ಭಾನುವಾರ, 14 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಗರ: ಕೈ ಶಕ್ತಿ ಪ್ರದರ್ಶನಕ್ಕೆ ಸಾಕ್ಷಿಯಾದ ಸುರೇಶ್ ನಾಮಪತ್ರ

Published 29 ಮಾರ್ಚ್ 2024, 6:32 IST
Last Updated 29 ಮಾರ್ಚ್ 2024, 6:32 IST
ಅಕ್ಷರ ಗಾತ್ರ

ರಾಮನಗರ: ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಸುರೇಶ್ ಅವರ ನಾಮಪತ್ರ ಸಲ್ಲಿಕೆಯು, ಡಿ.ಕೆ. ಸಹೋದರರ ಶಕ್ತಿ ಪ್ರದರ್ಶನಕ್ಕೂ ಗುರುವಾರ ಸಾಕ್ಷಿಯಾಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿಯಾಗಿರುವ ಅಣ್ಣ ಡಿ.ಕೆ. ಶಿವಕುಮಾರ್ ಸೇರಿದಂತೆ ಸಚಿವರು ಹಾಗೂ ಶಾಸಕರ ದಂಡು ಸುರೇಶ್ ಅವರ ನಾಮಪತ್ರ ಸಲ್ಲಿಕೆ ರ‍್ಯಾಲಿಗೆ ಸಾಥ್ ನೀಡಿತು.

ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ನಗರದ ಎಸ್‌.ಪಿ ಕಚೇರಿ ವೃತ್ತದಿಂದ ಡಿ.ಸಿ ಕಚೇರಿವರೆಗಿನ ರಸ್ತೆಯಲ್ಲಿ ಜನ ಹಾಗೂ ವಾಹನಗಳ ದಟ್ಟಣೆ ಜೋರಾಗಿತ್ತು. ನೆಚ್ಚಿನ ನಾಯಕನ ನಾಮಪತ್ರ ಸಲ್ಲಿಕೆಗೆ ಸಾಕ್ಷಿಯಾಗಲು ಗ್ರಾಮಾಂತರ ಕ್ಷೇತ್ರದ ಎಂಟೂ ವಿಧಾನಸಭಾ ಕ್ಷೇತ್ರಗಳಿಂದ ಸಾವಿರಾರು ಜನರು ರಾಮನಗರದತ್ತ ದೌಡಾಯಿಸಿದ್ದರು. ಕಣ್ಣು ಹಾಯಿಸಿದತ್ತೆಲ್ಲಾ ಹಸ್ತದ ಚಿಹ್ನೆ, ಶಾಲು, ಟೋಪಿ ಧರಿಸಿದವರೇ ಕಾಣುತ್ತಿದ್ದರು.

ಬಿರು ಬಿಸಿಲನ್ನೂ ಲೆಕ್ಕಿಸದ ಕಾರ್ಯಕರ್ತರು ಚಾಮುಂಡೇಶ್ವರಿ ಕಾರ್ಖಾನೆ ಬಳಿ ಹಾಕಿದ್ದ ಸಣ್ಣ ವೇದಿಕೆ ಎದುರು ಜಮಾಯಿಸಿ, ನಾಯಕರನ್ನು ಕಣ್ತುಂಬಿಕೊಂಡರು. ಸಹೋದರರ ಭಾಷಣದ ಮಧ್ಯೆ ‘ಡಿ.ಕೆ... ಡಿ.ಕೆ...’ ಎಂದು ಕೂಗಿ ಅಭಿಮಾನ ಮೆರೆದರು. ಸಿದ್ದರಾಮಯ್ಯ ಮಾತನಾಡುವಾಗಲೂ ಚಪ್ಪಾಳೆ ತಟ್ಟಿ, ಕೂಗಿದರು. ಕಾರ್ಯಕರ್ತರ ನಡೆ ನಾಯಕರನ್ನೂ ಮುಜಗರ ತರಿಸಿ, ಗರಂ ಆಗುವಂತೆ ಮಾಡಿತು.

ನಗರದ ಬೆಂಗಳೂರು–ಮೈಸೂರು ಹಳೆ ಹೆದ್ದಾರಿಯ ಅಕ್ಕಪಕ್ಕದ ಜಾಗವನ್ನು ದೂರದೂರುಗಳಿಂದ ಜನರನ್ನು ಕರೆತಂದಿದ್ದ ಖಾಸಗಿ ಬಸ್‌ಗಳು ಹಾಗೂ ಇತರ ವಾಹನಗಳು ಆವರಿಸಿದ್ದವು. ಬಿಸಿಲಿಗೆ ಬಸವಳಿದಿದ್ದ ಜನರ ದಾಹ ಹಿಂಗಿಸಲು ಕೆಲವರು ವಾಹನಗಳಲ್ಲಿ ಮೂಟೆಗಳಲ್ಲಿ ಮಜ್ಜಿಗೆ ಹಾಗೂ ಬಾಕ್ಸ್‌ಗಳಲ್ಲಿ ನೀರಿನ ಬಾಟಲಿ ತಂದು ವಿತರಿಸಿದರು. ರೋಡ್ ಷೋ, ನಾಮಪತ್ರ ಸಲ್ಲಿಕೆ ಹಾಗೂ ಬಹಿರಂಗ ಸಭೆಯಿಂದಾಗಿ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 2.30ರವರೆಗೆ ನಗರದ ಮುಖ್ಯರಸ್ತೆಗಳು ಸ್ತಬ್ಧವಾಗಿದ್ದವು.

ನಾಲ್ವರ ಸಾಥ್: ಮಧ್ಯಾಹ್ನ 12.37ಕ್ಕೆ ಸುರೇಶ್ ಅವರು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ, ಚುನಾವಣಾಧಿಕಾರಿ ಡಾ. ಅವಿನಾಶ್ ಮೆನನ್ ರಾಜೇಂದ್ರನ್ ಅವರ ಕೊಠಡಿಗೆ ತೆರಳಿ ನಾಮಪತ್ರ ಸಲ್ಲಿಸಿದರು. ಅವರೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾ ರೆಡ್ಡಿ, ಶಾಸಕರಾದ ಆನೇಕಲ್‌ನ ಶಿವಣ್ಣ, ಮಾಗಡಿಯ ಎಚ್‌.ಸಿ. ಬಾಲಕೃಷ್ಣ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಗಂಗಾಧರ್ ಸೇರಿ ನಾಲ್ವರು ಜೊತೆಗಿದ್ದರು. ಕೊಠಡಿ ಹೊರಗಡೆ ಕುಣಿಗಲ್ ಶಾಸಕ ಡಾ. ಎಂ.ಪಿ. ರಂಗನಾಥ್, ವಿಧಾನ ಪರಿಷತ್ ಸದಸ್ಯ ಎಸ್. ರವಿ ಇದ್ದರು.

ವಿಧಾನ‌ ಪರಿಷತ್ ಸದಸ್ಯ ಸುಧಾಮ ದಾಸ್, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಎಂ. ರೇವಣ್ಣ, ಮಾಜಿ ಶಾಸಕರಾದ ಸಿ.ಎಂ. ಲಿಂಗಪ್ಪ, ಕೆ. ರಾಜು ಸೇರಿದಂತೆ ಕ್ಷೇತ್ರದ ವಿವಿಧ ಜನಪ್ರತಿನಿಧಿಗಳು, ಮುಖಂಡರು ಹಾಗೂ ಕಾಂಗ್ರೆಸ್ ಪದಾಧಿಕಾರಿಗಳು ಇದ್ದರು.

ರಾಮನಗರದಲ್ಲಿ ಗುರುವಾರ ನಾಮಪತ್ರ ಸಲ್ಲಿಸಿದ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಸುರೇಶ್ ಅವರು ನಂತರ ನಡೆದ ಬಹಿರಂಗ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದರು. ಕುಣಿಗಲ್  ಶಾಸಕ ಡಾ. ರಂಗನಾಥ್ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರಾಮನಗರ ಶಾಸಕ ಇಕ್ಬಾಲ್ ಹುಸೇನ್ ಇದ್ದಾರೆ
ರಾಮನಗರದಲ್ಲಿ ಗುರುವಾರ ನಾಮಪತ್ರ ಸಲ್ಲಿಸಿದ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಸುರೇಶ್ ಅವರು ನಂತರ ನಡೆದ ಬಹಿರಂಗ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದರು. ಕುಣಿಗಲ್  ಶಾಸಕ ಡಾ. ರಂಗನಾಥ್ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರಾಮನಗರ ಶಾಸಕ ಇಕ್ಬಾಲ್ ಹುಸೇನ್ ಇದ್ದಾರೆ
ಡಿ.ಕೆ. ಸುರೇಶ್ ನಾಮಪತ್ರ ಸಲ್ಲಿಕೆಗೂ ಮುಂಚೆ ನಡೆದ ರೋಡ್ ಷೋದಲ್ಲಿ ಭಾಗವಹಿಸಿದ್ದ  ಕಾಂಗ್ರೆಸ್ ಕಾರ್ಯಕರ್ತರು
ಡಿ.ಕೆ. ಸುರೇಶ್ ನಾಮಪತ್ರ ಸಲ್ಲಿಕೆಗೂ ಮುಂಚೆ ನಡೆದ ರೋಡ್ ಷೋದಲ್ಲಿ ಭಾಗವಹಿಸಿದ್ದ  ಕಾಂಗ್ರೆಸ್ ಕಾರ್ಯಕರ್ತರು

ಸಿ.ಎಂ.ಗೂ ಸಂಚಾರ ದಟ್ಟಣೆ ಬಿಸಿ

ಬೆಳಿಗ್ಗೆಯಿಂದಲೇ ಬಸ್‌ಗಳಲ್ಲಿ ಜನ ಬಂದಿಳಿಯುತ್ತಿದ್ದರಿಂದಾಗಿ ಬೆಂಗಳೂರು–ಮೈಸೂರು ರಸ್ತೆಯಲ್ಲಿ ವಾಹನ ಹಾಗೂ ಜನ ದಟ್ಟಣೆ ಕಂಡಬಂತು. ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ಇಬ್ಬರಿಗೂ ಅದರ ಬಿಸಿ ತಟ್ಟಿತು. ಮುಖ್ಯಮಂತ್ರಿಯೇ ಶಾಸಕರ ಕಚೇರಿಯಿಂದ ವೇದಿಕೆ ಇದ್ದ ಸ್ಥಳಕ್ಕೆ ಬರಲು ಸುಮಾರು 20 ನಿಮಿಷ ಬೇಕಾಯಿತು. ಸ್ವತಃ ಪೊಲೀಸ್ ವರಿಷ್ಠಾಧಿಕಾರಿ ಕೆಳಕ್ಕಿಳಿದು ದಾರಿ ಮಾಡಿಕೊಟ್ಟರು.

‌ದಟ್ಟಣೆಯಲ್ಲಿ ಸಿಲುಕಿದ ಆಂಬುಲೆನ್ಸ್ ಬೆಳಿಗ್ಗೆ 11.30ರ ಸುಮಾರಿಗೆ ಜಿಲ್ಲಾಸ್ಪತ್ರೆಯಿಂದ ರೋಗಿಯೊಬ್ಬರನ್ನು ಬೇರೆ ಕಡೆಗೆ ಕರೆದೊಯ್ಯುತ್ತಿದ್ದ ಆಂಬುಲೆನ್ಸ್ ಸಂಚಾರ ದಟ್ಟಣೆಯಲ್ಲಿ ಸಿಲುಕಿತು. ಎಡ–ಬಲಕ್ಕೂ ಹೋಗಲು ಸಾಧ್ಯವಾಗದೆ ಚಾಲಕ ಪರಿತಪಿಸುತ್ತಿರುವುದನ್ನು ಕಂಡ ಸಾರ್ವಜನಿಕರೇ ಏಕಮುಖ ರಸ್ತೆಯಲ್ಲಿ ಕಡೆಗೆ ದಾರಿ ಮಾಡಿ ಕೊಟ್ಟರು. ಆಗ ಚಾಲಕ ನಿಧಾನವಾಗಿ ಮುಂದಕ್ಕೆ ಹೋದ. ಚಾಮುಂಡೇಶ್ವರಿ ದೇಗುಲಕ್ಕೆ ಭೇಟಿ ಕನಕಪುರದಲ್ಲಿ ತಾಯಿ ಆಶೀರ್ವಾದ ಪಡೆದು ಮನೆದೇವರ ದರ್ಶನ ಪಡೆದು ರಾಮನಗರಕ್ಕೆ ಬಂದ ಡಿ.ಕೆ. ಸಹೋದರರು ನೇರವಾಗಿ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದರು.

ತಡವಾಗಿದ್ದರಿಮದ ಮುಖ್ಯ ರಸ್ತೆಯಲ್ಲಿರುವ ಪೀರಾನ್ ಷಾ ವಲಿ ದರ್ಗಾ ಹಾಗೂ ರೈಲು ನಿಲ್ದಾಣ ಬಳಿಯ ಲೂರ್ದ್ ಚರ್ಚ್‌ಗೆ ಭೇಟಿ ನೀಡಿ ಆಶೀರ್ವಾದ ಪಡೆದರು. ಸಹೋದರರಿಗಿಂತ ಅರ್ಧ ತಾಸು ಮೊದಲೇ ರಾಮನಗರಕ್ಕೆ ಬಂದಿದ್ದ ಮುಖ್ಯಮಂತ್ರಿ ಅವರು ಎಲ್ಲೂ ತೆರಳದೆ ಶಾಸಕ ಹುಸೇನ್ ಅವರ ಕಚೇರಿಯಲ್ಲೇ ಕುಳಿತಿದ್ದರು.

ನಾಯಕರ ಕನ್ನಡ ಪ್ರೇಮ

ಡಿ.ಕೆ. ಸುರೇಶ್ ಸೇರಿದಂತೆ ವೇದಿಕೆಯಲ್ಲಿದ್ದ ನಾಯಕರು ಕನ್ನಡ ಭಾವುಟದ ರುಮಾಲು ಶಾಲು ಹಾಗೂ ಪೇಟ ಧರಿಸಿ ಅಭಿಮಾನ ಮೆರೆದರು. ಸಿದ್ದರಾಮಯ್ಯ ಡಿ.ಕೆ. ಶಿವಕುಮಾರ್ ಸಚಿವರಾದ ರಾಮಲಿಂಗಾ ರೆಡ್ಡಿ ಎಂ.ಸಿ. ಸುಧಾಕರ್ ಮಂಕಾಳ ವೈದ್ಯ ಸೇರಿದಂತೆ ಕೆಲವರು ಕನ್ನಡ ಶಾಲು ಧರಿಸಿದ್ದರು. ಶಾಸಕರಾದ ಇಕ್ಬಾಲ್ ಹುಸೇನ್ ಬಾಲಕೃಷ್ಣ ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ವಿ. ಶ್ರೀನಿವಾಸ್ ಸೇರಿದಂತೆ ಉಳಿದವರು ರುಮಾಲಿನಲ್ಲಿ ಮಿಂಚಿದರು. ಹುಸೇನ್ ಅವರು ಐಜೂರು ಠಾಣೆ ಪಿಎಸ್‌ಐ ತನ್ವಿರ್ ಅವರನ್ನು ಮುಖ್ಯಮಂತ್ರಿಗೆ ಇದೇ ವೇಳೆ ಪರಿಚಯಿಸಿದರು. ಕರ್ನಾಟಕಕ್ಕೆ ಕೇಂದ್ರ ಸರ್ಕಾರಕ್ಕೆ ಆಗುತ್ತಿರುವ ಅನ್ಯಾಯ ಖಂಡಿಸುವ ಧ್ಯೋತಕವಾಗಿ ನಾಯಕರು ನಾಮಪತ್ರ ಸಲ್ಲಿಸುವಾಗ ಕನ್ನಡ ಪ್ರೇಮ ಮೆರೆದರು. ಸುರೇಶ್ ಮತ್ತು ಮುಖ್ಯಮಂತ್ರಿ ಸಹ ತಮ್ಮ ಭಾಷಣದಲ್ಲಿ ರಾಜ್ಯಕ್ಕಾಗುತ್ತಿರುವ ಅನ್ಯಾಯ ಖಂಡಿಸಿ ಕೇಂದ್ರ ಸರ್ಕಾರದ ವಾಗ್ದಾಳಿ ನಡೆಸಿದರು. 

ಸಿದ್ದರಾಮಯ್ಯ ಕಾಲಿಗೆರಗಿದ ಸುರೇಶ್

ನಾಮಪತ್ರ ಸಲ್ಲಿಕೆಗೆ ಅಂದುಕೊಂಡಿದ್ದ ಸಮಯದಲ್ಲಿ ಸ್ವಲ್ಪ ವ್ಯತ್ಯಾಸವಾಗಿದ್ದರಿಂದ ಸುರೇಶ್ ಅವರು ಡಿ.ಸಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸುತ್ತಿದ್ದಾಗಲೇ ಇತ್ತ ಬಹಿರಂಗ ಸಭೆಯ ವೇದಿಕೆ ಕಾರ್ಯಕ್ರಮ ಶುರುವಾಯಿತು. ಶಾಸಕ ರಂಗನಾಥ್ ಮುಖಂಡ ಪಿ.ಜಿ.ಆರ್. ಸಿಂಧ್ಯಾ ಡಿ.ಕೆ. ಶಿವಕುಮಾರ್ ಮಾತು ಮುಗಿಸಿ ಮುಖ್ಯಮಂತ್ರಿ ಭಾಷಣ ಶುರು ಮಾಡಿದ್ದರು. ಆಗ ನಾಮಪತ್ರ ಸಲ್ಲಿಸಿ ವೇದಿಕೆಗೆ ತೆರೆದ ಕಾರಿನಲ್ಲಿ ಬಂದ ಸುರೇಶ್ ಅವರು ಭಾಷಣ ನಿಲ್ಲಿಸುವಂತೆ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿ ವೇದಿಕೆ ಮಧ್ಯಕ್ಕೆ ಕರೆದೊಯ್ದು ಅವರ ಕಾಲಿಗೆರಗಿ ಆಶೀರ್ವಾದ ಪಡೆದರು. ನಂತರ ಸುರೇಶ್ ಆದಿಯಾಗಿ ವೇದಿಕೆಯಲ್ಲಿದ್ದವರೆಲ್ಲರೂ ಕೈ ಎತ್ತಿ ಪರಸ್ಪರ ಹಿಡಿದು ಶಕ್ತಿ ಪ್ರದರ್ಶಿಸಿದರು. ಬಳಿಕ ಸಿ.ಎಂ ಭಾಷಣ ಮುಂದುವರಿಸಿದರು.

‘ನಮ್ಮ ದನಿಯಾಗುವ ಸುರೇಶ್’

‘ಸುರೇಶ್ ಗೆದ್ದೇ ಗೆಲ್ಲುತ್ತಾರೆ. ಕ್ಷೇತ್ರದ ಮಾಹಿತಿ ನಿತ್ಯ ನನಗೆ ಬರುತ್ತದೆ. ಅದರ ಆಧಾರದಲ್ಲಿ ಹೇಳುತ್ತೇನೆ. ಸುರೇಶ್ ಗೆಲುವು ಶತಸಿದ್ದ. ಕ್ಷೇತ್ರದ ಅಭಿವೃದ್ಧಿ ಮತ್ತು ಜಿಲ್ಲೆಯ ಪ್ರಗತಿಗೆ ನಿರಂತರವಾಗಿ ಅವರು ದುಡಿಯುತ್ತಾರೆ.‌ ಈ ಕಾರಣಕ್ಕೆ ಕಾಂಗ್ರೆಸ್ ಮತ್ತೆ ಅವರನ್ನು ಅಭ್ಯರ್ಥಿಯನ್ನಾಗಿಸಿದೆ. ಇವರನ್ನು ನಿಮ್ಮ ಪ್ರತಿನಿಧಿಯಾಗಿ ಗೆಲ್ಲಿಸಿ ದೆಹಲಿಗೆ ಕಳುಹಿಸಿದರೆ ಅವರು ನಮ್ಮ ದ್ವನಿಯಾಗಿ ಕೆಲಸ ಮಾಡುತ್ತಾರೆ. ರಾಜ್ಯದಲ್ಲಿ ಸರ್ಕಾರ ಬಂದ ದಿನದಿಂದಲೇ ನಾವು ಕೊಟ್ಟ ಮಾತನ್ನು ಈಡೇರಿಸುವ ಕೆಲಸ ಶುರು ಮಾಡಿದೆವು. ಎಂಟೇ ತಿಂಗಳಲ್ಲಿ ಐದು ಗ್ಯಾರಂಟಿ ಜಾರಿ ಮಾಡಿದ್ದೇವೆ. ಬಿಜೆಪಿ ಇವತ್ತಿನವರೆಗೂ ಕೊಟ್ಟ ಭರವಸೆಗಳಲ್ಲಿ ಒಂದನ್ನೂ ಈಡೇರಿಸಿಲ್ಲ. ಹೀಗಾಗಿ ಬಿಜೆಪಿಗೆ ಮತ ಹಾಕಿದರೆ ಏನು ಪ್ರಯೋಜನ? ಎಂದು ಜನ ಪ್ರಶ್ನಿಸಿಕೊಳ್ಳಬೇಕು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

‘ಕ್ಷೇತ್ರದ ಅಭಿವೃದ್ಧಿಗೆ ನಾವು ಬದ್ಧ’

‘ಸುರೇಶ್ ಅವರನ್ನು ಆಯ್ಕೆ ಮಾಡಿದರೆ ಏನು ಲಾಭ ಎಂಬ ಪ್ರಶ್ನೆ ನಿಮ್ಮಲ್ಲಿರಬಹುದು. ನರೇಗಾ ಯೋಜನೆಯಡಿ ₹2 ಸಾವಿರ ಕೋಟಿ ಅನುದಾನ ತಂದು ಕನಕಪುರವನ್ನು ದೇಶದಲ್ಲೇ ಮಾದರಿ ತಾಲ್ಲೂಕು ಮಾಡಿದ್ದಾರೆ. ಜಿಲ್ಲೆಯ ಕೆರೆಗಳನ್ನು ತುಂಬಿಸಿ ಅಂತರ್ಜಲ ಮಟ್ಟ ಏರಿಸಿದ್ದಾರೆ. ದೇಶದಲ್ಲಿ ಯಾವುದಾದರೂ ಲೋಕಸಭಾ ಕ್ಷೇತ್ರದಲ್ಲಿ ಪ್ರತಿ ಎರಡ್ಮೂರು ರೈತರಿಗೆ ಒಂದೊಂದು ವಿದ್ಯುತ್ ಪರಿವರ್ತಕ ಕೊಟ್ಟಿದ್ದರೆ ಅದು ಗ್ರಾಮಾಂತರದಲ್ಲಿ. ಬಡವರ ನಿವೇಶನ ಹಂಚಿಕೆ ನಿರಂತರ ಕುಡಿಯುವ ನೀರು ಕಂದಾಯ ಇಲಾಖೆಯಲ್ಲಿ ಸುಧಾರಣೆ ಸೇರಿದಂತೆ ಹಲವು ಬದಲಾವಣೆಗಳಿಗೆ ನಾವು ನಾಂದಿ ಹಾಡಿದರು. ಕೋವಿಡ್‌ ಇದ್ದಾಗ ಜನರಿಗೆ ಜೊತೆಯಾಗಿ ನಿಂತರು. ಸಂಸದನ ಬದಲು ಗ್ರಾಮ ಪಂಚಾಯಿತಿ ಸದಸ್ಯನಂತೆ ಸುರೇಶ್ ಕೆಲಸ ಮಾಡಿದ್ದಾರೆ. ಅವರ ಕೂಲಿಗೆ ಜನರು ಗೆಲುವಿನ ಕಾಣಿಕೆ ನೀಡಬೇಕು’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮನವಿ ಮಾಡಿದರು.

‘ಸಿನಿಮಾ ರೀಲ್ ಬಿಟ್ಟರೆ ಜನ ಒಪ್ಪುವುದಿಲ್ಲ’

‘ನನ್ನನ್ನು ಸೋಲಿಸಲು ನಿರ್ದೇಶಕ ನಿರ್ಮಾಪಕ ನಟ ಚಿತ್ರಕತೆಗಾರರೆಲ್ಲರೂ ಒಂದಾಗಿದ್ದಾರಂತೆ. ಸಿನಿಮಾ ರೀಲ್ ಬಿಟ್ಟಂತೆ ಇಲ್ಲಿ ಬಿಟ್ಟರೇ ಜನ ಒಪ್ಪುವುದಿಲ್ಲ. ಎಲ್ಲರು ಒಂದಾಗಿ ನನ್ನನ್ನು ಸೋಲಿಸುತ್ತಾರಂತೆ? ಏತಕ್ಕೆ ನನ್ನ ಸೋಲಿಸುತ್ತೀರಾ? ಬಡವರ ಪರವಾಗಿ ರೈತರ ಪರವಾಗಿ ಕನ್ನಡಿಗರ ಪರವಾಗಿ ದನಿ ಎತ್ತಿದಕ್ಕಾ? ಭ್ರಷ್ಟಾಚಾರ ಪ್ರಶ್ನಿಸಿದ್ದಕ್ಕಾ? ಅವರಿಗೆ ನಿಜ ಜೀವನಕ್ಕೂ ಸಿನಿಮಾಗೂ ವ್ಯತ್ಯಾಸ ಗೊತ್ತಿಲ್ಲ. ನಿಜ ಜೀವನದಲ್ಲಿ ಸೋಲಿಸಬೇಕೇ ಹೊರತು ಸಿನಿಮಾದಲ್ಲಲ್ಲ. ನೀವು ಬಿಟ್ಟಿರುವ ಎಲ್ಲಾ ರೀಲುಗಳು ಡಬ್ಬ ಸೇರಿಕೊಂಡಿವೆ’ ಎಂದು ಡಿ.ಕೆ. ಸುರೇಶ್ ಅವರು ಜೆಡಿಎಸ್ ನಾಯಕ ಎಚ್‌.ಡಿ. ಕುಮಾರಸ್ವಾಮಿ ಶಾಸಕ ಮುನಿರತ್ನ ಹಾಗೂ ವಿಧಾನ ಪರಿಷತ್ ಸದಸ್ಯ ಯೋಗೇಶ್ವರ್‌ ವಿರುದ್ಧ ವಾಗ್ದಾಳಿ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT