ಭಾನುವಾರ, 21 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಮಗಳೂರು | ಚುನಾವಣೆ: 551 ಗೃಹರಕ್ಷಕರು ಸಜ್ಜು

Published 1 ಏಪ್ರಿಲ್ 2024, 6:07 IST
Last Updated 1 ಏಪ್ರಿಲ್ 2024, 6:07 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಕಡಿಮೆ ಭತ್ಯೆ, ನಿರಂತರ ಕೆಲಸ ಇಲ್ಲ. ಆದರೂ, ಚುನಾವಣೆ ಬಂದೋ ಬಸ್ತ್‌ನಲ್ಲಿ ಪೊಲೀಸರಿಗ ಹೆಗಲು ಕೊಡಲು 551 ಗೃಹ ರಕ್ಷಕರು ಸಜ್ಜಾಗಿದ್ದಾರೆ. 

ಜಾತ್ರೆ, ದತ್ತ ಜಯಂತಿ, ಉರುಸ್ ಸಂದರ್ಭದಲ್ಲಿ ಬಂದೋಬಸ್‌ಗೆ ಪೊಲೀಸರಿಗೆ ನೆರವಾಗುವ ಗೃಹ ರಕ್ಷಕ ದಳದ ಸಿಬ್ಬಂದಿ, ಈಗ ಬರಲಿರುವ ಚುನಾವಣೆಯಲ್ಲೂ ಬಂದೋಬಸ್ತ್‌ಗೆ ನೆರವಾಗಲು ತಯಾರಾಗಿದ್ದಾರೆ.

ಜಿಲ್ಲೆಯಲ್ಲಿ ಒಟ್ಟು 551 ಗೃಹ ರಕ್ಷಕ ಸಿಬ್ಬಂದಿ ಇದ್ದು, ಎಲ್ಲರನ್ನೂ ಚುನಾ ವಣಾ ಬಂದೋಬಸ್ತ್ ಕರ್ತವ್ಯಕ್ಕೆ ನಿಯೋಜಿಸಲು ಪೊಲೀಸ್ ಇಲಾಖೆ ಕೇಳಿದೆ. ಕಳೆದ ಚುನಾವಣೆಯಲ್ಲಿ 458 ಗೃಹ ರಕ್ಷಕರನ್ನು ನೇಮಿಸಿಕೊಳ್ಳ ಲಾಗಿದ್ದು, ದಿನಕ್ಕೆ ₹750 ಭತ್ಯೆ ಪಡೆದಿದ್ದಾರೆ. ಈ ವರ್ಷ ₹800 ನಿಗದಿ ಮಾಡಲಾಗಿದೆ. ದಿನವಿಡಿ ಪೊಲೀಸರಂತೆಯೇ ಬಂದೋಬಸ್ತ್‌ ಕರ್ತವ್ಯ ನಿರ್ವಹಿಸುವ ಗೃಹ ರಕ್ಷಕರಿಗೆ ಹೆಚ್ಚಿನ ಭತ್ಯೆ ನೀಡಬೇಕು ಎಂಬುದು ಅವರ ಒತ್ತಾಯ. 

ಚುನಾವಣೆ, ದತ್ತ ಜಯಂತಿ ರೀತಿಯ ಬಂದೋಬಸ್ತ್‌ಗೆ ದಿನಕ್ಕೆ ₹800 ಭತ್ಯೆ ನಿಗದಿ ಮಾಡಲಾಗಿದೆ. ಪೊಲೀಸ್ ಠಾಣೆಯಲ್ಲಿ ಮಾಸಿಕ ಕರ್ತವ್ಯ ನಿರ್ವಹಣೆಗೆ ₹800, ಕಾರಾಗೃಹ, ಸಾರಿಗೆ ಇಲಾಖೆ, ಪ್ರವಾಸೋದ್ಯಮ ಇಲಾಖೆಗಳ ಕರ್ತವ್ಯಕ್ಕೆ ₹600, ಕೆಎಸ್‌ಆರ್‌ಟಿಸಿ ಮತ್ತು ಗೃಹ ರಕ್ಷಕ ದಳದ ಕಚೇರಿ ಕರ್ತವ್ಯಕ್ಕೆ ₹500 ಭತ್ಯೆ ನಿಗದಿ ಮಾಡಲಾಗಿದೆ.

ಇದಲ್ಲದೇ ವಾರಕ್ಕೊಮ್ಮೆ ಕವಾಯತಿಗೆ ಹಾಜರಾದರೆ ₹100 ಭತ್ಯೆ ಸಿಗಲಿದೆ. ತರಬೇತಿಗೆ ಹಾಜರಾದರೆ ₹500ರಿಂದ ₹600 ಭತ್ಯೆ ನಿಗದಿ ಮಾಡಲಾಗಿದೆ. ಗೃಹ ರಕ್ಷಕ ಸಿಬ್ಬಂದಿಗೆ ಪ್ರತಿನಿತ್ಯ ಕೆಲಸ ಇರುವುದಿಲ್ಲ. ಬಂದೋಬಸ್ತ್‌ಗೆ ಪೊಲೀಸ್ ಇಲಾಖೆ ಕೇಳಿದರೆ ಮಾತ್ರ ಅವಕಾಶ ಸಿಗಲಿದೆ. ಇಲ್ಲದಿದ್ದರೆ ಪೊಲೀಸ್ ಠಾಣೆಗಳಿಗೆ ತಿಂಗಳಿಗೆ 70 ಜನರಿಗೆ ಕೆಲಸ ಸಿಗಲಿದೆ. ಇರುವ ಸಿಬ್ಬಂದಿಯನ್ನು ರೊಟೇಷನ್ ಆಧಾರದಲ್ಲಿ  ಈ ಕರ್ತವ್ಯಕ್ಕೆ ನಿಯೋಜಿಸಲಾಗುವುದು. ಆರು ತಿಂಗಳಿಗೊಮ್ಮೆ ಒಂದು ತಿಂಗಳ ಕರ್ತವ್ಯ ಸಿಗಲಿದೆ ಎಂದು ಗೃಹ ರಕ್ಷಕ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.

ಚಿಕ್ಕಮಗಳೂರು, ಕಳಸಾಪುರ, ಬೆಳವಾಡಿ, ಸಖರಾಯಪಟ್ಟಣ, ಕಡೂರು, ಬೀರೂರು, ಲಿಂಗದಹಳ್ಳಿ, ತರೀಕೆರೆ, ಕಾಟಿಗನೆರೆ, ಜಾವೂರು, ಕೋಚಿಹಳ್ಳಿ, ಅಜ್ಜಂಪುರ, ಮೂಡಿಗೆರೆ, ಬಾಳೆಹೊನ್ನೂರು, ಹರಿಹರಪುರ, ಜಯಪುರ, ಕೊಪ್ಪ, ಎನ್‌.ಆರ್.ಪುರ ಸೇರಿ 20 ಕಡೆ ಘಟಕ ಮತ್ತು ಉಪಘಟಕಗಳಿದ್ದು, ಪ್ರತಿವಾರ ಅಲ್ಲಿಯೇ ಕವಾಯತು ನಡೆಯಲಿದೆ ಎಂದು ವಿವರಿಸಿದರು.

ಕೃಷಿಕರು, ಚಾಲಕರು, ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುವವರು ಹೆಚ್ಚಿನ ಸಂಖ್ಯೆಯಲ್ಲಿ ಗೃಹ ರಕ್ಷಕ ಸೇವೆ ನೀಡುತ್ತಿದ್ದಾರೆ. ಬಂದೋಬಸ್ತ್ ಇದ್ದಾಗ ಮಾಹಿತಿ ನೀಡಿ ಕರೆಸಲಾಗುತ್ತದೆ ಎಂದು ತಿಳಿಸಿದರು.

ಸದ್ಯ 551 ಗೃಹ ರಕ್ಷಕ ಸಿಬ್ಬಂದಿ ಇದ್ದು, ಹೆಚ್ಚುವರಿಯಾಗಿ 120 ಜನರ ನೇಮಕಕ್ಕೆ ಪ್ರಕ್ರಿಯೆ ನಡೆಯುತ್ತಿದೆ. ಚುನಾವಣೆ ವೇಳೆಗೆ ಅವರಿಗೂ ತರಬೇತಿ ಪೂರ್ಣಗೊಳಿಸಿ ಕರ್ತವ್ಯಕ್ಕೆ ನಿಯೋಜಿಸಲು ಪೊಲೀಸ್ ಇಲಾಖೆ ಕೇಳಿದೆ ಎಂದರು.

452 ಖಾಸಗಿ ವಾಹನ ಬಳಕೆ

ಚುನಾವಣಾ ಕರ್ತವ್ಯಕ್ಕೆ ಖಾಸಗಿಯಿಂದ ಒಟ್ಟು 452 ವಾಹನ ಪಡೆದುಕೊಳ್ಳಲು ಜಿಲ್ಲಾಡಳಿತ ಸಿದ್ಧತೆ ನಡೆಸಿದೆ. ಮತದಾನದ ದಿನಕ್ಕೆ ಖಾಸಗಿ ವಾಹನಗಳು ಅಗತ್ಯವಿದ್ದು, ಪೂರ್ವ ಸಿದ್ಧತೆ ಮತ್ತು ನೀತಿ ಸಂಹಿತೆ ಪಾಲನೆಗೆ ಸರ್ಕಾರಿ ವಾಹನಗಳನ್ನೇ ಬಳಸಲಾಗುತ್ತಿದೆ. ಮತದಾನದ ದಿನಕ್ಕೆ ಮತಯಂತ್ರಗಳು ಮತ್ತು ಸಿಬ್ಬಂದಿ ಕರೆದೊಯ್ಯಲು ಕೆಎಸ್‌ಆರ್‌ಟಿಸಿಯ ಕರ್ನಾಟಕ ಸಾರಿಗೆ ಬಸ್‌ 150, ಮಿನಿ ಬಸ್ 18 , ಖಾಸಗಿ ಮಿನಿ ಬಸ್ 37,ತೂಫಾನ್ ಜೀಪು 77 , ಟೆಂಪೊ ಟ್ರಾವೆಲರ್ ಮಿನಿ ಬಸ್ 15,  ಜೀಪ್‌ಗಳು 155 ಬೇಕಾಗಬಹುದು ಎಂದು ಅಂದಾಜಿಸಿದೆ.

ವಿಧಾನಸಭೆ ಚುನಾವಣೆ ವೇಳೆ ಬಳಕೆ ಮಾಡಿಕೊಂಡಿದ್ದ ಖಾಸಗಿ ವಾಹನಗಳ ಬಾಡಿಗೆ ಯಾವುದೂ ಬಾಕಿ ಇಲ್ಲ. ಎಲ್ಲವನ್ನೂ ಪಾವತಿಸಲಾಗಿದೆ ಎಂದು ಜಿಲ್ಲಾಡಳಿತದ ಅಧಿಕಾರಿಗಳು ಮಾಹಿತಿ ನೀಡಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT