ಮಂಗಳವಾರ, 8 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

‘ಖಾನಾಪುರ’ ಇತಿಹಾಸ ಮರುಕಳಿಸುವರೇ ಅಂಜಲಿ?

15 ವರ್ಷದ ಬಳಿಕ ಮಹಿಳಾ ಅಭ್ಯರ್ಥಿಗೆ ಮಣೆ ಹಾಕಿದ ಕಾಂಗ್ರೆಸ್
Published : 22 ಮಾರ್ಚ್ 2024, 5:49 IST
Last Updated : 22 ಮಾರ್ಚ್ 2024, 5:49 IST
ಫಾಲೋ ಮಾಡಿ
Comments

ಕಾರವಾರ: ಉತ್ತರ ಕನ್ನಡ ಲೋಕಸಭೆ ಕ್ಷೇತ್ರವನ್ನು ಈ ಬಾರಿಯಾದರೂ ವಶಕ್ಕೆ ಪಡೆಯಬೇಕು ಎಂದು ಹವಣಿಸುತ್ತಿರುವ ಕಾಂಗ್ರೆಸ್ ಬಿಜೆಪಿ ವಿರುದ್ಧ ಮಹಿಳಾ ಅಭ್ಯರ್ಥಿ ಕಣಕ್ಕೆ ಇಳಿಸಿದೆ. 67 ವರ್ಷದ ಬಳಿಕ ಖಾನಾಪುರದಲ್ಲಿ ಪಕ್ಷಕ್ಕೆ ಗೆಲುವು ತಂದುಕೊಟ್ಟ ಸಾಧನೆ ಮೆರೆದ ಡಾ.ಅಂಜಲಿ ನಿಂಬಾಳ್ಕರ್ ಅವರು ಹೊಸ ‘ಇತಿಹಾಸ’ ಬರೆಯಬಹುದು ಎಂಬ ನಿರೀಕ್ಷೆಯನ್ನು ಪಕ್ಷ ಇಟ್ಟುಕೊಂಡಿದೆ.

ಬೆಳಗಾವಿ ಜಿಲ್ಲೆಗೆ ಸೇರುವ, ಆದರೆ ಉತ್ತರ ಕನ್ನಡ ಲೋಕಸಭೆ ಕ್ಷೇತ್ರ ವ್ಯಾಪ್ತಿಗೆ ಒಳಪಡುವ ‘ಖಾನಾಪುರ’ ಕ್ಷೇತ್ರ ಎಂ.ಇ.ಎಸ್, ಬಿಜೆಪಿ ಪ್ರಾಬಲ್ಯದಲ್ಲಿದೆ. ಈ ಕ್ಷೇತ್ರದಲ್ಲಿ 2018ರಲ್ಲಿ ಕಾಂಗ್ರೆಸ್ ಪಕ್ಷದಿಂದ ಶಾಸಕರಾಗಿದ್ದ ಅಂಜಲಿ, ವಿಧಾನಸೌಧದಲ್ಲಿ ಕನ್ನಡದಲ್ಲೇ ಮಾತನಾಡಿದ ಖಾನಾಪುರದ ಮೊದಲ ಶಾಸಕಿ ಎಂಬ ಕೀರ್ತಿ ಪಡೆದಿದ್ದರು. ಈಗ ಅವರು ಉತ್ತರ ಕನ್ನಡ ಲೋಕಸಭೆ ಕ್ಷೇತ್ರದಿಂದ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

ವೃತ್ತಿಯಲ್ಲಿ ವೈದ್ಯೆಯಾಗಿರುವ ಡಾ.ಅಂಜಲಿ ನಿಂಬಾಳ್ಕರ್ ಸ್ತ್ರೀರೋಗ, ಪ್ರಸೂತಿ ತಜ್ಞೆಯಾಗಿ ಹೆಸರು ಮಾಡಿದ್ದಾರೆ. ಲೋಕಸಭೆ ಕ್ಷೇತ್ರದಲ್ಲಿ ನಿರ್ಣಾಯಕ ಪಾತ್ರವಹಿಸುವ ಮರಾಠಾ ಸಮುದಾಯಕ್ಕೆ ಸೇರಿದ್ದಾರೆ. ಅಲ್ಲದೆ ಕ್ಷೇತ್ರದಲ್ಲಿ 8 ಲಕ್ಷದಷ್ಟು ಮಹಿಳಾ ಮತದಾರರೂ ಇರುವುದರಿಂದ ಹೆಚ್ಚು ಮತ ಸೆಳೆಯುವ ಲೆಕ್ಕಾಚಾರದೊಂದಿಗೆ ಕಾಂಗ್ರೆಸ್ ಅವರನ್ನು ಕಣಕ್ಕಿಳಿಸಿರಬಹುದು ಎಂಬ ಲೆಕ್ಕಾಚಾರವಿದೆ.

1996 ರಿಂದ ಕಾಂಗ್ರೆಸ್‍ನಿಂದ ಲೋಕಸಭೆ ಚುನಾವಣೆಗೆ ಮಾರ್ಗರೇಟ್ ಆಳ್ವಾ ಜಿಲ್ಲೆಯಿಂದ ಸತತವಾಗಿ ಸ್ಪರ್ಧಿಸಿದ್ದರು. 1999ರಲ್ಲಿ ಗೆಲುವು ಸಾಧಿಸಿದ್ದರೆ, ಬಳಿಕ ನಡೆದ ಎರಡು ಚುನಾವಣೆಯಲ್ಲೂ ಸೋತಿದ್ದರು. 2009ರ ಬಳಿಕ ನಂತರದ ಎರಡೂ ಚುನಾವಣೆಯಲ್ಲಿಯೂ ಪುರುಷ ಅಭ್ಯರ್ಥಿಯನ್ನೇ ಕಣಕ್ಕಿಳಿಸಿತ್ತು.

‘2004 ರಿಂದಲೂ ಉತ್ತರ ಕನ್ನಡ ಕ್ಷೇತ್ರವು ಬಿಜೆಪಿ ವಶದಲ್ಲಿದೆ. ಆ ಪಕ್ಷದ ಗೆಲುವಿನ ಓಟಕ್ಕೆ ತಡೆಯೊಡ್ಡಲು ಖಾನಾಪುರದಲ್ಲಿ ಪಕ್ಷದ ಗೆಲುವಿಗೆ ಮುನ್ನುಡಿ ಬರೆದಿದ್ದ ಡಾ.ಅಂಜಲಿ ಸೂಕ್ತ ಅಭ್ಯರ್ಥಿಯಾಗಬಹುದು ಎಂಬ ನಿರೀಕ್ಷೆ ಬಲವಾಗಿದೆ. ಕ್ಷೇತ್ರದಲ್ಲಿ ಬದಲಾವಣೆ ಬಯಸಿರುವ ಮತದಾರರು ಮಹಿಳಾ ಅಭ್ಯರ್ಥಿ ಬೆಂಬಲಿಸುವ ವಿಶ್ವಾಸವೂ ಇದೆ’ ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಸಾಯಿ ಗಾಂವಕರ ಪ್ರತಿಕ್ರಿಯಿಸಿದರು.

ಆಕಾಂಕ್ಷಿಗಳ ಅಸಮಾಧಾನ

ಕಾಂಗ್ರೆಸ್‍ನಿಂದ ಲೋಕಸಭೆ ಚುನಾವಣೆಗೆ ಸ್ಪರ್ಧೆಗೆ ಅರಣ್ಯ ಭೂಮಿ ಹಕ್ಕು ಹೋರಾಟಗಾರ ರವೀಂದ್ರ ನಾಯ್ಕ ವಕೀಲ ಜಿ.ಟಿ.ನಾಯ್ಕ ಪ್ರಬಲ ಆಕಾಂಕ್ಷಿಗಳಾಗಿದ್ದರು. ಪಕ್ಷದ ರಾಜ್ಯ ನಾಯಕರನ್ನು ಆಗಾಗ ಭೇಟಿ ಮಾಡಿ ಟಿಕೆಟ್‍ಗೆ ಲಾಬಿ ನಡೆಸಿದ್ದರು. ಇಬ್ಬರೂ ಈಗ ನಿರಾಸೆ ಅನುಭವಿಸುವಂತಾಗಿದೆ. ಅಲ್ಲದೆ ಉತ್ತರ ಕನ್ನಡ ಜಿಲ್ಲೆಯವರಲ್ಲದ ಅಭ್ಯರ್ಥಿಯನ್ನು ನಿಲ್ಲಿಸಿದ್ದಕ್ಕೆ ಪಕ್ಷದ ಕೆಲ ಮುಖಂಡರಲ್ಲೂ ಅಸಮಾಧಾನ ಉಂಟಾಗಿದೆ. ಡಾ.ಅಂಜಲಿ ಅವರ ಬದಲು ಜಿಲ್ಲೆಯವರಿಗೆ ಟಿಕೆಟ್ ನೀಡಬೇಕು ಎಂದು ಕಾಂಗ್ರೆಸ್ ವಿದ್ಯಾರ್ಥಿ ವಿಭಾಗ (ಎನ್.ಎಸ್.ಯು.ಐ) ಕೂಡ ಒತ್ತಾಯಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT