ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

LS Polls 2024 | ಒಂದಾದ ರಾಜಕೀಯ ಬದ್ಧ ವೈರಿಗಳು!

ರವಿಕುಮಾರ ಹುಲಕುಂದ
Published 4 ಏಪ್ರಿಲ್ 2024, 5:38 IST
Last Updated 4 ಏಪ್ರಿಲ್ 2024, 5:38 IST
ಅಕ್ಷರ ಗಾತ್ರ

ಬೈಲಹೊಂಗಲ (ಬೆಳಗಾವಿ): ಒಂದೇ ಪಕ್ಷದಲ್ಲಿದ್ದರೂ ರಾಜಕೀಯವಾಗಿ ಬದ್ಧ ವೈರಿಗಳಾಗಿದ್ದ, ಮಾಜಿ ಶಾಸಕರಾದ ಜಗದೀಶ ಮೆಟಗುಡ್ಡ ಮತ್ತು ಡಾ.ವಿಶ್ವನಾಥ ಪಾಟೀಲ ಬುಧವಾರ ಒಂದೇ ಕಾರಿನಲ್ಲಿ ಪ್ರಯಾಣಿಸಿ, ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್‌ ಪರ ಪ್ರಚಾರ ನಡೆಸಿದರು.

ಬೈಲಹೊಂಗಲಕ್ಕೆ ಬುಧವಾರ ಭೇಟಿ ನೀಡಿದ ಜಗದೀಶ ಶೆಟ್ಟರ್‌ ಅವರಿಗೆ ಮಾಜಿ ಶಾಸಕರಿಬ್ಬರೂ ಸಂಭ್ರಮದ ಸ್ವಾಗತ ನೀಡಿದರು. ಮೂವರೂ ನಾಯಕರು ಒಂದೇ ಕಾರಿನಲ್ಲಿ ಸಂಚರಿಸಿದರು. ಅವರೊಂದಿಗೆ ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ಶಂಕರ ಮಾಡಲಗಿ ಕೂಡ ಇದ್ದರು.

2013ರ ವಿಧಾನಸಭೆ ಚುನಾವಣೆಯಲ್ಲಿ ಡಾ.ವಿಶ್ವನಾಥ ಪಾಟೀಲ ಕೆಜೆಪಿಯಿಂದ ಆಯ್ಕೆಯಾಗಿದ್ದರು. ಬಿ.ಎಸ್‌. ಯಡಿಯೂರಪ್ಪ ಅವರು ಕೆಜೆಪಿಯನ್ನು ಬಿಜೆಪಿಯಲ್ಲಿ ವಿಲೀನಗೊಳಿಸಿದ ಬಳಿಕ 2018ರ ವಿಧಾನಸಭೆ ಚುನಾವಣೆಯಲ್ಲಿ ಡಾ.ವಿಶ್ವನಾಥ ಅವರಿಗೆ ಬಿಜೆಪಿ ಟಿಕೆಟ್‌ ನೀಡಲಾಗಿತ್ತು. ಆಗ ಜಗದೀಶ ಮೆಟಗುಡ್ಡ ಬಂಡಾಯ ಅಭ್ಯರ್ಥಿಯಾಗಿ ನಿಂತರು. ಇಬ್ಬರ ಜಗಳದ ಮಧ್ಯೆ ಕಾಂಗ್ರೆಸ್‌ನ ಮಹಾಂತೇಶ ಕೌಜಲಗಿ ಗೆದ್ದರು.

2023ರ ಚುನಾವಣೆಯಲ್ಲಿ ಜಗದೀಶ ಮೆಟಗುಡ್ಡ ಅವರಿಗೆ ಬಿಜೆಪಿ ಟಿಕೆಟ್‌ ನೀಡಲಾಯಿತು. ಆಗ ಡಾ.ವಿಶ್ವನಾಥ ಬಂಡಾಯ ಸಾರಿದರು. ಈ ಇಬ್ಬರ ವೈರತ್ವದಿಂದ ಮತಗಳು ಒಡೆದು ಕಾಂಗ್ರೆಸ್‌ನ ಕೌಜಲಗಿ ಮತ್ತೆ ಗೆದ್ದರು.

ಹಾವು– ಮುಂಗುಸಿಯಂತೆ ಆಡುತ್ತಿದ್ದ ಇಬ್ಬರನ್ನೂ ಒಂದಾಗಿಸುವಲ್ಲಿ ಜಗದೀಶ ಶೆಟ್ಟರ್‌ ಯಶಸ್ವಿಯಾಗಿದ್ದಾರೆ.  ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ಶಂಕರ ಮಾಡಲಗಿ ಕೂಡ ಬೈಲಹೊಂಗಲ ಕ್ಷೇತ್ರದ ಪ್ರಭಾವಿ ನಾಯಕ ಎಂದೇ ಗುರುತಿಸಿಕೊಂಡವರು. 2023ರ ವಿಧಾನಸಭೆ ಚುನಾವಣೆಯಲ್ಲಿ ಅವರೂ ಜೆಡಿಎಸ್‌ನಿಂದ ಸ್ಪರ್ಧಿಸಿದ್ದರು.

ಡಾ.ವಿಶ್ವನಾಥ ಹಾಗೂ ಶಂಕರ ಮಾಡಲಗಿ ಪಂಚಮಸಾಲಿ ಸಮುದಾಯದವರು. ಜಗದೀಶ ಮೆಟಗುಡ್ಡ ಬಣಜಿಗ ಸಮುದಾಯದವರು. ಬೈಲಹೊಂಗಲ ತಾಲ್ಲೂಕಿನಲ್ಲಿ ಇವೆರಡೂ ಸಮುದಾಯದ ಮತಗಳು ಗರಿಷ್ಠವಾಗಿವೆ ಎಂಬುದು ಗಮನಾರ್ಹ. ಜಗದೀಶ ಮೆಟಗುಡ್ಡ ಹಾಗೂ ಡಾ.ವಿಶ್ವನಾಥ ಇಬ್ಬರೂ ಈ ಸಲ ಬಿಜೆಪಿ ಟಿಕೆಟ್‌ ಆಕಾಂಕ್ಷಿಯೂ ಆಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT