ಬುಧವಾರ, 17 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭಾ ಚುನಾವಣೆ | 16 ‘ಕೈ’ ಅಭ್ಯರ್ಥಿಗಳು ಅಖೈರು

Published 19 ಮಾರ್ಚ್ 2024, 23:39 IST
Last Updated 19 ಮಾರ್ಚ್ 2024, 23:39 IST
ಅಕ್ಷರ ಗಾತ್ರ

ನವದೆಹಲಿ: ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಕರ್ನಾಟಕದ 16 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಕಾಂಗ್ರೆಸ್‌ ಮಂಗಳವಾರ ಅಖೈರುಗೊಳಿಸಿದೆ. 5 ಅಥವಾ ಆರು ಕ್ಷೇತ್ರಗಳಿಗೆ ಹುರಿಯಾಳುಗಳ ಹೆಸರನ್ನು ಅಂತಿಮಗೊಳಿಸಲು ಬಿಜೆಪಿ ನಾಯಕರು ತಡರಾತ್ರಿವರೆಗೆ ಕಸರತ್ತು ನಡೆಸಿದರು. 

ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಧ್ಯಕ್ಷತೆಯಲ್ಲಿ ಪಕ್ಷದ ಕೇಂದ್ರ ಕಚೇರಿಯಲ್ಲಿ ಕೇಂದ್ರ ಚುನಾವಣಾ ಸಮಿತಿಯ ಸಭೆ ಸುಮಾರು ಮೂರು ಗಂಟೆಗಳ ಕಾಲ ಸಭೆ ನಡೆಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಕೇಂದ್ರ ಚುನಾವಣಾ ಸಮಿತಿ ಸದಸ್ಯ ಕೆ.ಜೆ.ಜಾರ್ಜ್‌ ಮತ್ತಿತರರು ಭಾಗಿಯಾದರು. 

ಕಾಂಗ್ರೆಸ್‌ ಈಗಾಗಲೇ ಏಳು ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದೆ. 21 ಕ್ಷೇತ್ರಗಳ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಯಿತು. ಕೆಲವು ಕ್ಷೇತ್ರಗಳಲ್ಲಿ ಆಕಾಂಕ್ಷಿಗಳ ತೀವ್ರ ಪೈಪೋಟಿ ಇರುವುದರಿಂದ ಸಭೆ ಅಪೂರ್ಣವಾಯಿತು. ಕಾಂಗ್ರೆಸ್‌ ನಾಯಕರು ಬುಧವಾರ ಮತ್ತೆ ಸಭೆ ಸೇರಲಿದ್ದಾರೆ. ಕಾಂಗ್ರೆಸ್‌ನ ಎರಡನೇ ಪಟ್ಟಿ ಗುರುವಾರ ಪ್ರಕಟವಾಗುವ ಸಾಧ್ಯತೆ ಇದೆ. 

ಕೋಲಾರ ಕ್ಷೇತ್ರದಲ್ಲಿ ತಮ್ಮ ಕುಟುಂಬ ಸದಸ್ಯರಿಗೆ ಟಿಕೆಟ್‌ ನೀಡಬೇಕು ಎಂದು ಆಹಾರ ಸಚಿವ ಕೆ.ಎಚ್‌.ಮುನಿಯಪ್ಪ ಪಟ್ಟು ಹಿಡಿದಿದ್ದಾರೆ. ಕಳೆದ ಎರಡು ದಿನಗಳಲ್ಲಿ ನವದೆಹಲಿಯಲ್ಲಿ ವಾಸ್ತವ್ಯ ಹೂಡಿರುವ ಅವರು ಹೈಕಮಾಂಡ್‌ನ ನಾಯಕರನ್ನು ಭೇಟಿ ಮಾಡಿ ಲಾಬಿ ನಡೆಸಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ಈ ಸಲ ಕುಟುಂಬ ಸದಸ್ಯರಿಗೆ ಅವಕಾಶ ನೀಡಬೇಕು ಎಂದು ಹಕ್ಕೊತ್ತಾಯ ಮಂಡಿಸಿದ್ದಾರೆ. ಸಭೆಗೆ ಮುನ್ನ ಎಐಸಿಸಿ ಕಚೇರಿಗೆ ದೌಡಾಯಿಸಿದ ಮುನಿಯಪ್ಪ ಅವರು ಹೈಕಮಾಂಡ್‌ನ ನಾಯಕರನ್ನು ಭೇಟಿ ಮಾಡಿ ಕೊನೆ ಕ್ಷಣದ ಪ್ರಯತ್ನ ನಡೆಸಿದರು. ಮುನಿಯಪ್ಪ ಕುಟುಂಬ ಸದಸ್ಯರಿಗೆ ಟಿಕೆಟ್‌ ನೀಡುವುದಕ್ಕೆ ಉನ್ನತ ಶಿಕ್ಷಣ ಸಚಿವ ಎಂ.ಸಿ.ಸುಧಾಕರ್, ಶಾಸಕ ಕೊತ್ತೂರು ಮಂಜುನಾಥ್‌ ಹಾಗೂ ಮಾಜಿ ಸಚಿವ ಕೆ.ಆರ್‌.ರಮೇಶ್‌ ಕುಮಾರ್ ಬಣದ ತೀವ್ರ ವಿರೋಧ ಇದೆ. ಮಾದಿಗ ಸಮುದಾಯಕ್ಕೆ ಸೇರಿದ ರಾಜ್ಯಸಭೆಯ ಮಾಜಿ ಸದಸ್ಯ ಡಾ.ಎಲ್‌.ಹನುಮಂತಯ್ಯ ಅವರನ್ನು ಕಣಕ್ಕೆ ಇಳಿಸಬೇಕು ಎಂದು ಈ ಬಣದವರು ಒತ್ತಡ ಹೇರಿದ್ದಾರೆ. ಅವರನ್ನು ಗೆಲ್ಲಿಸಿಕೊಂಡು ಬರುವ ಹೊಣೆ ತಮ್ಮದು ಎಂದು ಕೇಂದ್ರ ನಾಯಕರಿಗೆ ಭರವಸೆ ನೀಡಿದ್ದಾರೆ. ಈ ಕ್ಷೇತ್ರದ ಕಗ್ಗಂಟನ್ನು ಬಗೆಹರಿಸಲು ಸಾಧ್ಯವಾಗಿಲ್ಲ.

ಚಿತ್ರದುರ್ಗ ಕ್ಷೇತ್ರದಲ್ಲಿ ಬಿ.ಎನ್‌.ಚಂದ್ರಪ್ಪ ಅವರಿಗೆ ಟಿಕೆಟ್‌ ನೀಡುವುದಕ್ಕೆ ಹೈಕಮಾಂಡ್‌ಗೆ ಒಲವಿದೆ. ‘ಚಂದ್ರಪ್ಪ ಅವರು ಮೂಲತಃ ಕ್ಷೇತ್ರದವರು ಅಲ್ಲ. ಕ್ಷೇತ್ರದ ಹೊರಗಿನವರಿಗೆ ಟಿಕೆಟ್‌ ನೀಡುವುದು ಸರಿಯಲ್ಲ. ಕಳೆದ ಕೆಲವು ಅವಧಿಗಳಿಂದ ಕ್ಷೇತ್ರದ ಹೊರಗಿನವರೇ ಸಂಸದರಾಗಿ ಆಯ್ಕೆಯಾಗುತ್ತಿದ್ದಾರೆ. ಅದರ ಬದಲು 2009ರ ಸ್ಪರ್ಧಿಸಿದ ತಿಪ್ಪೇಸ್ವಾಮಿ ಅವರಿಗೆ ಅವಕಾಶ ನೀಡಬೇಕು’ ಎಂದು ಜಿಲ್ಲೆಯ ಕಾಂಗ್ರೆಸ್‌ ಶಾಸಕರು ಒತ್ತಾಯಿಸಿದ್ದಾರೆ. ಯುವ ಕೋಟಾದಡಿ ಪುತ್ರ ವಿನಯ್‌ ತಿಮ್ಮಾಪುರ ಅವರನ್ನು ಹುರಿಯಾಳುವನ್ನಾಗಿ ಮಾಡಬೇಕು ಎಂದು ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಪಟ್ಟು ಹಿಡಿದಿದ್ದಾರೆ. ಸ್ಥಳೀಯರು–ಹೊರಗಿನವರ ಪೈಪೋಟಿಯಿಂದಾಗಿ ಟಿಕೆಟ್‌ ವಿವಾದ ಇತ್ಯರ್ಥವಾಗಿಲ್ಲ. 

ಚಿಕ್ಕಬಳ್ಳಾಪುರದಲ್ಲಿ ರಕ್ಷಾ ರಾಮಯ್ಯ ಹಾಗೂ ಎಚ್.ಎನ್‌.ಶಿವಶಂಕರ ರೆಡ್ಡಿ ಅವರ ನಡುವೆ ಪೈಪೋಟಿ ತೀವ್ರವಾಗಿದೆ. ಶಿವಶಂಕರ ರೆಡ್ಡಿ ಅವರಿಗೆ ಟಿಕೆಟ್‌ ನಿರಾಕರಿಸಿದರೆ ಪಕ್ಷಾಂತರ ಮಾಡಬಹುದು ಎಂಬ ಭಯವೂ ಕಾಂಗ್ರೆಸ್‌ ನಾಯಕರಿಗೆ ಕಾಡುತ್ತಿದೆ. ಜಿಲ್ಲೆಯ ಕೆಲವು ಶಾಸಕರು ರೆಡ್ಡಿ ಅವರ ಬೆನ್ನಿಗೆ ನಿಂತಿದ್ದಾರೆ. 

ಚಾಮರಾಜನಗರದಲ್ಲಿ ಪುತ್ರ ಸುನೀಲ್‌ ಬೋಸ್‌ ಅವರಿಗೆ ಟಿಕೆಟ್‌ ಕೊಡಿಸಲು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದಾರೆ. ‘ಪುತ್ರನಿಗೆ ಎರಡು–ಮೂರು ಸಲ ಅವಕಾಶ ನಿರಾಕರಿಸಲಾಗಿದೆ. ಪಕ್ಷಕ್ಕಾಗಿ ದುಡಿದಿರುವ ಪುತ್ರನಿಗೆ ಅವಕಾಶ ನೀಡಲೇಬೇಕು’ ಎಂದು ಮಹದೇವಪ್ಪ ಹಠ ಹಿಡಿದಿದ್ದಾರೆ. ಬೋಸ್‌ ಅಭ್ಯರ್ಥಿತನಕ್ಕೆ ಜಿಲ್ಲೆಯ ಕಾಂಗ್ರೆಸ್‌ ಶಾಸಕರ ವಿರೋಧವಿದೆ. ಮಾಜಿ ಶಾಸಕ ನಂಜುಂಡಸ್ವಾಮಿ ಅವರ ಹೆಸರು ಮುನ್ನೆಲೆಗೆ ಬಂದಿದೆ. ಕಳೆದ ಎರಡು ದಿನಗಳಿಂದ ರಾಷ್ಟ್ರ ರಾಜಧಾನಿಯಲ್ಲಿ ಬೀಡು ಬಿಟ್ಟಿರುವ ನಂಜುಂಡಸ್ವಾಮಿ ಅವರು ಹೈಕಮಾಂಡ್‌ನ ನಾಯಕರನ್ನು ಭೇಟಿ ಮಾಡಿ ಅವಕಾಶ ನೀಡುವಂತೆ ಕೋರಿಕೊಂಡಿದ್ದಾರೆ. 

ಸಚಿವರ ಮಕ್ಕಳು ಕಣಕ್ಕೆ

ಬಾಗಲಕೋಟೆಯಿಂದ ಸಕ್ಕರೆ ಸಚಿವ ಶಿವಾನಂದ ಪಾಟೀಲ ಪುತ್ರಿ ಸಂಯುಕ್ತ ಪಾಟೀಲ, ಚಿಕ್ಕೋಡಿಯಲ್ಲಿ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಪುತ್ರಿ ಪ್ರಿಯಾಂಕಾ ಜಾರಕಿಹೊಳಿ ಹಾಗೂ ಬೆಳಗಾವಿಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಪುತ್ರ ಮೃಣಾಲ್ ಹೆಬ್ಬಾಳಕರ ಹೆಸರನ್ನು ಅಂತಿಮಗೊಳಿಸಲಾಗಿದೆ. ಈ ಮೂಲಕ ಮೂರು ಕ್ಷೇತ್ರಗಳಲ್ಲಿ ಸಚಿವರ ಮಕ್ಕಳಿಗೆ ಮಣೆ ಹಾಕಲಾಗಿದೆ.

ದಾವಣಗೆರೆಯಲ್ಲಿ ಗಣಿ ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ ಪತ್ನಿ ಪ್ರಭಾ ಅವರನ್ನು ಕಣಕ್ಕಿಳಿಸಲಾಗುತ್ತಿದೆ. ಕಲಬುರಗಿ ಕ್ಷೇತದಲ್ಲಿ ಮಲ್ಲಿಕಾರ್ಜುನ ಖರ್ಗೆ ಅಳಿಯ ರಾಧಾಕೃಷ್ಣ ದೊಡ್ಡಮನಿ ಅವರ ಹೆಸರನ್ನು ಬಹುತೇಕ ಅಂತಿಮಗೊಳಿಸಲಾಗಿದೆ. ಬುಧವಾರದ ಸಭೆಯಲ್ಲಿ ಮತ್ತೊಂದು ಸುತ್ತು ಚರ್ಚೆ ಮಾಡಲು ತೀರ್ಮಾನಿಸಲಾಗಿದೆ ಎಂದು ಮೂಲಗಳು ಹೇಳಿವೆ. 

21 ಕ್ಷೇತ್ರಗಳ ಬಗ್ಗೆಯೂ ಇಂದಿನ ಸಭೆಯಲ್ಲಿ ಚರ್ಚಿಸಲಾಗಿದೆ. 2–3 ಕ್ಷೇತ್ರಗಳನ್ನು ಹೊರತುಪಡಿಸಿ ಉಳಿದ ಕ್ಷೇತ್ರಗಳ ಚರ್ಚೆ ಪೂರ್ಣಗೊಂಡಿದೆ. ಬುಧವಾರ ಇನ್ನೊಂದು ಸುತ್ತಿನ ಸಭೆ ನಡೆಸಿ ಪಟ್ಟಿ ಅಂತಿಮಗೊಳಿಸಲಾಗುತ್ತದೆ .
ಡಿ.ಕೆ. ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ

ಮೂವರ ಚಿತ್ತ ಕಾಂಗ್ರೆಸ್‌ನತ್ತ?

ಬೆಂಗಳೂರು: ಬಿಜೆಪಿಯಲ್ಲಿ ಟಿಕೆಟ್‌ ಸಿಗದೇ ಅಸಮಾಧಾನಗೊಂಡಿರುವ ಸಂಸದರಾದ ಡಿ.ವಿ.ಸದಾನಂದಗೌಡ, ಕರಡಿ ಸಂಗಣ್ಣ, ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ಕಾಂಗ್ರೆಸ್‌ನತ್ತ ವಾಲುತ್ತಿದ್ದಾರೆ. ಪಕ್ಷದ ವರಿಷ್ಠರ ಬಗ್ಗೆ ಮುನಿಸಿಕೊಂಡಿರುವ ಸದಾನಂದಗೌಡ ಅವರು ಮಂಗಳವಾರ ಒಕ್ಕಲಿಗರ ಸಂಘದ ಪದಾಧಿಕಾರಿಗಳ ಜತೆ ಸಭೆ ನಡೆಸಿ, ಪಕ್ಷದಲ್ಲಿ ಒಕ್ಕಲಿಗರಿಗೆ ಅನ್ಯಾಯವಾದರೆ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು. ತಮ್ಮ ಮುಂದಿನ ರಾಜಕೀಯ ನಡೆಯನ್ನು ಬುಧವಾರ ಸುದ್ದಿಗೋಷ್ಠಿ ನಡೆಸಿ ಬಹಿರಂಗ ಪಡಿಸುವುದಾಗಿಯೂ ತಿಳಿಸಿದರು.

ಜೆ.ಸಿ.ಮಾಧುಸ್ವಾಮಿ ಅವರಿಗೆ ಕಾಂಗ್ರೆಸ್‌ ಬಲೆ ಬೀಸಿದ್ದು, ಲೋಕಸಭೆ ಟಿಕೆಟ್‌ ಅಥವಾ ವಿಧಾನಪರಿಷತ್‌ ಸದಸ್ಯತ್ವ ನೀಡುವುದಾಗಿ ಭರವಸೆ ನೀಡಿದೆ. ಒಂದೆರಡು ದಿನಗಳಲ್ಲಿ ಅವರು ತಮ್ಮ ನಿರ್ಣಯ ಪ್ರಕಟಿಸಲಿದ್ದಾರೆ ಎಂದು ಮೂಲಗಳು ಹೇಳಿವೆ. ‘ಅಂತಹ ಪ್ರಯತ್ನಗಳು ನಡೆದಿಲ್ಲ, ಮುಂದೆ ನೋಡೋಣ’ ಎಂದಷ್ಟೇ ಮಾಧುಸ್ವಾಮಿ ಪ್ರತಿಕ್ರಿಯಿಸಿದ್ದಾರೆ.

ಕರಡಿ ಸಂಗಣ್ಣ ಅವರನ್ನೂ ಕಾಂಗ್ರೆಸ್‌ ನಾಯಕರು ಸಂಪರ್ಕಿಸಿದ್ದು, ‘ಲೋಕಸಭೆಗೆ ಟಿಕೆಟ್‌ ನೀಡಲು ಸಾಧ್ಯವಿಲ್ಲ. ವಿಧಾನಪರಿಷತ್‌ಗೆ ನಾಮನಿರ್ದೇಶನ ಮಾಡುವುದಾಗಿ ಆಶ್ವಾಸನೆ ಕೊಟ್ಟಿದೆ. ಗುರುವಾರ ತಮ್ಮ ಬೆಂಬಲಿಗರ ಸಭೆಯಲ್ಲಿ ಚರ್ಚಿಸಿ, ಮುಂದಿನ ನಿರ್ಧಾರ ಪ್ರಕಟಿಸುವುದಾಗಿ ಸಂಗಣ್ಣ ತಿಳಿಸಿದ್ದಾರೆ

‘ಮೈತ್ರಿಯಲ್ಲಿ ಸಮಸ್ಯೆ ಇಲ್ಲ’

ಬೆಂಗಳೂರು: ಸೀಟು ಹಂಚಿಕೆ ಮತ್ತು ಪ್ರಚಾರದ ವಿಚಾರದಲ್ಲಿ ಬಿಜೆಪಿ ತಮ್ಮನ್ನು ಗೌರವಯುತವಾಗಿ ನಡೆಸಿಕೊಳ್ಳುತ್ತಿಲ್ಲ ಎಂದು ಸೋಮವಾರ ಅಸಮಾಧಾನ ಹೊರಹಾಕಿದ್ದ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ, ‘ಬಿಜೆಪಿ–ಜೆಡಿಎಸ್‌ ಮೈತ್ರಿಕೂಟ ದಲ್ಲಿ ಯಾವ ಸಮಸ್ಯೆಯೂ ಇಲ್ಲ’ ಎಂದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜೆಡಿಎಸ್‌ನ ಮೂವರು ಮತ್ತು ಬಿಜೆಪಿಯ 25 ಅಭ್ಯರ್ಥಿಗಳ ಗೆಲುವಿಗೆ ನಾವು ಒಗ್ಗಟ್ಟಿನಿಂದ ಹೋರಾಡುತ್ತೇವೆ. ನಾನು ಹೃದಯದ ಚಿಕಿತ್ಸೆಗಾಗಿ ಚೆನ್ನೈಗೆ ತೆರಳುತ್ತಿದ್ದೇನೆ. ಈ ಕಾರಣದಿಂದ ಮೈತ್ರಿ ಧರ್ಮವನ್ನು ಪಾಲಿಸಿಕೊಂಡು ಒಟ್ಟಾಗಿ ಚುನಾವಣಾ ಪ್ರಚಾರ ನಡೆಸುವಂತೆ ಎರಡೂ ಪಕ್ಷಗಳ ಮುಖಂಡರು, ಕಾರ್ಯಕರ್ತರಿಗೆ ಸೋಮವಾರ ಮನವಿ ಮಾಡಿದ್ದೆ. ನಮ್ಮ ಮಧ್ಯೆ ಯಾವ ಗೊಂದಲವೂ ಇಲ್ಲ’ ಎಂದು ಹೇಳಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT