುಳಸಿದಾಸ್ ದಾಸಪ್ಪ ಗೆದ್ದಿದ್ದರು.

1984ರ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿದ್ದ ಕೆ.ಪಿ. ಕೃಷ್ಣಮೂರ್ತಿ ಶೇ 40.44ರಷ್ಟು (1,83,444) ಮತ ಗಳಿಸಿ ಎರಡನೇ ಸ್ಥಾನ ಪಡೆಯುವ ಮೂಲಕ ಕಾಂಗ್ರೆಸ್‌ನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಅವರಿಗೆ ಪೈಪೋಟಿ ಒಡ್ಡಿದ್ದರು.

ಬಿಎಸ್‌ಪಿ ನಾಮಪತ್ರ ತಿರಸ್ಕೃತ; ಯಾರಿಗೆ ಲಾಭ?

ರಾಷ್ಟ್ರೀಯ ಪಕ್ಷವಾದ ಬಹುಜನ ಸಮಾಜ ಪಕ್ಷದ ಅಭ್ಯರ್ಥಿ ರೇವತಿ ರಾಜ್‌ ನಾಮಪತ್ರವು ತಿರಸ್ಕೃತಗೊಂಡಿದ್ದು ಇದು ಯಾರಿಗೆ ಲಾಭವಾಗಬಹುದು ಎನ್ನುವ ಚರ್ಚೆ ನಡೆದಿದೆ. ಬಿಎಸ್‌ಪಿ ಅಭ್ಯರ್ಥಿಗಳು ಕಳೆದ ಯಾವ ಚುನಾವಣೆಗಳಲ್ಲೂ ಗೆಲುವಿನ ಸನಿಹಕ್ಕೆ ಬರಲಾಗದಿದ್ದರೂ ತಕ್ಕ ಪ್ರಮಾಣದಲ್ಲಿ ಮತ ಗಳಿಕೆ ಮಾಡಿದ್ದಾರೆ. 2019ರ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯಾಗಿದ್ದ ಬಿ. ಚಂದ್ರ ಚಲಾವಣೆಯಾದ ಮತಗಳ ಪೈಕಿ ಶೇ 1.87 (24597) ಮತ ತಮ್ಮದಾಗಿಸಿಕೊಂಡಿದ್ದರು. 2014ರ ಚುನಾವಣೆಯಲ್ಲಿ ಇದೇ ಪಕ್ಷದ ಅಭ್ಯರ್ಥಿ ಬಿ. ಮೋಹನಕುಮಾರ್ ಶೇ 1.17 (13 637) ಮತ ಪಡೆದಿದ್ದರು. ಬಿಎಸ್‌ಪಿ ಅಭ್ಯರ್ಥಿ ಗೈರಿನಿಂದ ಕಾಂಗ್ರೆಸ್‌ಗೆ ಲಾಭವಾಗಬಹುದು ಎನ್ನುವ ಲೆಕ್ಕಾಚಾರವಿದೆ. ‘ಬಿಎಸ್‌ಪಿಗೆ ಬರುವ ಮತಗಳು ಕಾಂಗ್ರೆಸ್‌ ಪಾಲಾದರೆ ಕಾಂಗ್ರೆಸ್ ಅಭ್ಯರ್ಥಿ ಗೆಲುವಿನ ಹಾದಿ ಸುಲಭವಾಗಲಿದೆ ಎಂಬ ಲೆಕ್ಕಾಚಾರ ಸಿದ್ದರಾಮಯ್ಯ ಅವರದ್ದು. ತಮ್ಮ ಆಪ್ತನ ಗೆಲುವಿಗೆ ಸಹಕಾರಿ ಆಗಲೆಂದು ಬೇಕಂತಲೇ ನಾಮಪತ್ರ ತಿರಸ್ಕಾರ ಆಗುವಂತೆ ಮಾಡಿದ್ದಾರೆ’ ಎಂದು ಬಿಎಸ್‌ಪಿ ರಾಜ್ಯ ಘಟಕದ ಅಧ್ಯಕ್ಷ ಮಾರಸಂದ್ರ ಮುನಿಯಪ್ಪ ಆರೋಪಿಸುತ್ತಾರೆ.

ಸ್ಪರ್ಧೆಯಲ್ಲಿ ಅಂಬೇಡ್ಕರ್‌ ಯಡ್ಯೂರಪ್ಪ!

ಮೈಸೂರು– ಕೊಡಗು ಕ್ಷೇತ್ರದಲ್ಲಿ ಈ ಬಾರಿ ಹಲವು ವಿಶಿಷ್ಟ ಹೆಸರಿನ ಅಭ್ಯರ್ಥಿಗಳು ಸ್ವತಂತ್ರ ಸ್ಪರ್ಧೆಯ ಮೂಲಕ ಗಮನ ಸೆಳೆದಿದ್ದಾರೆ. ಸಿ.ಜೆ. ಅಂಬೇಡ್ಕರ್ ಎನ್ನುವವರು ಸ್ವತಂತ್ರ ಅಭ್ಯರ್ಥಿಯಾಗಿದ್ದು ಅವರಿಗೆ ಕ್ಯಾಮೆರಾ ಚಿಹ್ನೆ ದೊರೆತಿದೆ. 30 ವರ್ಷ ವಯಸ್ಸಿನವರಾದ ಇವರು ಪಿರಿಯಾಪಟ್ಟಣ ತಾಲ್ಲೂಕಿನ ಚಾಮರಾಯನ ಕೋಟೆಯವರು. ಅವಿವಾಹಿತರಾಗಿರುವ ಇವರು ಟೂಲ್ ಮತ್ತು ಡೈ ಮೇಕಿಂಗ್‌ನಲ್ಲಿ ಡಿಪ್ಲೊಮಾ ಓದಿದ್ದಾರೆ. ಅಂತೆಯೇ ಪಿ.ಎಸ್‌. ಯಡ್ಯೂರಪ್ಪ ಎಂಬುವರು ಸ್ವತಂತ್ರವಾಗಿ ಕಣಕ್ಕೆ ಇಳಿದಿದ್ದು ಹವಾ ನಿಯಂತ್ರಕ ಚಿಹ್ನೆ ಪಡೆದು ಪ್ರಚಾರ ನಡೆಸಿದ್ದಾರೆ. 68 ವರ್ಷ ವಯಸ್ಸಿನವರಾದ ಯಡ್ಯೂರಪ್ಪ ಪಿರಿಯಾಪಟ್ಟಣದವರಾಗಿದ್ದಾರೆ.

ಒಬ್ಬರೇ ಮಹಿಳಾ ಅಭ್ಯರ್ಥಿ!

17 ಪುರುಷರ ಜೊತೆಗೆ ಈ ಬಾರಿ ಕಣದಲ್ಲಿ ಏಕೈಕ ಮಹಿಳಾ ಅಭ್ಯರ್ಥಿ ಕಣದಲ್ಲಿ ಇರುವುದು ವಿಶೇಷ. ಉತ್ತಮ ಪ್ರಜಾಕೀಯ ಪಕ್ಷದಿಂದ ಜೆ.ಎಸ್‌. ಲೀಲಾವತಿ ಎಂಬುವರು ಸ್ಪರ್ಧೆ ಮಾಡಿದ್ದು ಆಟೊರಿಕ್ಷಾ ಚಿಹ್ನೆಯಡಿ ಮತಯಾಚನೆ ಮಾಡುತ್ತಿದ್ದಾರೆ. 53 ವಯಸ್ಸಿನವರಾದ ಲೀಲಾವತಿ ಮೈಸೂರಿನ ಎಸ್‌ವಿಪಿ ನಗರ ನಿವಾಸಿಯಾಗಿದ್ದು ಎಸ್ಸೆಸ್ಸೆಲ್ಸಿವರೆಗೆ ಓದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT