ಭಾನುವಾರ, 14 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಕೆಶಿ ಸಹೋದರರಿಂದ ಕುಕ್ಕರ್‌ ಹಂಚಿಕೆ: ಎಚ್‌.ಡಿ. ಕುಮಾರಸ್ವಾಮಿ ಆರೋಪ

ಚುನಾವಣಾ ಅಕ್ರಮ ತಡೆಗೆ ಅರೆ ಸೇನಾಪಡೆ ನಿಯೋಜನೆಗೆ ಆಗ್ರಹ
Published 19 ಮಾರ್ಚ್ 2024, 15:47 IST
Last Updated 19 ಮಾರ್ಚ್ 2024, 15:47 IST
ಅಕ್ಷರ ಗಾತ್ರ

ಬೆಂಗಳೂರು: ‘ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಮತ್ತು ಸಂಸದ ಡಿ.ಕೆ. ಸುರೇಶ್‌ ಮತದಾರರಿಗೆ ಕುಕ್ಕರ್‌ ಹಂಚುತ್ತಿದ್ದಾರೆ. ಅಕ್ರಮ ತಡೆಯಲು ಅಧಿಕಾರಿಗಳು ವಿಫಲರಾಗಿದ್ದಾರೆ’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ  ಆರೋಪಿಸಿದರು.

ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ. ದೇವೇಗೌಡ ಅವರನ್ನು ಮಂಗಳವಾರ ಭೇಟಿಮಾಡಿ ಚರ್ಚಿಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಭಾರಿ ಪ್ರಮಾಣದ ಚುನಾವಣಾ ಅಕ್ರಮಗಳು ನಡೆಯುತ್ತಿವೆ. ಬಿಜೆಪಿಯ ಅಭ್ಯರ್ಥಿಯಾಗಿ ಹೃದ್ರೋಗ ತಜ್ಞ ಡಾ.ಸಿ.ಎನ್‌. ಮಂಜುನಾಥ್‌ ಆಯ್ಕೆಯಾದ ಬಳಿಕ ಕಂಗೆಟ್ಟಿರುವ ಶಿವಕುಮಾರ್‌ ಸಹೋದರರು ಹಣಬಲ, ತೋಳ್ಬಲ ಮತ್ತು ಅಧಿಕಾರ ದುರ್ಬಳಕೆ ಮೂಲಕ ಚುನಾವಣೆ ಗೆಲ್ಲಲು ಹೊರಟಿದ್ದಾರೆ’ ಎಂದು ಆರೋಪಿಸಿದರು.

‘ಚುನಾವಣೆ ಘೋಷಣೆಗೂ ಮೊದಲೇ ಅಣ್ಣ, ತಮ್ಮನ ಭಾವಚಿತ್ರ ಅಂಟಿಸಿ ಭಾರಿ ಪ್ರಮಾಣದಲ್ಲಿ ಕುಕ್ಕರ್‌ ಹಂಚಲಾಗಿತ್ತು. ಚುನಾವಣಾ ಅಧಿಸೂಚನೆ ಪ್ರಕಟವಾದ ಬಳಿಕವೂ ಕುಕ್ಕರ್‌ ಹಂಚಿಕೆ ಮುಂದುವರಿದಿದೆ. ಕೇಂದ್ರ ಚುನಾವಣಾ ಆಯೋಗ ಏನು ಮಾಡುತ್ತಿದೆ’ ಎಂದು ಪ್ರಶ್ನಿಸಿದರು.

‘ಹಾರೋಹಳ್ಳಿಯ ಸ್ಟೌ ಕ್ರಾಫ್ಟ್‌ ಲಿಮಿಟೆಡ್‌ ಎಂಬ ಕಂಪನಿಯಲ್ಲಿ ನಿರಂತರವಾಗಿ ಕುಕ್ಕರ್‌ ತಯಾರಿಕೆ ನಡೆದಿದೆ. ಈ ಕುರಿತು ನಾನು ರಾಜ್ಯ ಮುಖ್ಯ ಚುನಾವಣಾಧಿಕಾರಿಗೆ ದೂರು ನೀಡಿದ್ದೆ. ಪರಿಶೀಲನೆ ನಡೆಸುವಂತೆ ಅವರು ರಾಮನಗರ ಜಿಲ್ಲಾಧಿಕಾರಿಗೆ ಸೂಚಿಸಿದ್ದರು. ಅವರು ವಾಣಿಜ್ಯ ತೆರಿಗೆ ಅಧಿಕಾರಿಗಳನ್ನು ಕಳುಹಿಸಿದ್ದರು. ಏನೂ ನಡೆದಿಲ್ಲ ಎಂಬ ವರದಿ ನೀಡಿ, ಮುಚ್ಚಿ ಹಾಕಿದ್ದಾರೆ. ಈಗಲೂ ಕುಕ್ಕರ್‌ ತಯಾರಿಕೆ ಮತ್ತು ಸಾಗಾಣಿಕೆ’ ನಡೆದಿದೆ ಎಂದು ಫೋಟೊಗಳನ್ನು ಪ್ರದರ್ಶಿಸಿದರು.

ದೂರು ಬಂದರೆ 100 ನಿಮಿಷಗಳೊಳಗೆ ಕ್ರಮ ಜರುಗಿಸುವುದಾಗಿ ಕೇಂದ್ರ ಚುನಾವಣಾ ಆಯೋಗ ಹೇಳಿತ್ತು. ಇಲ್ಲಿ 48 ಗಂಟೆಗಳಾದರೂ ಯಾವುದೇ ಕ್ರಮ ಆಗಿಲ್ಲ. ಆಯೋಗ ಏನು ಮಾಡುತ್ತಿದೆ? ರಾಜ್ಯದಲ್ಲಿ ಆಯೋಗದ ಅಧಿಕಾರಿಗಳು ಇದ್ದಾರೆಯೆ ಎಂದು ಕೇಳಿದರು.

‘ನಾನು ಈ ಬಗ್ಗೆ ಕೇಂದ್ರ ಚುನಾವಣಾ ಆಯೋಗಕ್ಕೆ ಪತ್ರ ಬರೆಯುತ್ತೇನೆ. ಕೇಂದ್ರ ಚುನಾವಣಾ ಆಯೋಗ ಮತ್ತು ಬಿಜೆಪಿಯ ಕೇಂದ್ರ ವರಿಷ್ಠರ ಗಮನಕ್ಕೆ ಈ ವಿಷಯವನ್ನು ತಲುಪಿಸುವಂತೆ ಬಿಜೆಪಿಯ ಸ್ನೇಹಿತರಿಗೂ ಮನವಿ ಮಾಡುತ್ತೇನೆ’ ಎಂದರು.

ಅಧಿಕಾರಿಗಳ ವರ್ಗಾವಣೆಗೆ ಆಗ್ರಹ ರಾಮನಗರ ಜಿಲ್ಲಾಧಿಕಾರಿ ಎಸ್‌ಪಿ ಮತ್ತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣಾ ಪ್ರಕ್ರಿಯೆ ನಡೆಸುವಲ್ಲಿ ವಿಫಲವಾಗಿದ್ದಾರೆ. ಶಿವಕುಮಾರ್‌ ಮತ್ತು ಸುರೇಶ್‌ ಸಹೋದರರ ಚುನಾವಣಾ ಅಕ್ರಮಗಳನ್ನು ನಿಯಂತ್ರಿಸುವ ಶಕ್ತಿ ಅವರಿಗೆ ಇಲ್ಲ. ಕೇಂದ್ರ ಚುನಾವಣಾ ಆಯೋಗವು ತಕ್ಷಣವೇ ಈ ಮೂರೂ ಅಧಿಕಾರಿಗಳನ್ನು ವರ್ಗಾವಣೆ ಮಾಡಬೇಕು. ದಕ್ಷ ಅಧಿಕಾರಿಗಳನ್ನು ಅಲ್ಲಿಗೆ ನಿಯೋಜಿಸಬೇಕು ಎಂದು ಕುಮಾರಸ್ವಾಮಿ ಆಗ್ರಹಿಸಿದರು. ಶಿವಕುಮಾರ್‌ ಅವರು ಬಿಬಿಎಂಪಿ ಅಧಿಕಾರಿಗಳನ್ನು ಚುನಾವಣೆಗೆ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ವಾರ್ಡ್‌ವಾರು ಕಾಂಗ್ರೆಸ್‌ಗೆ ಮತ ಹಾಕಿಸುವ ಗುರಿಯನ್ನು ನೀಡಿದ್ದಾರೆ. ಗುತ್ತಿಗೆದಾರರ ಮೂಲಕ ಹಣ ಸಾಗಿಸಿ ಎಲ್ಲೆಲ್ಲಿ ದಾಸ್ತಾನು ಮಾಡಿದ್ದಾರೆ ಎಂಬ ಮಾಹಿತಿಯೂ ಬರುತ್ತಿದೆ. ಈ ಕುರಿತು ಕೇಂದ್ರ ಚುನಾವಣಾ ಆಯೋಗವು ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಸೀರೆ ಕುಕ್ಕರ್‌ಗೆ ಬೆಂಕಿ ಹಚ್ಚಲು ಕರೆ ಕೊಡುವೆ’ ‘ಚುನಾವಣಾ ಆಯೋಗ ಬಿಗಿಯಾದ ಕ್ರಮ ಕೈಗೊಳ್ಳದೇ ಇದ್ದರೆ ಜೆಡಿಎಸ್‌ವ ಕಾರ್ಯಕರ್ತರೇ ಕಾರ್ಯಾಚರಣೆಗೆ ಇಳಿಯುತ್ತಾರೆ. ಕುಕ್ಕರ್‌ ಸೀರೆ ದಾಸ್ತಾನು ಪತ್ತೆಮಾಡಿ ಬೆಂಕಿ ಹಚ್ಚುವಂತೆ ನಾನೇ ಕರೆ ನೀಡುತ್ತೇನೆ. ಯಾರ ಮೇಲೆ ಪ್ರಕರಣ ದಾಖಲಿಸುತ್ತಾರೆ ನೋಡುತ್ತೇನೆ’ ಎಂದು ಕುಮಾರಸ್ವಾಮಿ ಹೇಳಿದರು. ‘ಮಿಸ್ಟರ್‌ ಶಿವಕುಮಾರ್‌ 2002ರ ಉಪ ಚುನಾವಣೆಯಲ್ಲಿ ಏನಾಯಿತು ಎಂಬುದನ್ನು ನೆನಪು ಮಾಡಿಕೊಳ್ಳಿ. ಶಿಡ್ಲಘಟ್ಟ ದೇವನಹಳ್ಳಿ ಮೈಸೂರಿನಿಂದ ಕಳ್ಳ ಮತದಾನಕ್ಕೆ ನೀವು ಕರೆತಂದಿದ್ದ ಜನರನ್ನು ಬಟ್ಟೆ ಬಿಚ್ಚಿಸಿ ಚಡ್ಡಿಯಲ್ಲಿ ಕೂರಿಸಿದ್ದೆವು. ಈಗಲೂ ಅಕ್ರಮ ಮುಂದುವರಿದರೆ ಅದೇ ಆಗುತ್ತದೆ. ಶೀಘ್ರದಲ್ಲಿ ನಾನು ಪೂರ್ಣ ಪ್ರಮಾಣದಲ್ಲಿ ಅಖಾಡಕ್ಕೆ ಇಳಿಯುತ್ತೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT