ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೋಲಾರ: 33 ವರ್ಷದ ಬಳಿಕ ಹೊಸ ಮುಖ!

ಕಾಂಗ್ರೆಸ್‌ನಿಂದ ಸತತ ಎಂಟು ಬಾರಿ ಸ್ಪರ್ಧಿಸಿದ್ದ ಕೆ.ಎಚ್‌.ಮುನಿಯಪ್ಪ
Published 30 ಮಾರ್ಚ್ 2024, 23:43 IST
Last Updated 30 ಮಾರ್ಚ್ 2024, 23:43 IST
ಅಕ್ಷರ ಗಾತ್ರ

ಕೋಲಾರ: ಕೋಲಾರ ಮೀಸಲು ಲೋಕಸಭಾ ಕ್ಷೇತ್ರದಲ್ಲಿ 33 ವರ್ಷದ ಬಳಿಕ ಕಾಂಗ್ರೆಸ್‌ ಪಕ್ಷದಲ್ಲಿ ಹೊಸ ಮುಖಕ್ಕೆ ಟಿಕೆಟ್‌ ಲಭಿಸಿದೆ.

ಪರಿಶಿಷ್ಟ ಜಾತಿಯ ಎಡಗೈ ಸಮುದಾಯದ ಮುನಿಯಪ್ಪ 1991ರಿಂದ ಸತತ ಎಂಟು ಬಾರಿ ಕೋಲಾರದಿಂದ ಸ್ಪರ್ಧಿಸಿ ಏಳು ಸಲ ಗೆದ್ದಿದ್ದಾರೆ. ಅಭ್ಯರ್ಥಿ ವಿಚಾರದಲ್ಲಿ ಸತತ ಎಂಟು ಚುನಾವಣೆಗಳಲ್ಲಿ ಮುನಿಯಪ್ಪ ಅವರಿಗೆ ಸಡ್ಡು ಹೊಡೆಯುವವರೇ ಇರಲಿಲ್ಲ.  

ಕಳೆದ ಚುನಾವಣೆಯಲ್ಲಿ 2 ಲಕ್ಷ ಮತಗಳ ಅಂತರದಿಂದ ಬಿಜೆಪಿಯ ಎಸ್‌.ಮುನಿಸ್ವಾಮಿ ವಿರುದ್ಧ ಮೊದಲ ಬಾರಿಗೆ ಸೋಲು ಕಂಡಿದ್ದರು. 1952ರಿಂದ ಬಹುತೇಕ ಚುನಾವಣೆಗಳಲ್ಲಿ ಗೆದ್ದು ಕೋಲಾರ ಲೋಕಸಭಾ ಕ್ಷೇತ್ರವನ್ನು ಹಿಡಿತದಲ್ಲಿ ಇಟ್ಟುಕೊಂಡಿದ್ದ ಕಾಂಗ್ರೆಸ್‌ ಮೊದಲ ಬಾರಿ ಈ ಕ್ಷೇತ್ರದ ಮೇಲೆ ಹಿಡಿತ ಕಳೆದುಕೊಂಡಿತ್ತು.

ಸಚಿವ ಕೆ.ಎಚ್‌.ಮುನಿಯಪ್ಪ ಹಾಗೂ ವಿಧಾನಸಭೆ ಮಾಜಿ ಸಭಾಧ್ಯಕ್ಷ ಕೆ.ಆರ್‌.ರಮೇಶ್‌ ಕುಮಾರ್‌ ಬಣಗಳ ಜಗಳ ಇದಕ್ಕೆ ಕಾರಣ ಎಂಬುವುದು ಗುಟ್ಟಾಗಿ ಉಳಿದಿಲ್ಲ. 

ಎರಡೂ ಬಣಗಳ ನಡುವಿನ ಜಗಳ ಅತಿರೇಕಕ್ಕೆ ಹೋಗಿದ್ದು ಈ ಬಾರಿ ಕೋಲಾರ ಅಭ್ಯರ್ಥಿ ಆಯ್ಕೆ ಕಗ್ಗಂಟಾಗಲು ಕಾರಣವಾಯಿತು. ಇದರಿಂದಾಗಿ ಕ್ಷೇತ್ರದ ಜನರಿಗೆ ಪರಿಚಯವೇ ಇಲ್ಲದ ಬೆಂಗಳೂರಿನವರಾದ ಎಡಗೈ ಸಮುದಾಯದ ಕೆ.ವಿ.ಗೌತಮ್‌ ಎಂಬುವರಿಗೆ ಅದೃಷ್ಟ ಒಲಿದಿದೆ. 

ಇದರೊಂದಿಗೆ ಕ್ಷೇತ್ರದಲ್ಲಿ ಪರಿಶಿಷ್ಟ ಜಾತಿಯಲ್ಲಿ ಶೇಕಡಾ 75ರಷ್ಟು ಮತದಾರರನ್ನು ಹೊಂದಿರುವ ಬಲಗೈ ಸಮುದಾಯಕ್ಕೆ ಈ ಬಾರಿಯೂ ಟಿಕೆಟ್‌ ಕೈತಪ್ಪಿದೆ.

‘ಮಹಾಘಟಬಂದನ್‌’ ಮೇಲುಗೈ?

ಕಳೆದ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯ ರಾಜಕಾರಣಕ್ಕೆ ಮರಳಿ ಸಚಿವರಾದ ಮುನಿಯಪ್ಪ ತಮ್ಮ ಅಳಿಯ ಕೆ.ಜಿ.ಚಿಕ್ಕಪೆದ್ದಣ್ಣ ಅವರಿಗೆ ಈ ಬಾರಿ ಟಿಕೆಟ್‌ ಕೊಡಿಸಲು ಭಾರಿ ಕಸರತ್ತು ನಡೆಸಿ ಯಶಸ್ವಿಯಾಗುವ ಹಂತಕ್ಕೆ ತಲುಪಿದ್ದರು. ಈ ವಿಚಾರ ಗೊತ್ತಾಗುತ್ತಲೇ ‘ಮಹಾಘಟಬಂಧನ್‌’ ಎಂದು ಕರೆಯಲಾಗುವ ರಮೇಶ್‌ ಕುಮಾರ್ ಬಣ ಎಚ್ಚೆತ್ತುಕೊಂಡಿತು.

ಘಟಬಂಧನ್‌ ಪ್ರಮುಖ ಸದಸ್ಯರಾದ ಚಿಂತಾಮಣಿ ಶಾಸಕ, ಸಚಿವ ಡಾ.ಎಂ.ಸಿ.ಸುಧಾಕರ್‌, ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ನಸೀರ್‌ ಅಹ್ಮದ್‌, ಕೋಲಾರ ಶಾಸಕ ಕೊತ್ತೂರು ಮಂಜುನಾಥ್‌, ಮಾಲೂರು ಶಾಸಕ ಕೆ.ವೈ.ನಂಜೇಗೌಡ ಹಾಗೂ ವಿಧಾನ ಪರಿಷತ್‌ ಸದಸ್ಯ ಎಂ.ಎಲ್‌.ಅನಿಲ್‌ ಕುಮಾರ್‌ ಸಡ್ಡು ಹೊಡೆದು ನಿಂತರು. ಮುನಿಯಪ್ಪ ಕುಟುಂಬಕ್ಕೆ ಟಿಕೆಟ್‌ ಕೊಡಬಾರದೆಂದು ಪಟ್ಟು ಹಿಡಿದು ರಾಜೀನಾಮೆಗೂ ಮುಂದಾದ ಅವರೀಗ ಸಮಾಧಾನದ ನಿಟ್ಟುಸಿರು ಬಿಟ್ಟಿದ್ದಾರೆ.

ಆರಂಭದಲ್ಲಿ ಪರಿಶಿಷ್ಟ ಜಾತಿಯ ಬಲಗೈ ಸಮುದಾಯದ ಸಿ.ಎಂ.ಮುನಿಯಪ್ಪ ಎಂಬುವರಿಗೆ ಟಿಕೆಟ್‌ ಕೊಡಬೇಕು ಎಂದು ಹಟಕ್ಕೆ ಬಿದ್ದಿದ್ದ ಈ ಬಣ, ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಸಂಧಾನದ ಬಳಿಕ ಕೆ.ಎಚ್‌. ಮುನಿಯಪ್ಪ ಕುಟುಂಬ ಹೊರತುಪಡಿಸಿ ಯಾರಿಗೇ ಟಿಕೆಟ್‌ ಕೊಟ್ಟರೂ ಅಭ್ಯಂತರ ಇಲ್ಲವೆಂದಿದ್ದರು. ಅದರಂತೆ ಎಡಗೈ ಸಮುದಾಯದ ಗೌತಮ್‌ ಅವರಿಗೆ ಟಿಕೆಟ್‌ ನೀಡಿರುವುದನ್ನು ಸ್ವಾಗತಿಸಿದ್ದಾರೆ.

ಬಲಗೈಗೆ ಕೊನೆಗೂ ಸಿಗದ ಅವಕಾಶ

ಮೊದಲ ಚುನಾವಣೆಯಿಂದ ಹಿಡಿದು ಈವರೆಗೆ ಈ ಕ್ಷೇತ್ರದಲ್ಲಿ ಬಲಗೈ ಸಮುದಾಯದವರಿಗೆ ಟಿಕೆಟ್‌ ಲಭಿಸಿಲ್ಲ. ಎಡಗೈ ಸಮುದಾಯ ಅಥವಾ ಬೋವಿ ಸಮುದಾಯದವರಿಗೆ ಟಿಕೆಟ್‌ ಸಿಗುತ್ತಿದೆ. ಹೀಗಾಗಿ, ಈ ಬಾರಿ ಬಲಗೈ ಸಮುದಾಯದವರಿಗೆ ಟಿಕೆಟ್ ನೀಡಬೇಕೆಂದು ರಮೇಶ್‌ ಕುಮಾರ್‌ ಬಣದಲ್ಲಿ ಗುರುತಿಸಿಕೊಂಡಿದ್ದ ಶಾಸಕರು ಪಟ್ಟು ಹಿಡಿದಿದ್ದರು.

ಈಗಾಗಲೇ ಮೈತ್ರಿಕೂಟದಿಂದ ಜೆಡಿಎಸ್‌ನ ಸ್ಥಳೀಯ ಅಭ್ಯರ್ಥಿ ಎಂ.ಮಲ್ಲೇಶ್‌ ಬಾಬು ಕಣಕ್ಕಿಳಿದಿದ್ದಾರೆ. ಹಾಲಿ ಸಂಸದರಿದ್ದರೂ ಮೈತ್ರಿಧರ್ಮ ಪಾಲನೆಗಾಗಿ ಈ ಕ್ಷೇತ್ರದ ಟಿಕೆಟ್‌ ಅನ್ನು ಬಿಜೆಪಿ ತ್ಯಾಗ ಮಾಡಿದೆ. 

ಕೋಲಾರ ಕಾಂಗ್ರೆಸ್‌ ನಾಯಕರಲ್ಲಿನ ವೈಮನಸ್ಯ ಬಗೆಹರಿಯಲಿದೆ. ನನ್ನನ್ನು ಅಭ್ಯರ್ಥಿ ಮಾಡಿರುವುದಕ್ಕೆ ಯಾರ ವಿರೋಧವೂ ಇಲ್ಲ. ಎಲ್ಲರ ವಿಶ್ವಾಸದೊಂದಿಗೆ ಪ್ರಚಾರ ನಡೆಸುತ್ತೇನೆ..
–ಕೆ.ವಿ.ಗೌತಮ್‌, ಕೋಲಾರ ಕಾಂಗ್ರೆಸ್‌ ಅಭ್ಯರ್ಥಿ
ಹೈಕಮಾಂಡ್‌ ನಿರ್ಧಾರ ಸ್ವಾಗತಿಸುತ್ತೇನೆ. ಸ್ವಪ್ರತಿಷ್ಠೆ ಬೇಸರ ನನಗಿಲ್ಲ. 30 ವರ್ಷಗಳಲ್ಲಿ ಈ ರೀತಿ ವಿದ್ಯಮಾನ ನನಗೆ ಹೊಸದೇನಲ್ಲ. ಕಾಂಗ್ರೆಸ್‌ ಪಕ್ಷವನ್ನು ಎಲ್ಲಾ ಕಡೆ ಗೆಲ್ಲಿಸಲು ಶ್ರಮಿಸುತ್ತೇನೆ
–ಕೆ.ಎಚ್‌.ಮುನಿಯಪ್ಪ, ಆಹಾರ ಸಚಿವ
ಬಲಗೈ ಸಮುದಾಯಕ್ಕೆ ಟಿಕೆಟ್‌ ಬೇಕೆಂದು ರಾಜೀನಾಮೆಗೆ ಮುಂದಾದೆವು. ಎಡಗೈ ಸಮುದಾಯಕ್ಕೆ ಸಿಕ್ಕಿದೆ. ಸಂಧಾನ ಸಭೆಯಲ್ಲಿ ನಡೆದ ಮಾತುಕತೆಯಂತೆ ಅಭ್ಯರ್ಥಿ ಗೆಲುವಿಗೆ ಶ್ರಮಿಸುತ್ತೇವೆ
–ಎಂ.ಎಲ್‌.ಅನಿಲ್‌ ಕುಮಾರ್‌, ವಿಧಾನ ಪರಿಷತ್‌ ಸದಸ್ಯ

ಗೌತಮ್‌ ಮುಂದಿದೆ ದೊಡ್ಡ ಸವಾಲು

ಇಬ್ಬರ ಜಗಳ ಮೂರನೆವರಿಗೆ ಲಾಭ ಎಂಬಂತೆ ಮುನಿಯಪ್ಪ–ರಮೇಶ್ ಕುಮಾರ್‌ ಜಗಳದಲ್ಲಿ ಗೌತಮ್‌ ಸುಲಭವಾಗಿ ಟಿಕೆಟ್‌ ಪಡೆದಿದ್ದಾರೆ. ಆದರೆ ಜಿಲ್ಲೆಯಲ್ಲಿರುವ ಎರಡೂ ಬಣದವರನ್ನು ವಿಶ್ವಾಸಕ್ಕೆ ಪಡೆಯುವುದೇ ಗೌತಮ್ ಮುಂದಿರುವ ದೊಡ್ಡ ಸವಾಲು. ಬೆಂಗಳೂರು ಮೇಯರ್ ಹಾಗೂ ಎಸ್‌ಸಿ‌–ಎಸ್‌ಟಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಆಗಿದ್ದ ಕೆ.ಸಿ.ವಿಜಯಕುಮಾರ್‌ ಅವರ ಪುತ್ರನಾದ ಕೆ.ವಿ.ಗೌತಮ್‌ (48) ಬೆಂಗಳೂರಿನ ಆರ್‌.ವಿ.ಕಾಲೇಜಿನಲ್ಲಿ ಸಿವಿಲ್‌ ಎಂಜಿನಿಯರಿಂಗ್‌ ಪದವಿ ಪಡೆದಿದ್ದಾರೆ. ಗೌತಮ್‌ ಸದ್ಯ ಬೆಂಗಳೂರು ಕೇಂದ್ರ ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷರಾಗಿದ್ದಾರೆ. 

‘ಗೋಬ್ಯಾಕ್‌ ಗೌತಮ್‌’ ಅಭಿಯಾನ

ಬೆಂಗಳೂರಿನ ಕೆ.ವಿ.ಗೌತಮ್‌ ಕೋಲಾರ ಕ್ಷೇತ್ರಕ್ಕೆ ಕಾಲಿಡುವ ಮುನ್ನವೇ ಸಾಮಾಜಿಕ ಜಾಲತಾಣದಲ್ಲಿ ‘ಗೋಬ್ಯಾಕ್‌ ಗೌತಮ್‌’ ಅಭಿಯಾನ ಆರಂಭವಾಗಿದೆ. ಜಿಲ್ಲೆಗೆ ಸಂಬಂಧವಿಲ್ಲದವರಿಗೆ ಟಿಕೆಟ್‌ ನೀಡಿರುವುದನ್ನು ಕೋಲಾರ ನಾಗರಿಕರ ವೇದಿಕೆ ಖಂಡಿಸಿದೆ. ‘ಸ್ಥಳೀಯವಾಗಿ ವಾಸವಿದ್ದು ಜನರ ಕಷ್ಟ ಸುಖಕ್ಕೆ ಸ್ಪಂದಿಸುವ ಜೆಡಿಎಸ್‌ನ ಮಲ್ಲೇಶ್ ಬಾಬು ಬೇಕಾ? ಬೆಂಗಳೂರಿನಲ್ಲಿ ವಾಸವಿದ್ದು ಕ್ಷೇತ್ರಕ್ಕೆ ಸಂಬಂಧವೇ ಇಲ್ಲದ ಇಲ್ಲಿನ ಸಮಸ್ಯೆಗಳ ಬಗ್ಗೆ ಅರಿವೇ ಇಲ್ಲದ ಕಾಂಗ್ರೆಸ್‌ನ ಗೌತಮ್‌ ಬೇಕಾ’ ಎಂಬ ಅಭಿಯಾನ ಶುರುವಿಟ್ಟುಕೊಂಡಿದ್ದಾರೆ. ಸ್ಥಳೀಯವಾಗಿ ನಾಯಕರನ್ನು ಬೆಳೆಸುವಲ್ಲಿ ಕಾಂಗ್ರೆಸ್‌ ವಿಫಲವಾಗಿದೆಯೋ ಅಥವಾ ಬಣಗಳ ಜಗಳ ಸರಿದೂಗಿಸಿಕೊಂಡು ಹೋಗುವ ಅಭ್ಯರ್ಥಿ ಸಿಗಲಿಲ್ಲವೋ ಎಂಬ ಪ್ರಶ್ನೆಯೂ ಕಾರ್ಯಕರ್ತರಲ್ಲಿ ಮೂಡಿದೆ.

ಎಡಗೈ 2 ಬಲಗೈಗೆ 3 ಟಿಕೆಟ್‌

ರಾಜ್ಯದ ಲೋಕಸಭಾ ಕ್ಷೇತ್ರಗಳ ಪೈಕಿ ಐದು ಕ್ಷೇತ್ರ ಪರಿಶಿಷ್ಟ ಜಾತಿಗೆ ಮೀಸಲಾಗಿವೆ. ಕಾಂಗ್ರೆಸ್‌ ಈಗಾಗಲೇ ಮೂರು ಕ್ಷೇತ್ರಗಳ ಟಿಕೆಟ್‌ ಅನ್ನು (ವಿಜಯಪುರ ಕಲಬುರಗಿ ಚಾಮರಾಜನಗರ) ಬಲಗೈ ಸಮುದಾಯದ ಅಭ್ಯರ್ಥಿಗಳಿಗೆ ಕೊಟ್ಟಿದೆ. ಎರಡು ಕ್ಷೇತ್ರಗಳ ಟಿಕೆಟ್‌ (ಚಿತ್ರದುರ್ಗ ಕೋಲಾರ) ಎಡಗೈ ಸಮುದಾಯದ ಪಾಲಾಗಿವೆ. ಈ ಮೂಲಕ ಸಾಮಾಜಿಕ ನ್ಯಾಯ ಪಾಲನೆಗೆ ಕಸರತ್ತು ನಡೆಸಿದಂತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT